Thursday, October 16, 2014

ಮಗೂ .. ಕಲಿಸು ನಿನ್ನಂತಾಗಲು....




ಕಲಿಸು ಮಗುವು  ನಗಲು
ನಿಷ್ಕಲ್ಮಶವಾಗಿ ;

ಕಲಿಸು ನಿನ್ನಂತೆ ನೋಡಲು
ವಿಸ್ಮಯವಾಗಿ;

ಕಲಿಸು  ನಿನ್ನಂತೆ  ಮನಸು
ಸ್ವಚ್ಚವಾಗಿ;

ಕಲಿಸು  ನಿನ್ನಂತೆ  ಬಿಸುಪು
ಆಪ್ತವಾಗಿ ;

ಕಲಿಸು ನಿನ್ನಂತೆ  ಭಾವ
ಶುದ್ಧವಾಗಿ ;

ಕಲಿಸು ನಿನ್ನಂತೆ ಆತ್ಮ
ಪರಿಶುದ್ದವಾಗಿ ;

ಕಲಿಸು ಮಗೂ   ಅತ್ತಾಗ
ಅಳಲು ;
ಕಲಿಸು  ಮಗೂ   ನಕ್ಕಾಗ
ನಗಲು ;



ನನಗೂ ಕಲಿಸು ಮಗೂ  ನಿನ್ನಂತೆ,
ಇದ್ದು ಬಿಡಲು  ನಾನು...   ನನ್ನಂತೆ .....










    


Wednesday, June 18, 2014

ನಿನ್ನ ಪ್ರೀತಿಗೆ ಚಿಯರ್ಸ್ ಅಪ್ಪ..!

ಎಷ್ಟೋ ದಿನಗಳಿಂದ ಮನಸಿನಲ್ಲಿ ಗೂಡು ಕಟ್ಟಿಕೊಂಡ ಮಾತುಗಳಿಗೆ ಹೊರಬರಲು ಒಮ್ಮೊಮ್ಮೆ ಒಂದು  ನೆಪ ಬೇಕಿರತ್ತದೆ.
 
ಅಪ್ಪನ ಬಗ್ಗೆ ಹಂಚಿಕೊಳ್ಳಲು ಬಂದ ಫಾಥೆರ್ಸ್ ಡೇ ನಂತೆ!

ಮೂರು ವರುಷದ ನನಗೆ ಮೂರು ಗಾಲಿಯ ಸೈಕಲ್ ತಂದು ಕೊಟ್ಟ ನನ್ನ  ಅಪ್ಪ..

ಯಾವ ಹೆಣ್ಣು ಮಗುವೂ  ಸೈಕಲ್ ತುಳಿಯದ ಊರಿನಲ್ಲಿ ಪ್ರೈಮರಿಯಲ್ಲಿ ನನಗಾಗಿ ಸೈಕಲ್ ಕೊಡಿಸಿದ ನನ್ನ ಅಪ್ಪ..

ಭಾಷಣ ಸ್ಪರ್ಧೆಗೆ ಬಿಳಿ ಹಾಳೆಯಲ್ಲಿ ಭಾಷಣ ಬರೆದುಕೊಡುತ್ತಿದ್ದ  ನನ್ನ ಅಪ್ಪ..

ನಾಟಕದ ಸಂಭಾಷಣೆಯನ್ನು ಹೇಳುವ ರೀತಿಯನ್ನು ನನಗೆ ಕಲಿಸಿಕೊಡುತ್ತಿದ್ದ  ಅಪ್ಪ...

ನನ್ನ ಜೊತೆ ಕ್ಯಾರೆಮ್ , ಶಟಲ್ ಆಡುತ್ತಿದ್ದ ಅಪ್ಪ ..

ನಾನು ತುಂಬಾ ತುಂಬಾ ಓದಬೇಕೆಂದು ಕನಸು ಹೊತ್ತು ಹೈಸ್ಕೂಲ್ ಗೆ  ಬೇರೆ ಊರಿನಲ್ಲಿ ಸೇರಿಸಿದ ನನ್ನ ಅಪ್ಪ.

ನನಗೆ ಸುಜುಕಿ ಬೈಕ್ ನ ತಾನೇ ಸ್ವಂತ ನಿಂತು ಕಲಿಸಿದ  ನನ್ನ ಅಪ್ಪ.

ಜೀಪ್ ಡ್ರೈವಿಂಗ್ ಕಲಿಸಿ ಕೀ ಕೈಗೆ ಇಡುತ್ತಿದ್ದ ನನ್ನ ಅಪ್ಪ.

ನನ್ನನ್ನು    ಸ್ಕೂಟಿ ಶೋ ರೂಂ ಗೆ ಕರೆದೊಯ್ದು ಬೇಕಾದ್ದು ಆರಿಸಿಕೋ ಅಂದ ನನ್ನ ಅಪ್ಪ.

ಊರಿಗಂತ ಹೊರಟರೆ ಬೆಳಗ್ಗೆ ೫ ಕ್ಕೇ ಎದ್ದು ರೆಡಿಯಾಗಿ  ಬಸ್ಸ್ಟ್ಯಾಂಡ್ ಗೆ ೧೦ ನಿಮಿಷ ಮುಂಚೆಯೇ ಕಾರು ತಂದು ಕಾಯುವ ನನ್ನ ಅಪ್ಪ ..

ಮೊನ್ನೆ ಮೊನ್ನೆ ಬಾಣಂತನದಲ್ಲಿ  ರಚ್ಚೆ ಹಿಡಿದು ಅಳುತ್ತಿದ ನನ್ನ ಮಗುವನ್ನು ದಿನವೂ ಮಲಗಿಸಿಯೇ ತಾನು  ಮಲಗುತ್ತಿದ್ದ ನನ್ನ ಅಪ್ಪ ...

ಭಾವನೆಗಳಿಗೆ, ಯೋಚನೆಗಳಿಗೆ, ಇಷ್ಟಗಳಿಗೆ ಯಾವತ್ತೂ ಬೆಲೆ ಕೊಡುತ್ತಿದ್ದ ನನ್ನ ಅಪ್ಪ..

ಚಿಕ್ಕಂದಿನಿಂದಲೇ ಅಯೈಕೆಯ ಸ್ವಾತಂತ್ರ್ಯವನ್ನು ನನ್ನ ಕೈಗಿತ್ತ ನನ್ನ ಅಪ್ಪ.




ಹೇಳಿದಷ್ಟೂ ಮುಗಿಯದ ಮಾತುಗಳಿವೆ .... , ಆದರೆ ಹೇಳಲೇ ಬೇಕಾದ ಇನ್ನೂ  ಒಂದು ಮಾತಿದೆ...

ಗೆಲುವ ಮಕ್ಕಳನ್ನು ದೂರದಿಂದ ನಿಂತು ನೋಡುವುದು , ಅವರಿಗೆ   ಸಪ್ಪೊರ್ಟಿವ್  ಆಗಿರೋದು ಸಹಜದ ಸಂತೋಷದ ವಿಷಯ..

ಆದರೆ ಸೋತ ಮಕ್ಕಳು ...?


 ಒಂದಷ್ಟು ಕಾಲದ ಮಿತಿಯೊಳಗೆ ಸರತಿಯಲ್ಲಿ ಸೋತ ಮಗು ನಾನು,  ಸೋತ ಮಗುವಿನಲ್ಲಿ ಆತ್ಮವಿಶ್ವಾಸವನ್ನು ಸೋಲಿಸಲ್ಲಿಲ್ಲ  ಅಪ್ಪ !

 ಎಂತಹ ದೊಡ್ಡ ಸೋಲನ್ನು ಹೊರಲಾರದೆ ಹೊತ್ತುಕೊಂಡು ಬಂದು ನಿಂತಾಗಲೂ  ಆತ್ಮ ವಿಶ್ವಾಸವನ್ನು ಕುಂದಿಸಲಿಲ್ಲ.

ಹಿಂದಿರುಗಿ ನೋಡಿದರೆ ಸೋತ ಸೋಲು ಅಲ್ಲೇ ಬಿದ್ದಿದೆ!ಹಾದಿ  ತುಂಬಾ ದೂರ ನಡೆದು ಬಂದಿದೆ.

ನನಗೆ ಹೇಳಬೇಕಾದ್ದೂ ಇದೇ,  ಮಕ್ಕಳ ಚಿಕ್ಕ ಪುಟ್ಟ ಸೋಲುಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಕುಂದಿಸಬಾರದು,  ಧೈರ್ಯವನ್ನು ಕೆಡಿಸಬಾರದು ,  ಸ್ವಲ್ಪ ಕೈ ಚಾಚಿದರೆ ಮತ್ತೆ ಚಿಗಿತು ಎದ್ದು ಮುಂದೆ ನಡೆಯಬಲ್ಲವು ನಮ್ಮ ಮಕ್ಕಳು,   ನಾವು ಕೈ ಚಾಚಬೇಕಷ್ಟೇ !

ಹಾಗೆ ಚಾಚಿದ ಎಷ್ಟೋ ಕೈಗಳ ಅಪ್ಪಂದಿರಿಗೆ ಹ್ಯಾಪಿ ಫಾಥೆರ್ಸ್ ಡೇ .  ಅವರು ನೆಟ್ಟ ಆತ್ಮ ವಿಶ್ವಾಸದ ಬಳ್ಳಿಗೆ, ಕೊಟ್ಟ ಧೈರ್ಯಕ್ಕೆ ,  ಇಟ್ಟ ಪ್ರೀತಿಗೆ ಚೀಯರ್ಸ್ ........