Showing posts with label ಮನಸಿನ ಮೌನದಲ್ಲಿ. Show all posts
Showing posts with label ಮನಸಿನ ಮೌನದಲ್ಲಿ. Show all posts

Friday, January 23, 2015

ಲೈಫ್ ಇಸ್ ಬ್ಯೂಟಿಫುಲ್ ...!!!!!

  




            ಮೊನ್ನೆ  ಪಾರ್ಲರ್ ಗೆ  ಹೋದಾಗ  ವರುಷಗಳಿಂದ ಪರಿಚಯವಿದ್ದ ಆಕೆ ಹೇಳಿದರು, 'Meternity Period ಲ್ಲಿ ಇದ್ದ್ರಿ ಅಲ್ಲ್ವ? ನಿಮ್ಮ ಮುಖ ತುಂಬಾ ಟ್ಯಾನ್ಆ ಗಿದೆ  facial  ಮಾಡಿಸಿಕೊಳ್ಳಿ'  ಅಂತ ,  'ಎಷ್ಟು ಟೈಮ್ ಆಗತ್ತೆ? '  ಅಂದೆ,  ಅವರಂದಿದ್ದು ಒಂದು ಘಂಟೆ.   ನನ್ನ ಬಳಿಯಲ್ಲಿ ಅಷ್ಟು ಸಮಯವಿರಲ್ಲಿಲ್ಲ. ನಾನಂದೆ, 'ಅರ್ಧಘಂಟೆಗೆ ಏನಿದಿಯೋ ಅದನ್ನು ಮಾಡಿ', ಅವರು ನಕ್ಕರು ಮತ್ತು ನಾನೂ ಅದರಲ್ಲಿ ಪಾಲುದಾರಳಾದೆ. 'ಟ್ಯಾನ್ ತಾನೇ? ಕ್ಲೀನ್ ಅಪ್ ಮಾಡಿಬಿಡಿ ಅರ್ಧ ಘಂಟೆ ಸಾಕಗತ್ತೆ'   ಅಂತ ನಾನೇ ಅಂದೇ, ಇಬ್ಬರೂ ಮತ್ತೆ ನಗುವನ್ನು ಶೇರ್ ಮಾಡಿಕೊಂಡೆವು. 

           ನನ್ನನ್ನು ಒಂದು ಈಸೀ  ಚೇರ್ ತರದ್ದರಲ್ಲಿ ಕೂರಿಸಿದರು,  ಎಲ್ಲದಕ್ಕೂ ಇದೇನು ಅದೇನು ಮತ್ತು ಯಾಕೆ ಅಂತ ಕೇಳುತ್ತಿದ್ದೆ.   ಮೊದಲು ಸ್ಕ್ರಬ್ ಅಂತೆ, ಮಸಾಜ್ ಅಂತೆ, ಸ್ಟೀಮ್ ಅಂತೆ ಏನೋ ಪ್ಯಾಕ್ ಹಾಕಿ ಕೂರಿಸಿದರು, ಮತ್ತೆ ಯೋಚಿಸುತ್ತ ಕುಳಿತೆ. ಓಹ್ ಚಂದವಾಗಿ ಕಾಣಿಸಬೇಕೆಂದರೆ ಇಷ್ಟೆಲ್ಲಾ ಮಾಡಬೇಕಾ?  ಸುಮ್ಮನೆ ಮೇಲಿಂದ ಓದಿಷ್ಟು ಕ್ರೀಂ ಪೌಡರ್ ಲೇಪಿಸಿಕೊಂಡರೆ  ಸಾಕಗಲಿಕ್ಕಿಲ್ಲ, ಮುಖ ಒಳಗಿನಿಂದ ಚೆಂದವಾಗಬೇಕಲ್ಲಾ!

         ಹಾಗೆ  ಮುಂದುವರಿಯಿತು ಯೋಚನೆ, ನಾವು  ಮುಖವನ್ನಷ್ಟೇ  ಚೆಂದವಾಗಿಸಿಕೊಂಡರೆ ಸಾಕಾದೀತ? ಆರೋಗ್ಯಕ್ಕೂ ಸೌಂದರ್ಯಕ್ಕೂ ತೀರ ಹತ್ತಿರದ  ಸಂಭಂದ.  ಒಳ್ಳೆಯ, ಮಿತವಾದ, ಶುದ್ದವಾದ, ಬೇಕಾದ ಮುಖ್ಯವಾಗಿ ಸಮತೋಲನ  ಆಹಾರವನ್ನೇ ಸೇವಿಸಬೇಕು.   ಒಳ್ಳೆಯ ಆಹಾರ ಒಳ್ಳೆಯ ಅರೋಗ್ಯ ಮತ್ತು  ಒಳ್ಳೆಯ ಸೌಂದರ್ಯಕೆ ಕಾರಣ.   ಮೊಳಕೆ ಕಾಳುಗಳು,  ಹಣ್ಣುಗಳು, ತಾಜಾ ತರಕಾರಿ ದೇಹದಲ್ಲಿ ಸೇರಿದಾಗ ಶಕ್ತಿಯಾಗಿ ಪರಿವರ್ತನೆಯಾಗಿ ನವ ಚೈತನ್ಯವನ್ನು ತುಂಬಿಸುತ್ತದೆ, ಮೈಕಾಂತಿ ನಳನಳಿಸುತ್ತದೆ, ಬೇಡದ ವಿಷಯುಕ್ತ ಪದಾರ್ಥ ಗಳನ್ನ ನಮ್ಮ ದೇಹ ನಿಯಮಿತವಾಗಿ ಹೊರಹಾಕಬೇಕು. ಮುಖದಿಂದ ಕೊಳೆ ತೆಗೆಯುವಂತೆ ದೇಹದಿಂದಲೂ ಕೊಳೆ ತೆಗೆಯಬೇಕು ಅದಕ್ಕೆ ಚೆನ್ನಾಗಿ  ನೀರು ಕುಡಿಯಲೇ ಬೇಕು, ಆರೋಗ್ಯವೇ ಸೌಂದರ್ಯ.

           ಅಂತನ್ನಿಸುವಷ್ಟರಲ್ಲಿ  ಮತ್ತೊಂದು ಯೋಚನೆ ನಂಗೆ, ಅರೆ! ಬರೀ ದೇಹ ಆರೋಗ್ಯವಾಗಿದ್ದರೆ ಸಾಕಾ? ರೋಗಗೃಸ್ಥ ಮನಸ್ಸಿದ್ದರೆ!? ದೇಹದ ಆರೋಗ್ಯಕ್ಕೂ ಮನಸಿನ ಆರೋಗ್ಯಕ್ಕೂ ನೇರ ಸಂಭಂದವಿದೆ.  ಉಹುಮ್ಮ್ ಮುಖ್ಯವಾಗಿ ನಮ್ಮ ಮನಸ್ಸು ಅತೀ ಆರೋಗ್ಯವಾಗಿರಬೇಕು. ಚೆಂದದ ಒಳ್ಳೆಯ ಬೇಕಾದ ಮುಖ್ಯವಾದ ವಿಷಯಗಳನ್ನ ಮನಸೊಳಗೆ ಭಾವ ಬಿತ್ತಿಯೊಳಗೆ ತುಂಬಿಸಿಕೊಳ್ಳಬೇಕು. ಎಲ್ಲದರಲ್ಲೂ ಸುಂದರವಾದದ್ದನ್ನೇ ಸಕಾರಾತ್ಮಕವಾದದ್ದನ್ನೇ ಕಾಣಬೇಕು.   ಮುಖಕ್ಕೆ ಸ್ಕ್ರಬ್ ನಂತೆ  ಸಮಸ್ಯೆಗಳೇ ಸವಾಲುಗಳು, ಸವಾಲುಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಳ್ಳುವಷ್ಟು ಆರೋಗ್ಯ ಇರಬೇಕು ಮನಸ್ಸಿನಲ್ಲಿ.  ನಮ್ಮ ಸುತ್ತಲೂ ಒಂದು  ಸಕಾರಾತ್ಮಕ ಎನರ್ಜಿ ಸುತ್ತುತ್ತಿರಬೇಕು. ಬೇಡದ ನಿರುಪಯುಕ್ತ ವಿಷಯುಕ್ತ ನಮ್ಮ ಮನಸ್ಸಿನ ಶಕ್ತಿಯನ್ನೇ ಕಸಿದುಕೊಳ್ಳುವ ವಿಷಯಗಳನ್ನು ಮನಸಿನಿಂದ ಹೊರಗಟ್ಟಬೇಕು, ಒಂದು ಆರೋಗ್ಯ, ಸಮತೋಲನ  ಮನಸು ನಮ್ಮದಾಗಿರಬೇಕು.

            ನಂಗೆ ಯಾವತ್ತೋ ಓದಿದ stephen hawkings scintist ಬಗ್ಗೆ  ನೆನಪಾಯಿತು.  ಬ್ಲಾಕ್ ಹೋಲ್ಸ ಬಗ್ಗೆ ನಡಿಸಿದ ಇವರ ಸಂಶೋಧನೆ hawkings ರೇಡಿಯೇಶನ್ ಎಂತಲೇ ಪ್ರಸಿದ್ದಿಯಾಗಿದೆ. 'ಲೈಫ್ ಇಸ್ ಬ್ಯೂಟಿಫುಲ್ ನಾನು ತುಂಬಾ ಅದೃಷ್ಟವಂತ' ಎನ್ನುವ ಇವರಿಗೆ ಇದ್ದಿದ್ದು   Motor  Neuron ಎಂಬ ಖಾಯಿಲೆ.  ಕೈ ಕಾಲು, ದೇಹ ಯಾವುದೂ ಇವರ ಸ್ವಾದೀನದಲ್ಲಿರಲ್ಲ. ಹಾಗೆ  ದಶಕಗಟ್ಟಲೆ ಗಾಲಿ ಖುರ್ಚಿಯಲ್ಲಿ ಜೀವಿಸಿದ್ದರು.  ಮನಸಿನ ಆರೋಗ್ಯ ಹಾಗೂ ಸೌಂಧರ್ಯ ಹೊಂದಿರುವವವರು ಯಾರೇ ಆಗಿರಲಿ, ಎಲ್ಲೇ ಇರಲಿ, ಯಾವುದೇ ಪರಿಸ್ತಿತಿಯ ತೆಕ್ಕೆಯಲ್ಲಿರಲಿ,  'ಲೈಫ್ ಇಸ್ ಬ್ಯೂಟಿಫುಲ್'  ಅನ್ನಬಲ್ಲವರಾಗಿರುತ್ತಾರೆ.  ಹಾಗಂದವರ,  ಅನ್ನಿಸಿದವರ ಲೈಫ್ ಸುಂದರವಾಗಿರುತ್ತದೆ ಎಂದು ಅಲ್ಲವೇ ಅಲ್ಲ, ಆದರೆ  ಅದನ್ನು ನೋಡುವ ಅವರ ಮನಸ್ಥಿತಿ ಸುಂದರವಾಗಿರುತ್ತದೆ ಅಷ್ಟೇ.

    'ಆಗೋಯಿತು  ಮೆಡೆಮ್,   ಏನ್ ಯೋಚಿಸ್ತಾ ಇದ್ದೀರಾ'  ಎಂದರು ನನ್ನ ಸುಂದರವಾಗಿಸಲು ಇಷ್ಟಪಟ್ಟಾಕೆ . ದುಡ್ಡಿನೊಂದಿಗೆ ನಗುವನ್ನು ವಿನಿಮಯಿಸಿಕೊಂಡು  ಅಲ್ಲಿಂದ ಹೊರಟೆ.

              ಪಾರ್ಲರ್ನಲ್ಲಿ ಆದ ನನ್ನ ಜ್ನ್ಯಾನೋದಯಕ್ಕೆ ನಾನೇ ನಗುತ್ತಾ ಮೆಟ್ಟಿಲಿಳಿದೆ.  ಮುಖ ಕ್ಲೀನ್ ಮಾಡಿಸಿಕೊಂಡಾಗಿತ್ತಲ್ಲಾ?    ಸ್ಕೂಟಿಗೆ ಕೀ ಚುಚ್ಚಿಕೊಳ್ಳುತ್ತ  ಚಂದವಾಗಿದ್ದೆನೆಯೇ? ಎಂದು ಕನ್ನಡಿಯನ್ನೊಮ್ಮೆ  ನೋಡಿದೆ, ನಾನು ಮತ್ತು ಕನ್ನಡಿ ಒಂದು ಮುದ್ದಾದ ನಗುವನ್ನು ವಿನಿಮಯ ಮಾಡಿಕೊಂಡೆವು. ಸೀಟ್  ಹತ್ತಿ ಕುಳಿತು ನನ್ನ ಸ್ಚೂಟಿಗೆ, 'ಹೊರಡೋಣವಾ ..?'   ಅಂದೆ.   ಸ್ಕೂಟಿ ನಕ್ಕಂತಾಯಿತು 😊

( stephen hawkings ಬಗ್ಗೆ ಹೆಚ್ಚಿನ ಮಾಹಿತಿಗಾಗಿ
www.hawking.org) 
  


Wednesday, January 14, 2015

ಒಂದು ಮುಗುಳ್ನಗುವಿನಲ್ಲಿ ...!





         
            
ನಾಲ್ಕು ವರ್ಷಗಳ ಹಿಂದೆ ..


ಅವತ್ತು ಸಂಜೆ ಆರಕ್ಕೆಲ್ಲ ಹನಿ ಮಳೆ ಶುರುವಿಟ್ಟಿತ್ತು.  ನಾನು ಬೆಂಗಳೂರಿಂದ ನಿಟ್ಟೂರಿಗೆ ಹೊರಟಿದ್ದೆ.  ನಾನು ಹೊರಡಲಿರುವ ಬಸ್ ಶೇಷಾದ್ರಿಪುರಂ ಮತ್ತು ಬನಶಂಕರಿ ಎರಡು ಬೋರ್ಡಿಂಗ್ ಪಾಯಿಂಟ್ ಇತ್ತು.  ನಮ್ಮ ಮನೆಗೆ ಬನಶಂಕರಿ ಹತ್ತಿರ ಮತ್ತು ಒಂದೇ ಬಸ್ ಆಗಿದ್ದರಿಂದ ನಾನು ಬನಶಂಕರಿ ಸ್ಟಾಂಡನ್ನೇ ಆಯಿಕೆ ಮಾಡಿದ್ದೆ. ಆರಕ್ಕೆ ಮಾರತ್ಹಳ್ಳಿಯಲ್ಲಿ ವೋಲ್ವೋ ಬಸ್ ಹತ್ತಿದ ನನಗೆ  8.30ಕ್ಕೆ ಬನಶಂಕರಿ ತಲುಪಿದ್ದರೂ ಸಾಕಾಗಿತ್ತು.  ಒಂದು ಕೈಯಲ್ಲಿ ದೊಡ್ಡ ಬ್ಯಾಗ್  ಮತ್ತು ಇನ್ನೊಂದು ಕೈಯಲ್ಲಿ ನನ್ನ  3 ವರ್ಷದ ಪುಟ್ಟ ಮಗಳು.  ಬಸ್ಸು ಹತ್ತಿದ್ದ ಹಾಗೆಯೇ ಇದ್ದಕ್ಕಿಂದ್ದಂತೆ ಮಳೆ ತುಂಬಾ ಜೋರೆ ಆಯಿತು.  ಎಷ್ಟು ಟ್ರಾಫಿಕ್ ಅಂದ್ರೆ  ಬೆಳಂದೂರ್ ದಾಟೋದು 8 ಆಯಿತು.  ನಂಗೆ ಕ್ಷಣ ಕ್ಷಣಕ್ಕೋ ಟೆನ್ಶನ್, ಏನ್ ಮಾಡೋದು? 8.30 ರ  ಒಳಗೆ ಬನಶಂಕರಿ    ಮುಟ್ಟುವ ಯಾವ ಸಾಧ್ಯತೆಯೂ ಇರಲ್ಲಿಲ್ಲ.  ತಕ್ಷಣ ನನ್ನ ಪ್ಲಾನ್ ಚೇಂಜ್  ಮಾಡಿ ಸಿಲ್ಕ್ ಬೋರ್ಡಲ್ಲಿ ಇಳಿದು ಅಲ್ಲಿಂದ ಆಟೋ ತಗೊಂಡು ಶೇಷಾದ್ರಿಪುರಂ ಗೆ ಹೋಗೋ ಯೋಚನೆ ಮಾಡಿದೆ.
ನನ್ನ  ಟೆನ್ಶನ್, ಕೈಯಲ್ಲಿ ದೊಡ್ಡ ಬ್ಯಾಗ್, ಜೊತೆಯಲಿ ಪುಟ್ಟ ಮಗು, ಅದರ ಅಳು, ನಗು ಜೊತೆಗೆ ನೂರು ಪ್ರಶ್ನೆಗಳು.   ಅಂತೂ ನಾನು ಇನ್ನೊಂದು ಬಸ್ ಕ್ಯಾಚ್ ಮಾಡಲಿಕ್ಕಿದೆ ಎನ್ನುವ ವಿಷಯ ಕಂಡಕ್ಟರ್, ಡ್ರೈವರ್ ಮತ್ತು ಅಲ್ಲಿರುವ  3-4 ಜನಕ್ಕೆ ಗೊತ್ತಾಗಿ ಹೋಯಿತು.  ಒಬ್ಬರು ಮದ್ಯ ವಯಸ್ಸಿನ ಮಹಿಳೆ ಅವರು  ಯಾವೊದೋ IT ಕಂಪನಿಯ ಮ್ಯಾನೇಜರ್ ಇರಬಹುದು ಏನ್ನುವುದು  ನನ್ನ ಅನಿಸಿಕೆ ..., ಮೇಲಿಂದ ಮೇಲೆ ನೆರವಾದ ಪ್ರಶ್ನೆಗಳನ್ನು ಕೇಳೋದಿಕ್ಕೆ ಶುರುವಿಟ್ಟುಕೊಂಡರು ಯಾಕೆ ಒಬ್ಬಳೇ ಬಂದಿದ್ದು,  ಯಾಕೆ ಈ ದಾರಿ etc , etc ..., ಉತ್ತರಿಸುವ ಅಗತ್ಯ ತಾಳ್ಮೆ ಎರಡೂ ನನ್ನಲ್ಲಿರಲ್ಲಿಲ್ಲ.  ಏನೋ ಸ್ವಲ್ಪ ನಿರಾಸಕ್ತಿಯಿಂದ ಚುಟುಕಾಗಿ ಉತ್ತರಿಸುತ್ತಿದ್ದೆ, ಆಕೆ ಬನಶಂಕರಿಗೆ ಟಿಕೆಟ್ ಕೊಂಡಿದ್ದು ನಂಗೆ ಗೊತ್ತಿತ್ತು.
ಸಿಲ್ಕ್ ಬೋರ್ಡ್ ಬರ್ತಿದ್ದ ಹಾಗೇ  ಆಕೆ ನನ್ನ ಬ್ಯಾಗ್ ಗೆ ಥಟ್ ಅಂತ ಕೈ ಹಾಕಿದ್ದರು. ತಮ್ಮದೆನ್ನುವಂತೆ ಸುಲಭವಾಗಿ ಕಾಳಜಿಯಿಂದ ಹೆಗಲಿಗೇರಿಸಿಕೊಂಡು ಇಳಿದುಬಿಟ್ಟರು, ನಾನು ಸವಾರಿಸಿಕೊಳ್ಳುತ್ತ ಇಳಿದೆ, ಸಿಲ್ಕ್ ಬೋರ್ಡ್ ಜಂಕ್ಷನ್ ಅದು  6 ರೋಡ್ ಸೇರುವ ಜಾಗ, ನನ್ನ ಅಂಗೈಯನ್ನು ತಮ್ಮ ಬೆಚ್ಚನೆ ಅಂಗೈಯಲ್ಲಿ ಗಟ್ಟಿಯಾಗಿ ಹಿಡಿದು ರೋಡ್ ಕ್ರಾಸ್ ಮಾಡೇ ಬಿಟ್ಟರು , ಮತ್ತು ನನ್ನನ್ನು ಆಟೋ ಸ್ಟಾಂಡಿಗೆ ಬಿಟ್ಟು, ಇದು ತಮ್ಮ ಕೆಲಸವೇನೋ ಅನ್ನುವಷ್ಟು ಸಹಜವಾಗಿ ಮತ್ತೆ ಅದೇ ಓಡು ನಡಿಗೆಯಲ್ಲಿ ನಡೆದೇ ಬಿಟ್ಟರು, ನಂಗೆ ಅವರ ಹೆಸರು ಕಾಂಟ್ಯಾಕ್ಟ್ ನಂಬರ್ ಕೂಡ ತೆಗೆದುಕೊಳ್ಳಲು ಸಮಯವಿರಲ್ಲಿಲ್ಲ !
ಅವತ್ತು ಅವರಷ್ಟೇ ಅಲ್ಲ , ನನ್ನ ಪಾಲಿಗೆ ಅಲ್ಲಿಂದ ಎಲ್ಲವೂ ನೆನಪನ್ನು ಸುಂದರವಾಗಿಸುವಂತಹ ಘಟನೆಗಳೇ! ಒಂದೇ ಒಂದು ಆಟೋನೂ ಬರಲ್ಲಿಲ್ಲ, ಬಂದ ಆಟೋ ಖಾಲಿ ಇಲ್ಲ,  ಖಾಲಿ ಆಟೋ  ಶೇಷಾದ್ರಿಪುರಂಗೆ ಬರಲು ಒಪ್ಪುತ್ತಿಲ್ಲ, ಕೊನೆಗೂ ಒಂದು ಆಟೋ ನಿಲ್ಲಿಸಿದ ಖುಷಿಗೆ ಓಡಿದಾಗ ಅದು ನಿಲ್ಲಿಸಿದ್ದು ನನಗಾಗಿ ಅಲ್ಲ, ನನಗಿಂತ ಕ್ಷಣ ಮುಂಚೆ ಒಂದಿಬ್ಬರು ಭುರ್ಖ  ಹಾಕಿದ ಹೆಂಗಸರು ಜೊತೆಗೊಬ್ಬ ಗಂಡಸು,   ಓಹ್ ಈ ಆಟೋ ಸಿಗದ್ದಿದ್ದರೆ ನಾನು ಬಸ್ ತಲುಪುವುದು ಸಾದ್ಯವೆ ಇರಲಿಲ್ಲ. ತಕ್ಷಣ ಅವರಿಗೆ ವಿಷಯ ವಿವರಿಸಿದೆ, 'ನಂಗೆ ಮತ್ತೊಂದು ಬಸ್ ಕ್ಯಾಚ್ ಮಾಡಲಿಕ್ಕಿದೆ. ನಾನು ಹೊಗಲಾ ನಿಮ್ಮ ಅಭ್ಯಂತರವಿಲ್ಲದಿದ್ದರೆ?'  ಅಂದೆ, ಏನೋ ಮಾತಾಡಿಕೊಂಡು ಅವರು ಅವರು ಹಿಡಿದ ಆಟೋವನ್ನು ನನಗೆ ಬಿಟ್ಟಿದ್ದರು !! ಏನಿತ್ತೋ ಅವರ ಅವಶ್ಯಕತೆ!?  ಎಲ್ಲರಿಗೂ ಅವರವರ ಅವಶ್ಯಕತೆ ಅಷ್ಟೇ ಮುಖ್ಯ !
ಆಟೋ ಹತ್ತಿ ಕುಳಿತಾಗಿತ್ತು, ದುಡ್ಡು ಮಾತಾಡಿರಲ್ಲಿಲ್ಲ, ನನ್ನ ತೀರ ಅವಶ್ಯಕತೆ ಆಟೋವಾಲನಿಗೆ ಗೊತ್ತಾಗಿಬಿಟ್ಟಿತ್ತು, ಮಳೆ ಬೇರೆ, ರಾತ್ರಿ ಬೇರೆ, ಅವನು ಎಷ್ಟು ದುಡ್ಡು ಬೇಕಾದರೂ ಕೇಳುವ ಎಲ್ಲಾ ಸಾಧ್ಯತೆಯೂ ಇತ್ತು, ನನಗೆ ಕೊಡಲು ಕಾರಣವೂ ಇತ್ತು ಮತ್ತು ಬೇರೆ ಆಯಿಕೆ ನನ್ನಲ್ಲಿರಲಿಲ್ಲ. ಮತ್ತೆ ನನಗೆ ಟೆನ್ಶನ್, ಬಸ್ಸಿನ ಟೈಮ್ ಹೇಳಿ ತಲೋಪಾಗುತ್ತ ಅಂತ ಮದ್ಯ ಮದ್ಯ ಕೇಳುತ್ತಿದ್ದೆ , ಅವನು ತನಗೇ ಬಸ್ ತಪ್ಪಿ ಹೋಗುತ್ತೇನೋ ಅನ್ನುವಷ್ಟು ಕಾಳಜಿಯಿಂದ ನನ್ನನ್ನು ಕರೆದುಕೊಂಡು ಹೋಗಿದ್ದ .., ಫೈನಲಿ ಐ ರೀಚಡ್ ! ಅಂಡ್ ಬಸ್ ಕೂಡ ಹೊರಟಿರಲ್ಲಿಲ್ಲ, ಹೊರಡುವುದರಲ್ಲಿತ್ತು. ಏನಪ್ಪಾ ಇವನು ಎಷ್ಟು ಕೇಳುತ್ತಾನೆ ಎಂದುಕೊಂಡು  'ಎಷ್ಟಾಯಿತು ?' ಕೇಳಿದರೆ ಅವನು ಆ ಮಳೆಯಲ್ಲಿ, ಆ ರಾತ್ರಿಯಲ್ಲೂ ಮೀಟರ್ ಹಾಕಿದ್ದ, ನನಗಿದ್ದ ಟೆನ್ಷನ್ನಿಗೆ ನಾನು ಗಮನಿಸಿರಲ್ಲಿಲ್ಲ, ಮೀಟರಗಿಂತ  ಸ್ವಲ್ಪ ಜಾಸ್ತಿ ಕೊಡದೇ ಇರಲು ನನಗೆ ಸಾದ್ಯವೇ ಇರಲ್ಲಿಲ್ಲ. ಒಳ್ಳೆಯದನ್ನು ಯಾವ ರೀತಿಯಿಂದಾದರೂ ಪ್ರೋತ್ಸಾಹಿಸಬೇಕು ಮತ್ತದು ಸಾಂಕ್ರಮಿಕವಾಗುತ್ತದೆ ಎನ್ನುವ ಬಲವಾದ ನಂಬಿಕೆ ನನ್ನದು. ಆಟೋ ನಿಲ್ಲಿಸಿ,ಇಳಿದು ನನ್ನ ದೊಡ್ಡ ಬ್ಯಾಗನ್ನು ರೋಡ್ ಕ್ರಾಸ್ ಮಾಡಿಸಿ ತಂದು ಕೊಟ್ಟ. ಬಸ್ ಹತ್ತಿ ಕುಳಿತು ಹಾಗೇ ಒಮ್ಮೆ ಕಣ್ ಮುಚ್ಚಿದೆ.  ಬಸ್ ಸಿಕ್ಕಿದ ಖುಷಿಗೆ ಮುಗುಳ್ನಗುವೊಂದು ತುಟಿಯ ಮೇಲೆ ಬಂದು ಕುಳಿತಿತ್ತು.
ಬಹುಶಃ ನಂಗೆ ಅವತ್ತು ಬಸ್ ಸಿಗದಿದ್ದರೆ ಏನೂ ಆಗುತ್ತಿರಲ್ಲಿಲ್ಲ, ವಾಪಾಸ್ ಮನೆಗೆ ಬರುತ್ತಿದ್ದೆ ಅಷ್ಟೇ !! ನಂಗೆ ಅದು ಅಷ್ಟು ಮುಖ್ಯವೂ  ಅಲ್ಲ, ಅಥವ ಸೀದಾ ಬಸ್ ಸಿಕ್ಕಿದ್ದರೂ ನಾನೊಂದಿಷ್ಟು ಒಳ್ಳೆಯ ಅನುಭವಗಳನ್ನು ಕಳೆದುಕೊಳ್ಳುತ್ತಿದ್ದೆ. ಆದರೆ ಅವತ್ತಿನ ನನ್ನ ಅನುಭವ ನನ್ನನ್ನು ಮತ್ತಷ್ಟು ಶ್ರೀಮಂತವಾಗಿಸಿದೆ.
ಸಿಹಿ ಅನುಭವಗಳು ಸುಂದರವಾಗಿ ಕುಳಿತಿವೆ ಸಾಕಷ್ಟು!  ನನ್ನ ಹಿರೊಯಿನ್ನನಂತ ಸ್ಕೂಟಿಯನ್ನು ಪಾರ್ಕ್ ಮಾಡಿ ಹೋಗಿರುತ್ತೇನೆ, ಹಿಂದುರುಗಿ ಬಂದು ನೋಡಿದರೆ ಅದರ ಹಿಂದೊಂದು ಗಡವನಂತ ಬೈಕ್ ಬಂದು ನಿಂತುಕೊಂಡಿರುತ್ತದೆ, ನಾನು ಮಾಡೋದಾದರೂ ಏನು? ಎತ್ತಿಡಲೂ ಆಗದೆ ಸುಮ್ಮನಿರಲೂ ಆಗದೆ ಪೆಚಾಡುವಾಗ ಯಾರೋ ಸಹಾಯಕ್ಕಿಳಿಯುತ್ತಾರೆ. ಅಂಗಡಿಯಲ್ಲಿ ಮರೆತ ಪರ್ಸನ್ನು ಅಂಗಡಿಯಾತ ನೆನಪಿಸುತ್ತಾನೆ.  ಸೆಕ್ಯೂರಿಟಿಯ ಕರ್ತವ್ಯದಲ್ಲೂ ಮನುಷತ್ವದ ಲೇಪ ಕಾಣುತ್ತೇನೆ, ಕಾರನ್ನೋ, ಸ್ಕೂಟಿಯನ್ನೋ ಡ್ರೈವ್ ಮಾಡುವಾಗ  ಇನ್ನ್ಯಾರೋ ಸಡನ್ ಆಗಿ ನುಗ್ಗಿ ಬಂದರೆ  ಇಬ್ಬರ ಮುಗುಳ್ನಗೆಯೇ ಸ್ಸಾರಿಯಾಗುತ್ತದೆ.
ಅಂತ  ಕ್ಷಣಗಳೆಲ್ಲ ಸುಂದರವಾಗುತ್ತದೆ, ಸುಂದರವಾದ ಮುಗುಳ್ನಗು ತುಟಿಯಲ್ಲಿ ಬಂದು ಕುಳಿತಿರುತ್ತದೆ ನಾ ನಗುವ ಮೊದಲೇ. ಒಮ್ಮೆ ಅರ್ಜುನ ಮತ್ತು ಕೃಷ್ಣ  ಪ್ರಯಾಣಿಸುವ ವೇಳೆ ಒಬ್ಬ ಬಡ ರೈತ ಮುದುಕನಿಗೆ ಸಹಾಯಿಸುತ್ತಾರೆ.
ಅರ್ಜುನನೆನ್ನುತ್ತಾನೆ,  'ಶ್ರಮ್  ಕರನೇ ಸೆ ಶಕ್ತಿ ಬಡಗಯಿ ಕೃಷ್ಣ'  ಕೃಷ್ಣನೆನ್ನುತ್ತಾನೆ, 'ನಹಿ ಅರ್ಜುನ್, ಸಹಾಯತಾ ಕರನೇ ಸೆ ಶಕ್ತಿ ಬಡಗಯಿ'.
ಗೇಟ್ ಹತ್ತಿರವೇ ನಿಂತಿದ್ದೆ, ಸೊಪ್ಪು ಮಾರುತ್ತ ಒಬ್ಬ ಅಜ್ಜಿ ಬಂದರು, ರಾಶಿ ತರಕಾರಿ ಇತ್ತು ಸೊಪ್ಪು ಬೇಕಿರಲ್ಲಿಲ್ಲ. ಅಜ್ಜಿ ಬಸವಳಿದಂತೆ ಕಾಣುತ್ತಿದ್ದರು .., ನೀರು ಬೇಕಾ ಕೇಳಿದೆ. ಹುಮ್ಮ್ ಅಂದರು, ಒಳಗೆ ಹೋಗಿ ಒಂದು ಖಾಲಿ  ಬಿಸ್ಲೇರಿ ಬಾಟಲಿಯಲ್ಲಿ ನೀರು ತುಂಬಿ ಈ ಬಾಟಲಿಯನ್ನು ಇಟ್ಟುಕೊಳ್ಳಿ ಅಂತ ಕೊಟ್ಟೆ. ಅಜ್ಜಿಗೆ ತುಂಬಾ ಖುಷಿಯಾದಂತೆ ಅನಿಸಿತ್ತು. ಅಜ್ಜಿಗೆ ಬಾಯಾರಿಕೆ ತಣಿದಿರಬಹುದು, ಮತ್ತೆ ಬಯಾರಿದರೆ ಬಾಟಲಿಯಲ್ಲಿ ನೀರು ಮಿಕ್ಕಿರಬಹುದು, ನೀರನ್ನು ತುಂಬಿಸಿಕೊಳ್ಳಲು ತಿಂಗಳ ತನಕ ಆ ಬಾಟಲಿಯೂ ಲಭ್ಯವಿರಬಹುದು .., ಅದಕ್ಕಿಂತ ಹೆಚ್ಚಾಗಿ ಆ ಜೀವಕ್ಕೆ ಚಿಕ್ಕದೊಂದು ಸಿಹಿಯ ತಂಪಿನ ಭಾವ ಅಲೆ ಅಲೆಯಾಗಿ ಮನಸ್ಸನ್ನು ಆವರಿಸಿಕೊಂಡಿರಬಹುದು,  ಮನಸಿಗೆ ಒಂದಷ್ಟು  ಸ್ಪೂರ್ತಿ ಹುಮ್ಮಸ್ಸು ತಂದಿರಬಹುದು, ಮನಸ್ಸಿನ ಭಾವ ಸಿಹಿಯಾಗಿರಬಹುದು.
ಮತ್ತು ..

ಅದು ನನ್ನ ಇವತ್ತಿನ ಮುಗುಳ್ನಗುವಾಗಬಹುದು  :) ಮತ್ತದು ಸಾಂಕ್ರಮಿಕವಾಗಲೂಬಹುದು  :) :)

Wednesday, June 18, 2014

ನಿನ್ನ ಪ್ರೀತಿಗೆ ಚಿಯರ್ಸ್ ಅಪ್ಪ..!

ಎಷ್ಟೋ ದಿನಗಳಿಂದ ಮನಸಿನಲ್ಲಿ ಗೂಡು ಕಟ್ಟಿಕೊಂಡ ಮಾತುಗಳಿಗೆ ಹೊರಬರಲು ಒಮ್ಮೊಮ್ಮೆ ಒಂದು  ನೆಪ ಬೇಕಿರತ್ತದೆ.
 
ಅಪ್ಪನ ಬಗ್ಗೆ ಹಂಚಿಕೊಳ್ಳಲು ಬಂದ ಫಾಥೆರ್ಸ್ ಡೇ ನಂತೆ!

ಮೂರು ವರುಷದ ನನಗೆ ಮೂರು ಗಾಲಿಯ ಸೈಕಲ್ ತಂದು ಕೊಟ್ಟ ನನ್ನ  ಅಪ್ಪ..

ಯಾವ ಹೆಣ್ಣು ಮಗುವೂ  ಸೈಕಲ್ ತುಳಿಯದ ಊರಿನಲ್ಲಿ ಪ್ರೈಮರಿಯಲ್ಲಿ ನನಗಾಗಿ ಸೈಕಲ್ ಕೊಡಿಸಿದ ನನ್ನ ಅಪ್ಪ..

ಭಾಷಣ ಸ್ಪರ್ಧೆಗೆ ಬಿಳಿ ಹಾಳೆಯಲ್ಲಿ ಭಾಷಣ ಬರೆದುಕೊಡುತ್ತಿದ್ದ  ನನ್ನ ಅಪ್ಪ..

ನಾಟಕದ ಸಂಭಾಷಣೆಯನ್ನು ಹೇಳುವ ರೀತಿಯನ್ನು ನನಗೆ ಕಲಿಸಿಕೊಡುತ್ತಿದ್ದ  ಅಪ್ಪ...

ನನ್ನ ಜೊತೆ ಕ್ಯಾರೆಮ್ , ಶಟಲ್ ಆಡುತ್ತಿದ್ದ ಅಪ್ಪ ..

ನಾನು ತುಂಬಾ ತುಂಬಾ ಓದಬೇಕೆಂದು ಕನಸು ಹೊತ್ತು ಹೈಸ್ಕೂಲ್ ಗೆ  ಬೇರೆ ಊರಿನಲ್ಲಿ ಸೇರಿಸಿದ ನನ್ನ ಅಪ್ಪ.

ನನಗೆ ಸುಜುಕಿ ಬೈಕ್ ನ ತಾನೇ ಸ್ವಂತ ನಿಂತು ಕಲಿಸಿದ  ನನ್ನ ಅಪ್ಪ.

ಜೀಪ್ ಡ್ರೈವಿಂಗ್ ಕಲಿಸಿ ಕೀ ಕೈಗೆ ಇಡುತ್ತಿದ್ದ ನನ್ನ ಅಪ್ಪ.

ನನ್ನನ್ನು    ಸ್ಕೂಟಿ ಶೋ ರೂಂ ಗೆ ಕರೆದೊಯ್ದು ಬೇಕಾದ್ದು ಆರಿಸಿಕೋ ಅಂದ ನನ್ನ ಅಪ್ಪ.

ಊರಿಗಂತ ಹೊರಟರೆ ಬೆಳಗ್ಗೆ ೫ ಕ್ಕೇ ಎದ್ದು ರೆಡಿಯಾಗಿ  ಬಸ್ಸ್ಟ್ಯಾಂಡ್ ಗೆ ೧೦ ನಿಮಿಷ ಮುಂಚೆಯೇ ಕಾರು ತಂದು ಕಾಯುವ ನನ್ನ ಅಪ್ಪ ..

ಮೊನ್ನೆ ಮೊನ್ನೆ ಬಾಣಂತನದಲ್ಲಿ  ರಚ್ಚೆ ಹಿಡಿದು ಅಳುತ್ತಿದ ನನ್ನ ಮಗುವನ್ನು ದಿನವೂ ಮಲಗಿಸಿಯೇ ತಾನು  ಮಲಗುತ್ತಿದ್ದ ನನ್ನ ಅಪ್ಪ ...

ಭಾವನೆಗಳಿಗೆ, ಯೋಚನೆಗಳಿಗೆ, ಇಷ್ಟಗಳಿಗೆ ಯಾವತ್ತೂ ಬೆಲೆ ಕೊಡುತ್ತಿದ್ದ ನನ್ನ ಅಪ್ಪ..

ಚಿಕ್ಕಂದಿನಿಂದಲೇ ಅಯೈಕೆಯ ಸ್ವಾತಂತ್ರ್ಯವನ್ನು ನನ್ನ ಕೈಗಿತ್ತ ನನ್ನ ಅಪ್ಪ.




ಹೇಳಿದಷ್ಟೂ ಮುಗಿಯದ ಮಾತುಗಳಿವೆ .... , ಆದರೆ ಹೇಳಲೇ ಬೇಕಾದ ಇನ್ನೂ  ಒಂದು ಮಾತಿದೆ...

ಗೆಲುವ ಮಕ್ಕಳನ್ನು ದೂರದಿಂದ ನಿಂತು ನೋಡುವುದು , ಅವರಿಗೆ   ಸಪ್ಪೊರ್ಟಿವ್  ಆಗಿರೋದು ಸಹಜದ ಸಂತೋಷದ ವಿಷಯ..

ಆದರೆ ಸೋತ ಮಕ್ಕಳು ...?


 ಒಂದಷ್ಟು ಕಾಲದ ಮಿತಿಯೊಳಗೆ ಸರತಿಯಲ್ಲಿ ಸೋತ ಮಗು ನಾನು,  ಸೋತ ಮಗುವಿನಲ್ಲಿ ಆತ್ಮವಿಶ್ವಾಸವನ್ನು ಸೋಲಿಸಲ್ಲಿಲ್ಲ  ಅಪ್ಪ !

 ಎಂತಹ ದೊಡ್ಡ ಸೋಲನ್ನು ಹೊರಲಾರದೆ ಹೊತ್ತುಕೊಂಡು ಬಂದು ನಿಂತಾಗಲೂ  ಆತ್ಮ ವಿಶ್ವಾಸವನ್ನು ಕುಂದಿಸಲಿಲ್ಲ.

ಹಿಂದಿರುಗಿ ನೋಡಿದರೆ ಸೋತ ಸೋಲು ಅಲ್ಲೇ ಬಿದ್ದಿದೆ!ಹಾದಿ  ತುಂಬಾ ದೂರ ನಡೆದು ಬಂದಿದೆ.

ನನಗೆ ಹೇಳಬೇಕಾದ್ದೂ ಇದೇ,  ಮಕ್ಕಳ ಚಿಕ್ಕ ಪುಟ್ಟ ಸೋಲುಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಕುಂದಿಸಬಾರದು,  ಧೈರ್ಯವನ್ನು ಕೆಡಿಸಬಾರದು ,  ಸ್ವಲ್ಪ ಕೈ ಚಾಚಿದರೆ ಮತ್ತೆ ಚಿಗಿತು ಎದ್ದು ಮುಂದೆ ನಡೆಯಬಲ್ಲವು ನಮ್ಮ ಮಕ್ಕಳು,   ನಾವು ಕೈ ಚಾಚಬೇಕಷ್ಟೇ !

ಹಾಗೆ ಚಾಚಿದ ಎಷ್ಟೋ ಕೈಗಳ ಅಪ್ಪಂದಿರಿಗೆ ಹ್ಯಾಪಿ ಫಾಥೆರ್ಸ್ ಡೇ .  ಅವರು ನೆಟ್ಟ ಆತ್ಮ ವಿಶ್ವಾಸದ ಬಳ್ಳಿಗೆ, ಕೊಟ್ಟ ಧೈರ್ಯಕ್ಕೆ ,  ಇಟ್ಟ ಪ್ರೀತಿಗೆ ಚೀಯರ್ಸ್ ........


Tuesday, June 11, 2013

ಅವರ ಹೊಟ್ಟೆ ಯಾವತ್ತೂ ತಣ್ಣಗಿರಲಿ ...

     

    
     
ಮೊದಲೆಲ್ಲಾ  ನಾನೂ ಹಾಗೆ ಮಾಡುತ್ತಿದ್ದೆ,  ಮನೆ ಮುಂದೆ ಬಂದ  ತರಕಾರಿ ಮಾರುವವನ  ಗಾಡಿಯಲ್ಲಿರುವ ಟೊಮೇಟೊವನ್ನು ಮುಟ್ಟಿ  ಮುಟ್ಟಿ  ಪರಿಶೀಲಿಸಿ ತೆಗೆದುಕೊಳ್ಳುತ್ತಾ , ' ಯಾಕ್ರೀ ಅಂಗಡಿಯಲ್ಲಿ ಇಷ್ಟು ನಿಮ್ದ್ಯಾಕ್ರೀ   1  ರುಪಾಯೇ ಜಾಸ್ತಿ ? ಎನ್ನುತ್ತಿದ್ದೆ ,  ಎಳನೀರು ಹೊಟ್ಟೆ ತುಂಬಾ ಕುಡಿದು ಯಾಕೆ ಒಂದು ರುಪಾಯೀ ಜಾಸ್ತಿ ಪಕ್ಕದ ಬೀದಿಯಲ್ಲಿ ಕಡಿಮೆ ? ಎನ್ನುತ್ತಿದ್ದೆ ,  ಸಿಗ್ನಲ್ಲಿ ಪೆರೆಲೆ ಕಾಯಿಯೂ ಮಾವಿನ ಕಾಯಿಯೋ  ಬಂದರೆ 1೦ ರುಪಾಯಿಗೆ 3 ರೆನಾ? 4 ಕೊಡಿ ಎನ್ನುತ್ತಿದ್ದೆ, ಹೀಗೆ  ಚೌಕಾಸಿ ಮಾಡುವುದು  ಅದೇನೋ  ರೂಢಿಗತವಾಗಿಬಿಟ್ಟಿತ್ತು .
ಆದರೆ  ಒಮ್ಮೆ ಯೋಚಿಸಿ ನೋಡೋಣ, ತರಕಾರಿ  ತರುವವನು ಬೆಳಗ್ಗೆ 3 ಗಂಟೆಗೆ ಎದ್ದು, ಸೈಕಲ್ ತುಳಿದು, ಯಶವಂತ ಪುರ ಮಾರ್ಕೆಟ್ಗೋ, HAL ಗೋ  ಅಥವ ಇನ್ನೆಲ್ಲೋ  ಮೈಲುಗಟ್ಟಲೆ ಹೋಗಿ, ತರಕಾರಿ ತಂದು, ಮತ್ತೆ ಅದನ್ನು ಪ್ರತಿ ಮನೆ ಮನೆಗೂ ಮಾರಿ, ಅವರ ಉಲ್ಟಾ ಪಲ್ಟ ಮಾತನ್ನೂ  ಕೇಳಿಸಿಕೊಂಡು,  ಅಷ್ಟಕ್ಕೂ ಅವರಿಗೆ ಸಿಗುವ  ಲಾಭದ ಪರಿಮಾಣವಾದರೂ ಎಷ್ಟು ?   kg ಗೆ ಒಂದು ರುಪಾಯೀ? ಎರಡು ರುಪಾಯೀ ? ಬೇಡ 3 ರುಪಾಯೀ ? ಎಳನೀರಾತನಿಗೆ ಸಿಗುವ ಲಾಭವಾದರೂ ಎಷ್ಟಿದ್ದೀತು?  ಸಿಗ್ನಲ್ಲಲ್ಲಿ ಪೆರೆಲೆ ಕಾಯಿಯನ್ನೊ ಮಾವಿನಕಾಯಿಯನ್ನೋ  ಮಾರುವವರ ಲಾಭದ ಪರಿಮಾಣ ಎಷ್ಟು ಪೈಸೆ ಅಥವ ಎಷ್ಟು ರುಪಾಯೀ ಇದ್ದೀತು?

  ವಿಷಯ  ಇಷ್ಟೇ ಅಲ್ಲ ...

ನಾವುಗಳು ಮಾಲ್  ಹೊಕ್ಕರೆ   ಸಾವಿರದ ನೋಟು ಚಿಕ್ಕದೆನಿಸುತ್ತದೆ, ಹೋಟೆಲೊಳಗೆ  ಹೊಕ್ಕು ಕುಳಿತರೆ ಮಿತಿಮೀರಿದ  ಬಿಲ್  ಜೊತೆಗೆ  ಮುಲಾಜಿಗಾದರೂ ಟಿಪ್ಸ್ ಅಂತ ಬಿಟ್ಟು ಬರುತ್ತೇವೆ, ಪೆಟ್ರೋಲನ್ನು ಬಕಾಸುರನಂತೆ ಕುಡಿದು  5  ಜನರು ಓಡಾಡುವ ಕಾರಿನಲ್ಲಿ  ದಿಲ್ ಅಂತ ಒಬ್ಬರೇ ಓಡಾಡುತ್ತೇವೆ, ಸಿನೆಮಾಕ್ಕೆ ಹೋಗಿ ಕುಳಿತರೆ ಅಲ್ಲಿಯ ಪೋಪ್ಕೊನ್ರ್ನ್ ಗೆ  ದುಪ್ಪಟ್ಟು ದುಡ್ಡು   ಚೆಲ್ಲುತ್ತೇವೆ,  ಪಟ್ಟಿ ಉದ್ದಕ್ಕೆ ಬೆಳೆಯುತ್ತಲೇ  ಹೋಗುತ್ತದೆ....

ರಿಲಯನ್ಸ್ ಫ್ರೆಶ್ ನಲ್ಲಿ  ವ್ಯಾಕ್ಸ್ ಬಳಿದಿಟ್ಟ, ಸಕ್ಕರೆ ಇಂಜೆಕ್ಷನ್ ಚುಚ್ಚಿದ  ಫಳ್ಳನೆ ಹೊಳೆಯುವ  ಸೇಬುವಿಗೆ kg  ಗೆ ನೂರಿಪ್ಪತ್ತಾದರೂ ಕೊಡುತ್ತೇವೆ, ಮತ್ತೆಷ್ಟಾದರೂ ಕೊಡುತ್ತೇವೆ, ಕೊಟ್ಟು ಕವರೊಳಗೆ ತುಂಬಿಸಿಕೊಳ್ಳುತ್ತೆವೆ, ಆ ಕವರಿಗೆ ಮತ್ತೆ  ಒಂದೋ  ಎರಡೋ ರುಪಾಯೀಯನ್ನೂ  ಕೊಡುತ್ತೇವೆ, ಬಿಸಿಲಿನಲ್ಲಿ ತಲೆ ಮೇಲೆ ಹೊತ್ತ ನಮ್ಮದೇ  ನೆಲದ ಪೇರಲೆ ಹಣ್ಣಿಗೆ ಇಪ್ಪತ್ತು ರುಪಾಯೆಗೆ ನಾಲ್ಕು ಕೇಳುತ್ತವೆ, ತಯಾರಿಕೆಗೆ ಕೇವಲ ಎರಡು ರುಪಯೀ  ಖರ್ಚಾಗುವ  ಪೆಪ್ಸಿ ಗೆ   2 5  ರುಪಾಯೆಯನ್ನು ಕೊಡುವಾಗ ನಾವು ತಪ್ಪಿಯೂ ಚೌಕಾಸಿ ಮಾಡುವುದಿಲ್ಲ ,  ದುಡ್ಡು ಕೊಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತೇವೆ.  ಇಲ್ಲೇ ಮಂಡ್ಯದವನೋ  ತಿಪಟೂರವನೋ  ಬೆಳೆದ ಎಳನೀರಿಗೆ  ಅದನ್ನ ಮಾರುವವನಿಗೆ ನಮ್ಮದು ಒಂದು ರುಪಾಯೀ ಎರಡು ರುಪಾಯಿಗೆ ಚೌಕಾಸಿ !
  
       ಅದೇನಾಯಿತೋ ..,  ಇತ್ತೀಚಿಗೆ  ಶ್ರಮ  ಪಟ್ಟು ಕೆಲಸ ಮಾಡುವ ಇಂತವರ ಜೊತೆ  ಚೌಕಾಸಿ ಮಾಡಬೇಕಿನಿಸುತ್ತಿಲ್ಲ  ಉಳಿತಾಯ ಮಾಡುವ ಮನಸಿದ್ದರೆ ಬೇಕಷ್ಟು ಮಾರ್ಗಗಳಿವೆ, ಅವರ ಶ್ರಮದ ಬೆವರು ಬೇಡ,  ಈ ತರ ಚೌಕಾಸಿ ಮಾಡಿ ಬುದ್ದಿವಂತೆ ಎನಿಸಿಕೊಳ್ಳುವುದಕ್ಕಿಂತ  ದಡ್ಡಿಯಾಗಿರಲೇ  ಇಷ್ಟ ಪಡುತ್ತೇನೆ, ಇತ್ತೀಚಿಗೆ  'ಯಾಕೆ ಒಂದು ರುಪಾಯೇ ಜಾಸ್ತಿ'  ಎನ್ನುವ ಬದಲು  ತರಕಾರಿ ಗಾಡಿಯವನ ಬಳಿ , 'ಎಲ್ಲಿಂದ ತರ್ತೀರಾರೀ?, ಎಷ್ಟು ಕೊಡ್ತೀರಾರೀ ? ', ತರಕಾರಿ ಕೊಳೆತರೆ ಏನು ಮಾಡ್ತೀರಾ?  ಕೇಳುತ್ತೇನೆ ,  ಎಳನೀರಾತನೊಂದಿಗೆ , ' ಎಲ್ಲಿಂದ  ಬರತ್ತೆ? ನಿಮಗೆ ಎಷ್ಟಕ್ಕೆ ಸಿಗತ್ತೆ , ಲಾಭ ಆಗತ್ತಾ ? ಹಾಳು ಆದರೆ ಏನು ಮಾಡ್ತೀರಾರೀ?  ಎನ್ನುತ್ತೇನೆ, ಅವಾಗಲೇ ಗೊತ್ತಾಗಿದ್ದು ನನಗೆ ಪೋಲಿಸಿನವರಿಗೂ ಪಾಲು ಕೊಡಬೇಕಂತೆ! ಕೇಳಿದಾಗಲೆಲ್ಲಾ  ಎಳನೀರೂ  ಕೊಡಬೇಕಂತೆ !
ರೆಡಿಮೇಡ್  ಫುಡ್ ಪ್ಯಾಕೆಟ್, ಪೆಪ್ಸಿ ಕೋಕಾಕೋಲ,  ಐಸ್ ಕ್ರೀಂ, ಕೇಕ್,  ಹಾಳು  ಮೂಳು ಅಂತ ದುಡ್ಡು ಚೆಲ್ಲಿ  ನಮ್ಮ ಆರೋಗ್ಯವನ್ನೂ ಕೆಡಿಸಿಕೊಂಡು ಬೇರೆ ದೇಶದವರ ಹೊಟ್ಟೆ ತುಂಬಿಸುವುದು, ಅವರನ್ನು ಶ್ರೀಮಂತಗೊಳಿಸುವುದು  ನಮ್ಮ ಯಾವತ್ತಿನ ಕೆಲಸವೇ ! ಇರಲಿ ಬಿಡಿ, ಆದರೆ ನಮ್ಮ ರಾಮನಗರದ ತಿಪ್ಪಣ್ಣ, ಚಿಕ್ಕಬಳ್ಳಾಪುರದ  ಮಂಜಣ್ಣ , ಮಂಡ್ಯದ ಸೋಮಣ್ಣ , ತಿಪಟೂರಿನ ಮತ್ಯಾವುದೋ ಅಣ್ಣ , ಅವರೂ ಸ್ವಲ್ಪ ಬೆಳೆಯಲಿ, ನಮ್ಮ ದೇಹಕ್ಕೆ ಅಗತ್ಯವಾದ  ತರಕಾರಿ, ಇನ್ನಿತರ ಆರೋಗ್ಯಕರ ಬೆಳೆ ಬೆಳೆಯುವವರ, ಮಾರುವವರ  ಹೊಟ್ಟೆ ಯಾವತ್ತೂ ತಣ್ಣಗಿರಲಿ.....

ಕೊನೆಗೆ,

ಕೊಟ್ಟ ಭಿಕ್ಷೆ ಕೂಡ ಸೋಮಾರಿತನಕ್ಕೆ ಪ್ರೋತ್ಸಾಹವಾಗಬಹುದು, ದೇವರ ಹುಂಡಿಗೆ ಬಿದ್ದ ದುಡ್ಡು ಕೂಡ ಎಲ್ಲೋ ಯಾರದ್ದೋ ಹೊಟ್ಟೆ ತುಂಬಿದವರನ್ನೇ  ಇನ್ನಷ್ಟು ತುಂಬಿಸಬಹುದು,  ಆದರೆ  ನಮ್ಮಂತವರ  ಒಂದು ಎರಡು ರುಪಾಯೀ ಲಾಭ ಅವತ್ತಿನ ಅವನ ಅನ್ನವಾಗಬಹುದು, ಅಲ್ಲವೇ....?
     


                             

Tuesday, December 11, 2012

ಚಲ್ತಿ ಕಾ ನಾಮ್ ಗಾಡಿ..? ಯಾ ಜಿಂದಗಿ ..?

      
         
         
                ಒಂದು ಚಳಿಯಾದ ಬೆಳಗಿನಲ್ಲಿ ಬೆಲ್ಲ ತುಪ್ಪದೊಂದಿಗೆ   ಗರಿ ಗರಿಯಾದ ದೋಸೆಯನ್ನು ತಿನ್ನುತ್ತ ಕುಳಿತ್ತಿದ್ದಾಗ ನಾನಂದೆ  ' ಅಪ್ಪ ನಂಗೆ ಒಂದು ಸ್ಕೂಟಿ ಬೇಕು ..!'  ಅಪ್ಪಂಗೆ ಪಕ್ಕದಲ್ಲೇ ಬಾಂಬ್ ಬಿದ್ದ ಹಾಗೆ ಆಗಿತ್ತೋ ಏನೋ .., 'ಹಮ್ಮ ..?' ಎಂದರು ತಲೆ ಎತ್ತಿ .., ನಾನಂದೆ  ' ಹುಮ್ಮ್..  ನಂಗೆ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟಿ ಬೇಕು ..!' , ಅಪ್ಪ  'ನೋಡನ '  ಅಂತಷ್ಟೇ ಹೇಳಿ  ದೋಸೆ ತಿನ್ನುವುದರಲ್ಲಿ ಮಗ್ನವಾದರು .

 
             
                  15     ದಿನ ಅದೇ ಯೋಚನೆಯಲ್ಲಿದ್ದೆ ,  ಅಪ್ಪ   'ನೋಡನ '  ಅಂದರೆ  ಅದು   'ok '  ಅಂತ  ನಂಗೆ  ಚೆನ್ನಾಗಿ  ಗೊತ್ತಿತ್ತು !  ಅಪ್ಪ ಸೆಕೆಂಡ್ ಹ್ಯಾಂಡ್ ಸ್ಕೂಟಿ ಯಾರ ಬಳಿ  ಇದೆ ಎಂದು ವಿಚಾರಿಸುತ್ತಿರಬಹುದು .., ಶೋ ರೂಂ ನಲ್ಲೂ ಸೆಕೆಂಡ್  ಹ್ಯಾಂಡ್  ಸಿಗುತ್ತಂತೆ ಅಂತ ಲೆಕ್ಕಾಚಾರ ಹಾಕುತ್ತಿತ್ತು ಮನಸ್ಸು , ನಾನಾಗ ಸಾಗರದ ಹಾಸ್ಟೆಲ್ನಲ್ಲಿ  ಇದ್ದುಕೊಂಡು ಓದುತ್ತಿದ್ದೆ , ಅಪ್ಪ ಸಾಗರಕ್ಕೆ ಬಂದವರೇ , 'ತಗಳದೆ ಆದ್ರೆ ಸೆಕೆಂಡ್ ಹ್ಯಾಂಡ್ ಯಾಕೆ..  , ಸ್ಕೂಟಿ ಪೆಪ್ ಅಂತ ಹೊಸುದು ಬಂದಿದ್ದು , ಕೋಟೆಷನ್  ನೋಡು 32೦೦೦ ಶೋ ರೂಮ್  ಪ್ರೈಸ್ ,  38೦೦೦  ಆನ್ ರೋಡ್  ಪ್ರೈಸ್ , ನಾನು ಶೋ ರೂಮ್  ನಲ್ಲಿ ಮಾತಡಿದ್ದಿ , ನಿಂಗೆ ಯಾವ ಕಲರ್ ಬೇಕು ಅಂತ ಸೆಲೆಕ್ಟ್ ಮಾಡು' ಅಂತ ಕೈಗೆ  ಕೋಟೆಷನ್ ಕೊಟ್ಟೆ ಬಿಡೋದಾ !  ಪಕ್ಕದಲ್ಲೇ ಬಾಂಬ್ ಬಿದ್ದ ಹಾಗಾಗುವ ಸರದಿ ನನ್ನದಾಗಿತ್ತು !. 10  ಸಾವಿರಕ್ಕೋ , 15  ಸಾವಿರಕ್ಕೋ   ಸಿಗುವ ಸೆಕೆಂಡ್  ಹ್ಯಾಂಡ್ ಸ್ಕೂಟಿ ತೆಗೆದುಕೊಳ್ಳುವ  ಯೋಚನೆಯಿತ್ತೆ ಹೊರತು  ಹೊಸ ಸ್ಕೂಟಿ ಬಗ್ಗೆ ಯೋಚಿಸಿಯೂ ಇರಲ್ಲಿಲ್ಲ ..! ಸರಿ ಶೋ ರೂಂ  ಗೆ ಹೋಗಿ  ಕಲರ್  ಎಲ್ಲ ನೋಡಿ ಕೆಂಪು ಬಣ್ಣದ್ದು ಸೆಲೆಕ್ಟ್ ಮಾಡಿ ಹಾಸ್ಟೆಲ್ ಗೆ ಬಂದರೂ ಮನಸ್ಸು ಪೂರ್ತಿಯಾಗಿ ಖುಷಿ ಪಡದೆ ಇನ್ಸ್ಟಾಲ್ ಮೆಂಟ್  ನಲ್ಲಿ ಖುಷಿಯನ್ನು ಆಸ್ವಾದಿಸುತ್ತಿತ್ತು .









   
                 ಕೊನೆಗೂ ಪ್ರೊಸೀಜರ್ ಎಲ್ಲ ಮುಗಿದು ಅದೇ ಶೋ ರೂಮ್  ನಲ್ಲಿ ಉದುಬತ್ತಿ ಹಚ್ಚಿ ಗಣಪತಿ ಪೂಜೆಯನ್ನೂ ಮಾಡಿ ಸ್ಕೂಟಿ ಕೀ  ನನ್ನ ಕೈಗೆ ಬಂದು ಸ್ಕೂಟಿ ಹತ್ತಿ ಕೂತು  ಹೋಗ್ತಾ ಇದ್ರೆ ಆಕಾಶದಲ್ಲೇ ಸ್ಕೂಟಿ ಹೊಡೆದ ಅನುಬವ !   ಆಕಾಶವೇ ಅಂಗೈಯಲ್ಲಿ  ಸಿಕ್ಕಿದಷ್ಟು ಆನಂದ ! ನನ್ನ ಸ್ಕೂಟಿ , ನನ್ನ ಹೆಸರಲ್ಲೇ ರಿಜಿಸ್ಟ್ರೇಷನ್  ! ಹಮ್ಮ .. ಅವತ್ತಿನಿಂದ ಇವತ್ತಿನವರೆಗೂ ಪ್ರತೀ ಸಲ ನನ್ನ ಪ್ರೀತಿಯ ಸ್ಕೂಟಿ  ನೋಡಿದಾಗಲೂ  ಮನಸಿನ ಯಾವೊದೋ ಮೂಲೆಯಲ್ಲಿ ಒಂದು  ಖುಷಿಯ ಪಲಕು! ಗಣಪತಿ ಕೆರೆಯ ಬಳಿಯ ಹಾಸ್ಟೆಲ್ನಿಂದ ಸ್ಕೂಟಿ ಹೊರಟರೆ BH  ರೋಡ್ ದಾಟಿ ಇಕ್ಕೇರಿ ರೋಡಲ್ಲಿ ಇರುವ ನನ್ನ ಕಾಲೇಜು     ತಲಪಲು ೧೦ ನಿಮಿಷ !  ವಾವ್  ..! ಸ್ವಲ್ಪ ದಿನ ಸಮಯವೇ ನನ್ನ ಕೈಲಿದ್ದಷ್ಟು ಖುಷಿ ನನಗೆ !

             
                  ಹಾಸ್ಟೆಲ್ ಎದುರಿಗೆ ಇದ್ದ ನೀರಿನ ಟ್ಯಾಂಕ್ ನಲ್ಲಿ ನನ್ ಸ್ಚೂಟಿಗೆ ದಿನ ಬಿಟ್ಟು ದಿನ ಸ್ನಾನ , ಮಿರ ಮಿರ ಮಿಂಚುವಂತೆ ದಿನ ಬಟ್ಟೆಯಿಂದ್ ಒರೆಸುವಷ್ಟು ಉಪಚಾರ !   ಪೆಟ್ರೋಲ್ ಪ್ರೈಸ್   ಒಂದು ಲೀಟರ್ ಗೆ Rs  42 ಇತ್ತು ಅವಾಗ , ಅಪ್ಪ ಅಷ್ಟೊಂದು  ಸ್ಟ್ರಿಕ್ಟ್ ಆಗಿ ಏನೂ  ಹೇಳದ್ದಿದ್ದರೂ ಅದೇನೋ ಗೊತ್ತಿಲ್ಲ ನಂಗೆ ನಾನೇ ಕೆಲವು ನಿಯಮವನ್ನು  ಹಾಕಿಕೊಂಡುಬಿಟ್ಟಿದ್ದೆ , ತಿಂಗಳಿಗೆ ಇಂತಿಷ್ಟೇ ಪೆಟ್ರೋಲ್ ಹಾಕ್ಬೇಕು , ಸುಮ್ಸುಮ್ನೆ ಎಲ್ಲೆಂದರಲ್ಲಿ ಸುತ್ತಬಾರದು , ಅನಾವಶ್ಯಕವಾಗಿ ಸ್ಕೂಟಿ ಹೊಡಿಬಾರದು,  ಸ್ಕೂಟಿ ನ  ತುಂಬಾ ಚೆನ್ನಾಗಿ ಮೈಂಟೈನ್ ಮಾಡ್ಬೇಕು  etc ... etc..ಹಮ್ಮ ..  ಕಾಲೇಜು ಬಿಟ್ಟರೆ ನನ್ನ ಸ್ಕೂಟಿಗೆ ಸಾಗರದಲ್ಲಿರುವ ಪ್ರತಿ ಲೈಬ್ರರಿಯೂ  ಚಿರಪರಿಚಿತ ! ನಾನು ಬಯಸಿದಾಗಲೆಲ್ಲ ಕ್ಷಣ ಮಾತ್ರದಲ್ಲಿ ನನ್ನನ್ನು ಲೈಬ್ರರಿಯ  ಎದುರಿಗೆ ತಂದು ನಿಲ್ಲಿಸುತ್ತಿತ್ತು

                ಫೈನಲ್ ಸೆಮ್ ನಲ್ಲೆ ಮದುವೆ  ಫಿಕ್ಸ್ , ಹಾಸ್ಟೆಲ್ ನಲ್ಲಿ  ಎಲ್ರೂ ಅಂತಿದ್ರು , " ಚೈತ್ರನಿಗೆ ಹೊಸ ಗಂಡ ಸಿಕ್ಕದ  ಅಂತ ಹಳೆ ಗಂಡನ  ಬಗ್ಗೆ ಅಸ್ಥೆ ಕಡಿಮೆ ಆಯಿತು ",.  ಅದೇನೋ ಮದುವೆಗೆ ಸಮಯ ತುಂಬಾ ಕಡಿಮೆ ಇದ್ದಿದ್ರಿಂದ ಶಾಪಿಂಗ್..  ಸ್ಟಿಚ್ಚಿಂಗು..  ಅದು.. ಇದು.. ಅಂತ ನನ್ನ ಪ್ರೀತಿಯ ಸ್ಕೂಟಿ ಕಡೆ ಗಮನವೇ ಕೊಡೋದಕ್ಕೆ ಆಗ್ತಾ ಇರ್ಲಿಲ್ಲ .., ಪಾಪ ಅದಕ್ಕೆ ಬೇಜಾರಾಗಿತ್ತೋ ಏನೋ  ...





               ಬೆಂಗಳೂರಿಗೆ  ನನ್ನೊಂದಿಗೆ ಬಂದ ನನ್ನ ಸ್ಕೂಟಿ ನಾನೇ ಆಶ್ಚರ್ಯ ಪಡುವಷ್ಟು ಬೇಗನೆ ಇಲ್ಲಿನ ಸಿಗ್ನಲ್ಲು ಟ್ರಾಫಿಕ್  ಗೆ  ಒಗ್ಗಿಕೊಂಡಿತು , ಆದರೆ ಪಾಪ ಬೆಂಗಳೂರಿನ ೨೫ ರೋಡ್ಗಳು ಅದಕ್ಕೆ ಸದಾ ಗೊಂದಲ ! ಯಾವ ಕಡೆ ಹೋಗೋದು ಅಂತ ದಿಕ್ಕೇ ತೋಚದ ಸ್ತಿತಿ , ಒಮ್ಮೆ ನೋಡಿದ ರೋಡು ಮತ್ತೊಮ್ಮೆ ನೋಡುವಾಗ ಚೇಂಜು ! ಪಾಪ ನನ್ನ ಸ್ಕೂಟಿ ಏನು ಮಾಡಲು ಸಾದ್ಯ ? ಈಗ್ಲೂ ಅಷ್ಟೇ ಎರಡು ಮೂರು  ಕವಲುಗಳ  ದಾರಿಯಲ್ಲಿ  ' I Cant '  ಅಂತ ಒಮ್ಮೊಮ್ಮೆ  ಮುಷ್ಕರ ಹೂಡಿಬಿಡುತ್ತದೆ ..!

              ಮಗಳನ್ನು ಸ್ಕೂಲ್ನಿಂದ ಪಿಕ್ ಮಾಡೋದು,    ತರಕಾರಿ ತರೋದು,    ಚಿಕ್ಕ ಪುಟ್ಟ ಶಾಪಿಂಗು  , ಗೆಳತಿಯರೊಡನೆ ಓಡಾಟ,  ಅದು ಇದು ಸಣ್ಣ ಪುಟ್ಟ ಕೆಲಸ ..ಎಲ್ಲವನ್ನೂ ನನ್ನ ಸ್ಕೂಟಿ ಸ್ವಲ್ಪವೂ ಬೇಜಾರಿಲ್ಲದೆ ಮಾಡುತ್ತಿದೆ ..,   ಏನೇ ಆದರೂ 10   ವರುಷದಿಂದ ಇವತ್ತಿನವರೆಗೂ ನನ್ನ ಜೊತೇನೆ ಇತ್ತು , ನನ್ನ  ಜೊತೇನೆ ಇದೆ .,  ಮುಂದೇನೂ ಇ..ರ...ತ್ತೆ ...


       
                 ಇಷ್ಟರ ಮದ್ಯೆ  ಪ್ರೀತಿಯ ಸ್ಕೂಟಿ  ನನ್ನ ತಂಗಿ ನನ್ನ ತಮ್ಮನನ್ನು ಹೊತ್ತುಕೊಂಡು ತಿರುಗಾಡಿತ್ತು .  ಕಾಲೇಜು, ಎಗ್ಸಾಮ್,  ಎಂಗೇಜ್ಮೆಂಟ್ ,  ಮದುವೆ , ಆ ಮನೆ, ಈ ಮನೆ , ಬೆಂಗಳೂರು , ಆ ನಗರ , ಈ ನಗರ , ಮತ್ತೊಂದು  ಮನೆ ,  ಮಗಳು .. ಅವಳ ಸ್ಕೂಲ್ .. ಅಬ್ಬಬ್ಬ ..!!!  ಹತ್ತು ವರುಷದಲ್ಲಿ ಏನೆಲ್ಲಾ ...!! ಇನ್ನೆಷ್ಟು  ಘಟ್ಟ , ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತೋ ನನ್ನ ಪ್ರೀತಿಯ ಸ್ಕೂಟಿ ಗೊತ್ತಿಲ್ಲ ..!  ಲವ್ ಯು ಸ್ಕೂಟಿ ..!

 

Monday, December 3, 2012

ಬದುಕ ಮನ್ನಿಸು ಮನವೇ

   
ಬದುಕ ಮನ್ನಿಸು ಮನವೇ...

ಸಮಸ್ಯೆಯಾದರೆ  ಪರಿಹರಿಸಿಕೊಳ್ಳಬಹುದು , ದುಃಖವಾದರೆ ಇಂತಿಷ್ಟು ಕಾಲ ಅಂತಿರುತ್ತದೆ, ನಂತರ ಅದರ ತೀವ್ರತೆ ಕಡಿಮೆಯಾಗಿ ಮರೆತುಬಿಡಬಹುದು. ಬದುಕು ಎಂಬ ಇಡೀ ಪ್ಯಾಕೇಜ್ ನಲ್ಲಿ  'ಒಂದು ಸಮಸ್ಯೆಯ'  ಆಯುಷ್ಯ  ತುಂಬಾ ಚಿಕ್ಕದು. ಏನೇ ಆದರೂ ಬದುಕು ಹಾಗೆ ಸಾಗುತ್ತಿರುತ್ತದೆ. ಆದರೆ ಕೆಲವೇ ಕೆಲವು  ಸಂಗತಿಗಳು ಮಾತ್ರ  ಪ್ರತಿಕ್ಷಣದ ಬದುಕನ್ನೂ  ಸವಾಲಿಗೊಡ್ದುವಂತದ್ದು .

               
 ಹೇಳಲು ಹೊರಟಿರುವುದು ಬುದ್ದಿಮಾಂದ್ಯ ಅಂತ ಇರುತ್ತಾರಲ್ಲ ಅಂತ ಮಕ್ಕಳ ಬಗ್ಗೆ, ಅವರ ತಂದೆ ತಾಯಿಯರ ಬಗ್ಗೆ,  ಅಂತವರಿಗೆ ಜೀವನದ ಪ್ರತಿ ಕ್ಷಣವೂ ಹೊರಾಟ, ಪ್ರತಿ ಹೆಜ್ಜೆಯೂ ಸವಾಲು , ಪ್ರತಿ ನಗುವಿನ ಹಿಂದೊಂದು ನೋವಿನ ಸೆಲೆಯನ್ನು ಎದುರಿಗೆ ಬಾರದಂತೆ ತಡೆದು ನಿಲ್ಲಿಸಿಕೊಂಡಿರುತ್ತಾರೆ.  ಅದು ನಮ್ಮ ನಿಮ್ಮ ದುಃಖಗಳ  ಹಾಗೆ ಇವತ್ತಿದ್ದು ನಾಳೆ ಹೊರಟುಬಿಡುವಂತದ್ದಲ್ಲ , ಯಾರೋ ಸಾವಿನಲ್ಲಿ ಆಗಲಿದ ದುಃಖ ಕೂಡ ಒಂದು ಕಾಲದ ಮಿತಿಯಲ್ಲಷ್ಟೇ  ನಮ್ಮನ್ನು ನರಳಿಸಬಹುದು. ಇದು ಹಾಗೂ ಅಲ್ಲ.



ಮೊನ್ನೆ ಯಾವೊದೋ ಕಾರಣಕ್ಕಾಗಿ ಮಣಿಪಾಲ ಆಸ್ಪತ್ರೆಗೆ ಹೋಗಿದ್ದೆ,  ವಿಸಿಟರ್ಸ್ ಸೀಟ್ ನಲ್ಲಿ ಕುಳಿತ 5 ನಿಮಿಷಕ್ಕೆ ನನ್ನ ಎದುರಿಗೆ ಒಬ್ಬ ತಾಯಿ ಮಗಳು ಬಂದು ಕುಳಿತರು. ಮಗಳು ವಿಚಿತ್ರವಾಗಿ ಶಬ್ದ ಹೊರಳಿಸುತ್ತ  ಏನೋ  ಹೇಳಲು ಪ್ರಯತ್ನಿಸುತ್ತಿದ್ದಳು ಆಕೆಗೆ ತನ್ನ ನಾಲಿಗೆ  ತುಟಿ ಅಂಗಾಂಗಗಳ ಮೇಲೆ ಎಚ್ಚರವಿರಲಿಲ್ಲ, ಅವರಮ್ಮ ಆಕೆಯನ್ನು ಸಂಬಾಳಿಸುವುದರಲ್ಲಿ  ಸೋಲುತ್ತಿದ್ದರು.  ಅವರ ಮುಖದಲ್ಲಿದ್ದ ಆ ನೋವು, ಮುಜುಗರ, ಆಳವಾದ ಕಣ್ಣಲ್ಲಿದ್ದ ಅತಿಯಾದ ನೋವು...,  ನನಗೆ ಇಂಥ ದೃಶ್ಯಗಳನ್ನು ನೋಡಲು ಮನಸು ಸಹಕರಿಸದು.., ಗಂಟಲುಬ್ಬಿ ಕಣ್ಣು ತುಂಬಿ ಬಂತು. ಟಿಪಾಯಿ ಮೇಲಿದ್ದ ನ್ಯೂಸ್ ಪೇಪರ್ ಮುಖಕ್ಕೆ ಅಡ್ಡ ಹಿಡಿದೆ. ಸುಮ್ಮನೆ  ಯೋಚಿಸಿದೆ.. ನಮ್ಮ ಚಿಕ್ಕ ಪುಟ್ಟ ಸಮಸ್ಯೆಗಳ ಸುತ್ತವೇ ನಮ್ಮ ಮನಸು ಸುತ್ತುತ್ತಿದ್ದರೆ...., ಅವರ ಮನಸು ಹೇಗಿರಬಹುದು..!  ಸೀರೆ, ಮನೆ ಅದು, ಇದು   ಅಂತ ಯೋಚಿಸುತ್ತಿದ್ದರೆ ಆಕೆಯ ಪ್ರಿಯರಿಟಿ ಏನಿರಬಹುದು ??  ನಮ್ಮ ಮಗ, ಮಗಳು  A ಗ್ರೇಡ್ ಬಂದಿಲ್ಲವಲ್ಲ ಅಂತ ಚಿಂತಿಸುತ್ತಿದ್ದರೆ ಆಕೆ ಏನು ಚಿಂತಿಸುತ್ತಿರಬಹುದು ? ಮತ್ತೂ ಎಂದರೆ ಇಂತ ವಿಷಯಗಳಲ್ಲಿ ತಾಯಿಯನ್ನು ಕಾಡುವ ಮತ್ತೊದು ಯೋಚನೆ... ಮಗು ಹೆಣ್ನಾಗಿದ್ದರೆ ಪ್ರಕೃತಿ ಕೊಡಮಾಡುವ ಅನೇಕ  ಘಟ್ಟಗಳು..!  'ನಾನು ಇರುವ ತನಕ ನೋಡಿಕೊಳ್ಳಬಲ್ಲೆ ಮುಂದೇನು?' ಎನ್ನುವ ವಿಚಾರವೊಂದು ಆಕೆಯ ಸುತ್ತ ಗಿರಾಕಿ ಹೊಡೆಯುತ್ತಿರುತ್ತದೆ.  ಮನಸ್ಸು ಭಾರವಾಗಿತ್ತು. ನಾವು ಯಾವು ಯಾವುದೋ ವಿಷಯಗಳಿಗೆ ದುಃಖಿಸುತ್ತೆವಲ್ಲ ಅಂತ ಆ ಕ್ಷಣಕ್ಕೆ  ಅನಿಸಿಬಿಟ್ಟಿತು ನನಗೆ.

ಮನೆಗೆ ಬಂದವಳೇ ಗೂಗಲ್ ಒಳಗೆ ಹೋಗಿ ಕುಳಿತುಕೊಂಡೆ ..,  ಈ ತರದ ಮಕ್ಕಳ ಬಗ್ಗೆ ಸಾಕಷ್ಟು ಓದಿದೆ, ಓದುತ್ತಿದ್ದ ಹಾಗೆ ಸ್ವಲ್ಪ ಸಮದಾನವಾದ ಹಾಗಾಯಿತು , ಕೆಲವನ್ನು ಬದಲಾಯಿಸಲು ಸಾಧ್ಯವಿಲ್ಲವಲ್ಲ...?  ಅದರ ಜೊತೆಗೆ ಬದುಕನ್ನು ಅಭ್ಯಸಿಸಿಕೊಳ್ಳಬೇಕು, ಸುಂದರವಾದ ಬದುಕನ್ನು ರೂಪಿಸಿಕೊಳ್ಳಬೇಕು. ಅರುಣಶೌರಿಯವರು ನಿಮಗೆ ಗೊತ್ತಿರಬಹುದು,  ಅವರಿಗೆ ಒಬ್ಬ ಮಗನಿದ್ದಾನೆ.., ಅವನ ಬಗ್ಗೆ ಶೌರಿಯಯವರು ಏನೆನ್ನುತ್ತಾರೆ ಗೊತ್ತಾ..? " ನನಗೆ ನನ್ನ ಮಗ ಕೊಡುವ ಕಾನ್ಫಿಡೆನ್ಸ್ ತುಂಬಾ ದೊಡ್ಡದು, ಏಕೆಂದರೆ ಅವನು ನಾನು  ಎದ್ದಾಗಲೂ  ಬಿದ್ದಾಗಲೂ ನನ್ನನ್ನು ಒಂದೇ ತರಾ ನೋಡುತ್ತಾನೆ ",  ಎನ್ನುತ್ತಾರೆ , ವಿಷಯ ಅಂದರೆ..  ಅವರ ಮಗ   ಮೆಂಟಲಿ ಚಾಲೆಂಜ್ಡ್ ! . ಇನ್ನೊಬ್ಬ ತಂದೆಗೆ 2 ಗಂಡುಮಕ್ಕಳು.., ಒಬ್ಬ ಬುದ್ದಿಮಾಂದ್ಯ , ಇನ್ನೊಬ್ಬ ಅತಿ ಬುದ್ದಿವಂತ , ಅವನೇನು ಅನ್ನುತ್ತಾನೆ ಅಂದರೆ, " ನಂಗೆ  ಇಬ್ಬರೂ ಮಕ್ಕಳು ಸಮಾನರು ಇವನು ಚಿನ್ನದ ಪದಕ ತಂದಾಗ ಆಗುವಷ್ಟೇ ಸಂತೋಷ ಆತ  ತನ್ನ ಶೂ ಲ್ಯೇಸ್ ನ್ನು ತಾನೇ ಕಟ್ಟಿಕೊಂಡಾಗ ಅನುಬವಿಸುತ್ತೇನೆ" ಎನ್ನುತ್ತಾನೆ. ಇಂತಹ ಅನೇಕ ಉದಾಹರಣೆ ಓದಿದಾಗ ಮನಸು ಸ್ವಲ್ಪ ತಹಬದಿಗೆ ಬಂದಿತ್ತು.


ಮೊದಲು  ಸಮಾಜ ಅಂತವರನ್ನು ಯಾವುದೇ ಕಾರಣಕ್ಕೂ ಕರುಣೆಯ ದೃಷ್ಟಿಯಿಂದ ನೋಡಬಾರದು, ಸಹಜತೆ ಇರಬೇಕು ನಡೆ ನುಡಿ  ನೋಟದಲ್ಲಿ , ಇನ್ನೂ ಎಂದರೆ ಪರೀಕ್ಷೆಯಲ್ಲಿ ನಮಗಿಂತ ಜಾಸ್ತಿ ಅಂಕ ತೆಗೆದುಕೊಂಡವರೆಡೆಗೊಂದು  ನಮಗೆ ಗೌರವ ಇರುತ್ತಲ್ಲ ಅಂತದೊಂದು ಗೌರವವಿರಬೇಕು ಅವರ ಪಾಲಕರೆಡೆಗೆ , ಏಕೆಂದರೆ ಬದುಕನ್ನು ಅವರು ನಮಗಿಂತ ತೀವ್ರವಾಗಿ, ಆಳವಾಗಿ ಅನುಭವಿಸುವವರು.  ನಾನೂ ಅಂತವರಿಗೆ ಮುಂದೊಂದು ದಿನ ಏನಾದರೂ ಮಾಡಬೇಕು ಅನಿಸಿದ್ದಂತೂ ನಿಜ.

ಕಡೇ ಪಕ್ಷ.....

  ಸಮಸ್ಯೆಗಳು, ನೋವು,  ದುಃಖ  ಇವುಗಳಿಂದ ಹೊರತಾಗಿರಲಂತೂ ಸಾದ್ಯವಿಲ್ಲದೆ ಇರಬಹುದು....,  ಅಟ್ಲೀಸ್ಟ್ ದುಃಖ  ಪಡುವಷ್ಟು ಆ ದುಃಖ  'ವರ್ತ್' ಆಗಿರಲಿ...,  ಪಟ್ಟ ಪ್ರತಿ ದುಃಖವೂ ಅನುಭವವಾಗಿ ಮನಸ್ಸು ಇನ್ನೂ ಪಕ್ವವಾಗಲಿ...,   ಆಗದ, ಹೋಗದ,  ಇಲ್ಲದ, ಸಲ್ಲದ, ಬೇಡದ  ವಿಷಯಗಳಿಗೆ ಕೊರಗುವುದನ್ನು ದುಃಖಿಸುವುದನ್ನು ನಮ್ಮ  ಮನಸು ಮೊದಲು ನಿಲ್ಲಿಸಲಿ. ದುಃಖ ನೋವುಗಳಲ್ಲಿಯೂ ನಮ್ಮ ಮನಸ್ಸು  ಚೂಸಿಯಾಗಿರಲಿ. ಸದ್ಯಕ್ಕೆ ಇಷ್ಟಾದರೂ ಮಾಡೋಣ ಅನ್ನಿಸಿತು.

ಕೊನೆಯಲ್ಲಿ,

ಭಗವಧ್ಗೀತೆಯಲ್ಲಿ ಹೇಳಿದ ಹಾಗೆ , ' ಬದಲಾಯಿಸಬಲ್ಲದ್ದನ್ನು ಬದಲಾಯಿಸವ ಶಕ್ತಿ ಇರಲಿ, ಬದಲಾಯಿಸಲು ಸಾದ್ಯವಿಲ್ಲದ್ದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿರಲಿ '  ಅಲ್ಲವೇ ...

        
               





               


     
                     .

               


               
         

       

     

           

   

Wednesday, November 7, 2012

ಮದರಂಗಿಯಲ್ಲಿ ನೆನಪಿನ ರಂಗು ತುಂಬಿದೆ








                ಮದುವೆ ಮನೆ ಎಂದರೆ ಇನ್ನಿಲ್ಲದ ಸಂಬ್ರಮ !  ತೀರ ಹತ್ತಿರದ ಮದುವೆ ಅಂದರೆ  ಸಂಬ್ರಮದ  ತೂಕ ಇನ್ನೂ ಹೆಚ್ಚು !!   ಪೆಟ್ಟಿಗೆಯಲ್ಲಿ ಮಡಚಿಟ್ಟ  ಹಳೆಯ ರೇಷ್ಮೆ ಸೀರೆಗೆ ಹೊರ ಪ್ರಪಂಚವನ್ನು ನೋಡುವ ಸಂಬ್ರಮ .., ಬ್ಲೌಸು ಮ್ಯಾಚಿಂಗ್ ಆಗತ್ತಾ ..?  ಅಳತೆ ಸರಿಯಾಗಿದೆಯ ?  ಈ ಸೀರೆ ಹೋದ ವರ್ಷ  ಉಟ್ಟಿರುವೆನ ? ಹೀಗೆ ಸಾಗುತ್ತದೆ ಹೆಂಗಸರ ಯೋಚನೆಗಳು !!  ಇನ್ನೂ ಹೆಣ್ಣುಮಕ್ಕಳಿಗಂತೂ  ಮುಗಿಯದ  ಶಾಪಿಂಗ್ !! ಮೊದಲ ಸಲ ಸೀರೆ ಉಡುವ ಸಂಬ್ರಮವಂತೂ  ಅನುಭವಿಸಿದ ಹುಡುಗಿಯರಿಗೆ ಗೊತ್ತು !! ಯಾವ ಸೀರೆ ಚೆನ್ನಾಗಿರತ್ತೆ ? ಯಾವ ಕಲರ್ ?  ಬ್ಲೌಸ್ ಯಾವ ಡಿಸೈನ್ ಇದ್ದರೆ ಚೆಂದ ? ಸೀರೆ ಉಟ್ಟರೆ ತಾನು ನಡೆಯಬಲ್ಲೇನ ?  ಮ್ಯಾಚಿಂಗ್  ಬಳೆ , ಸರ .. ಒಹ್..!! ಶಾಪಿಂಗ್  ಸುರಿಮಳೆ !!


       ನಗರ ಜೀವನ ನಡೆಸುತ್ತಿರುವವರು .., ಮದ್ಯದೊಂದು  ಭಾನುವಾರ ಬಂದರೆ 3 ದಿನ ರಜ ಹಾಕಬಹುದಲ್ಲ ಅಂತ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಾರೆ .., ಲಗ್ಗೆಜೆ ಪ್ಯಾಕ್  ಮಾಡಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು , ಮುಂಚೆಯೇ ಬುಕ್ ಮಾಡಿಸಿದ ಬಸ್ಸನ್ನು  ಹತ್ತಿಕೊಳ್ಳುವಾಗ  ಎಂತದ್ದೋ ಸಂಬ್ರಮ !

         ಮದುವೆ ಮನೆಯಲ್ಲಿ   ತುಂಬಾ  ಇಷ್ಟವಾಗುವ ಸಂಗತಿಯೆಂದರೆ  , ನಾವು ಎಷ್ಟೋ ವರ್ಷಗಳಿಂದ  ನೋಡದೇ  ಇರುವ ಎಲ್ಲರನ್ನೂ ಒಟ್ಟಿಗೆ  ನೋಡಬಹುದು ! ಚಿಕ್ಕಮ್ಮ ,ಚಿಕ್ಕಪ್ಪ ,ಅತ್ತೆ , ಮಾವ , ಅವರ ಮಕ್ಕಳು ,ಅತ್ತಿಗೆ , ಭಾವ , ಅಜ್ಜ , ಅಜ್ಜಿ ಅಮ್ಮುಮ್ಮ .., ಹೀಗೆ ..,  ಹಾಗೆ ಸುಮ್ಮನೆ  ಎಲ್ಲರೂ ಸೇರುವುದು  ವಾಸ್ತವಕ್ಕೆ ದೂರವಾದ ಮಾತು , ಅದೇನೇ  ಚಿಕ್ಕ ಪುಟ್ಟ ಸಮಸ್ಯೆ, ತೊಂದರೆ  ತಾಪತ್ರಯಗಳಿದ್ದರೂಗಳಿದ್ದರೂ   ಮನೆಯೊಳಗೇ  ಇಟ್ಟು ಬಾಗಿಲು ಹಾಕಿ ಮದುವೆ  ಮನೆಗೆ ಹೊರಟು  ಬಿಡುತ್ತೇವೆ !

   
         ಹಳ್ಳಿಗಳಲ್ಲಿ  ಮದುವೆ  ಅಂದರೆ  2 ದಿನ ಮುಂಚೆಯೇ ಕಾರ್ಯಕ್ರಮಗಳು  ಶುರುವಿಟ್ಟು ಕೊಳ್ಳುತ್ತದೆ , ಗಂಡಿನ  ಮನೆಯಾದರೆ  ಸೋಮವರ್ಥನೆ , ಹೆಣ್ಣಿನ ಮನೆಯಾದರೆ ನಾಂದಿ ಇಟ್ಟುಕೊಳ್ಳುತ್ತಾರೆ .  ಮರುದಿನ ಬೆಳ್ಳಗ್ಗೆ ಬೇಗ ಎದ್ದು  ತಯಾರಿಯಾಗಿ ಗಂಡಿನವರಾದರೆ ದಿಬ್ಬಣ ಹೋರಡಬೇಕು , ಹೆಣ್ಣಿನವರಾದರೆ  ದಿಬ್ಬಣ ಬರಮಾಡಿಕೊಳ್ಳಬೇಕು . ಆ ನಂತರ ಹಾರ ಬದಲಾವಣೆ , ಮಾಂಗಲ್ಯ ಧಾರಣೆ , ಸಪ್ತಪದಿ ..  ಹೋಮ .. ಹೀಗೆ ಸಾಗುತ್ತದೆ  ಮದುವೆಯ ಶಾಸ್ತ್ರಗಳು .

     
       ಮದುವೆಗಳನ್ನು ಊರು ಹಳ್ಳಿಗಳ ಕಡೆ ನೋಡಿ ಅಬ್ಯಾಸವಿದ್ದ  ನನಗೆ ಬೆಂಗಳೂರು ಮದುವೆ  ನೋಡಿ ಆಶ್ಚರ್ಯ  ಪಟ್ಟಿದ್ದೆ  ! ಇಲ್ಲಿ ಮದುವೆ  ಅಂದರೆ  ಬಣ್ಣ ಹಚ್ಚಿಕೊಂಡ ಮದುಮಕ್ಕಳು ಸ್ಟೇಜ್  ಮೇಲೆ ನಿಂತಿರುತ್ತಾರೆ . ನಾವು ಸ್ಟೇಜ್  ಮೇಲೆ ಹೋಗಿ ಕ್ಲೋಸ್ ಅಪ್  ಆಡ್ ತರ  ಹಲ್ಲು ತೋರಿಸಿ ಹ್ಯಾಪಿ ಮ್ಯಾರೀಡ್  ಲೈಫ್ ಅಂತ ಉಸುರಿ ಫೋಟೋಗ್ರಾಫರ್  ಪರ್ಮಿಷನ್ ಕೊಟ್ಟಮೇಲೆ ಸ್ಟೇಜ್ ನಿಂದ ಕೆಳಗಿಳಿದು ಬರಬೇಕು ! ಹಾಗಾದರೆ ಮದುವೆ ಮುಗಿದಂತೆ !  ಅಥವಾ ನಾನು ನೋಡಿದ ಮದುವೆಗಳು ಮಾತ್ರ ಹಾಗಿತ್ತೇನೋ ..

       ನಗರದಷ್ಟಲ್ಲವಾದರೂ ಹಳ್ಳಿಗಳಲ್ಲಿ  ಮದುವೆಯ ರೀತಿ ರಿವಾಜು ಹಾಗೆ ಇದ್ದರೂ ಸ್ವರೂಪದಲ್ಲಿ ಬದಲಾವಣೆಯಾಗಿದೆ .  ಮನೆಯ ಮುಂದಿನ ಚಪ್ಪರ ಮರೆಯಾಗಿ ಅದೇ ಜಾಗದಲ್ಲಿ ಶಾಮಿಯಾನ ಬಂದು ನಿಂತಿದೆ . 4-5 ದಿನಗಳವರೆಗೆ ನಡೆಯುತ್ತಿದ್ದ ಮದುವೆಗಳು 2 ದಿನಕ್ಕೆ ಬದಲಾಗಿದೆ  . ಕೂಲಿ ಕೆಲಸಗಾರರ  ಅಭಾವ , ಜನರ ಅಭಾವ , ಸಮಯ ಅಭಾವಗಳು  ಮದುವೆಗಳಲ್ಲಿ  ಕೆಲವು ಮಾರ್ಪಾಡುಗಳನ್ನು ತಂದಿದೆ .

          
        ಅಣ್ಣನ ಮದುವೆ  ಮುಗಿಸಿ ಬೆಂಗಳೂರಿಗೆ ಬಂದು 4 ದಿನಗಳಾದರೂ ಇನ್ನೂ ಅದರದ್ದೇ ಗುಂಗು !   ಕೈಯಲ್ಲಿನ ಮದರಂಗಿ , ದಿಬ್ಬಣ ಬಸ್ಸಿನ ಅಂತಾಕ್ಷರಿ , ಎಲ್ಲರೂ ಸೇರಿ ಕಲೆತು  ಆಡಿದ ಮಾತು , ನಗು, ರಾತ್ರಿಯಲ್ಲಿ ಮಿನುಗುವ ಲೈಟ್ ಸೆಟ್ಟಿಂಗ್ಸ್ , ಹುಡುಗಿಯರ  ಗೆಜ್ಜೆ ದನಿ  , ಹೆಂಗಸರ ಬಳೆ ಸದ್ದು , ಮಕ್ಕಳ ಕೂಗಾಟ, ಎಲ್ಲರ ಗಡಿಬಿಡಿ , ಗಡಿಬಿಡಿಯಲ್ಲಿನ  ಸಂಬ್ರಮ , ಮದುವೆ  ಮನೆಯಲ್ಲಿ  4-5 ದಿನ ಹೇಗೆ ಕಳೆಯಿತು ತಿಳಿಯದಷ್ಟು ಸಂಬ್ರಮವಾಗಿ ಸಮಯ ಉರುಳಿತ್ತು .


       ಅಣ್ಣನ ಮದುವೆ ಮುಗಿಸಿ  ಅಲ್ಲಿಂದ ಹೊರಟುನಿಂತಾಗ  ಭಾರವಾಗಿದ್ದು;  ಬ್ಯಾಗನ್ನು ಏರಿಸಿಕೊಂಡ  ಹೆಗಲೊಂದೇ  ಅಲ್ಲ ಅನ್ನಿಸಿತ್ತು. ..!!   ಈಗ ಉಳಿದಿದ್ದು  ಮೊಣಕೈಯವರೆಗೆ  ಹಚ್ಚಿಕೊಂಡ ಮದರಂಗಿ ಮತ್ತು  ಅದನ್ನು ನೋಡಿದಾಗಲೆಲ್ಲ ಮರುಕಳಿಸುವ ಅಣ್ಣನ ಮದುವೆಯ  ಸಿಹಿ ನೆನಪು ಮಾತ್ರ !!!





Tuesday, October 16, 2012

ವಿಶ್ ಯು ಹ್ಯಾಪಿ ಬರ್ತ್ ಡೇ ...




            ಇನ್ನೊಬ್ಬ ವ್ಯಕ್ತಿಗೆ  ದೈಹಿಕ ನೋವಾದಾಗ  ನಮಗೂ ಅದರ ಅನುಭವವಾಗುತ್ತದ?   ಹಾಗಂತ ಮುಂಚೆ ಯಾರಾದರೂ ಅಂದಿದ್ದರೆ  ನಕ್ಕು ಬಿಡುತ್ತಿದ್ದೆ ..,  ಆದರೆ  ನನ್ನ  ಮಗಳಿಗೆ BCG ಎಂಬ ಮೊದಲ ಚುಚ್ಚು ಮದ್ದು  ಕೊಡುವ  ಕ್ಷಣದಲ್ಲಿ  ನಾನು ಅನುಭವಿಸಿದ  ಯಾತನೆ ನನಗೆ ಮಾತ್ರ  ಗೊತ್ತು ..., ನಂತರ  ದಿನಗಳಲ್ಲಿ  ಪ್ರತಿ ಚ್ಚುಮದ್ದಿನ   ಹಿಂದಿನ  ದಿನದಿಂದಲೇ .ಯಾತನೆಯ ಕ್ಷಣಕ್ಕೆ ಮನಸ್ಸು ಚಿಂತೆಗೀಡಾಗುತ್ತಿತ್ತು .
 







      ಆಕಾಶ ಬೀಳುತ್ತಿದೆ ಎಂದರೂ ..,' ಬೀಳುವತನಕ  ಮಲಗಬಹುದಲ್ಲ ' ಅಂತ ಯೋಚಿಸುವ ಜಾಯಮಾನ  ನನ್ನದು !  ಹಾಗಿರುವಾಗ  ನನಗೆ ನನ್ನ ಮಗಳ  ಕೇವಲ ಒಂದೇ ಒಂದು ಮುಲುಗಾಟಕ್ಕೆ ತಟ್ಟನೆ ಎಚ್ಚರವಾಗಿ ಬಿಡುತ್ತಿದ್ದಿದ್ದು  ಹೇಗೆಂದು  ಇವತ್ತಿಗೂ ವಿಸ್ಮಯವೇ !


                                                            
                                                      


           ಇವತ್ತಿಗೂ   ಸಾಂಬಾರು ಪುಡಿಯನ್ನು ಅಮ್ಮನಿದಲೋ ಅತ್ತೆಯಿಂದಲೋ ತರಿಸಿಕೊಳ್ಳುವ ನಾನು, ಮಗಳಿಗಾಗಿ  "ರಾಗಿ ಮಣ್ಣಿ " ಎಂಬ ಅತಿ  ಕಷ್ಟದ (ನನಗೆ !) ತಿನಿಸನ್ನು ಮಾತ್ರ ' ಭಯಂಕರ ಶ್ರದ್ದೆ , ಇನ್ನಿಲ್ಲದ ಮುತುವರ್ಜಿಯಿಂದ ನಾನೇ ತಯಾರಿಸುತ್ತಿದ್ದೆ .




   
               ನಾನು ನನ್ನ  ಪುಟ್ಟ ಮಗಳನ್ನು ಬೆಂಗಳೂರೆಂಬ ಅಪರಿಚಿತ ನಗರಕ್ಕೆ ಎತ್ತಿಕೊಂಡು ಬಂದಿಳಿದಾಗ ಆಕೆಗೆ ಕೇವಲ 3 ತಿಂಗಳು 8 ದಿನ !  ನಮ್ಮಿಬ್ಬರದೆ  ಒಂದು ಪ್ರಪಂಚವಾಗಿಬಿಟ್ಟಿತ್ತು . ' ನನ್ನ ಮಗಳು ನನ್ನನ್ನು ಬಿಟ್ಟು ಇರಲಾರಳು' ನಿಜ ,   ನಾನು ಆಕೆಯನ್ನು  ಒಂದು ದಿನಕ್ಕೂ ಬಿಟ್ಟಿರಲಾಗದು ಎಂಬುದು ಅದಕ್ಕಿಂತ ಹೆಚ್ಚು ನಿಜ .
         


                                                                 
                    ಇಂಥ ಸಂಗತಿಗಳು   ಹತ್ತು ಹಲಾವರು ..

            ಬಹುಷ  ಇದು ಎಲ್ಲ   ತಾಯಂದಿರ  ಅನುಭವ .., ಪ್ರಕೃತಿಗಿರುವ  ಶಕ್ತಿಯೇ ಅಂತದ್ದು .., ಸಮಯ ಬಂದಾಗ  ತನ್ನನ್ನು ತಾನು ಹೊಂದಿಸಿಕೊಳ್ಳುವುದು ...
             
                                                          


            ಇವತ್ತು ನನ್ನ ಮಗಳ 5ನೆಯ ವರುಷದ ಹುಟ್ಟುಹಬ್ಬ ... ಅಲ್ಲ .. ನನ್ನಲ್ಲಿರುವ ಅಮ್ಮನಿಗೆ ಇವತ್ತಿಗೆ 5 ವರುಷ .....,  ತಾಯಿತನದ ಸಂತೋಷವನ್ನು ಇಷ್ಟೊಂದು ಎಂಜಾಯ್ ಮಾಡಲು  ಅವಕಾಶ ಮಾಡಿಕೊಟ್ಟ ನನ್ನ ಮಗಳಿಗೊಂದು  ದೊಡ್ಡ ಥ್ಯಾಂಕ್ಸ್ ..

    ಹುಟ್ಟುಹಬ್ಬದ ಶುಭಾಶಯಗಳು ನನ್ನ ಮಗಳಿಗೆ !!


     

Sunday, September 16, 2012

ವಕ್ರತುಂಡ ಮಹಾಕಾಯ ....


                       
         
            ಅದೆಷ್ಟೇ ಹಬ್ಬಗಳಿದರೂ ಗಣಪತಿ ಹಬ್ಬಕ್ಕೆ ಏನೋ  ವಿಶೇಷತೆ ;  ಚಿಕ್ಕವವರಿದ್ದಾಗ ಹಬ್ಬಕ್ಕೆ 15 ದಿನದಿಂದಲೇ   ತಯಾರಿ  ನಡೆಸುತಿದ್ದೆವು .   ಅಪ್ಪ ಗಣಪತಿ ಹಬ್ಬಕ್ಕೆ ಹೊಸ ಬಟ್ಟೆ ತರುತ್ತಿದ್ದ  ವಾಡಿಕೆಯಿತ್ತು .  ಈ ಸಲದ ಹಬ್ಬಕ್ಕೆ ಯಾವ ಯಾವ ಪಟಾಕಿಗಳನ್ನು ತರಬೇಕೆಂದು ಅಪ್ಪನೊಂದಿಗೆ ಮುಂಚೆಯೇ ಚರ್ಚಿಸುತ್ತಿದ್ದೆ .  ಗಣಪತಿಯನ್ನು ಈ ಸಲ ಎಲ್ಲಿಂದ ತರಬೇಕು ಯಾರಿಂದ ಕೊಂಡುಕೊಳ್ಳಬೇಕೆಂದು ಮನೆಯಲ್ಲಿ ಚರ್ಚೆಯಾಗುತ್ತಿತ್ತು . ಗಣಪತಿ ಹಬ್ಬದಂದು ಅಂತ ವಿಶೇಷತೆ ಇಲ್ಲದಿದ್ದರೂ ನಮ್ಮ ಮನೆಯಲ್ಲಿ ಪಂಚಮಿಯಂದು  ವಿಶೇಷ ಸಂಬ್ರಮವಿರುತ್ತಿತ್ತು . ಪಂಚಮಿಯೊಂದಿಗೆ ಗಣಹೊಮ  ಸತ್ಯನಾರಾಯಣ ಪೂಜೆ ಗೆ  ಊರವರು ನೆಂಟರ ಜೊತೆಯಿರುತ್ತಿತ್ತು . ಪಂಚಮಿಯ ದಿನ ಪಟಾಕಿಯ ಹಂಚಿಕೆಯಾಗುತ್ತಿತು .., , ಮನೆಮಂದಿಗೆ, ಬಂದ ಮಕ್ಕಳಿಗೆ , ಅದಕ್ಕಾಗೆ ಕಾಯುತ್ತಿರುವ ಆಳುಗಳಿಗೆ ಹಂಚಬೇಕಾಗಿತ್ತು . ಪಟಾಕಿ ,ಜಾಗಟೆ  ಸದ್ದು ,ಆರತಿ ,ಒಂದಷ್ಟು ಬಳೆ ಶಬ್ದ , ಯಾರಿದ್ದೋ ಕಾಲ್ಗೆಜ್ಜೆ ಸದ್ದು , ಸೀರೆಯ ಸರಪರ ,  .., ಜೊತೆಗೆ ಸಾಮಾನ್ಯವಾಗಿ ಇರುತ್ತಿದ್ದ ಜಿಮುರು ಅಥವ ಜೊರು ಮಳೆ ....ಇವೆಲ್ಲ ಸೇರಿದರೆ ಅದು ಗಣಪತಿ ಹಬ್ಬವಾಗುತ್ತಿತು

           ಇದೆಲ್ಲ ನೆನಪಾಗಿದ್ದು  ಮೊನ್ನೆ ನಮ್ಮ ಮನೆಗೆ ಗಣಪತಿ ಹಬ್ಬಕ್ಕೆ ಚಂದ ಎತ್ತಲು ಬಂದ ಹುಡುಗನ್ನನ್ನು ನೋಡಿ , ಹಾಗೆ ಬಂದವರಲ್ಲಿ  ಈತ ಮೂರನೆಯವನು!  ಬೆಂಗಳೂರಿನಲ್ಲಿ ಗಣಪತಿ ಹಬ್ಬವೆಂದರೆ ರಸ್ತೆಗೊಂದು ಗಣಪತಿ!  ಬ್ಯಾಂಡು! ಡೋಲು!  ಟ್ರಾಫಿಕ್ ಜಾಮು!   ಪಡ್ಡೆಗಳ ಹುಚ್ಚುಚ್ಚು  ಕುಣಿತ !   ಹಳೆಜನ್ಮದ ವೈರಿ ಎನಿಸುವ ಮೈಕು!  ಪ್ರಾಣಹಿಂಸೆ ನೀಡುವಷ್ಟು ಕೆಟ್ಟದಾದ ಅರ್ಕೆಷ್ಟ್ರ!  ಪ್ಯಾರಗೆ ಆಗಬಿತ್ತೈತೆ  ..,  ಎನ್ನುವಂತ ಹಿಂದೂ ಮುಂದಿಲ್ಲದ ಹಾಡು !  ಅಲ್ಲ .. ಗಣಪತಿ ಹಬ್ಬಕ್ಕೂ .., ಆ ಹಾಡಿಗೂ ಏನು ಸಂಬಂದ  ? ಅರ್ಕೆಷ್ತ್ರದಾಣೆಗೂ ಅರ್ಥವಾಗದ ವಿಷಯ !!

         ಬೆಂಗಳೂರಿನಲ್ಲಿ ರಸ್ತೆಗೊಂದು ಗಲ್ಲಿಗೊಂದರಂತೆ ಗಣಪತಿ ಮೂರ್ತಿಯನ್ನು ಕೂರಿಸುತ್ತಾರೆ .  ಇಂತ ಗಣಪತಿ ಮೂರ್ತಿಯನ್ನು ತಯಾರಿಸಲು ಬಳಸುವ ಬಣ್ಣವು  ತುಂಬಾ  ಹಾನಿಕಾರಕ chimicals ನು ಒಳಗೊಂಡಿರುತ್ತವೆ . ಇಂತ  ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ . ಅದು  ತುಂಬಾ ಅಪಾಯಕಾರಿ . ಸರಕಾರ ಏನೇ ಹೇಳಿದ್ದರೂ  ಕೂಡ ಅದು ಕಾರ್ಯರೂಪಕ್ಕೆ ಬಂದಿದೆಷ್ಟು ಎಂಬುದು ಮಾತ್ರ ನಮಗೆಲ್ಲ ಗೊತ್ತಿರುವ ವಿಷಯ . ಈ ಸಲ ಗಣಪತಿ  ಹಬ್ಬಕ್ಕಾದರೂ ನೀರಿನಲ್ಲಿ ಗಣಪತಿ ವಿಸರ್ಜನೆಯನ್ನು ಸರಕಾರ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು.....,  ಒಂದು ನಗರ ಅಥವಾ ಒಂದು ಏರಿಯಕ್ಕೆ ಇಂತಿಷ್ಟೇ ಗಣಪತಿ ಎಂಬ ಪರಿಮಿತಿಯಿಡಬೇಕು....., ಅಷ್ಟೇ ಅಲ್ಲ ...  ಗಣಪತಿ ಹಬ್ಬದ ಆಚರಣೆಗೆ ಕೇವಲ 3 ದಿನವನ್ನು ಮಾತ್ರ ಸೀಮಿತಗೊಳಿಸಬೇಕು ....., ಹಮ್ಮ್ .., ಬೇಕುಗಳ ಪಟ್ಟಿ ಸ್ವಲ್ಪ ದೊಡ್ಡದಾಯೈತೆನೋ ......

                 ಹಬ್ಬಕ್ಕೆ ಊರಿಗೆ  ಹೊರಟವರಿಗೆ ಉಂಡೆ ಕಾಯಿಕಡಬು   ಕಾಯುತ್ತಿರಬಹುದು ,  ಇಲ್ಲೇ ಇರುವವರು  ಆರ್ಕೆಷ್ಟ್ರದೊಂದಿಗೆ  ಹಬ್ಬವನ್ನು ಎಂಜಾಯ್  ಮಾಡಬಹುದು ...!!   ಎಲ್ಲರಿಗೂ ಗಣಪತಿ ಹಬ್ಬದ ಶುಭಾಷಯಗಳು !!
                

            

      

Friday, December 10, 2010

ಒಂದು ಸಂಜೆ, ಮಳೆ ಹಾಗೂ...

         


    ಯಾಕೋ ಮಳೆ ಸುರಿದ ಅನುಬವ ಆದಂತಾಗಿ ಮನೆಯ ಬಾಗಿಲು ತೆರೆದಾಗ ಸ್ಸೂ ಎಂಬ ಗಾಳಿಯು ಮುಖಕ್ಕೆ  ರಾಚಿತು , ಜೊತೆಗೆ ಚಿಟಿ ಚಿಟಿ ಮಳೆ ಬೇರೆ ! ಕಪ್ಪನೆ ಕವಚಿಕೊಂಡ ಮೋಡ ! ಅರೆ ! ವರುಷ ಪೂರ್ತಿ ಮಳೆಗಾಳವೆನ ? ಸುರಿವ ಮಳೆಯನ್ನ ತುಂಬಾ ಇಷ್ಟ ಪಡುವ ನನಗೂ ಕೂಡ ಈ ಮಳೆಯಿಂದ ಕಿರಿ ಕಿರಿ ಎನ್ನಿಸತೊಡಗಿತು , ಒದ್ದೆಯಾದ ಭೂಮಿಗೂ ಮಳೆ ನನ್ನಂತೆ ಇಷ್ಟವಾಗುತ್ತಿಲ್ಲ ಎಂಬ ಅನಿಸಿಕೆ ನನಗೆ , terece ನ ಆಚೆ ಕಣ್ಣು ಹಾಯಿಸಿದಾಗ ಅಲ್ಲೊಬ್ಬರು ಇಲ್ಲೊಬ್ಬರು ಕೊಡೆ ಹಿಡಿದು ನಡೆಯುತ್ತಿದ್ದರು , ಕೆಲವು ಮಂದಿ ಬೈಕ್ ನಲ್ಲಿ raincoat ಇಲ್ಲದೆ ನೆನೆಯುತ್ತ ಸಾಗುತ್ತಿದ್ದರು . ಒಣಹಾಕಿದ ಬಟ್ಟೆಗಳು ಪೂರ್ತಿ ಒಣಗದೇ ಒದ್ದೆಯಾಯಿತಲ್ಲ ಅಂತ ಪೆಚಾಡಿಕೊಂಡೆ , ಅಷ್ಟರಲ್ಲಿ ನನ್ನ phone ರಿಂಗಣಿಸಿತು , ಅಮ್ಮನದು call  ಮಾತಾಡಿ ಮುಗಿಸಿ ಇಟ್ಟಾಗ ೨೦ ನಿಮಿಷ ಮುಗಿದಿತ್ತು . ತಲೆಯಲ್ಲಿ ಸಮಸ್ಸ್ಯೆಗಳ ಪಟ್ಟಿ ತುಂಬಿತ್ತು . ಅಮ್ಮ ಹೇಳಿದ್ದರ ಸಾರಾಂಶ ಇಷ್ಟು : ಊರಿನ ಕಡೆಯಲ್ಲಿ ಇಷ್ಟೊತ್ತಿಗೆ ಅಡಿಕೆ ಕೊಯ್ಲು ಶುರುವಿಡಬೇಕಿತ್ತು ಬೇರೆ ಕೆಲಸಕ್ಕೆ ಆಳುಗಳು ಬರುತ್ತಿಲ್ಲ , ಸುಲಿಯಲು ಡಬ್ಬಕ್ಕೆ ೭೫ ರುಪಾಯಿ ಕೊಡುತ್ತೀನೆಂದರೂ ಸುಲಿಯುವವರಿಲ್ಲ ,



                           

ಒಹ್! ಒಂದಾ ? ಎರಡಾ ? ಅಡಿಕೆ ಬೆಳೆಗಾರರು ಎಷ್ಟೊಂದು ಸಂಕಟಕ್ಕೆ ಸಿಲುಕಿದರಲ್ಲ ಎನಿಸಿತು . ದಾರಣೆ ಚೆನ್ನಗಿದ್ದಾಗ ಫಸಲು ಕಡಿಮೆ ಫಸಲು ಚೆನ್ನಾಗಿದ್ದಾಗ ಧಾರಣೆ  ಇಲ್ಲಾ , ಎರಡೂ ಇದ್ದಾಗ ಕೊಳೆ ರೋಗ! ಇಲ್ಲವೇ ಮಳೆ !   ಒಹ್!  ಎಷ್ಟೊಂದು ಸಮಸ್ಯೆ ! ಬೀಸಿ ಬಂದ ಗಾಳಿಗೆ ರಪ್ಪನೆ ಬಡಿದುಕೊಂಡ ಕಿಟಕಿಗಳು ನನ್ನ ಯೋಚೆನೆಯನ್ನು ನಿಲ್ಲಿಸಿದವು . ಬೇಗ ಬೇಗನೆ ಎಲ್ಲ ಕಿಟಕಿಯ ಬಾಗಿಲನ್ನು  ಹಾಕಿದೆ. ಮಳೆ ಸ್ವಲ್ಪ ಜೋರಾಗಿಯೇ ಬರುತ್ತಿತ್ತು . ಸ್ವಲ್ಪ ಬೇಸರವಾದಂತೆನಿಸಿ  T .V  on  ಮಾಡಿದೆ ಕೋಟಿಗಟ್ಟಲೆ ಭೂ ಹಗರಣದ ವಿಷ್ಯ breaking ನ್ಯೂಸ್  ಆಗಿತ್ತು ,ಜೊತೆಗೆ highcommand  ಮುಖ್ಯಮಂತ್ರಿಯವರ  ರಾಜೀನಾಮೆಯನ್ನು ಕೇಳುತ್ತಿತ್ತು ,   ಅವರೇ ಗ್ರಹಚಾರವನ್ನು ಸುತ್ತಿಕೊಂಡಿದ್ದಾರೋ ಅಥವಾ ಗ್ರಹಚಾರವೇ ಅವರನ್ನು ಸುತ್ತಿಕೊಂಡಿದೆಯೋ   ಯಾರಿಗೊತ್ತು ? ಈ ಸಲ ಅವರನ್ನು ಯಾವ powerful  ದೇವರು ಕಾಪಾಡುತ್ತಾನೋ  (ಕೈ ಬಿಡುತ್ತಾನೋ ?) ನೋಡಬೇಕಿದೆ . T .V off ಮಾಡಿ ಪೇಪರ್  ತೆರಯುವಷ್ಟರಲ್ಲಿ ನನ್ನ 3 ವರ್ಷದ ಪುಟ್ಟ ಮಗಳು ಅಮ್ಮ ಎಂದು ಕೈ ಹಿಡಿದು ಜಗ್ಗುತ್ತಿದ್ದಳು , ಹೊರಗಡೆ ಮಳೆಯೂ ನಿಂತಿತ್ತು , ಅವಳ ಕೈ ಹಿಡಿದು ಪಾರ್ಕಿನೆಡೆ ಹೆಜ್ಜೆ ಹಾಕಿದೆ.