Friday, December 21, 2012

ಪ್ರೀತಿ ಅಂದ್ರೆ ....?


ಅವಳು  : ಪ್ರೀತಿ ಅಂದ್ರೆ ಏನು  ....?

ಅವನು  : ಹಮ್ಮ...,  ಪ್ರೀತಿ ಅಂದ್ರೆ ನೀನೆ ಕಣೆ!

ಅವಳು  : ಏ ಹೋಗು, ಹೇಳು  ಪ್ರೀತಿ ಅಂದ್ರೆ ಏನು?

ಅವನು  :  ಹೋಗ್ಲಿ ನೀನೆ ಹೇಳು ಪ್ರೀತಿ ಅಂದ್ರೆ ಏನು ಅಂತ ?

ಅವಳು : ಪ್ರೀತಿ ಅಂದ್ರೆ  ನಾನು ನಿನಗೆ ಏನು ಬೇಕಾದರೂ ಮಾಡ್ತೀನಿ  ಅದೇ ಅಲ್ವ ಪ್ರೀತಿ ಅಂದ್ರೆ ?

ಅವನು : ಹಮ್ಮ... ಆಮೇಲೆ?

ಅವಳು : ಹಮ್ಮ.. ಆ ಮೇಲೆ ನಾನು ನಿಂಗೆ ಜೀವ ಬೇಕಾದರೂ ಕೊಡ್ತಿನಿ.

ಅವನು : ನಿನ್ನ ಜೀವ ತಗಂಡು ನಾನೇನು ಮಾಡಲೇ ..?  ಹೋದ ಜೀವನ ಮೈನ್ಟೈನ್ ಮಾಡೋದು ತುಂಬಾ ಕಷ್ಟ!

ಅವಳು : ಏ ಹೋಗು   ತಮಾಷೆ ಮಾಡಬೇಡ ನೀನು .., ಸೀರಿಯಸ್  ಆಗಿ ಹೇಳ್ತಾ ಇದ್ದೀನಿ, ನಾನು ನಿಂಗೆ ನನ್ನ    ಜೀವ ಬೇಕಾದರೂ  ಕೊಡ್ತಿನಿ.

ಅವನು : ನಾನೂ ಸೀರಿಯಸ್ ಆಗೇ ಹೇಳ್ತಾ ಇರೋದು ಕಣೆ,  ಅಲ್ಲಾ  ಯಾರದ್ದೂ ಜೀವ ತಗಂಡು. ಯಾರದ್ದೋ ಜೀವ ತಗೊಂಡು ಯಾರೂ ಏನೂ ಮಾಡೋದಕ್ಕೆ ಆಗಲ್ಲ ಕಣೆ!

ಅವಳು : ಜೀವ ಬೇಡ ಅಂದ್ರೆ ಬಿಡು, ಮತ್ತೆ ನಿನಗಾಗಿ ನಾನು ಏನು ಬೇಕಾದರೂ ಮಾಡ್ತೀನಿ ಗೊತ್ತಾ?

ಅವನು : ನಿನಗೊಂದು ವಿಷ್ಯ ಗೊತ್ತ? ಯಾರೂ ಯಾರಿಗೂ ತುಂಬಾ ಒಳ್ಳೇದು ಮಾಡೋಕೆ  ಸಾದ್ಯ   ಇಲ್ಲ  ಕಣೆ?!

ಅವಳು : ಹಾಗಾದ್ರೆ ನೀನು ನನ್ನ ಪ್ರೀತಿಸಲ್ವ?

ಅವನು : ತುಂಬಾ ಪ್ರೀತಿಸ್ತಿನಿ !

ಅವಳು :  ಹೇಳೋ ಪ್ರೀತಿ ಅಂದ್ರೆ ಏನು?

ಅವನು : ನೋಡೇ ಪ್ರೀತಿ ಅಂದ್ರೆ ನಿನ್ನ ಪ್ರೀತಿಸೋದು, ನಿನ್ನ ಪ್ರೀತಿಸೋದು ಅಂದ್ರೆ ನಿನ್ನ ವ್ಯಕ್ತಿತ್ವವನ್ನು  ಪ್ರೀತಿಸೋದು!

ಅವಳು:  ...!

ಅವನು : ವ್ಯಕ್ತಿತ್ವನ್ನು ಪ್ರೀತಿಸೋದು ಅಂದ್ರೆ ನಿನ್ನ ಅಭಿಪ್ರಾಯವನ್ನು ನಾನು ಒಪ್ಪದೇ ಇದ್ದಾಗಿಯೂ
 ಗೌರವಿಸೋದು.

ಅವಳು : :...!

ಅವನು  : ನೀನು ಅಂದ್ರೆ ಅದೇ ಕಣೆ, ನಿನ್ನ ಅಭಿಪ್ರಾಯ, ನಿನ್ನ ವ್ಯಕ್ತಿತ್ವ, ನಿನ್ನ ಕನಸು.

ಅವಳು :....!

ಅವನು : ನಮ್ಮ ಮದುವೆಯ ಗುರಿನೋ ಅದೇ, ನಾನೂ ಬೆಳೆದು ನಿನ್ನನ್ನೂ ಬೆಳೆಸೋದು, ನನ್ನ
 ವ್ಯಕ್ತಿತ್ವ ನಿನ್ನ  ಸಾನಿಧ್ಯದಲ್ಲಿ, ನಿನ್ನ ವ್ಯಕ್ತಿತ್ವ ನನ್ನ ಸಾನಿಧ್ಯದಲ್ಲಿ ಬೆಳಗೋದು, ಬೆಳೆಯೋದು!

ಅವಳು : ಇದು ಸಾದ್ಯನ ?


ಅವನು :  ಯಾಕಿಲ್ಲ ?  ಇನ್ನು ನೀನು ಹೇಳಿದ ಪ್ರೀತಿಯ ವಿಷ್ಯ ., ನಾನು  ನಿನಗಾಗಿ ಏನೂ ಮಾಡಬೇಕಿಲ್ಲ!
  ನೀನೂ ಕೂಡ!  ನನ್ನ  ಬೆಳಗಿನ ನಸುಕಿಗೊಂದು ನಿನ್ನ ನಗು ತುಂಬಿದ ಗುಡ್ ಮೊರ್ನಿಂಗು, ನಿನ್ನ ಹಬೆಯಾಡುವ ಕಾಫಿಗೊಂದು ನನ್ನ ಥ್ಯಾಂಕ್ಸ್,  ಹೊರಟು ನಿಂತವನಿಗೊಂದು ಸ್ನೇಹ ತುಂಬಿದ ಟಾಟಾ,  ದಣಿದು ಬಂದವನಿಗೊಂದು ನಿನ್ನ ಪ್ರೀತಿಯ ಸಾಂತ್ವಾನ, ನಿನ್ನ ಹೊಸ ಚೂಡಿದಾರಕ್ಕೊಂದು ನನ್ನ ಕಾಂಪ್ಲಿಮೆಂಟು, ನಿನ್ನ  ಉಪ್ಪಿಟ್ಟಿಗೆ ಉಪ್ಪು ಮರೆತಾಗೊಮ್ಮೆ ನನ್ನ      ಒಂದು ಹೋಗ್ಲಿ ಬಿಡು      ಮನೆಗೆ ಬೇಗ ಬರೋ ಪ್ರಾಮಿಸ್ ಮಾಡಿ ಲೇಟ್ ಆದಾಗ
 ನಿನ್ನ ಒಂದು   'ಇಟ್ಸ್ ಓಕೆ ',  ನಂಗೆ ಕೋಪ ಬಂದಾಗ ನಾನು ಪೂರ್ತಿ 420 ಅಂತ ನಿಂಗೆ ಇರೋ ನೆನಪು, ನಿಂಗೆ ಸಿಟ್ಟು ಬಂದಾಗ, ಗುಡುಗು ಸಿಡಿಲು ಆದ್ಮೇಲೆ ಪ್ರೀತಿ ಮಳೆ ಸುರಿಯುತ್ತೆ ಅನ್ನೋ  ನನ್ನ ಅರಿವು,  ಉದ್ದೇಶವೇ ಇಲ್ಲದೆ  ಆಡುವ ಹತ್ತು  ನಿಮಿಷದ ಹರಟೆ,  ಮತ್ತು ನಿನಗೆ 
ಬೇಕೆನಿಸಿದಾಗಲೆಲ್ಲ  ಸದಾ ಸಿದ್ಧವಿರುವ  ನನ್ನ ಕಿವಿ!

ಅವಳು : ಕಿವಿನ ..?

ಅವನು : ಹೌದು ಕಣೆ .., ಪಾಪ ಹೆಣ್ಣು ಜೀವಗಳು! ತಾವು ಹೇಳುವುದನ್ನು ಕೇಳಿಸಿಕೊಳ್ಳಲು 2 ಕಿವಿ ಬೇಕು ,  ಹಾಗೆ ತಾನು ಹೇಳಿದ್ದೆಲ್ಲವನ್ನು ಕೇಳಿಸಿಕೊಳ್ಳುವ ಗಂಡನ್ನನ್ನು
 ಪಡೆದ ಹೆಣ್ಣು ಜಗತ್ತಿನ ಅತ್ಯಂತ  ತೃಪ್ತಿವಂತ  ಹೆಂಡತಿ, ಹಾಗೆ ಕಿವಿ ತೆರೆದಿಟ್ಟು ಮೊಬೈಲ್ ಅಥವಾ ಲ್ಯಾಪ್ಟಾಪಿನಲ್ಲಿ  ತಲೆ ಮುಳುಗಿಸದೆ, ಕಣ್ಣಲ್ಲಿ ಕೆಟ್ಟ ನಿರ್ಲಕ್ಷ್ಯವನ್ನು  ಹೊರಗೆಡಹದೇ, ಹೇಳುವ ಮೊದಲೇ ಅದನ್ನು ಅಸಡ್ಡೆ ಎಂಬ ದೇಹ ಭಾಷೆ ತೋರಿಸದೆ, ಸ್ನೇಹ ಪೂರ್ವಕವಾಗಿ ಕೇಳಿಸಿಕೊಳ್ಳುವ ಗಂಡಸೇ ಅತ್ಯoತ ಯಶಸ್ವಿ ಗಂಡನಾಗಬಲ್ಲ!
             

ಅವಳು :  ಹಾಗಾದರೆ ಗಂಡಸಿಗೂ ಕೇಳಲು ಎರಡು ಕಿವಿ ಬೇಡ್ವ ?

ಅವನು : ಹೆಚ್ಚಿನ ಸಲ ಆತನಿಗದು ಬೇಕಾಗದು, ಆತನು ಅಷ್ಟು ಸುಲಭವಾಗಿ ತೆರೆದುಕೊಳ್ಳಲಾರ, ಮೌನದ ಚಿಪ್ಪೊಳಗೆ  ಆತನನ್ನು ಸ್ವಲ್ಪ  ಹೊತ್ತು  ಇರಗೊಟ್ಟರೆ  ಆತನಿಗೆ ಅದೇ ಸಾಂತ್ವಾನ.

ಅವಳು : ಅಷ್ಟೆನ ಪ್ರೀತಿ ಅಂದ್ರೆ ..?


ಅವನು : ಹೌದು ಕಣೆ!  ಸಂತೋಷ, ನೆಮ್ಮದಿ,  ಪ್ರೀತಿಯನ್ನು  ಇನ್ನೆಲ್ಲೋ    ಇನ್ನ್ಯಾವುದರಲ್ಲೋ ಹುಡುಕಿಕೊಂಡು   ಹೊರಟರೆ   ಅದು ಎಂದಿಗೂ ಸಿಗಲಾರದ ಮರೀಚಿಕೆ ..!    ಬದುಕಿನ  ಪ್ರತಿ ಕ್ಷಣವನ್ನು, ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸೋದೆ ಪ್ರೀತಿ .., ಅದೇ ಜೀವನ ಪ್ರೀತಿ ....

   *                               *                                *               
ಕನಸು ಉದ್ದವಾಯಿತೇನೋ   ಸ್ಟೌ ಮೇಲಿಟ್ಟಿದ್ದ ಟೀ ಉಕ್ಕಿಬಂದಿತ್ತು.

ಅವನು : ಎಷ್ಟೊತ್ತೆ  ಒಂದು ಟೀ ಮಾಡೋಕೆ..?  ಆಗಿಲ್ವೇನೆ ಇನ್ನೂ!

ಅವಳು : ಆಗೋಯ್ತು ತಂದೆ ....

ಅವನು : ಥೂ ... ಸಕ್ಕರೆ ಸಾಲ,  ದಿನ ಮಾಡ್ತಿಯ ಎಷ್ಟು ಸಕ್ಕರೆ ಹಾಕ್ಬೇಕು ಗೊತ್ತಾಗಲ್ವ ..? 

ಅವಳು :............

ಅವನು : ಎಲ್ಲೇ ನನ್ನ ಸಾಕ್ಸು ?

ಅವಳು : ಈಗ ತಂದೆ ...

ಅವನು : ಥೂ ದುಡಿದು ತಂದು ಹಾಕೋದು ಮಾತ್ರ ಕಾಣತ್ತೆ, ಈ ಮನೇಲೆ ಒಂದೂ  ಬೇಕು ಅಂದಾಗ  ಸಿಗಲ್ಲಾ  ....

ಅವಳು:  : ...........

ಅವನು : ನೋಡು ನೀನು ಆ ಪೀಟೀಲು ಕೊಯ್ತಾ ಕೂತ್ಕೊಬೇಡ ಈಗ ಜಗತ್ತು ಫಾಸ್ಟ್ ಆಗಿದೆ ,
 ಪೀಟೀಲಿಗೆ ಸ್ಕೋಪೂ ಇಲ್ಲ, ಅದರಿಂದ ಪ್ರಯೋಜನನೂ ಇಲ್ಲ ಗೊತ್ತಾಯ್ತ ?   ಅದೆಲ್ಲ ಬಿಟ್ಟು ಸರಿಯಾಗಿ ಮನೆ ನೋಡ್ಕೊಂಡು ಇರು, .ಮನೇಲಿ ನೆಮ್ಮದಿನೆ ಇಲ್ಲದ ಹಾಗಾಗ್ ಬಿಟ್ಟಿದೆ!


ಅವಳು : ......

ಅವನು : ನೋಡು ಸಂಜೆ ನನ್ನ ಫ್ರೆಂಡ್ಸ್, ಕಲೀಗ್ಸ್ ಬರ್ತಾ ಇದಾರೆ , ಅವ್ರ  ಮುಂದೆ ಈ ತರಾ ಅಳುಮುಂಜಿ ಮುಖ  ಇಟ್ಕೋಬೇಡ, ನಾನು ನಗ್ತಾ ಇರ್ತೀನಿ ಸ್ವಲ್ಪ ಕೊ ಆಪರೇಟ್ ಮಾಡು. ಹೇಳಿದ್ದು ಕೆಳಸ್ತ ?

ಅವಳು : ಹಮ್ಮ ...

ಅವನು : ಇದೆ ಅನ್ಬಿಟ್ಟು  ಹನ್ನೆರಡು  ಮೊಳ  ರೇಷ್ಮೆ ಸೀರೆ ಉಟ್ಕೊಂಡು ಕೂತ್ಕೊಬೇಡ, ಸ್ವಲ್ಪ ನೀಟ್ ಆಗಿ ಡ್ರೆಸ್ ಮಾಡ್ಕೋ ಏನು?

ಅವಳು : ಹಮ್ಮ ..

ಅವನು ತಿರುಗಿಯೂ ನೋಡದೆ ದಡಾರನೆ ಬಾಗಿಲು ಎಳೆದುಕೊಂಡು ಹೋದಾಗ ಆಕೆಯ ಮನದಲ್ಲಿ
 ಮಾರ್ದನಿಸುತ್ತಿತ್ತು 

" ಬದುಕಿನ  ಚಿಕ್ಕ ಚಿಕ್ಕ ಸಂತೋಷಗಳನ್ನು  ಅನುಭವಿಸೋದೆ ಪ್ರೀತಿ .."
 

            

Tuesday, December 11, 2012

ಚಲ್ತಿ ಕಾ ನಾಮ್ ಗಾಡಿ..? ಯಾ ಜಿಂದಗಿ ..?

      
         
         
                ಒಂದು ಚಳಿಯಾದ ಬೆಳಗಿನಲ್ಲಿ ಬೆಲ್ಲ ತುಪ್ಪದೊಂದಿಗೆ   ಗರಿ ಗರಿಯಾದ ದೋಸೆಯನ್ನು ತಿನ್ನುತ್ತ ಕುಳಿತ್ತಿದ್ದಾಗ ನಾನಂದೆ  ' ಅಪ್ಪ ನಂಗೆ ಒಂದು ಸ್ಕೂಟಿ ಬೇಕು ..!'  ಅಪ್ಪಂಗೆ ಪಕ್ಕದಲ್ಲೇ ಬಾಂಬ್ ಬಿದ್ದ ಹಾಗೆ ಆಗಿತ್ತೋ ಏನೋ .., 'ಹಮ್ಮ ..?' ಎಂದರು ತಲೆ ಎತ್ತಿ .., ನಾನಂದೆ  ' ಹುಮ್ಮ್..  ನಂಗೆ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟಿ ಬೇಕು ..!' , ಅಪ್ಪ  'ನೋಡನ '  ಅಂತಷ್ಟೇ ಹೇಳಿ  ದೋಸೆ ತಿನ್ನುವುದರಲ್ಲಿ ಮಗ್ನವಾದರು .

 
             
                  15     ದಿನ ಅದೇ ಯೋಚನೆಯಲ್ಲಿದ್ದೆ ,  ಅಪ್ಪ   'ನೋಡನ '  ಅಂದರೆ  ಅದು   'ok '  ಅಂತ  ನಂಗೆ  ಚೆನ್ನಾಗಿ  ಗೊತ್ತಿತ್ತು !  ಅಪ್ಪ ಸೆಕೆಂಡ್ ಹ್ಯಾಂಡ್ ಸ್ಕೂಟಿ ಯಾರ ಬಳಿ  ಇದೆ ಎಂದು ವಿಚಾರಿಸುತ್ತಿರಬಹುದು .., ಶೋ ರೂಂ ನಲ್ಲೂ ಸೆಕೆಂಡ್  ಹ್ಯಾಂಡ್  ಸಿಗುತ್ತಂತೆ ಅಂತ ಲೆಕ್ಕಾಚಾರ ಹಾಕುತ್ತಿತ್ತು ಮನಸ್ಸು , ನಾನಾಗ ಸಾಗರದ ಹಾಸ್ಟೆಲ್ನಲ್ಲಿ  ಇದ್ದುಕೊಂಡು ಓದುತ್ತಿದ್ದೆ , ಅಪ್ಪ ಸಾಗರಕ್ಕೆ ಬಂದವರೇ , 'ತಗಳದೆ ಆದ್ರೆ ಸೆಕೆಂಡ್ ಹ್ಯಾಂಡ್ ಯಾಕೆ..  , ಸ್ಕೂಟಿ ಪೆಪ್ ಅಂತ ಹೊಸುದು ಬಂದಿದ್ದು , ಕೋಟೆಷನ್  ನೋಡು 32೦೦೦ ಶೋ ರೂಮ್  ಪ್ರೈಸ್ ,  38೦೦೦  ಆನ್ ರೋಡ್  ಪ್ರೈಸ್ , ನಾನು ಶೋ ರೂಮ್  ನಲ್ಲಿ ಮಾತಡಿದ್ದಿ , ನಿಂಗೆ ಯಾವ ಕಲರ್ ಬೇಕು ಅಂತ ಸೆಲೆಕ್ಟ್ ಮಾಡು' ಅಂತ ಕೈಗೆ  ಕೋಟೆಷನ್ ಕೊಟ್ಟೆ ಬಿಡೋದಾ !  ಪಕ್ಕದಲ್ಲೇ ಬಾಂಬ್ ಬಿದ್ದ ಹಾಗಾಗುವ ಸರದಿ ನನ್ನದಾಗಿತ್ತು !. 10  ಸಾವಿರಕ್ಕೋ , 15  ಸಾವಿರಕ್ಕೋ   ಸಿಗುವ ಸೆಕೆಂಡ್  ಹ್ಯಾಂಡ್ ಸ್ಕೂಟಿ ತೆಗೆದುಕೊಳ್ಳುವ  ಯೋಚನೆಯಿತ್ತೆ ಹೊರತು  ಹೊಸ ಸ್ಕೂಟಿ ಬಗ್ಗೆ ಯೋಚಿಸಿಯೂ ಇರಲ್ಲಿಲ್ಲ ..! ಸರಿ ಶೋ ರೂಂ  ಗೆ ಹೋಗಿ  ಕಲರ್  ಎಲ್ಲ ನೋಡಿ ಕೆಂಪು ಬಣ್ಣದ್ದು ಸೆಲೆಕ್ಟ್ ಮಾಡಿ ಹಾಸ್ಟೆಲ್ ಗೆ ಬಂದರೂ ಮನಸ್ಸು ಪೂರ್ತಿಯಾಗಿ ಖುಷಿ ಪಡದೆ ಇನ್ಸ್ಟಾಲ್ ಮೆಂಟ್  ನಲ್ಲಿ ಖುಷಿಯನ್ನು ಆಸ್ವಾದಿಸುತ್ತಿತ್ತು .

   
                 ಕೊನೆಗೂ ಪ್ರೊಸೀಜರ್ ಎಲ್ಲ ಮುಗಿದು ಅದೇ ಶೋ ರೂಮ್  ನಲ್ಲಿ ಉದುಬತ್ತಿ ಹಚ್ಚಿ ಗಣಪತಿ ಪೂಜೆಯನ್ನೂ ಮಾಡಿ ಸ್ಕೂಟಿ ಕೀ  ನನ್ನ ಕೈಗೆ ಬಂದು ಸ್ಕೂಟಿ ಹತ್ತಿ ಕೂತು  ಹೋಗ್ತಾ ಇದ್ರೆ ಆಕಾಶದಲ್ಲೇ ಸ್ಕೂಟಿ ಹೊಡೆದ ಅನುಬವ !   ಆಕಾಶವೇ ಅಂಗೈಯಲ್ಲಿ  ಸಿಕ್ಕಿದಷ್ಟು ಆನಂದ ! ನನ್ನ ಸ್ಕೂಟಿ , ನನ್ನ ಹೆಸರಲ್ಲೇ ರಿಜಿಸ್ಟ್ರೇಷನ್  ! ಹಮ್ಮ .. ಅವತ್ತಿನಿಂದ ಇವತ್ತಿನವರೆಗೂ ಪ್ರತೀ ಸಲ ನನ್ನ ಪ್ರೀತಿಯ ಸ್ಕೂಟಿ  ನೋಡಿದಾಗಲೂ  ಮನಸಿನ ಯಾವೊದೋ ಮೂಲೆಯಲ್ಲಿ ಒಂದು  ಖುಷಿಯ ಪಲಕು! ಗಣಪತಿ ಕೆರೆಯ ಬಳಿಯ ಹಾಸ್ಟೆಲ್ನಿಂದ ಸ್ಕೂಟಿ ಹೊರಟರೆ BH  ರೋಡ್ ದಾಟಿ ಇಕ್ಕೇರಿ ರೋಡಲ್ಲಿ ಇರುವ ನನ್ನ ಕಾಲೇಜು     ತಲಪಲು ೧೦ ನಿಮಿಷ !  ವಾವ್  ..! ಸ್ವಲ್ಪ ದಿನ ಸಮಯವೇ ನನ್ನ ಕೈಲಿದ್ದಷ್ಟು ಖುಷಿ ನನಗೆ !

             
                  ಹಾಸ್ಟೆಲ್ ಎದುರಿಗೆ ಇದ್ದ ನೀರಿನ ಟ್ಯಾಂಕ್ ನಲ್ಲಿ ನನ್ ಸ್ಚೂಟಿಗೆ ದಿನ ಬಿಟ್ಟು ದಿನ ಸ್ನಾನ , ಮಿರ ಮಿರ ಮಿಂಚುವಂತೆ ದಿನ ಬಟ್ಟೆಯಿಂದ್ ಒರೆಸುವಷ್ಟು ಉಪಚಾರ !   ಪೆಟ್ರೋಲ್ ಪ್ರೈಸ್   ಒಂದು ಲೀಟರ್ ಗೆ Rs  42 ಇತ್ತು ಅವಾಗ , ಅಪ್ಪ ಅಷ್ಟೊಂದು  ಸ್ಟ್ರಿಕ್ಟ್ ಆಗಿ ಏನೂ  ಹೇಳದ್ದಿದ್ದರೂ ಅದೇನೋ ಗೊತ್ತಿಲ್ಲ ನಂಗೆ ನಾನೇ ಕೆಲವು ನಿಯಮವನ್ನು  ಹಾಕಿಕೊಂಡುಬಿಟ್ಟಿದ್ದೆ , ತಿಂಗಳಿಗೆ ಇಂತಿಷ್ಟೇ ಪೆಟ್ರೋಲ್ ಹಾಕ್ಬೇಕು , ಸುಮ್ಸುಮ್ನೆ ಎಲ್ಲೆಂದರಲ್ಲಿ ಸುತ್ತಬಾರದು , ಅನಾವಶ್ಯಕವಾಗಿ ಸ್ಕೂಟಿ ಹೊಡಿಬಾರದು,  ಸ್ಕೂಟಿ ನ  ತುಂಬಾ ಚೆನ್ನಾಗಿ ಮೈಂಟೈನ್ ಮಾಡ್ಬೇಕು  etc ... etc..ಹಮ್ಮ ..  ಕಾಲೇಜು ಬಿಟ್ಟರೆ ನನ್ನ ಸ್ಕೂಟಿಗೆ ಸಾಗರದಲ್ಲಿರುವ ಪ್ರತಿ ಲೈಬ್ರರಿಯೂ  ಚಿರಪರಿಚಿತ ! ನಾನು ಬಯಸಿದಾಗಲೆಲ್ಲ ಕ್ಷಣ ಮಾತ್ರದಲ್ಲಿ ನನ್ನನ್ನು ಲೈಬ್ರರಿಯ  ಎದುರಿಗೆ ತಂದು ನಿಲ್ಲಿಸುತ್ತಿತ್ತು

                ಫೈನಲ್ ಸೆಮ್ ನಲ್ಲೆ ಮದುವೆ  ಫಿಕ್ಸ್ , ಹಾಸ್ಟೆಲ್ ನಲ್ಲಿ  ಎಲ್ರೂ ಅಂತಿದ್ರು , " ಚೈತ್ರನಿಗೆ ಹೊಸ ಗಂಡ ಸಿಕ್ಕದ  ಅಂತ ಹಳೆ ಗಂಡನ  ಬಗ್ಗೆ ಅಸ್ಥೆ ಕಡಿಮೆ ಆಯಿತು ",.  ಅದೇನೋ ಮದುವೆಗೆ ಸಮಯ ತುಂಬಾ ಕಡಿಮೆ ಇದ್ದಿದ್ರಿಂದ ಶಾಪಿಂಗ್..  ಸ್ಟಿಚ್ಚಿಂಗು..  ಅದು.. ಇದು.. ಅಂತ ನನ್ನ ಪ್ರೀತಿಯ ಸ್ಕೂಟಿ ಕಡೆ ಗಮನವೇ ಕೊಡೋದಕ್ಕೆ ಆಗ್ತಾ ಇರ್ಲಿಲ್ಲ .., ಪಾಪ ಅದಕ್ಕೆ ಬೇಜಾರಾಗಿತ್ತೋ ಏನೋ  ...

               ಬೆಂಗಳೂರಿಗೆ  ನನ್ನೊಂದಿಗೆ ಬಂದ ನನ್ನ ಸ್ಕೂಟಿ ನಾನೇ ಆಶ್ಚರ್ಯ ಪಡುವಷ್ಟು ಬೇಗನೆ ಇಲ್ಲಿನ ಸಿಗ್ನಲ್ಲು ಟ್ರಾಫಿಕ್  ಗೆ  ಒಗ್ಗಿಕೊಂಡಿತು , ಆದರೆ ಪಾಪ ಬೆಂಗಳೂರಿನ ೨೫ ರೋಡ್ಗಳು ಅದಕ್ಕೆ ಸದಾ ಗೊಂದಲ ! ಯಾವ ಕಡೆ ಹೋಗೋದು ಅಂತ ದಿಕ್ಕೇ ತೋಚದ ಸ್ತಿತಿ , ಒಮ್ಮೆ ನೋಡಿದ ರೋಡು ಮತ್ತೊಮ್ಮೆ ನೋಡುವಾಗ ಚೇಂಜು ! ಪಾಪ ನನ್ನ ಸ್ಕೂಟಿ ಏನು ಮಾಡಲು ಸಾದ್ಯ ? ಈಗ್ಲೂ ಅಷ್ಟೇ ಎರಡು ಮೂರು  ಕವಲುಗಳ  ದಾರಿಯಲ್ಲಿ  ' I Cant '  ಅಂತ ಒಮ್ಮೊಮ್ಮೆ  ಮುಷ್ಕರ ಹೂಡಿಬಿಡುತ್ತದೆ ..!

              ಮಗಳನ್ನು ಸ್ಕೂಲ್ನಿಂದ ಪಿಕ್ ಮಾಡೋದು,    ತರಕಾರಿ ತರೋದು,    ಚಿಕ್ಕ ಪುಟ್ಟ ಶಾಪಿಂಗು  , ಗೆಳತಿಯರೊಡನೆ ಓಡಾಟ,  ಅದು ಇದು ಸಣ್ಣ ಪುಟ್ಟ ಕೆಲಸ ..ಎಲ್ಲವನ್ನೂ ನನ್ನ ಸ್ಕೂಟಿ ಸ್ವಲ್ಪವೂ ಬೇಜಾರಿಲ್ಲದೆ ಮಾಡುತ್ತಿದೆ ..,   ಏನೇ ಆದರೂ 10   ವರುಷದಿಂದ ಇವತ್ತಿನವರೆಗೂ ನನ್ನ ಜೊತೇನೆ ಇತ್ತು , ನನ್ನ  ಜೊತೇನೆ ಇದೆ .,  ಮುಂದೇನೂ ಇ..ರ...ತ್ತೆ ...


       
                 ಇಷ್ಟರ ಮದ್ಯೆ  ಪ್ರೀತಿಯ ಸ್ಕೂಟಿ  ನನ್ನ ತಂಗಿ ನನ್ನ ತಮ್ಮನನ್ನು ಹೊತ್ತುಕೊಂಡು ತಿರುಗಾಡಿತ್ತು .  ಕಾಲೇಜು, ಎಗ್ಸಾಮ್,  ಎಂಗೇಜ್ಮೆಂಟ್ ,  ಮದುವೆ , ಆ ಮನೆ, ಈ ಮನೆ , ಬೆಂಗಳೂರು , ಆ ನಗರ , ಈ ನಗರ , ಮತ್ತೊಂದು  ಮನೆ ,  ಮಗಳು .. ಅವಳ ಸ್ಕೂಲ್ .. ಅಬ್ಬಬ್ಬ ..!!!  ಹತ್ತು ವರುಷದಲ್ಲಿ ಏನೆಲ್ಲಾ ...!! ಇನ್ನೆಷ್ಟು  ಘಟ್ಟ , ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತೋ ನನ್ನ ಪ್ರೀತಿಯ ಸ್ಕೂಟಿ ಗೊತ್ತಿಲ್ಲ ..!  ಲವ್ ಯು ಸ್ಕೂಟಿ ..!

 

Monday, December 3, 2012

ಬದುಕ ಮನ್ನಿಸು ಮನವೇ

   
ಬದುಕ ಮನ್ನಿಸು ಮನವೇ...

ಸಮಸ್ಯೆಯಾದರೆ  ಪರಿಹರಿಸಿಕೊಳ್ಳಬಹುದು , ದುಃಖವಾದರೆ ಇಂತಿಷ್ಟು ಕಾಲ ಅಂತಿರುತ್ತದೆ, ನಂತರ ಅದರ ತೀವ್ರತೆ ಕಡಿಮೆಯಾಗಿ ಮರೆತುಬಿಡಬಹುದು. ಬದುಕು ಎಂಬ ಇಡೀ ಪ್ಯಾಕೇಜ್ ನಲ್ಲಿ  'ಒಂದು ಸಮಸ್ಯೆಯ'  ಆಯುಷ್ಯ  ತುಂಬಾ ಚಿಕ್ಕದು. ಏನೇ ಆದರೂ ಬದುಕು ಹಾಗೆ ಸಾಗುತ್ತಿರುತ್ತದೆ. ಆದರೆ ಕೆಲವೇ ಕೆಲವು  ಸಂಗತಿಗಳು ಮಾತ್ರ  ಪ್ರತಿಕ್ಷಣದ ಬದುಕನ್ನೂ  ಸವಾಲಿಗೊಡ್ದುವಂತದ್ದು .

               
 ಹೇಳಲು ಹೊರಟಿರುವುದು ಬುದ್ದಿಮಾಂದ್ಯ ಅಂತ ಇರುತ್ತಾರಲ್ಲ ಅಂತ ಮಕ್ಕಳ ಬಗ್ಗೆ, ಅವರ ತಂದೆ ತಾಯಿಯರ ಬಗ್ಗೆ,  ಅಂತವರಿಗೆ ಜೀವನದ ಪ್ರತಿ ಕ್ಷಣವೂ ಹೊರಾಟ, ಪ್ರತಿ ಹೆಜ್ಜೆಯೂ ಸವಾಲು , ಪ್ರತಿ ನಗುವಿನ ಹಿಂದೊಂದು ನೋವಿನ ಸೆಲೆಯನ್ನು ಎದುರಿಗೆ ಬಾರದಂತೆ ತಡೆದು ನಿಲ್ಲಿಸಿಕೊಂಡಿರುತ್ತಾರೆ.  ಅದು ನಮ್ಮ ನಿಮ್ಮ ದುಃಖಗಳ  ಹಾಗೆ ಇವತ್ತಿದ್ದು ನಾಳೆ ಹೊರಟುಬಿಡುವಂತದ್ದಲ್ಲ , ಯಾರೋ ಸಾವಿನಲ್ಲಿ ಆಗಲಿದ ದುಃಖ ಕೂಡ ಒಂದು ಕಾಲದ ಮಿತಿಯಲ್ಲಷ್ಟೇ  ನಮ್ಮನ್ನು ನರಳಿಸಬಹುದು. ಇದು ಹಾಗೂ ಅಲ್ಲ.ಮೊನ್ನೆ ಯಾವೊದೋ ಕಾರಣಕ್ಕಾಗಿ ಮಣಿಪಾಲ ಆಸ್ಪತ್ರೆಗೆ ಹೋಗಿದ್ದೆ,  ವಿಸಿಟರ್ಸ್ ಸೀಟ್ ನಲ್ಲಿ ಕುಳಿತ 5 ನಿಮಿಷಕ್ಕೆ ನನ್ನ ಎದುರಿಗೆ ಒಬ್ಬ ತಾಯಿ ಮಗಳು ಬಂದು ಕುಳಿತರು. ಮಗಳು ವಿಚಿತ್ರವಾಗಿ ಶಬ್ದ ಹೊರಳಿಸುತ್ತ  ಏನೋ  ಹೇಳಲು ಪ್ರಯತ್ನಿಸುತ್ತಿದ್ದಳು ಆಕೆಗೆ ತನ್ನ ನಾಲಿಗೆ  ತುಟಿ ಅಂಗಾಂಗಗಳ ಮೇಲೆ ಎಚ್ಚರವಿರಲಿಲ್ಲ, ಅವರಮ್ಮ ಆಕೆಯನ್ನು ಸಂಬಾಳಿಸುವುದರಲ್ಲಿ  ಸೋಲುತ್ತಿದ್ದರು.  ಅವರ ಮುಖದಲ್ಲಿದ್ದ ಆ ನೋವು, ಮುಜುಗರ, ಆಳವಾದ ಕಣ್ಣಲ್ಲಿದ್ದ ಅತಿಯಾದ ನೋವು...,  ನನಗೆ ಇಂಥ ದೃಶ್ಯಗಳನ್ನು ನೋಡಲು ಮನಸು ಸಹಕರಿಸದು.., ಗಂಟಲುಬ್ಬಿ ಕಣ್ಣು ತುಂಬಿ ಬಂತು. ಟಿಪಾಯಿ ಮೇಲಿದ್ದ ನ್ಯೂಸ್ ಪೇಪರ್ ಮುಖಕ್ಕೆ ಅಡ್ಡ ಹಿಡಿದೆ. ಸುಮ್ಮನೆ  ಯೋಚಿಸಿದೆ.. ನಮ್ಮ ಚಿಕ್ಕ ಪುಟ್ಟ ಸಮಸ್ಯೆಗಳ ಸುತ್ತವೇ ನಮ್ಮ ಮನಸು ಸುತ್ತುತ್ತಿದ್ದರೆ...., ಅವರ ಮನಸು ಹೇಗಿರಬಹುದು..!  ಸೀರೆ, ಮನೆ ಅದು, ಇದು   ಅಂತ ಯೋಚಿಸುತ್ತಿದ್ದರೆ ಆಕೆಯ ಪ್ರಿಯರಿಟಿ ಏನಿರಬಹುದು ??  ನಮ್ಮ ಮಗ, ಮಗಳು  A ಗ್ರೇಡ್ ಬಂದಿಲ್ಲವಲ್ಲ ಅಂತ ಚಿಂತಿಸುತ್ತಿದ್ದರೆ ಆಕೆ ಏನು ಚಿಂತಿಸುತ್ತಿರಬಹುದು ? ಮತ್ತೂ ಎಂದರೆ ಇಂತ ವಿಷಯಗಳಲ್ಲಿ ತಾಯಿಯನ್ನು ಕಾಡುವ ಮತ್ತೊದು ಯೋಚನೆ... ಮಗು ಹೆಣ್ನಾಗಿದ್ದರೆ ಪ್ರಕೃತಿ ಕೊಡಮಾಡುವ ಅನೇಕ  ಘಟ್ಟಗಳು..!  'ನಾನು ಇರುವ ತನಕ ನೋಡಿಕೊಳ್ಳಬಲ್ಲೆ ಮುಂದೇನು?' ಎನ್ನುವ ವಿಚಾರವೊಂದು ಆಕೆಯ ಸುತ್ತ ಗಿರಾಕಿ ಹೊಡೆಯುತ್ತಿರುತ್ತದೆ.  ಮನಸ್ಸು ಭಾರವಾಗಿತ್ತು. ನಾವು ಯಾವು ಯಾವುದೋ ವಿಷಯಗಳಿಗೆ ದುಃಖಿಸುತ್ತೆವಲ್ಲ ಅಂತ ಆ ಕ್ಷಣಕ್ಕೆ  ಅನಿಸಿಬಿಟ್ಟಿತು ನನಗೆ.

ಮನೆಗೆ ಬಂದವಳೇ ಗೂಗಲ್ ಒಳಗೆ ಹೋಗಿ ಕುಳಿತುಕೊಂಡೆ ..,  ಈ ತರದ ಮಕ್ಕಳ ಬಗ್ಗೆ ಸಾಕಷ್ಟು ಓದಿದೆ, ಓದುತ್ತಿದ್ದ ಹಾಗೆ ಸ್ವಲ್ಪ ಸಮದಾನವಾದ ಹಾಗಾಯಿತು , ಕೆಲವನ್ನು ಬದಲಾಯಿಸಲು ಸಾಧ್ಯವಿಲ್ಲವಲ್ಲ...?  ಅದರ ಜೊತೆಗೆ ಬದುಕನ್ನು ಅಭ್ಯಸಿಸಿಕೊಳ್ಳಬೇಕು, ಸುಂದರವಾದ ಬದುಕನ್ನು ರೂಪಿಸಿಕೊಳ್ಳಬೇಕು. ಅರುಣಶೌರಿಯವರು ನಿಮಗೆ ಗೊತ್ತಿರಬಹುದು,  ಅವರಿಗೆ ಒಬ್ಬ ಮಗನಿದ್ದಾನೆ.., ಅವನ ಬಗ್ಗೆ ಶೌರಿಯಯವರು ಏನೆನ್ನುತ್ತಾರೆ ಗೊತ್ತಾ..? " ನನಗೆ ನನ್ನ ಮಗ ಕೊಡುವ ಕಾನ್ಫಿಡೆನ್ಸ್ ತುಂಬಾ ದೊಡ್ಡದು, ಏಕೆಂದರೆ ಅವನು ನಾನು  ಎದ್ದಾಗಲೂ  ಬಿದ್ದಾಗಲೂ ನನ್ನನ್ನು ಒಂದೇ ತರಾ ನೋಡುತ್ತಾನೆ ",  ಎನ್ನುತ್ತಾರೆ , ವಿಷಯ ಅಂದರೆ..  ಅವರ ಮಗ   ಮೆಂಟಲಿ ಚಾಲೆಂಜ್ಡ್ ! . ಇನ್ನೊಬ್ಬ ತಂದೆಗೆ 2 ಗಂಡುಮಕ್ಕಳು.., ಒಬ್ಬ ಬುದ್ದಿಮಾಂದ್ಯ , ಇನ್ನೊಬ್ಬ ಅತಿ ಬುದ್ದಿವಂತ , ಅವನೇನು ಅನ್ನುತ್ತಾನೆ ಅಂದರೆ, " ನಂಗೆ  ಇಬ್ಬರೂ ಮಕ್ಕಳು ಸಮಾನರು ಇವನು ಚಿನ್ನದ ಪದಕ ತಂದಾಗ ಆಗುವಷ್ಟೇ ಸಂತೋಷ ಆತ  ತನ್ನ ಶೂ ಲ್ಯೇಸ್ ನ್ನು ತಾನೇ ಕಟ್ಟಿಕೊಂಡಾಗ ಅನುಬವಿಸುತ್ತೇನೆ" ಎನ್ನುತ್ತಾನೆ. ಇಂತಹ ಅನೇಕ ಉದಾಹರಣೆ ಓದಿದಾಗ ಮನಸು ಸ್ವಲ್ಪ ತಹಬದಿಗೆ ಬಂದಿತ್ತು.


ಮೊದಲು  ಸಮಾಜ ಅಂತವರನ್ನು ಯಾವುದೇ ಕಾರಣಕ್ಕೂ ಕರುಣೆಯ ದೃಷ್ಟಿಯಿಂದ ನೋಡಬಾರದು, ಸಹಜತೆ ಇರಬೇಕು ನಡೆ ನುಡಿ  ನೋಟದಲ್ಲಿ , ಇನ್ನೂ ಎಂದರೆ ಪರೀಕ್ಷೆಯಲ್ಲಿ ನಮಗಿಂತ ಜಾಸ್ತಿ ಅಂಕ ತೆಗೆದುಕೊಂಡವರೆಡೆಗೊಂದು  ನಮಗೆ ಗೌರವ ಇರುತ್ತಲ್ಲ ಅಂತದೊಂದು ಗೌರವವಿರಬೇಕು ಅವರ ಪಾಲಕರೆಡೆಗೆ , ಏಕೆಂದರೆ ಬದುಕನ್ನು ಅವರು ನಮಗಿಂತ ತೀವ್ರವಾಗಿ, ಆಳವಾಗಿ ಅನುಭವಿಸುವವರು.  ನಾನೂ ಅಂತವರಿಗೆ ಮುಂದೊಂದು ದಿನ ಏನಾದರೂ ಮಾಡಬೇಕು ಅನಿಸಿದ್ದಂತೂ ನಿಜ.

ಕಡೇ ಪಕ್ಷ.....

  ಸಮಸ್ಯೆಗಳು, ನೋವು,  ದುಃಖ  ಇವುಗಳಿಂದ ಹೊರತಾಗಿರಲಂತೂ ಸಾದ್ಯವಿಲ್ಲದೆ ಇರಬಹುದು....,  ಅಟ್ಲೀಸ್ಟ್ ದುಃಖ  ಪಡುವಷ್ಟು ಆ ದುಃಖ  'ವರ್ತ್' ಆಗಿರಲಿ...,  ಪಟ್ಟ ಪ್ರತಿ ದುಃಖವೂ ಅನುಭವವಾಗಿ ಮನಸ್ಸು ಇನ್ನೂ ಪಕ್ವವಾಗಲಿ...,   ಆಗದ, ಹೋಗದ,  ಇಲ್ಲದ, ಸಲ್ಲದ, ಬೇಡದ  ವಿಷಯಗಳಿಗೆ ಕೊರಗುವುದನ್ನು ದುಃಖಿಸುವುದನ್ನು ನಮ್ಮ  ಮನಸು ಮೊದಲು ನಿಲ್ಲಿಸಲಿ. ದುಃಖ ನೋವುಗಳಲ್ಲಿಯೂ ನಮ್ಮ ಮನಸ್ಸು  ಚೂಸಿಯಾಗಿರಲಿ. ಸದ್ಯಕ್ಕೆ ಇಷ್ಟಾದರೂ ಮಾಡೋಣ ಅನ್ನಿಸಿತು.

ಕೊನೆಯಲ್ಲಿ,

ಭಗವಧ್ಗೀತೆಯಲ್ಲಿ ಹೇಳಿದ ಹಾಗೆ , ' ಬದಲಾಯಿಸಬಲ್ಲದ್ದನ್ನು ಬದಲಾಯಿಸವ ಶಕ್ತಿ ಇರಲಿ, ಬದಲಾಯಿಸಲು ಸಾದ್ಯವಿಲ್ಲದ್ದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿರಲಿ '  ಅಲ್ಲವೇ ...

        
               

               


     
                     .