Friday, January 23, 2015

ಲೈಫ್ ಇಸ್ ಬ್ಯೂಟಿಫುಲ್ ...!!!!!

  




            ಮೊನ್ನೆ  ಪಾರ್ಲರ್ ಗೆ  ಹೋದಾಗ  ವರುಷಗಳಿಂದ ಪರಿಚಯವಿದ್ದ ಆಕೆ ಹೇಳಿದರು, 'Meternity Period ಲ್ಲಿ ಇದ್ದ್ರಿ ಅಲ್ಲ್ವ? ನಿಮ್ಮ ಮುಖ ತುಂಬಾ ಟ್ಯಾನ್ಆ ಗಿದೆ  facial  ಮಾಡಿಸಿಕೊಳ್ಳಿ'  ಅಂತ ,  'ಎಷ್ಟು ಟೈಮ್ ಆಗತ್ತೆ? '  ಅಂದೆ,  ಅವರಂದಿದ್ದು ಒಂದು ಘಂಟೆ.   ನನ್ನ ಬಳಿಯಲ್ಲಿ ಅಷ್ಟು ಸಮಯವಿರಲ್ಲಿಲ್ಲ. ನಾನಂದೆ, 'ಅರ್ಧಘಂಟೆಗೆ ಏನಿದಿಯೋ ಅದನ್ನು ಮಾಡಿ', ಅವರು ನಕ್ಕರು ಮತ್ತು ನಾನೂ ಅದರಲ್ಲಿ ಪಾಲುದಾರಳಾದೆ. 'ಟ್ಯಾನ್ ತಾನೇ? ಕ್ಲೀನ್ ಅಪ್ ಮಾಡಿಬಿಡಿ ಅರ್ಧ ಘಂಟೆ ಸಾಕಗತ್ತೆ'   ಅಂತ ನಾನೇ ಅಂದೇ, ಇಬ್ಬರೂ ಮತ್ತೆ ನಗುವನ್ನು ಶೇರ್ ಮಾಡಿಕೊಂಡೆವು. 

           ನನ್ನನ್ನು ಒಂದು ಈಸೀ  ಚೇರ್ ತರದ್ದರಲ್ಲಿ ಕೂರಿಸಿದರು,  ಎಲ್ಲದಕ್ಕೂ ಇದೇನು ಅದೇನು ಮತ್ತು ಯಾಕೆ ಅಂತ ಕೇಳುತ್ತಿದ್ದೆ.   ಮೊದಲು ಸ್ಕ್ರಬ್ ಅಂತೆ, ಮಸಾಜ್ ಅಂತೆ, ಸ್ಟೀಮ್ ಅಂತೆ ಏನೋ ಪ್ಯಾಕ್ ಹಾಕಿ ಕೂರಿಸಿದರು, ಮತ್ತೆ ಯೋಚಿಸುತ್ತ ಕುಳಿತೆ. ಓಹ್ ಚಂದವಾಗಿ ಕಾಣಿಸಬೇಕೆಂದರೆ ಇಷ್ಟೆಲ್ಲಾ ಮಾಡಬೇಕಾ?  ಸುಮ್ಮನೆ ಮೇಲಿಂದ ಓದಿಷ್ಟು ಕ್ರೀಂ ಪೌಡರ್ ಲೇಪಿಸಿಕೊಂಡರೆ  ಸಾಕಗಲಿಕ್ಕಿಲ್ಲ, ಮುಖ ಒಳಗಿನಿಂದ ಚೆಂದವಾಗಬೇಕಲ್ಲಾ!

         ಹಾಗೆ  ಮುಂದುವರಿಯಿತು ಯೋಚನೆ, ನಾವು  ಮುಖವನ್ನಷ್ಟೇ  ಚೆಂದವಾಗಿಸಿಕೊಂಡರೆ ಸಾಕಾದೀತ? ಆರೋಗ್ಯಕ್ಕೂ ಸೌಂದರ್ಯಕ್ಕೂ ತೀರ ಹತ್ತಿರದ  ಸಂಭಂದ.  ಒಳ್ಳೆಯ, ಮಿತವಾದ, ಶುದ್ದವಾದ, ಬೇಕಾದ ಮುಖ್ಯವಾಗಿ ಸಮತೋಲನ  ಆಹಾರವನ್ನೇ ಸೇವಿಸಬೇಕು.   ಒಳ್ಳೆಯ ಆಹಾರ ಒಳ್ಳೆಯ ಅರೋಗ್ಯ ಮತ್ತು  ಒಳ್ಳೆಯ ಸೌಂದರ್ಯಕೆ ಕಾರಣ.   ಮೊಳಕೆ ಕಾಳುಗಳು,  ಹಣ್ಣುಗಳು, ತಾಜಾ ತರಕಾರಿ ದೇಹದಲ್ಲಿ ಸೇರಿದಾಗ ಶಕ್ತಿಯಾಗಿ ಪರಿವರ್ತನೆಯಾಗಿ ನವ ಚೈತನ್ಯವನ್ನು ತುಂಬಿಸುತ್ತದೆ, ಮೈಕಾಂತಿ ನಳನಳಿಸುತ್ತದೆ, ಬೇಡದ ವಿಷಯುಕ್ತ ಪದಾರ್ಥ ಗಳನ್ನ ನಮ್ಮ ದೇಹ ನಿಯಮಿತವಾಗಿ ಹೊರಹಾಕಬೇಕು. ಮುಖದಿಂದ ಕೊಳೆ ತೆಗೆಯುವಂತೆ ದೇಹದಿಂದಲೂ ಕೊಳೆ ತೆಗೆಯಬೇಕು ಅದಕ್ಕೆ ಚೆನ್ನಾಗಿ  ನೀರು ಕುಡಿಯಲೇ ಬೇಕು, ಆರೋಗ್ಯವೇ ಸೌಂದರ್ಯ.

           ಅಂತನ್ನಿಸುವಷ್ಟರಲ್ಲಿ  ಮತ್ತೊಂದು ಯೋಚನೆ ನಂಗೆ, ಅರೆ! ಬರೀ ದೇಹ ಆರೋಗ್ಯವಾಗಿದ್ದರೆ ಸಾಕಾ? ರೋಗಗೃಸ್ಥ ಮನಸ್ಸಿದ್ದರೆ!? ದೇಹದ ಆರೋಗ್ಯಕ್ಕೂ ಮನಸಿನ ಆರೋಗ್ಯಕ್ಕೂ ನೇರ ಸಂಭಂದವಿದೆ.  ಉಹುಮ್ಮ್ ಮುಖ್ಯವಾಗಿ ನಮ್ಮ ಮನಸ್ಸು ಅತೀ ಆರೋಗ್ಯವಾಗಿರಬೇಕು. ಚೆಂದದ ಒಳ್ಳೆಯ ಬೇಕಾದ ಮುಖ್ಯವಾದ ವಿಷಯಗಳನ್ನ ಮನಸೊಳಗೆ ಭಾವ ಬಿತ್ತಿಯೊಳಗೆ ತುಂಬಿಸಿಕೊಳ್ಳಬೇಕು. ಎಲ್ಲದರಲ್ಲೂ ಸುಂದರವಾದದ್ದನ್ನೇ ಸಕಾರಾತ್ಮಕವಾದದ್ದನ್ನೇ ಕಾಣಬೇಕು.   ಮುಖಕ್ಕೆ ಸ್ಕ್ರಬ್ ನಂತೆ  ಸಮಸ್ಯೆಗಳೇ ಸವಾಲುಗಳು, ಸವಾಲುಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಳ್ಳುವಷ್ಟು ಆರೋಗ್ಯ ಇರಬೇಕು ಮನಸ್ಸಿನಲ್ಲಿ.  ನಮ್ಮ ಸುತ್ತಲೂ ಒಂದು  ಸಕಾರಾತ್ಮಕ ಎನರ್ಜಿ ಸುತ್ತುತ್ತಿರಬೇಕು. ಬೇಡದ ನಿರುಪಯುಕ್ತ ವಿಷಯುಕ್ತ ನಮ್ಮ ಮನಸ್ಸಿನ ಶಕ್ತಿಯನ್ನೇ ಕಸಿದುಕೊಳ್ಳುವ ವಿಷಯಗಳನ್ನು ಮನಸಿನಿಂದ ಹೊರಗಟ್ಟಬೇಕು, ಒಂದು ಆರೋಗ್ಯ, ಸಮತೋಲನ  ಮನಸು ನಮ್ಮದಾಗಿರಬೇಕು.

            ನಂಗೆ ಯಾವತ್ತೋ ಓದಿದ stephen hawkings scintist ಬಗ್ಗೆ  ನೆನಪಾಯಿತು.  ಬ್ಲಾಕ್ ಹೋಲ್ಸ ಬಗ್ಗೆ ನಡಿಸಿದ ಇವರ ಸಂಶೋಧನೆ hawkings ರೇಡಿಯೇಶನ್ ಎಂತಲೇ ಪ್ರಸಿದ್ದಿಯಾಗಿದೆ. 'ಲೈಫ್ ಇಸ್ ಬ್ಯೂಟಿಫುಲ್ ನಾನು ತುಂಬಾ ಅದೃಷ್ಟವಂತ' ಎನ್ನುವ ಇವರಿಗೆ ಇದ್ದಿದ್ದು   Motor  Neuron ಎಂಬ ಖಾಯಿಲೆ.  ಕೈ ಕಾಲು, ದೇಹ ಯಾವುದೂ ಇವರ ಸ್ವಾದೀನದಲ್ಲಿರಲ್ಲ. ಹಾಗೆ  ದಶಕಗಟ್ಟಲೆ ಗಾಲಿ ಖುರ್ಚಿಯಲ್ಲಿ ಜೀವಿಸಿದ್ದರು.  ಮನಸಿನ ಆರೋಗ್ಯ ಹಾಗೂ ಸೌಂಧರ್ಯ ಹೊಂದಿರುವವವರು ಯಾರೇ ಆಗಿರಲಿ, ಎಲ್ಲೇ ಇರಲಿ, ಯಾವುದೇ ಪರಿಸ್ತಿತಿಯ ತೆಕ್ಕೆಯಲ್ಲಿರಲಿ,  'ಲೈಫ್ ಇಸ್ ಬ್ಯೂಟಿಫುಲ್'  ಅನ್ನಬಲ್ಲವರಾಗಿರುತ್ತಾರೆ.  ಹಾಗಂದವರ,  ಅನ್ನಿಸಿದವರ ಲೈಫ್ ಸುಂದರವಾಗಿರುತ್ತದೆ ಎಂದು ಅಲ್ಲವೇ ಅಲ್ಲ, ಆದರೆ  ಅದನ್ನು ನೋಡುವ ಅವರ ಮನಸ್ಥಿತಿ ಸುಂದರವಾಗಿರುತ್ತದೆ ಅಷ್ಟೇ.

    'ಆಗೋಯಿತು  ಮೆಡೆಮ್,   ಏನ್ ಯೋಚಿಸ್ತಾ ಇದ್ದೀರಾ'  ಎಂದರು ನನ್ನ ಸುಂದರವಾಗಿಸಲು ಇಷ್ಟಪಟ್ಟಾಕೆ . ದುಡ್ಡಿನೊಂದಿಗೆ ನಗುವನ್ನು ವಿನಿಮಯಿಸಿಕೊಂಡು  ಅಲ್ಲಿಂದ ಹೊರಟೆ.

              ಪಾರ್ಲರ್ನಲ್ಲಿ ಆದ ನನ್ನ ಜ್ನ್ಯಾನೋದಯಕ್ಕೆ ನಾನೇ ನಗುತ್ತಾ ಮೆಟ್ಟಿಲಿಳಿದೆ.  ಮುಖ ಕ್ಲೀನ್ ಮಾಡಿಸಿಕೊಂಡಾಗಿತ್ತಲ್ಲಾ?    ಸ್ಕೂಟಿಗೆ ಕೀ ಚುಚ್ಚಿಕೊಳ್ಳುತ್ತ  ಚಂದವಾಗಿದ್ದೆನೆಯೇ? ಎಂದು ಕನ್ನಡಿಯನ್ನೊಮ್ಮೆ  ನೋಡಿದೆ, ನಾನು ಮತ್ತು ಕನ್ನಡಿ ಒಂದು ಮುದ್ದಾದ ನಗುವನ್ನು ವಿನಿಮಯ ಮಾಡಿಕೊಂಡೆವು. ಸೀಟ್  ಹತ್ತಿ ಕುಳಿತು ನನ್ನ ಸ್ಚೂಟಿಗೆ, 'ಹೊರಡೋಣವಾ ..?'   ಅಂದೆ.   ಸ್ಕೂಟಿ ನಕ್ಕಂತಾಯಿತು 😊

( stephen hawkings ಬಗ್ಗೆ ಹೆಚ್ಚಿನ ಮಾಹಿತಿಗಾಗಿ
www.hawking.org) 
  


Wednesday, January 14, 2015

ಒಂದು ಮುಗುಳ್ನಗುವಿನಲ್ಲಿ ...!





         
            
ನಾಲ್ಕು ವರ್ಷಗಳ ಹಿಂದೆ ..


ಅವತ್ತು ಸಂಜೆ ಆರಕ್ಕೆಲ್ಲ ಹನಿ ಮಳೆ ಶುರುವಿಟ್ಟಿತ್ತು.  ನಾನು ಬೆಂಗಳೂರಿಂದ ನಿಟ್ಟೂರಿಗೆ ಹೊರಟಿದ್ದೆ.  ನಾನು ಹೊರಡಲಿರುವ ಬಸ್ ಶೇಷಾದ್ರಿಪುರಂ ಮತ್ತು ಬನಶಂಕರಿ ಎರಡು ಬೋರ್ಡಿಂಗ್ ಪಾಯಿಂಟ್ ಇತ್ತು.  ನಮ್ಮ ಮನೆಗೆ ಬನಶಂಕರಿ ಹತ್ತಿರ ಮತ್ತು ಒಂದೇ ಬಸ್ ಆಗಿದ್ದರಿಂದ ನಾನು ಬನಶಂಕರಿ ಸ್ಟಾಂಡನ್ನೇ ಆಯಿಕೆ ಮಾಡಿದ್ದೆ. ಆರಕ್ಕೆ ಮಾರತ್ಹಳ್ಳಿಯಲ್ಲಿ ವೋಲ್ವೋ ಬಸ್ ಹತ್ತಿದ ನನಗೆ  8.30ಕ್ಕೆ ಬನಶಂಕರಿ ತಲುಪಿದ್ದರೂ ಸಾಕಾಗಿತ್ತು.  ಒಂದು ಕೈಯಲ್ಲಿ ದೊಡ್ಡ ಬ್ಯಾಗ್  ಮತ್ತು ಇನ್ನೊಂದು ಕೈಯಲ್ಲಿ ನನ್ನ  3 ವರ್ಷದ ಪುಟ್ಟ ಮಗಳು.  ಬಸ್ಸು ಹತ್ತಿದ್ದ ಹಾಗೆಯೇ ಇದ್ದಕ್ಕಿಂದ್ದಂತೆ ಮಳೆ ತುಂಬಾ ಜೋರೆ ಆಯಿತು.  ಎಷ್ಟು ಟ್ರಾಫಿಕ್ ಅಂದ್ರೆ  ಬೆಳಂದೂರ್ ದಾಟೋದು 8 ಆಯಿತು.  ನಂಗೆ ಕ್ಷಣ ಕ್ಷಣಕ್ಕೋ ಟೆನ್ಶನ್, ಏನ್ ಮಾಡೋದು? 8.30 ರ  ಒಳಗೆ ಬನಶಂಕರಿ    ಮುಟ್ಟುವ ಯಾವ ಸಾಧ್ಯತೆಯೂ ಇರಲ್ಲಿಲ್ಲ.  ತಕ್ಷಣ ನನ್ನ ಪ್ಲಾನ್ ಚೇಂಜ್  ಮಾಡಿ ಸಿಲ್ಕ್ ಬೋರ್ಡಲ್ಲಿ ಇಳಿದು ಅಲ್ಲಿಂದ ಆಟೋ ತಗೊಂಡು ಶೇಷಾದ್ರಿಪುರಂ ಗೆ ಹೋಗೋ ಯೋಚನೆ ಮಾಡಿದೆ.
ನನ್ನ  ಟೆನ್ಶನ್, ಕೈಯಲ್ಲಿ ದೊಡ್ಡ ಬ್ಯಾಗ್, ಜೊತೆಯಲಿ ಪುಟ್ಟ ಮಗು, ಅದರ ಅಳು, ನಗು ಜೊತೆಗೆ ನೂರು ಪ್ರಶ್ನೆಗಳು.   ಅಂತೂ ನಾನು ಇನ್ನೊಂದು ಬಸ್ ಕ್ಯಾಚ್ ಮಾಡಲಿಕ್ಕಿದೆ ಎನ್ನುವ ವಿಷಯ ಕಂಡಕ್ಟರ್, ಡ್ರೈವರ್ ಮತ್ತು ಅಲ್ಲಿರುವ  3-4 ಜನಕ್ಕೆ ಗೊತ್ತಾಗಿ ಹೋಯಿತು.  ಒಬ್ಬರು ಮದ್ಯ ವಯಸ್ಸಿನ ಮಹಿಳೆ ಅವರು  ಯಾವೊದೋ IT ಕಂಪನಿಯ ಮ್ಯಾನೇಜರ್ ಇರಬಹುದು ಏನ್ನುವುದು  ನನ್ನ ಅನಿಸಿಕೆ ..., ಮೇಲಿಂದ ಮೇಲೆ ನೆರವಾದ ಪ್ರಶ್ನೆಗಳನ್ನು ಕೇಳೋದಿಕ್ಕೆ ಶುರುವಿಟ್ಟುಕೊಂಡರು ಯಾಕೆ ಒಬ್ಬಳೇ ಬಂದಿದ್ದು,  ಯಾಕೆ ಈ ದಾರಿ etc , etc ..., ಉತ್ತರಿಸುವ ಅಗತ್ಯ ತಾಳ್ಮೆ ಎರಡೂ ನನ್ನಲ್ಲಿರಲ್ಲಿಲ್ಲ.  ಏನೋ ಸ್ವಲ್ಪ ನಿರಾಸಕ್ತಿಯಿಂದ ಚುಟುಕಾಗಿ ಉತ್ತರಿಸುತ್ತಿದ್ದೆ, ಆಕೆ ಬನಶಂಕರಿಗೆ ಟಿಕೆಟ್ ಕೊಂಡಿದ್ದು ನಂಗೆ ಗೊತ್ತಿತ್ತು.
ಸಿಲ್ಕ್ ಬೋರ್ಡ್ ಬರ್ತಿದ್ದ ಹಾಗೇ  ಆಕೆ ನನ್ನ ಬ್ಯಾಗ್ ಗೆ ಥಟ್ ಅಂತ ಕೈ ಹಾಕಿದ್ದರು. ತಮ್ಮದೆನ್ನುವಂತೆ ಸುಲಭವಾಗಿ ಕಾಳಜಿಯಿಂದ ಹೆಗಲಿಗೇರಿಸಿಕೊಂಡು ಇಳಿದುಬಿಟ್ಟರು, ನಾನು ಸವಾರಿಸಿಕೊಳ್ಳುತ್ತ ಇಳಿದೆ, ಸಿಲ್ಕ್ ಬೋರ್ಡ್ ಜಂಕ್ಷನ್ ಅದು  6 ರೋಡ್ ಸೇರುವ ಜಾಗ, ನನ್ನ ಅಂಗೈಯನ್ನು ತಮ್ಮ ಬೆಚ್ಚನೆ ಅಂಗೈಯಲ್ಲಿ ಗಟ್ಟಿಯಾಗಿ ಹಿಡಿದು ರೋಡ್ ಕ್ರಾಸ್ ಮಾಡೇ ಬಿಟ್ಟರು , ಮತ್ತು ನನ್ನನ್ನು ಆಟೋ ಸ್ಟಾಂಡಿಗೆ ಬಿಟ್ಟು, ಇದು ತಮ್ಮ ಕೆಲಸವೇನೋ ಅನ್ನುವಷ್ಟು ಸಹಜವಾಗಿ ಮತ್ತೆ ಅದೇ ಓಡು ನಡಿಗೆಯಲ್ಲಿ ನಡೆದೇ ಬಿಟ್ಟರು, ನಂಗೆ ಅವರ ಹೆಸರು ಕಾಂಟ್ಯಾಕ್ಟ್ ನಂಬರ್ ಕೂಡ ತೆಗೆದುಕೊಳ್ಳಲು ಸಮಯವಿರಲ್ಲಿಲ್ಲ !
ಅವತ್ತು ಅವರಷ್ಟೇ ಅಲ್ಲ , ನನ್ನ ಪಾಲಿಗೆ ಅಲ್ಲಿಂದ ಎಲ್ಲವೂ ನೆನಪನ್ನು ಸುಂದರವಾಗಿಸುವಂತಹ ಘಟನೆಗಳೇ! ಒಂದೇ ಒಂದು ಆಟೋನೂ ಬರಲ್ಲಿಲ್ಲ, ಬಂದ ಆಟೋ ಖಾಲಿ ಇಲ್ಲ,  ಖಾಲಿ ಆಟೋ  ಶೇಷಾದ್ರಿಪುರಂಗೆ ಬರಲು ಒಪ್ಪುತ್ತಿಲ್ಲ, ಕೊನೆಗೂ ಒಂದು ಆಟೋ ನಿಲ್ಲಿಸಿದ ಖುಷಿಗೆ ಓಡಿದಾಗ ಅದು ನಿಲ್ಲಿಸಿದ್ದು ನನಗಾಗಿ ಅಲ್ಲ, ನನಗಿಂತ ಕ್ಷಣ ಮುಂಚೆ ಒಂದಿಬ್ಬರು ಭುರ್ಖ  ಹಾಕಿದ ಹೆಂಗಸರು ಜೊತೆಗೊಬ್ಬ ಗಂಡಸು,   ಓಹ್ ಈ ಆಟೋ ಸಿಗದ್ದಿದ್ದರೆ ನಾನು ಬಸ್ ತಲುಪುವುದು ಸಾದ್ಯವೆ ಇರಲಿಲ್ಲ. ತಕ್ಷಣ ಅವರಿಗೆ ವಿಷಯ ವಿವರಿಸಿದೆ, 'ನಂಗೆ ಮತ್ತೊಂದು ಬಸ್ ಕ್ಯಾಚ್ ಮಾಡಲಿಕ್ಕಿದೆ. ನಾನು ಹೊಗಲಾ ನಿಮ್ಮ ಅಭ್ಯಂತರವಿಲ್ಲದಿದ್ದರೆ?'  ಅಂದೆ, ಏನೋ ಮಾತಾಡಿಕೊಂಡು ಅವರು ಅವರು ಹಿಡಿದ ಆಟೋವನ್ನು ನನಗೆ ಬಿಟ್ಟಿದ್ದರು !! ಏನಿತ್ತೋ ಅವರ ಅವಶ್ಯಕತೆ!?  ಎಲ್ಲರಿಗೂ ಅವರವರ ಅವಶ್ಯಕತೆ ಅಷ್ಟೇ ಮುಖ್ಯ !
ಆಟೋ ಹತ್ತಿ ಕುಳಿತಾಗಿತ್ತು, ದುಡ್ಡು ಮಾತಾಡಿರಲ್ಲಿಲ್ಲ, ನನ್ನ ತೀರ ಅವಶ್ಯಕತೆ ಆಟೋವಾಲನಿಗೆ ಗೊತ್ತಾಗಿಬಿಟ್ಟಿತ್ತು, ಮಳೆ ಬೇರೆ, ರಾತ್ರಿ ಬೇರೆ, ಅವನು ಎಷ್ಟು ದುಡ್ಡು ಬೇಕಾದರೂ ಕೇಳುವ ಎಲ್ಲಾ ಸಾಧ್ಯತೆಯೂ ಇತ್ತು, ನನಗೆ ಕೊಡಲು ಕಾರಣವೂ ಇತ್ತು ಮತ್ತು ಬೇರೆ ಆಯಿಕೆ ನನ್ನಲ್ಲಿರಲಿಲ್ಲ. ಮತ್ತೆ ನನಗೆ ಟೆನ್ಶನ್, ಬಸ್ಸಿನ ಟೈಮ್ ಹೇಳಿ ತಲೋಪಾಗುತ್ತ ಅಂತ ಮದ್ಯ ಮದ್ಯ ಕೇಳುತ್ತಿದ್ದೆ , ಅವನು ತನಗೇ ಬಸ್ ತಪ್ಪಿ ಹೋಗುತ್ತೇನೋ ಅನ್ನುವಷ್ಟು ಕಾಳಜಿಯಿಂದ ನನ್ನನ್ನು ಕರೆದುಕೊಂಡು ಹೋಗಿದ್ದ .., ಫೈನಲಿ ಐ ರೀಚಡ್ ! ಅಂಡ್ ಬಸ್ ಕೂಡ ಹೊರಟಿರಲ್ಲಿಲ್ಲ, ಹೊರಡುವುದರಲ್ಲಿತ್ತು. ಏನಪ್ಪಾ ಇವನು ಎಷ್ಟು ಕೇಳುತ್ತಾನೆ ಎಂದುಕೊಂಡು  'ಎಷ್ಟಾಯಿತು ?' ಕೇಳಿದರೆ ಅವನು ಆ ಮಳೆಯಲ್ಲಿ, ಆ ರಾತ್ರಿಯಲ್ಲೂ ಮೀಟರ್ ಹಾಕಿದ್ದ, ನನಗಿದ್ದ ಟೆನ್ಷನ್ನಿಗೆ ನಾನು ಗಮನಿಸಿರಲ್ಲಿಲ್ಲ, ಮೀಟರಗಿಂತ  ಸ್ವಲ್ಪ ಜಾಸ್ತಿ ಕೊಡದೇ ಇರಲು ನನಗೆ ಸಾದ್ಯವೇ ಇರಲ್ಲಿಲ್ಲ. ಒಳ್ಳೆಯದನ್ನು ಯಾವ ರೀತಿಯಿಂದಾದರೂ ಪ್ರೋತ್ಸಾಹಿಸಬೇಕು ಮತ್ತದು ಸಾಂಕ್ರಮಿಕವಾಗುತ್ತದೆ ಎನ್ನುವ ಬಲವಾದ ನಂಬಿಕೆ ನನ್ನದು. ಆಟೋ ನಿಲ್ಲಿಸಿ,ಇಳಿದು ನನ್ನ ದೊಡ್ಡ ಬ್ಯಾಗನ್ನು ರೋಡ್ ಕ್ರಾಸ್ ಮಾಡಿಸಿ ತಂದು ಕೊಟ್ಟ. ಬಸ್ ಹತ್ತಿ ಕುಳಿತು ಹಾಗೇ ಒಮ್ಮೆ ಕಣ್ ಮುಚ್ಚಿದೆ.  ಬಸ್ ಸಿಕ್ಕಿದ ಖುಷಿಗೆ ಮುಗುಳ್ನಗುವೊಂದು ತುಟಿಯ ಮೇಲೆ ಬಂದು ಕುಳಿತಿತ್ತು.
ಬಹುಶಃ ನಂಗೆ ಅವತ್ತು ಬಸ್ ಸಿಗದಿದ್ದರೆ ಏನೂ ಆಗುತ್ತಿರಲ್ಲಿಲ್ಲ, ವಾಪಾಸ್ ಮನೆಗೆ ಬರುತ್ತಿದ್ದೆ ಅಷ್ಟೇ !! ನಂಗೆ ಅದು ಅಷ್ಟು ಮುಖ್ಯವೂ  ಅಲ್ಲ, ಅಥವ ಸೀದಾ ಬಸ್ ಸಿಕ್ಕಿದ್ದರೂ ನಾನೊಂದಿಷ್ಟು ಒಳ್ಳೆಯ ಅನುಭವಗಳನ್ನು ಕಳೆದುಕೊಳ್ಳುತ್ತಿದ್ದೆ. ಆದರೆ ಅವತ್ತಿನ ನನ್ನ ಅನುಭವ ನನ್ನನ್ನು ಮತ್ತಷ್ಟು ಶ್ರೀಮಂತವಾಗಿಸಿದೆ.
ಸಿಹಿ ಅನುಭವಗಳು ಸುಂದರವಾಗಿ ಕುಳಿತಿವೆ ಸಾಕಷ್ಟು!  ನನ್ನ ಹಿರೊಯಿನ್ನನಂತ ಸ್ಕೂಟಿಯನ್ನು ಪಾರ್ಕ್ ಮಾಡಿ ಹೋಗಿರುತ್ತೇನೆ, ಹಿಂದುರುಗಿ ಬಂದು ನೋಡಿದರೆ ಅದರ ಹಿಂದೊಂದು ಗಡವನಂತ ಬೈಕ್ ಬಂದು ನಿಂತುಕೊಂಡಿರುತ್ತದೆ, ನಾನು ಮಾಡೋದಾದರೂ ಏನು? ಎತ್ತಿಡಲೂ ಆಗದೆ ಸುಮ್ಮನಿರಲೂ ಆಗದೆ ಪೆಚಾಡುವಾಗ ಯಾರೋ ಸಹಾಯಕ್ಕಿಳಿಯುತ್ತಾರೆ. ಅಂಗಡಿಯಲ್ಲಿ ಮರೆತ ಪರ್ಸನ್ನು ಅಂಗಡಿಯಾತ ನೆನಪಿಸುತ್ತಾನೆ.  ಸೆಕ್ಯೂರಿಟಿಯ ಕರ್ತವ್ಯದಲ್ಲೂ ಮನುಷತ್ವದ ಲೇಪ ಕಾಣುತ್ತೇನೆ, ಕಾರನ್ನೋ, ಸ್ಕೂಟಿಯನ್ನೋ ಡ್ರೈವ್ ಮಾಡುವಾಗ  ಇನ್ನ್ಯಾರೋ ಸಡನ್ ಆಗಿ ನುಗ್ಗಿ ಬಂದರೆ  ಇಬ್ಬರ ಮುಗುಳ್ನಗೆಯೇ ಸ್ಸಾರಿಯಾಗುತ್ತದೆ.
ಅಂತ  ಕ್ಷಣಗಳೆಲ್ಲ ಸುಂದರವಾಗುತ್ತದೆ, ಸುಂದರವಾದ ಮುಗುಳ್ನಗು ತುಟಿಯಲ್ಲಿ ಬಂದು ಕುಳಿತಿರುತ್ತದೆ ನಾ ನಗುವ ಮೊದಲೇ. ಒಮ್ಮೆ ಅರ್ಜುನ ಮತ್ತು ಕೃಷ್ಣ  ಪ್ರಯಾಣಿಸುವ ವೇಳೆ ಒಬ್ಬ ಬಡ ರೈತ ಮುದುಕನಿಗೆ ಸಹಾಯಿಸುತ್ತಾರೆ.
ಅರ್ಜುನನೆನ್ನುತ್ತಾನೆ,  'ಶ್ರಮ್  ಕರನೇ ಸೆ ಶಕ್ತಿ ಬಡಗಯಿ ಕೃಷ್ಣ'  ಕೃಷ್ಣನೆನ್ನುತ್ತಾನೆ, 'ನಹಿ ಅರ್ಜುನ್, ಸಹಾಯತಾ ಕರನೇ ಸೆ ಶಕ್ತಿ ಬಡಗಯಿ'.
ಗೇಟ್ ಹತ್ತಿರವೇ ನಿಂತಿದ್ದೆ, ಸೊಪ್ಪು ಮಾರುತ್ತ ಒಬ್ಬ ಅಜ್ಜಿ ಬಂದರು, ರಾಶಿ ತರಕಾರಿ ಇತ್ತು ಸೊಪ್ಪು ಬೇಕಿರಲ್ಲಿಲ್ಲ. ಅಜ್ಜಿ ಬಸವಳಿದಂತೆ ಕಾಣುತ್ತಿದ್ದರು .., ನೀರು ಬೇಕಾ ಕೇಳಿದೆ. ಹುಮ್ಮ್ ಅಂದರು, ಒಳಗೆ ಹೋಗಿ ಒಂದು ಖಾಲಿ  ಬಿಸ್ಲೇರಿ ಬಾಟಲಿಯಲ್ಲಿ ನೀರು ತುಂಬಿ ಈ ಬಾಟಲಿಯನ್ನು ಇಟ್ಟುಕೊಳ್ಳಿ ಅಂತ ಕೊಟ್ಟೆ. ಅಜ್ಜಿಗೆ ತುಂಬಾ ಖುಷಿಯಾದಂತೆ ಅನಿಸಿತ್ತು. ಅಜ್ಜಿಗೆ ಬಾಯಾರಿಕೆ ತಣಿದಿರಬಹುದು, ಮತ್ತೆ ಬಯಾರಿದರೆ ಬಾಟಲಿಯಲ್ಲಿ ನೀರು ಮಿಕ್ಕಿರಬಹುದು, ನೀರನ್ನು ತುಂಬಿಸಿಕೊಳ್ಳಲು ತಿಂಗಳ ತನಕ ಆ ಬಾಟಲಿಯೂ ಲಭ್ಯವಿರಬಹುದು .., ಅದಕ್ಕಿಂತ ಹೆಚ್ಚಾಗಿ ಆ ಜೀವಕ್ಕೆ ಚಿಕ್ಕದೊಂದು ಸಿಹಿಯ ತಂಪಿನ ಭಾವ ಅಲೆ ಅಲೆಯಾಗಿ ಮನಸ್ಸನ್ನು ಆವರಿಸಿಕೊಂಡಿರಬಹುದು,  ಮನಸಿಗೆ ಒಂದಷ್ಟು  ಸ್ಪೂರ್ತಿ ಹುಮ್ಮಸ್ಸು ತಂದಿರಬಹುದು, ಮನಸ್ಸಿನ ಭಾವ ಸಿಹಿಯಾಗಿರಬಹುದು.
ಮತ್ತು ..

ಅದು ನನ್ನ ಇವತ್ತಿನ ಮುಗುಳ್ನಗುವಾಗಬಹುದು  :) ಮತ್ತದು ಸಾಂಕ್ರಮಿಕವಾಗಲೂಬಹುದು  :) :)