Wednesday, September 11, 2013

ಹೇಳು ಪುರುಷೋತ್ತಮ ..



 ಹೆಂಡತಿಯ ಪಾವಿತ್ರ್ಯಕ್ಕೆ
 ಬೆಂಕಿಯೇ  ಬೇಕಿತ್ತಾ ?
 ಸೀತೆಯ ಸತ್ಯದ ಮೇಲೂ 
 ಶಂಕೆಯಾ  ನಿನಗೆ !?

 ಅಗಸನಂದ  ಮಾತಿಗೆ  
 ಲೋಕದ ಮೆಚ್ಚುಗೆಗೆ 
 ಸೀತೆಯ ಮಾನ ಅಭಿಮಾನ 
 ಸ್ವಾಭಿಮಾನವೇ ಅಹುತಿಯಗಾಬೇಕಿತ್ತಾ ..!?

 ಕೇಳು  ಮರ್ಯಾದ ಪುರುಷ
 ಅಗಸನಂದ  ಮಾತಿಗೆ ಬೇಸರಿಸಲಿಲ್ಲ ಅವಳು!
 ಘಾಸಿಯಾಗಿದ್ದು  ನಿನ್ನ ಪರೀಕ್ಷಗೆ
 ಅದರ ಒಳ ಸೆಳಕುಗಳ ಅರ್ಥಗಳಿಗೆ !!


ನೀನನ್ನಬಹುದು
ಸೀತೆಯ ಪಾವಿತ್ರ್ಯ ಸಾಬೀತಾಯಿತೆಂದು !
  ಹೆಣ್ಣನ್ನು ಶಂಕಿಸಬಹುದು
ಅಗ್ನಿಪರೇಕ್ಷೆಗೊಡ್ಡ ಬಹುದು  ಎಂಬುದೂ ಸಹ  !!


ಗೊತ್ತಾ ನಿನಗೆ ..?
 ಸೀತೆ ಪವಿತ್ರೆ , ಆಕೆಯ ಮಾತೆ ಸಾಕು
 ಸಾಕ್ಷಿ ಶಂಕೆಯ ಅಂಕೆ ಬೇಡವೆಂದಿದ್ದರೆ ನೀನು
 ಅದು ನಿಜದ ಆದರ್ಶವಾಗುತ್ತಿತ್ತಲ್ಲೋ  ಜಗಕೆ !







Tuesday, June 11, 2013

ಅವರ ಹೊಟ್ಟೆ ಯಾವತ್ತೂ ತಣ್ಣಗಿರಲಿ ...

     

    
     
ಮೊದಲೆಲ್ಲಾ  ನಾನೂ ಹಾಗೆ ಮಾಡುತ್ತಿದ್ದೆ,  ಮನೆ ಮುಂದೆ ಬಂದ  ತರಕಾರಿ ಮಾರುವವನ  ಗಾಡಿಯಲ್ಲಿರುವ ಟೊಮೇಟೊವನ್ನು ಮುಟ್ಟಿ  ಮುಟ್ಟಿ  ಪರಿಶೀಲಿಸಿ ತೆಗೆದುಕೊಳ್ಳುತ್ತಾ , ' ಯಾಕ್ರೀ ಅಂಗಡಿಯಲ್ಲಿ ಇಷ್ಟು ನಿಮ್ದ್ಯಾಕ್ರೀ   1  ರುಪಾಯೇ ಜಾಸ್ತಿ ? ಎನ್ನುತ್ತಿದ್ದೆ ,  ಎಳನೀರು ಹೊಟ್ಟೆ ತುಂಬಾ ಕುಡಿದು ಯಾಕೆ ಒಂದು ರುಪಾಯೀ ಜಾಸ್ತಿ ಪಕ್ಕದ ಬೀದಿಯಲ್ಲಿ ಕಡಿಮೆ ? ಎನ್ನುತ್ತಿದ್ದೆ ,  ಸಿಗ್ನಲ್ಲಿ ಪೆರೆಲೆ ಕಾಯಿಯೂ ಮಾವಿನ ಕಾಯಿಯೋ  ಬಂದರೆ 1೦ ರುಪಾಯಿಗೆ 3 ರೆನಾ? 4 ಕೊಡಿ ಎನ್ನುತ್ತಿದ್ದೆ, ಹೀಗೆ  ಚೌಕಾಸಿ ಮಾಡುವುದು  ಅದೇನೋ  ರೂಢಿಗತವಾಗಿಬಿಟ್ಟಿತ್ತು .
ಆದರೆ  ಒಮ್ಮೆ ಯೋಚಿಸಿ ನೋಡೋಣ, ತರಕಾರಿ  ತರುವವನು ಬೆಳಗ್ಗೆ 3 ಗಂಟೆಗೆ ಎದ್ದು, ಸೈಕಲ್ ತುಳಿದು, ಯಶವಂತ ಪುರ ಮಾರ್ಕೆಟ್ಗೋ, HAL ಗೋ  ಅಥವ ಇನ್ನೆಲ್ಲೋ  ಮೈಲುಗಟ್ಟಲೆ ಹೋಗಿ, ತರಕಾರಿ ತಂದು, ಮತ್ತೆ ಅದನ್ನು ಪ್ರತಿ ಮನೆ ಮನೆಗೂ ಮಾರಿ, ಅವರ ಉಲ್ಟಾ ಪಲ್ಟ ಮಾತನ್ನೂ  ಕೇಳಿಸಿಕೊಂಡು,  ಅಷ್ಟಕ್ಕೂ ಅವರಿಗೆ ಸಿಗುವ  ಲಾಭದ ಪರಿಮಾಣವಾದರೂ ಎಷ್ಟು ?   kg ಗೆ ಒಂದು ರುಪಾಯೀ? ಎರಡು ರುಪಾಯೀ ? ಬೇಡ 3 ರುಪಾಯೀ ? ಎಳನೀರಾತನಿಗೆ ಸಿಗುವ ಲಾಭವಾದರೂ ಎಷ್ಟಿದ್ದೀತು?  ಸಿಗ್ನಲ್ಲಲ್ಲಿ ಪೆರೆಲೆ ಕಾಯಿಯನ್ನೊ ಮಾವಿನಕಾಯಿಯನ್ನೋ  ಮಾರುವವರ ಲಾಭದ ಪರಿಮಾಣ ಎಷ್ಟು ಪೈಸೆ ಅಥವ ಎಷ್ಟು ರುಪಾಯೀ ಇದ್ದೀತು?

  ವಿಷಯ  ಇಷ್ಟೇ ಅಲ್ಲ ...

ನಾವುಗಳು ಮಾಲ್  ಹೊಕ್ಕರೆ   ಸಾವಿರದ ನೋಟು ಚಿಕ್ಕದೆನಿಸುತ್ತದೆ, ಹೋಟೆಲೊಳಗೆ  ಹೊಕ್ಕು ಕುಳಿತರೆ ಮಿತಿಮೀರಿದ  ಬಿಲ್  ಜೊತೆಗೆ  ಮುಲಾಜಿಗಾದರೂ ಟಿಪ್ಸ್ ಅಂತ ಬಿಟ್ಟು ಬರುತ್ತೇವೆ, ಪೆಟ್ರೋಲನ್ನು ಬಕಾಸುರನಂತೆ ಕುಡಿದು  5  ಜನರು ಓಡಾಡುವ ಕಾರಿನಲ್ಲಿ  ದಿಲ್ ಅಂತ ಒಬ್ಬರೇ ಓಡಾಡುತ್ತೇವೆ, ಸಿನೆಮಾಕ್ಕೆ ಹೋಗಿ ಕುಳಿತರೆ ಅಲ್ಲಿಯ ಪೋಪ್ಕೊನ್ರ್ನ್ ಗೆ  ದುಪ್ಪಟ್ಟು ದುಡ್ಡು   ಚೆಲ್ಲುತ್ತೇವೆ,  ಪಟ್ಟಿ ಉದ್ದಕ್ಕೆ ಬೆಳೆಯುತ್ತಲೇ  ಹೋಗುತ್ತದೆ....

ರಿಲಯನ್ಸ್ ಫ್ರೆಶ್ ನಲ್ಲಿ  ವ್ಯಾಕ್ಸ್ ಬಳಿದಿಟ್ಟ, ಸಕ್ಕರೆ ಇಂಜೆಕ್ಷನ್ ಚುಚ್ಚಿದ  ಫಳ್ಳನೆ ಹೊಳೆಯುವ  ಸೇಬುವಿಗೆ kg  ಗೆ ನೂರಿಪ್ಪತ್ತಾದರೂ ಕೊಡುತ್ತೇವೆ, ಮತ್ತೆಷ್ಟಾದರೂ ಕೊಡುತ್ತೇವೆ, ಕೊಟ್ಟು ಕವರೊಳಗೆ ತುಂಬಿಸಿಕೊಳ್ಳುತ್ತೆವೆ, ಆ ಕವರಿಗೆ ಮತ್ತೆ  ಒಂದೋ  ಎರಡೋ ರುಪಾಯೀಯನ್ನೂ  ಕೊಡುತ್ತೇವೆ, ಬಿಸಿಲಿನಲ್ಲಿ ತಲೆ ಮೇಲೆ ಹೊತ್ತ ನಮ್ಮದೇ  ನೆಲದ ಪೇರಲೆ ಹಣ್ಣಿಗೆ ಇಪ್ಪತ್ತು ರುಪಾಯೆಗೆ ನಾಲ್ಕು ಕೇಳುತ್ತವೆ, ತಯಾರಿಕೆಗೆ ಕೇವಲ ಎರಡು ರುಪಯೀ  ಖರ್ಚಾಗುವ  ಪೆಪ್ಸಿ ಗೆ   2 5  ರುಪಾಯೆಯನ್ನು ಕೊಡುವಾಗ ನಾವು ತಪ್ಪಿಯೂ ಚೌಕಾಸಿ ಮಾಡುವುದಿಲ್ಲ ,  ದುಡ್ಡು ಕೊಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತೇವೆ.  ಇಲ್ಲೇ ಮಂಡ್ಯದವನೋ  ತಿಪಟೂರವನೋ  ಬೆಳೆದ ಎಳನೀರಿಗೆ  ಅದನ್ನ ಮಾರುವವನಿಗೆ ನಮ್ಮದು ಒಂದು ರುಪಾಯೀ ಎರಡು ರುಪಾಯಿಗೆ ಚೌಕಾಸಿ !
  
       ಅದೇನಾಯಿತೋ ..,  ಇತ್ತೀಚಿಗೆ  ಶ್ರಮ  ಪಟ್ಟು ಕೆಲಸ ಮಾಡುವ ಇಂತವರ ಜೊತೆ  ಚೌಕಾಸಿ ಮಾಡಬೇಕಿನಿಸುತ್ತಿಲ್ಲ  ಉಳಿತಾಯ ಮಾಡುವ ಮನಸಿದ್ದರೆ ಬೇಕಷ್ಟು ಮಾರ್ಗಗಳಿವೆ, ಅವರ ಶ್ರಮದ ಬೆವರು ಬೇಡ,  ಈ ತರ ಚೌಕಾಸಿ ಮಾಡಿ ಬುದ್ದಿವಂತೆ ಎನಿಸಿಕೊಳ್ಳುವುದಕ್ಕಿಂತ  ದಡ್ಡಿಯಾಗಿರಲೇ  ಇಷ್ಟ ಪಡುತ್ತೇನೆ, ಇತ್ತೀಚಿಗೆ  'ಯಾಕೆ ಒಂದು ರುಪಾಯೇ ಜಾಸ್ತಿ'  ಎನ್ನುವ ಬದಲು  ತರಕಾರಿ ಗಾಡಿಯವನ ಬಳಿ , 'ಎಲ್ಲಿಂದ ತರ್ತೀರಾರೀ?, ಎಷ್ಟು ಕೊಡ್ತೀರಾರೀ ? ', ತರಕಾರಿ ಕೊಳೆತರೆ ಏನು ಮಾಡ್ತೀರಾ?  ಕೇಳುತ್ತೇನೆ ,  ಎಳನೀರಾತನೊಂದಿಗೆ , ' ಎಲ್ಲಿಂದ  ಬರತ್ತೆ? ನಿಮಗೆ ಎಷ್ಟಕ್ಕೆ ಸಿಗತ್ತೆ , ಲಾಭ ಆಗತ್ತಾ ? ಹಾಳು ಆದರೆ ಏನು ಮಾಡ್ತೀರಾರೀ?  ಎನ್ನುತ್ತೇನೆ, ಅವಾಗಲೇ ಗೊತ್ತಾಗಿದ್ದು ನನಗೆ ಪೋಲಿಸಿನವರಿಗೂ ಪಾಲು ಕೊಡಬೇಕಂತೆ! ಕೇಳಿದಾಗಲೆಲ್ಲಾ  ಎಳನೀರೂ  ಕೊಡಬೇಕಂತೆ !
ರೆಡಿಮೇಡ್  ಫುಡ್ ಪ್ಯಾಕೆಟ್, ಪೆಪ್ಸಿ ಕೋಕಾಕೋಲ,  ಐಸ್ ಕ್ರೀಂ, ಕೇಕ್,  ಹಾಳು  ಮೂಳು ಅಂತ ದುಡ್ಡು ಚೆಲ್ಲಿ  ನಮ್ಮ ಆರೋಗ್ಯವನ್ನೂ ಕೆಡಿಸಿಕೊಂಡು ಬೇರೆ ದೇಶದವರ ಹೊಟ್ಟೆ ತುಂಬಿಸುವುದು, ಅವರನ್ನು ಶ್ರೀಮಂತಗೊಳಿಸುವುದು  ನಮ್ಮ ಯಾವತ್ತಿನ ಕೆಲಸವೇ ! ಇರಲಿ ಬಿಡಿ, ಆದರೆ ನಮ್ಮ ರಾಮನಗರದ ತಿಪ್ಪಣ್ಣ, ಚಿಕ್ಕಬಳ್ಳಾಪುರದ  ಮಂಜಣ್ಣ , ಮಂಡ್ಯದ ಸೋಮಣ್ಣ , ತಿಪಟೂರಿನ ಮತ್ಯಾವುದೋ ಅಣ್ಣ , ಅವರೂ ಸ್ವಲ್ಪ ಬೆಳೆಯಲಿ, ನಮ್ಮ ದೇಹಕ್ಕೆ ಅಗತ್ಯವಾದ  ತರಕಾರಿ, ಇನ್ನಿತರ ಆರೋಗ್ಯಕರ ಬೆಳೆ ಬೆಳೆಯುವವರ, ಮಾರುವವರ  ಹೊಟ್ಟೆ ಯಾವತ್ತೂ ತಣ್ಣಗಿರಲಿ.....

ಕೊನೆಗೆ,

ಕೊಟ್ಟ ಭಿಕ್ಷೆ ಕೂಡ ಸೋಮಾರಿತನಕ್ಕೆ ಪ್ರೋತ್ಸಾಹವಾಗಬಹುದು, ದೇವರ ಹುಂಡಿಗೆ ಬಿದ್ದ ದುಡ್ಡು ಕೂಡ ಎಲ್ಲೋ ಯಾರದ್ದೋ ಹೊಟ್ಟೆ ತುಂಬಿದವರನ್ನೇ  ಇನ್ನಷ್ಟು ತುಂಬಿಸಬಹುದು,  ಆದರೆ  ನಮ್ಮಂತವರ  ಒಂದು ಎರಡು ರುಪಾಯೀ ಲಾಭ ಅವತ್ತಿನ ಅವನ ಅನ್ನವಾಗಬಹುದು, ಅಲ್ಲವೇ....?
     


                             

Tuesday, June 4, 2013

ಲೋಕದ ಮೆಚ್ಚುಗೆಯೋ ...? ಮನದ ಒಪ್ಪಿಗೆಯೋ ... ?



ಇದ್ದ ಒಬ್ಬ ಪತ್ನಿಯ ರಕ್ಷಣೆಯಲ್ಲಿ
ಸೋತ ರಾಮ
ನೋವಿಗೆ ಇನ್ನೊಂದು ಹೆಸರನ್ನೇ ಸೀತೆಯನ್ನಾಗಿಸಿದ  !


ಕೂದಲೂ ಕೊಂಕದಂತೆ  ಕಾದವನು
ಹದಿನಾರು ಸಾವಿರ ಹೆಂಡತಿಯರಲ್ಲಿ
 ಯಾರನ್ನೂ  ನೋಯಿಸಿದ್ದಿಲ್ಲ ಕೃಷ್ಣ!


ಬೇಕಿತ್ತಾ ರಾಮನಿಗೆ ಲೋಕದ ಮೆಚ್ಚುಗೆ !?
ಸಾಕಿತ್ತಾ  ಕೃಷ್ಣನಿಗೆ ಮನದ ಒಪ್ಪಿಗೆ!? 
ಕೇಳಬೇಕಿತ್ತು .... ಪ್ರೀತಿ ಅಂದರೆ ಯಾವುದೆಂದು ... !?






   


Tuesday, February 19, 2013

ನೀನು ತರುವ ಗುಲಾಬಿ ಇಷ್ಟವಾಗುತ್ತಿಲ್ಲ ನನಗೆ .., ಜೊತೆಗೆ ನೀನು ಕೂಡ ...!






                                             

ನಾಳೆಗಳಲ್ಲಿ  ನನಗೆ  ಬಂಗಾರದ  ಅಂಚು  ಬೆಳ್ಳಿಯ ನೂಲಿನ ಸೀರೆ ತಂದುಕೊಡುವ ಬಣ್ಣದ  ಕನಸು  ನಿನಗೆ, ಇದೇ  ನಿನ್ನ ಕನಸುಗಳಲ್ಲಿ ನಾನೂ ಬದುಕಿಬಿಡುತ್ತೆನೆಂದ ನನಗೆ,  ನಿನ್ನ ನಾಳೆಯ ಕನಸುಗಳು ನನ್ನ  ಇವತ್ತಿನ ಬಣ್ಣಗೆಟ್ಟ ಸೀರೆಗೆ ಯಾವ ಬಣ್ಣವನ್ನೂ ತುಂಬುತ್ತಿಲ್ಲ!


ಅರ್ಧ ಅರ್ಧ ಮುತ್ತನ್ನೇ ಹಂಚಿಕೊಂಡು ತಿಂದರಾಯಿತು ಎಂದ ನಿನ್ನ ಮಾತುಗಳನ್ನು ಹೃದಯದಲ್ಲಿ ತುಂಬಿಕೊಂಡಿದ್ದ  ನನಗೆ, ಇಲ್ಲ ಅಡಿಗೆಗೆ ಅಕ್ಕಿ ಬೇಳೆ  ಬೇಕೇ  ಬೇಕು, ಯಾವ ಮುತ್ತೂ ಹೊಟ್ಟೆ ತುಂಬಿಸುತ್ತಿಲ್ಲ.


ನನ್ನ ಕೈಯನ್ನು  ನಿನ್ನ ಅಂಗೈಯಲ್ಲಿರಿಸಿಕೊಂಡು  "ನಿನ್ನ ನೋವು ಅರ್ಥ ಆಗತ್ತೆ ಕಣೇ " ಅನ್ನುತ್ತಿ, ಆ ಒಂದು ಮಾತಿಗಾಗಿ ಹಪಹಪಿಸುತ್ತಿದ್ದ  ನನಗೆ   ಉಹುಮ್ಮ್, ಇಲ್ಲ ಅಷ್ಟೇ ಸಾಲದು ಯಾವುದೇ ಅರ್ಥಮಾಡಿಕೊಳ್ಳುವಿಕೆಯೂ   ಮಗನ ಸ್ಕೂಲಿನ ಫೀಸನ್ನು ಕಟ್ಟಿ ಬರುತ್ತಿಲ್ಲ.



"ಎಲ್ಲ ಸರಿಯಾಗುತ್ತೆ ಬಿಡು"   ನೂರು ಭರವಸೆಯ ಭಾವಗಳನ್ನು ತಂದುಕೊಡುತ್ತಿದ್ದ  ಅದೇ ನಿನ್ನ ಮಾತುಗಳು, ಇಲ್ಲ  ಮಗಳ ಬಿಡುವಿಲ್ಲದ  ಜ್ವರಕ್ಕೆ  ಔಷಧವೇ ಬೇಕು, "ಎಲ್ಲ ಸರಿಯಾಗುತ್ತದೆ" ಎಂದ ಮಾತುಗಳಿಗೆ ಜ್ವರ ಇಳಿಯುತ್ತಿಲ್ಲ.



ಕೋಪ ಬಂದರೆ ಸಾವಿರ ಮಾತುಗಳಲ್ಲಿ  ರಮಿಸುತ್ತಿದ್ದ  ನೀನು ಮತ್ತು  ಅದರಲ್ಲೇ ಮೈ ಮರೆಯುತ್ತಿದ್ದ  ನನಗೆ,  ಇವತ್ತು  ಮನೆಯಿಂದ  ಹೊರಬಿದ್ದರೆ  ದಿಟ್ಟಿಸುವ ಸಾಲಗಾರರ  ಎದುರಿಸಲು  ಬೇಕಿರುವುದು  ದುಡಿಮೆಯೆಂಬ ನಿಯತ್ತಿನ  ತಾಕತ್ತು, ನಿನ್ನ ಬಣ್ಣದ ಮಾತುಗಳು ನನ್ನ ಮನದಾಳದ ಕೋಪವನ್ನು  ತಣಿಸುತ್ತಿಲ್ಲ.


ಬೆಟ್ಟವನ್ನು ಅಂಗೈಯಲ್ಲಿ ಎತ್ತುವ ಗುರಿಯ ಅಮಲಿನಲ್ಲಿರುವ  ನಿನಗೆ, ಅದನ್ನೇ ನಂಬಿಕೊಂಡ ನನಗೆ ಎದುರಿಗಿರುವ ಹುಲ್ಲನ್ನೂ ನೀನು  ಕೀಳಲಾರೆ  ಎನ್ನುವ ಸತ್ಯದ ಅರಿವಿಗೆ  ಕಣ್ಣು ಮುಚ್ಚಿದರೂ ನನಗೆ ನಿದ್ದೆ ಹತ್ತುತ್ತಿಲ್ಲ.


ನಾನು ದುಃಖಿಸಿದರೆ ಪ್ರೀತಿ ಪಾಠ ಹೇಳುವ ನಿನಗೆ ಗೊತ್ತಿಲ್ಲದಿರುವುದು ಏನೆಂದರೆ 
ನಾನು ದುಃಖಿಸುತ್ತಿರುವುದು  ನಿನಗೆ ಕೆಲಸ ಇಲ್ಲ ಎಂಬ ಕಾರಣಕ್ಕಲ್ಲ, ಮಾಡುವ ಮನಸ್ಸಿಲ್ಲದಿರುವಿಕೆಗಾಗಿ,  ಎಲ್ಲೂ ನೆಲೆ ನಿಲ್ಲದ ನಿನ್ನ ಅಪ್ರಭುದ್ದ ವ್ಯಕ್ತಿತ್ವಕ್ಕಾಗಿ, ಎಂದೂ  ಬದಲಾಗದ ನಿನ್ನ ಕಡು ಸೋಮಾರಿತನ , ಅತೀ ಬೇಜವಬ್ಧಾರಿತನಕ್ಕಾಗಿ ತಿಳಿಹೇಳಿದರೂ ನಿನಗದು ತಿಳಿಯುತ್ತಿಲ್ಲ.


ನಿನ್ನ ಪ್ರತಿ ಗುಲಾಬಿ ಹೂವಿಗೂ ಪ್ರತಿಯಾಗಿ  ನನ್ನಲ್ಲಿ  ಪ್ರತಿದ್ವನಿಸುತ್ತಿದ್ದ  ಪ್ರೀತಿ ಇವತ್ತು     ಅಗತ್ಯತೆಗ. ಪರಿಮಿತಿಯೊಳಗೆ    ಕುಳಿತುಬಿಟ್ಟಿದೆ ,  ನಿನ್ನ  ತುಂಟತನ,   ಬೇಜವಾಬ್ದಾರಿತನ ಅದೇ  ನೆಚ್ಚಿಕೆಯೆನಿಸುತ್ತಿದ್ದ   ನನಗೆ ಇವತ್ತು  ವಾಸ್ತವತೆಯ      ಒಂದೊಂದು  ಪುಟಗಳು ನನ್ನೆದುರು  ತೆರೆದುಕೊಳ್ಳುವಾಗಲೂ
ನನ್ನ ಪ್ರೇಮ ಸೌಧದ ಒಂದೊಂದೇ ಮಜಲು ಕುಸಿಯುತ್ತಿದೆ , ನನ್ನ ಭವಿತವ್ಯದ ಕನಸುಗಳೆಲ್ಲ ಕಲೆಯಾಗಿದೆ,  ಇಲ್ಲ ಕೊಲೆಯೇ ಆಗಿದೆ .................




Friday, January 25, 2013

ನಿಮಗೂ ಹೀಗನಿಸಿತ್ತಾ .....??





ಊಟ  ನಿದ್ದೆಗಳ  ಪರಿವೆಯಿಲ್ಲದೆ   ಅವರು  ಅಲ್ಲಿ  ದೇಶವನ್ನು  ಕಾಯುತ್ತಿದ್ದಾರೆ...,    ಇವರಿಲ್ಲಿ   ದೇಶವನ್ನು  ಕೊಳ್ಳೆ  ಹೊಡೆಯುತ್ತಿದ್ದಾರೆ.







ದೇಶದ  ಗಡಿಗಾಗಿ   ಜೀವವನ್ನು  ಪಣವಾಗಿಟ್ಟರೆ   ಅವರು ..  ಇವರು  ದೇಶದೊಳಗೆ ಗಡಿಯ  ಗಲಭೆಯೆಬ್ಬಿಸುತ್ತಿದ್ದಾರೆ.








ಅವರಲ್ಲಿ   ಹಿಮಾಲಯದ  ತಪ್ಪಲಿನಲ್ಲಿ   -10  ಡಿಗ್ರೀ  ಚಳಿಯಲ್ಲಿ   ಅನವರತ ನಡೆಯಿತ್ತಿದ್ದರೆ ......  ಇವರಿಲ್ಲಿ  AC  ರೂಮಿನಲ್ಲಿ    ಕುಳಿತು    ಭ್ರಷ್ಟಾಚಾರದ  ಕತೆಗೆ  ಮುನ್ನುಡಿ  ಬರೆಯುತ್ತಿದ್ದಾರೆ







ಹುಟ್ಟಿದ   ಹಸು  ಕಂದಮ್ಮಗಳನ್ನು  ಬಿಟ್ಟು   ಚೀರುವ  ಹೃದಯ  ಹೊತ್ತು  ಹೊರಟು  ನಿಂತಿದ್ದರೆ ..,  ಇವರಿಲ್ಲಿ  ಮಕ್ಕಳಷ್ಟೇ  ಅಲ್ಲ .., ಅವರ  ಮಕ್ಕಳು  ಮೊಮ್ಮಕಳು  ..,  ಮರಿ ಮಕ್ಕಳ  ಆಸ್ತಿಗಾಗಿ  ದೇಶವನ್ನು   ಲೂಟಿ  ಹೊಡೆಯುತ್ತಿದ್ದಾರೆ  .

                                         
     


                        


ಒಲಿದ  ಒಲುಮೆಯ  ಸಂಗಾತಿ ...,  ತುಂಬಿದ   ಕಣ್ಣುಗಳು .., ಆಕೆಯ  ಮನಸ್ಸು ಇನ್ನಿಲ್ಲದಷ್ಟು  ಭಾರ .., ಇವರ  ಮನೆಯ  ಮನೆಯೊಡತಿಗೂ  ಅಷ್ಟೇ ..  ಯಾರದ್ದೋ ಚೆಲ್ಲಿದ  ರಕ್ತದ  ಡಿಸೈನ್  ಒಡವೆ  ... ಮೈ  ತುಂಬಾ   ಭಾರೀ  ಭಾರ ..








ಯಾವುದೊ  ಆಟಗಾರ  ಗೆದ್ದಮಾತ್ರಕ್ಕೆ  ಹಲವು  ಕೋಟಿಗಳನ್ನು  ಬಹುಮಾನಿಸುವ  ಇವರು ..,  ಕೊನೆಗೆ   ಅವರಲ್ಲಿ  ದೇಶಕ್ಕಾಗಿ  ಸತ್ತರೂ  ಕೂಡ  ಅದರ  ಬೆಲೆ ಹೆಚ್ಚೆಂದರೆ  ಕೆಲವು  ಲಕ್ಷಗಳು .



'Give me your blood  I shell  give you  freedom '  ಹಾಗಂದಿದ್ದರು  ಫೌಂಡರ್   ಆಫ್ ದಿ ಆರ್ಮಿ '  ನೇತಾಜಿ  ಸುಭಾಷ್ಚಂದ್ರ  ಬೋಸ್ '. ಈ  ತಿಂಗಳ  23  ಅವರು  ಹುಟ್ಟಿದ  ದಿನ .  ಅವರ  ಹುಟ್ಟಿದ  ದಿನವನ್ನು  ಸೈನಿಕರ 
ದಿನಾಚಾರಣೆಯನ್ನಾಗಿ   ಯಾಕೆ  ಆಚರಿಸಬಾರದು ?


ದೇಶದ  ಎಲ್ಲ  ಸೈನಿಕರಿಗೂ  ಕೋಟಿ   ಕೋಟಿ   ಹೃದಯಗಳ  ನಮನ ....,  ಭೃಷ್ಟ  ರಾಜಕಾರಣಿಗಳಿಗೆ  ಅವರ  ದುಷ್ಟತನಕ್ಕೆ   ಕೋಟಿ  ಕೋಟಿ   ಹೃದಯಗಳ  ದಿಕ್ಕಾರವಿರಲಿ ...


ಮೇರ  ಭಾರತ್  ಮಹಾನ್      
ಜೈ  ಹಿಂದ್



ಚೈತ್ರ  ಬಿ .ಜಿ.


Friday, January 11, 2013

ನಾನು ತುಂಬಾ ಸುಖವಾಗಿದ್ದೇನೆ ಗೊತ್ತಾ ನಿಮಗೆ ...!



ಒಂದು ಹೆಣ್ಣಿನ ಆತ್ಮ ಸ್ವಗತ ..







 PUC  ನಲ್ಲಿ   85% ಬಂದಿದ್ದರೂ ಇಂಜಿನಿಯರಿಂಗ್    ಹೋಗದೆ  ಡಿಗ್ರಿ ಗೆ ಸೇರಿಕೊಂಡಿದ್ದು  , ಅಣ್ಣಂಗೆ 65% ಬಂದಿದ್ದರೂ ಕಷ್ಟಪಟ್ಟು ಇಂಜಿನಿಯರಿಂಗ್  ಕಾಲೆಜ್ ನಲ್ಲಿ ಸೀಟ್ ದಕ್ಕಿಸಿಕೊಟ್ಟಿದ್ದು .., ಬಿಡಿ ಎಷ್ಟಾದರೂ   ಮದುವೆಯಾಗಿ ಬೇರೆ ಮನೆ ಸೇರೋ ನನ್ನ ಮೇಲೆ ಇನ್ವೆಸ್ಟ್ ಮಾಡೋದು ವೇಸ್ಟ್  ತಾನೇ ...?  ಹಾಗೆನಿಲ್ಲಪ್ಪ  ಅಪ್ಪ ಅಮ್ಮನನ್ನು ಬಿಟ್ಟು ಅಷ್ಟು ದೂರ ಇರೋ ಸಿಟಿಗೆ ಹೋಗಿ ನಂಗೆ ಓದ್ದೊಕಾಗಲ್ಲಪ್ಪ ....



  ಬಿ.ಎಸ್ಸಿ  ಮುಗಿಸಿದ್ದರಿಂದ  ಎಮ್ ಎಸ್ಸಿ   ಮಾಡುತ್ತೆನೆಂದು  ಆಸೆ ತುಂಬಿದ ಕಂಗಳಿಂದ ಗಂಡನನ್ನು ಕೇಳಿದಾಗ , 'ಯಾಕೆ ಚಿನ್ನ ಕಷ್ಟ ಪಡ್ತೀಯ ... ಅರಾಮಗಿ ಇದ್ದುಬಿಡು'  ಎಂದವನು ಇದೆ ಫೈನಲ್ ಅಂತ ನಯವಾಗಿ ಹೇಳಿ ಹೊದಾಗ  ಹಿಂಡಿದ್ದು   ಒಗೆದ ಬಟ್ಟೆಯನ್ನು...., ನನ್ನ ಮನಸ್ಸನ್ನೇನಲ್ಲ   ಬಿಡಿ .....


 ಅರ್ಧಕ್ಕೆ ಬಿಟ್ಟ ನನ್ನ ಸಂಗೀತವನ್ನು ಮುಂದುವರಿಸಲುಹೋದಾಗ   ಮಾವ ಹೇಳಿದ್ದು   'ನಮ್ಮ ಮನೆ  ಮಹಾಲಕ್ಷೀನಮ್ಮ  ನೀನು , ನೀನು ಮಾತಾಡಿದರೆ ಸಂಗೀತದಂತೆ , ಮನೆ ಗಂಡ ಮಕ್ಕಳನ್ನು ಬಿಟ್ಟು ಯಾಕಮ್ಮ ನಿನಗೆ ಸಂಗೀತ ಗಿಂಗೀತಾ....? ಬೆಚ್ಚಗೆ ಸಂಸಾರ ನೋಡಿಕೊಂಡಿದ್ರೆ  ಬೇಕಾದಷ್ಟಾಯಿತಲ್ಲಮ್ಮ  ..' ಅಂತ ನಗೆ ಸೂಸಿದಾಗ  ಸುಟ್ಟಿದ್ದು  ನನ್ನ ದಂಡಿ ದಂಡಿ ಕನಸುಗಳನಲ್ಲ, ಅಡಿಗೆ ಮಾಡುವಾಗ ಎಲ್ಲೋ ಒಂಚೂರು ಮುಂಗೈಗೆ ಬೆಂಕಿ ತಗುಲಿತಷ್ಟೇ .....!


  ಅಮ್ಮ .. ನಂಗೆ ಇಲ್ಲೇ ನೀರು ತಂದು ಕೊಡು .., ಅಮ್ಮ ನಂಗೆ ಶೂ ಹಾಕು ,  ಅಮ್ಮ ನನ್ನ ಬ್ಯಾಗ್ ತಂದುಕೊಡು ಎಂದು ಕುಳಿತಲ್ಲಿಯೇ ಸೇವೆ ಮಾಡಿಸಿಕೊಳ್ಳುವ ನನ್ನ   ಮಗರಾಯನಿಗೆ  'ಸರದಾರ ಅವನು, ತಾನೇ ಮಾಡಿಕೊಳ್ಳಲು  ಅವನದೇನು ನಿನ್ನಂತೆ  ಹೆಣ್ಣೇ ...?'   ನನ್ನ ಅತ್ತೆ  ಸೊಲ್ಲು ನುಡಿವಾಗ ಅವಡು ಕಚ್ಚಿ ಬರುವಷ್ಟು ಕೊಪವಾದರೂ ......, ಬಿಡಿ ನಂಗೆ ಕೋಪ ಬರುವುದೇ ಇಲ್ಲ ..., ನನ್ನದು ಭಾರೀ  ಶಾಂತ ಸ್ವಭಾವ ......!


 ಕುರ್ತಾ  ಜೀನ್ಸ್  ಹಾಕಿಕೊಂಡು ಬಿಂದಾಸ್ ಆಗಿ ಓಡಾಡುತ್ತಿದ್ದ  ನನ್ನ  ನಾದಿನಿಯನ್ನು ' ಎಲ್ಲಿ ತಗೊಂಡ್ಯೇ  ಎಷ್ಟು ಚೆನ್ನಾಗಿದೆ  ! ಅಂದಿದಕ್ಕೆ  , ' ಬಿಡಿ ಅತ್ತಿಗೆ ನಿಮಗೆ ಸೀರೆ ಚೂಡಿದಾರನೇ  ಒಪ್ಪುತ್ತೆ'  ಅಂದ ಅವಳ  ಜಾಣ್ಮೆಯ  ಉತ್ತರಕ್ಕೆ  ' ನಿನ್ನ ಆನೆ ಗಾತ್ರಕ್ಕೆ  ಒಪ್ಪುತ್ತೆನಮ್ಮಾ  ..?'  ಅಂತ ನಾನೇನೂ ಕೇಳಲ್ಲ ಬಿಡಿ ..., ನಂಗೆ ಕೆಲವೊಮ್ಮೆ ಗಂಟಲ್ಲಲ್ಲಿ  ಕಲ್ಲು ಸಿಕ್ಕಿ ಹಾಕಿಕೊಂಡಿರುವುದರಿಂದ  ಎಷ್ಟೋ  ಸಲ ಮಾತಾಡುವುದರ ಬದಲು ಸುಮ್ಮನಿದ್ದುಬಿಡುತ್ತೇನೆ .....!



  'ನಿನ್ಯಾಕೆ ದುಡಿಯಬೇಕು .? ಕಷ್ಟ ಪಡಬೇಕು..?  ನನ್ನ ದುಡ್ಡು ...  ಸರ್ವಸ್ವ  ಎಲ್ಲವೂ ನಿಂದೆ ತಾನೇ  ...?'  ಎಂದವನು ಪೈಸೆ ಪೈಸೆ ಗೂ ಲೆಕ್ಕ ಕೇಳುವಾಗ  ಅವಮಾನದ ಛಡಿ ಏಟಿಗೆ  ಸ್ವಾಭಿಮಾನ ನರಳಿದರೂ...ಹೊಂದಾಣಿಕೆಯ ಹೊದಿಕೆ... ಇಲ್ಲಪ  ಹಾಗೇನೂ ಇಲ್ಲ ಗಂಡ ಹೆಂಡತಿ ಅಂದ ಮೇಲೆ  ಯಾರೋ  ಒಬ್ಬರು ಹೊಂದಿಕೊಂಡರಾಯಿತು ..., ಆದರೆ ಪ್ರತೀ ಸಲವೂ 'ಆ ಯಾರೋ ಒಬ್ಬರು'  ' ನಾನು '  ಆಗಿರಬೇಕಷ್ಟೇ ...  ತುಂಬಾ ಸುಲಭ ಅಲ್ಲವೇ !


  ನನಗೆ ಎಷ್ಟು ಆರಾಮು ಎಂದರೆ .., ಮಾವನಿಗೆ ಕೋಪ  ಬಂದೀತೆ ..? ಅತ್ತೆಗೆ ಬೇಸರವಾದೀತೇ ...?  ಮಗನಿಗೆ ಸಕಲ ಸೌಕರ್ಯ ತಯಾರಾಗಿದೆಯೇ ...?  ಗಂಡ ಸಿಟ್ಟಾದನೆ ...? ಬಂದ  ನೆಂಟರಿಗೆ ಸಮಧಾನವಾಯಿತೆ ...?  ಬರೀ 'ಇ..ಷ್ಟೇ' ನೋಡಿಕೊಂಡರಾಯಿತು ..., ಮತ್ತೆ ನನ್ನ  ಕೋಪ , ಬೇಸರ , ಸೌಕರ್ಯ , ಸಿಟ್ಟು , ಸಮಾದಾನ ..?  ಛೆ .., ಛೆ .., ನಂಗೆ ಅವೆಲ್ಲ ಏನೂ ಆಗಲ್ಲ ಬಿಡಿ ...., ಮನೆ ಮಹಾಲಕ್ಷ್ಮಿಯಲ್ಲವೇ  ನಾನು.....!



ಅಡಿಗೆ ಮನೆಯ ನನ್ನ ಹೆಡ್ ಆಫೀಸಿನಲ್ಲಿ   ನನ್ನ  ಕನಸುಗಳು ನನ್ನನ್ನು ಗೇಲಿ ಮಾಡುವಾಗ.., ನನಗೆ ನಾನೇ ಅಪರಿಚಿತವೆನಿಸುವಾಗ .. ಸುಮ್ಮನೆ ಕಣ್ಣಲ್ಲಿ  ಬಂದ  ನೀರು ....ಈರುಳ್ಳಿ ಹೆಚ್ಚಿದ್ದಕ್ಕಾಗಿ ಮಾತ್ರ .....!!

Friday, January 4, 2013

ಹಕ್ಕಿ ಹಾಡು



ಆಸೆ ನಿರಾಸೆ
ಏನಾದರೂ ಕೊಡು ನೀನು
ದೀಪವೂ ನಿನ್ನದೇ ಗಾಳಿಯೂ ನಿನ್ನದೇ.


*      *    *

ಅದಿಲ್ಲ ಇದಿಲ್ಲ
ಇರುವುದು ನಮಗೆ ಬೇಕಿಲ್ಲ
ಇರದಿದುದರ  ಕಡೆಗೆ ತುಡಿವುದೇ ಜೇವನ.

*       *      *


ಬರುವೆಯೋ ಬಾರೆಯೋ
ಒಂಟಿ ಹಕ್ಕಿ ಹಾಡು
ಕಾಂತನಿಲ್ಲದ ಮೇಲೆ ಏಕಾಂತವ್ಯಾಕೆ..

*      *      *

ಸುಖ ದುಃಖ
ಒಂದನ್ನೇ ತೆಗೆದುಕೊಳ್ಳಲಾರೆ
ಯಾರಿಗಿಂಟು ಯಾರಿಗಿಲ್ಲ ಬಾಳೆಲ್ಲ ಬೇವುಬೆಲ್ಲ.

*     *      *

ಬಿಸಿ ಬೆಳಕು
ಪ್ರತೀಕ್ಷೆಯ ಹಣತೆ ನೀನು
 ತನುವು ನಿನ್ನದು ಮನವು ನಿನ್ನದು.

 *      *      *

ಪ್ರೀತಿ ಪ್ರೇಮ
ಕಡಿಮೆಯಿಲ್ಲ  ಕೊರತೆಯಿಲ್ಲ
ಯಾಕೋ ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆನ್ನ  ಮನಸು.

*       *      *

ಮಾತು ಮೌನ
ಎರಡೂ ಏನೋ ಎಂತೋ
ಬದುಕು ಮಾಯೆಯ ಮಾಟ ಮಾತು ನೆರೆತೆರೆಯಾಟ.

*        *        *

ಕರೆದಾಗ ಅವನು
ಹೋಗಲೇಬೇಕು  ನಾವು
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ..