Friday, January 25, 2013

ನಿಮಗೂ ಹೀಗನಿಸಿತ್ತಾ .....??

ಊಟ  ನಿದ್ದೆಗಳ  ಪರಿವೆಯಿಲ್ಲದೆ   ಅವರು  ಅಲ್ಲಿ  ದೇಶವನ್ನು  ಕಾಯುತ್ತಿದ್ದಾರೆ...,    ಇವರಿಲ್ಲಿ   ದೇಶವನ್ನು  ಕೊಳ್ಳೆ  ಹೊಡೆಯುತ್ತಿದ್ದಾರೆ.ದೇಶದ  ಗಡಿಗಾಗಿ   ಜೀವವನ್ನು  ಪಣವಾಗಿಟ್ಟರೆ   ಅವರು ..  ಇವರು  ದೇಶದೊಳಗೆ ಗಡಿಯ  ಗಲಭೆಯೆಬ್ಬಿಸುತ್ತಿದ್ದಾರೆ.
ಅವರಲ್ಲಿ   ಹಿಮಾಲಯದ  ತಪ್ಪಲಿನಲ್ಲಿ   -10  ಡಿಗ್ರೀ  ಚಳಿಯಲ್ಲಿ   ಅನವರತ ನಡೆಯಿತ್ತಿದ್ದರೆ ......  ಇವರಿಲ್ಲಿ  AC  ರೂಮಿನಲ್ಲಿ    ಕುಳಿತು    ಭ್ರಷ್ಟಾಚಾರದ  ಕತೆಗೆ  ಮುನ್ನುಡಿ  ಬರೆಯುತ್ತಿದ್ದಾರೆಹುಟ್ಟಿದ   ಹಸು  ಕಂದಮ್ಮಗಳನ್ನು  ಬಿಟ್ಟು   ಚೀರುವ  ಹೃದಯ  ಹೊತ್ತು  ಹೊರಟು  ನಿಂತಿದ್ದರೆ ..,  ಇವರಿಲ್ಲಿ  ಮಕ್ಕಳಷ್ಟೇ  ಅಲ್ಲ .., ಅವರ  ಮಕ್ಕಳು  ಮೊಮ್ಮಕಳು  ..,  ಮರಿ ಮಕ್ಕಳ  ಆಸ್ತಿಗಾಗಿ  ದೇಶವನ್ನು   ಲೂಟಿ  ಹೊಡೆಯುತ್ತಿದ್ದಾರೆ  .

                                         
     


                        


ಒಲಿದ  ಒಲುಮೆಯ  ಸಂಗಾತಿ ...,  ತುಂಬಿದ   ಕಣ್ಣುಗಳು .., ಆಕೆಯ  ಮನಸ್ಸು ಇನ್ನಿಲ್ಲದಷ್ಟು  ಭಾರ .., ಇವರ  ಮನೆಯ  ಮನೆಯೊಡತಿಗೂ  ಅಷ್ಟೇ ..  ಯಾರದ್ದೋ ಚೆಲ್ಲಿದ  ರಕ್ತದ  ಡಿಸೈನ್  ಒಡವೆ  ... ಮೈ  ತುಂಬಾ   ಭಾರೀ  ಭಾರ ..
ಯಾವುದೊ  ಆಟಗಾರ  ಗೆದ್ದಮಾತ್ರಕ್ಕೆ  ಹಲವು  ಕೋಟಿಗಳನ್ನು  ಬಹುಮಾನಿಸುವ  ಇವರು ..,  ಕೊನೆಗೆ   ಅವರಲ್ಲಿ  ದೇಶಕ್ಕಾಗಿ  ಸತ್ತರೂ  ಕೂಡ  ಅದರ  ಬೆಲೆ ಹೆಚ್ಚೆಂದರೆ  ಕೆಲವು  ಲಕ್ಷಗಳು .'Give me your blood  I shell  give you  freedom '  ಹಾಗಂದಿದ್ದರು  ಫೌಂಡರ್   ಆಫ್ ದಿ ಆರ್ಮಿ '  ನೇತಾಜಿ  ಸುಭಾಷ್ಚಂದ್ರ  ಬೋಸ್ '. ಈ  ತಿಂಗಳ  23  ಅವರು  ಹುಟ್ಟಿದ  ದಿನ .  ಅವರ  ಹುಟ್ಟಿದ  ದಿನವನ್ನು  ಸೈನಿಕರ 
ದಿನಾಚಾರಣೆಯನ್ನಾಗಿ   ಯಾಕೆ  ಆಚರಿಸಬಾರದು ?


ದೇಶದ  ಎಲ್ಲ  ಸೈನಿಕರಿಗೂ  ಕೋಟಿ   ಕೋಟಿ   ಹೃದಯಗಳ  ನಮನ ....,  ಭೃಷ್ಟ  ರಾಜಕಾರಣಿಗಳಿಗೆ  ಅವರ  ದುಷ್ಟತನಕ್ಕೆ   ಕೋಟಿ  ಕೋಟಿ   ಹೃದಯಗಳ  ದಿಕ್ಕಾರವಿರಲಿ ...


ಮೇರ  ಭಾರತ್  ಮಹಾನ್      
ಜೈ  ಹಿಂದ್ಚೈತ್ರ  ಬಿ .ಜಿ.


Friday, January 11, 2013

ನಾನು ತುಂಬಾ ಸುಖವಾಗಿದ್ದೇನೆ ಗೊತ್ತಾ ನಿಮಗೆ ...!ಒಂದು ಹೆಣ್ಣಿನ ಆತ್ಮ ಸ್ವಗತ .. PUC  ನಲ್ಲಿ   85% ಬಂದಿದ್ದರೂ ಇಂಜಿನಿಯರಿಂಗ್    ಹೋಗದೆ  ಡಿಗ್ರಿ ಗೆ ಸೇರಿಕೊಂಡಿದ್ದು  , ಅಣ್ಣಂಗೆ 65% ಬಂದಿದ್ದರೂ ಕಷ್ಟಪಟ್ಟು ಇಂಜಿನಿಯರಿಂಗ್  ಕಾಲೆಜ್ ನಲ್ಲಿ ಸೀಟ್ ದಕ್ಕಿಸಿಕೊಟ್ಟಿದ್ದು .., ಬಿಡಿ ಎಷ್ಟಾದರೂ   ಮದುವೆಯಾಗಿ ಬೇರೆ ಮನೆ ಸೇರೋ ನನ್ನ ಮೇಲೆ ಇನ್ವೆಸ್ಟ್ ಮಾಡೋದು ವೇಸ್ಟ್  ತಾನೇ ...?  ಹಾಗೆನಿಲ್ಲಪ್ಪ  ಅಪ್ಪ ಅಮ್ಮನನ್ನು ಬಿಟ್ಟು ಅಷ್ಟು ದೂರ ಇರೋ ಸಿಟಿಗೆ ಹೋಗಿ ನಂಗೆ ಓದ್ದೊಕಾಗಲ್ಲಪ್ಪ ....  ಬಿ.ಎಸ್ಸಿ  ಮುಗಿಸಿದ್ದರಿಂದ  ಎಮ್ ಎಸ್ಸಿ   ಮಾಡುತ್ತೆನೆಂದು  ಆಸೆ ತುಂಬಿದ ಕಂಗಳಿಂದ ಗಂಡನನ್ನು ಕೇಳಿದಾಗ , 'ಯಾಕೆ ಚಿನ್ನ ಕಷ್ಟ ಪಡ್ತೀಯ ... ಅರಾಮಗಿ ಇದ್ದುಬಿಡು'  ಎಂದವನು ಇದೆ ಫೈನಲ್ ಅಂತ ನಯವಾಗಿ ಹೇಳಿ ಹೊದಾಗ  ಹಿಂಡಿದ್ದು   ಒಗೆದ ಬಟ್ಟೆಯನ್ನು...., ನನ್ನ ಮನಸ್ಸನ್ನೇನಲ್ಲ   ಬಿಡಿ .....


 ಅರ್ಧಕ್ಕೆ ಬಿಟ್ಟ ನನ್ನ ಸಂಗೀತವನ್ನು ಮುಂದುವರಿಸಲುಹೋದಾಗ   ಮಾವ ಹೇಳಿದ್ದು   'ನಮ್ಮ ಮನೆ  ಮಹಾಲಕ್ಷೀನಮ್ಮ  ನೀನು , ನೀನು ಮಾತಾಡಿದರೆ ಸಂಗೀತದಂತೆ , ಮನೆ ಗಂಡ ಮಕ್ಕಳನ್ನು ಬಿಟ್ಟು ಯಾಕಮ್ಮ ನಿನಗೆ ಸಂಗೀತ ಗಿಂಗೀತಾ....? ಬೆಚ್ಚಗೆ ಸಂಸಾರ ನೋಡಿಕೊಂಡಿದ್ರೆ  ಬೇಕಾದಷ್ಟಾಯಿತಲ್ಲಮ್ಮ  ..' ಅಂತ ನಗೆ ಸೂಸಿದಾಗ  ಸುಟ್ಟಿದ್ದು  ನನ್ನ ದಂಡಿ ದಂಡಿ ಕನಸುಗಳನಲ್ಲ, ಅಡಿಗೆ ಮಾಡುವಾಗ ಎಲ್ಲೋ ಒಂಚೂರು ಮುಂಗೈಗೆ ಬೆಂಕಿ ತಗುಲಿತಷ್ಟೇ .....!


  ಅಮ್ಮ .. ನಂಗೆ ಇಲ್ಲೇ ನೀರು ತಂದು ಕೊಡು .., ಅಮ್ಮ ನಂಗೆ ಶೂ ಹಾಕು ,  ಅಮ್ಮ ನನ್ನ ಬ್ಯಾಗ್ ತಂದುಕೊಡು ಎಂದು ಕುಳಿತಲ್ಲಿಯೇ ಸೇವೆ ಮಾಡಿಸಿಕೊಳ್ಳುವ ನನ್ನ   ಮಗರಾಯನಿಗೆ  'ಸರದಾರ ಅವನು, ತಾನೇ ಮಾಡಿಕೊಳ್ಳಲು  ಅವನದೇನು ನಿನ್ನಂತೆ  ಹೆಣ್ಣೇ ...?'   ನನ್ನ ಅತ್ತೆ  ಸೊಲ್ಲು ನುಡಿವಾಗ ಅವಡು ಕಚ್ಚಿ ಬರುವಷ್ಟು ಕೊಪವಾದರೂ ......, ಬಿಡಿ ನಂಗೆ ಕೋಪ ಬರುವುದೇ ಇಲ್ಲ ..., ನನ್ನದು ಭಾರೀ  ಶಾಂತ ಸ್ವಭಾವ ......!


 ಕುರ್ತಾ  ಜೀನ್ಸ್  ಹಾಕಿಕೊಂಡು ಬಿಂದಾಸ್ ಆಗಿ ಓಡಾಡುತ್ತಿದ್ದ  ನನ್ನ  ನಾದಿನಿಯನ್ನು ' ಎಲ್ಲಿ ತಗೊಂಡ್ಯೇ  ಎಷ್ಟು ಚೆನ್ನಾಗಿದೆ  ! ಅಂದಿದಕ್ಕೆ  , ' ಬಿಡಿ ಅತ್ತಿಗೆ ನಿಮಗೆ ಸೀರೆ ಚೂಡಿದಾರನೇ  ಒಪ್ಪುತ್ತೆ'  ಅಂದ ಅವಳ  ಜಾಣ್ಮೆಯ  ಉತ್ತರಕ್ಕೆ  ' ನಿನ್ನ ಆನೆ ಗಾತ್ರಕ್ಕೆ  ಒಪ್ಪುತ್ತೆನಮ್ಮಾ  ..?'  ಅಂತ ನಾನೇನೂ ಕೇಳಲ್ಲ ಬಿಡಿ ..., ನಂಗೆ ಕೆಲವೊಮ್ಮೆ ಗಂಟಲ್ಲಲ್ಲಿ  ಕಲ್ಲು ಸಿಕ್ಕಿ ಹಾಕಿಕೊಂಡಿರುವುದರಿಂದ  ಎಷ್ಟೋ  ಸಲ ಮಾತಾಡುವುದರ ಬದಲು ಸುಮ್ಮನಿದ್ದುಬಿಡುತ್ತೇನೆ .....!  'ನಿನ್ಯಾಕೆ ದುಡಿಯಬೇಕು .? ಕಷ್ಟ ಪಡಬೇಕು..?  ನನ್ನ ದುಡ್ಡು ...  ಸರ್ವಸ್ವ  ಎಲ್ಲವೂ ನಿಂದೆ ತಾನೇ  ...?'  ಎಂದವನು ಪೈಸೆ ಪೈಸೆ ಗೂ ಲೆಕ್ಕ ಕೇಳುವಾಗ  ಅವಮಾನದ ಛಡಿ ಏಟಿಗೆ  ಸ್ವಾಭಿಮಾನ ನರಳಿದರೂ...ಹೊಂದಾಣಿಕೆಯ ಹೊದಿಕೆ... ಇಲ್ಲಪ  ಹಾಗೇನೂ ಇಲ್ಲ ಗಂಡ ಹೆಂಡತಿ ಅಂದ ಮೇಲೆ  ಯಾರೋ  ಒಬ್ಬರು ಹೊಂದಿಕೊಂಡರಾಯಿತು ..., ಆದರೆ ಪ್ರತೀ ಸಲವೂ 'ಆ ಯಾರೋ ಒಬ್ಬರು'  ' ನಾನು '  ಆಗಿರಬೇಕಷ್ಟೇ ...  ತುಂಬಾ ಸುಲಭ ಅಲ್ಲವೇ !


  ನನಗೆ ಎಷ್ಟು ಆರಾಮು ಎಂದರೆ .., ಮಾವನಿಗೆ ಕೋಪ  ಬಂದೀತೆ ..? ಅತ್ತೆಗೆ ಬೇಸರವಾದೀತೇ ...?  ಮಗನಿಗೆ ಸಕಲ ಸೌಕರ್ಯ ತಯಾರಾಗಿದೆಯೇ ...?  ಗಂಡ ಸಿಟ್ಟಾದನೆ ...? ಬಂದ  ನೆಂಟರಿಗೆ ಸಮಧಾನವಾಯಿತೆ ...?  ಬರೀ 'ಇ..ಷ್ಟೇ' ನೋಡಿಕೊಂಡರಾಯಿತು ..., ಮತ್ತೆ ನನ್ನ  ಕೋಪ , ಬೇಸರ , ಸೌಕರ್ಯ , ಸಿಟ್ಟು , ಸಮಾದಾನ ..?  ಛೆ .., ಛೆ .., ನಂಗೆ ಅವೆಲ್ಲ ಏನೂ ಆಗಲ್ಲ ಬಿಡಿ ...., ಮನೆ ಮಹಾಲಕ್ಷ್ಮಿಯಲ್ಲವೇ  ನಾನು.....!ಅಡಿಗೆ ಮನೆಯ ನನ್ನ ಹೆಡ್ ಆಫೀಸಿನಲ್ಲಿ   ನನ್ನ  ಕನಸುಗಳು ನನ್ನನ್ನು ಗೇಲಿ ಮಾಡುವಾಗ.., ನನಗೆ ನಾನೇ ಅಪರಿಚಿತವೆನಿಸುವಾಗ .. ಸುಮ್ಮನೆ ಕಣ್ಣಲ್ಲಿ  ಬಂದ  ನೀರು ....ಈರುಳ್ಳಿ ಹೆಚ್ಚಿದ್ದಕ್ಕಾಗಿ ಮಾತ್ರ .....!!

Friday, January 4, 2013

ಹಕ್ಕಿ ಹಾಡುಆಸೆ ನಿರಾಸೆ
ಏನಾದರೂ ಕೊಡು ನೀನು
ದೀಪವೂ ನಿನ್ನದೇ ಗಾಳಿಯೂ ನಿನ್ನದೇ.


*      *    *

ಅದಿಲ್ಲ ಇದಿಲ್ಲ
ಇರುವುದು ನಮಗೆ ಬೇಕಿಲ್ಲ
ಇರದಿದುದರ  ಕಡೆಗೆ ತುಡಿವುದೇ ಜೇವನ.

*       *      *


ಬರುವೆಯೋ ಬಾರೆಯೋ
ಒಂಟಿ ಹಕ್ಕಿ ಹಾಡು
ಕಾಂತನಿಲ್ಲದ ಮೇಲೆ ಏಕಾಂತವ್ಯಾಕೆ..

*      *      *

ಸುಖ ದುಃಖ
ಒಂದನ್ನೇ ತೆಗೆದುಕೊಳ್ಳಲಾರೆ
ಯಾರಿಗಿಂಟು ಯಾರಿಗಿಲ್ಲ ಬಾಳೆಲ್ಲ ಬೇವುಬೆಲ್ಲ.

*     *      *

ಬಿಸಿ ಬೆಳಕು
ಪ್ರತೀಕ್ಷೆಯ ಹಣತೆ ನೀನು
 ತನುವು ನಿನ್ನದು ಮನವು ನಿನ್ನದು.

 *      *      *

ಪ್ರೀತಿ ಪ್ರೇಮ
ಕಡಿಮೆಯಿಲ್ಲ  ಕೊರತೆಯಿಲ್ಲ
ಯಾಕೋ ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆನ್ನ  ಮನಸು.

*       *      *

ಮಾತು ಮೌನ
ಎರಡೂ ಏನೋ ಎಂತೋ
ಬದುಕು ಮಾಯೆಯ ಮಾಟ ಮಾತು ನೆರೆತೆರೆಯಾಟ.

*        *        *

ಕರೆದಾಗ ಅವನು
ಹೋಗಲೇಬೇಕು  ನಾವು
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ..