ನಾಳೆಗಳಲ್ಲಿ ನನಗೆ ಬಂಗಾರದ ಅಂಚು ಬೆಳ್ಳಿಯ ನೂಲಿನ ಸೀರೆ ತಂದುಕೊಡುವ ಬಣ್ಣದ ಕನಸು ನಿನಗೆ, ಇದೇ ನಿನ್ನ ಕನಸುಗಳಲ್ಲಿ ನಾನೂ ಬದುಕಿಬಿಡುತ್ತೆನೆಂದ ನನಗೆ, ನಿನ್ನ ನಾಳೆಯ ಕನಸುಗಳು ನನ್ನ ಇವತ್ತಿನ ಬಣ್ಣಗೆಟ್ಟ ಸೀರೆಗೆ ಯಾವ ಬಣ್ಣವನ್ನೂ ತುಂಬುತ್ತಿಲ್ಲ!
ಅರ್ಧ ಅರ್ಧ ಮುತ್ತನ್ನೇ ಹಂಚಿಕೊಂಡು ತಿಂದರಾಯಿತು ಎಂದ ನಿನ್ನ ಮಾತುಗಳನ್ನು ಹೃದಯದಲ್ಲಿ ತುಂಬಿಕೊಂಡಿದ್ದ ನನಗೆ, ಇಲ್ಲ ಅಡಿಗೆಗೆ ಅಕ್ಕಿ ಬೇಳೆ ಬೇಕೇ ಬೇಕು, ಯಾವ ಮುತ್ತೂ ಹೊಟ್ಟೆ ತುಂಬಿಸುತ್ತಿಲ್ಲ.
ನನ್ನ ಕೈಯನ್ನು ನಿನ್ನ ಅಂಗೈಯಲ್ಲಿರಿಸಿಕೊಂಡು "ನಿನ್ನ ನೋವು ಅರ್ಥ ಆಗತ್ತೆ ಕಣೇ " ಅನ್ನುತ್ತಿ, ಆ ಒಂದು ಮಾತಿಗಾಗಿ ಹಪಹಪಿಸುತ್ತಿದ್ದ ನನಗೆ ಉಹುಮ್ಮ್, ಇಲ್ಲ ಅಷ್ಟೇ ಸಾಲದು ಯಾವುದೇ ಅರ್ಥಮಾಡಿಕೊಳ್ಳುವಿಕೆಯೂ ಮಗನ ಸ್ಕೂಲಿನ ಫೀಸನ್ನು ಕಟ್ಟಿ ಬರುತ್ತಿಲ್ಲ.
"ಎಲ್ಲ ಸರಿಯಾಗುತ್ತೆ ಬಿಡು" ನೂರು ಭರವಸೆಯ ಭಾವಗಳನ್ನು ತಂದುಕೊಡುತ್ತಿದ್ದ ಅದೇ ನಿನ್ನ ಮಾತುಗಳು, ಇಲ್ಲ ಮಗಳ ಬಿಡುವಿಲ್ಲದ ಜ್ವರಕ್ಕೆ ಔಷಧವೇ ಬೇಕು, "ಎಲ್ಲ ಸರಿಯಾಗುತ್ತದೆ" ಎಂದ ಮಾತುಗಳಿಗೆ ಜ್ವರ ಇಳಿಯುತ್ತಿಲ್ಲ.
ಕೋಪ ಬಂದರೆ ಸಾವಿರ ಮಾತುಗಳಲ್ಲಿ ರಮಿಸುತ್ತಿದ್ದ ನೀನು ಮತ್ತು ಅದರಲ್ಲೇ ಮೈ ಮರೆಯುತ್ತಿದ್ದ ನನಗೆ, ಇವತ್ತು ಮನೆಯಿಂದ ಹೊರಬಿದ್ದರೆ ದಿಟ್ಟಿಸುವ ಸಾಲಗಾರರ ಎದುರಿಸಲು ಬೇಕಿರುವುದು ದುಡಿಮೆಯೆಂಬ ನಿಯತ್ತಿನ ತಾಕತ್ತು, ನಿನ್ನ ಬಣ್ಣದ ಮಾತುಗಳು ನನ್ನ ಮನದಾಳದ ಕೋಪವನ್ನು ತಣಿಸುತ್ತಿಲ್ಲ.
ಬೆಟ್ಟವನ್ನು ಅಂಗೈಯಲ್ಲಿ ಎತ್ತುವ ಗುರಿಯ ಅಮಲಿನಲ್ಲಿರುವ ನಿನಗೆ, ಅದನ್ನೇ ನಂಬಿಕೊಂಡ ನನಗೆ ಎದುರಿಗಿರುವ ಹುಲ್ಲನ್ನೂ ನೀನು ಕೀಳಲಾರೆ ಎನ್ನುವ ಸತ್ಯದ ಅರಿವಿಗೆ ಕಣ್ಣು ಮುಚ್ಚಿದರೂ ನನಗೆ ನಿದ್ದೆ ಹತ್ತುತ್ತಿಲ್ಲ.
ನಾನು ದುಃಖಿಸಿದರೆ ಪ್ರೀತಿ ಪಾಠ ಹೇಳುವ ನಿನಗೆ ಗೊತ್ತಿಲ್ಲದಿರುವುದು ಏನೆಂದರೆ
ನಾನು ದುಃಖಿಸುತ್ತಿರುವುದು ನಿನಗೆ ಕೆಲಸ ಇಲ್ಲ ಎಂಬ ಕಾರಣಕ್ಕಲ್ಲ, ಮಾಡುವ ಮನಸ್ಸಿಲ್ಲದಿರುವಿಕೆಗಾಗಿ, ಎಲ್ಲೂ ನೆಲೆ ನಿಲ್ಲದ ನಿನ್ನ ಅಪ್ರಭುದ್ದ ವ್ಯಕ್ತಿತ್ವಕ್ಕಾಗಿ, ಎಂದೂ ಬದಲಾಗದ ನಿನ್ನ ಕಡು ಸೋಮಾರಿತನ , ಅತೀ ಬೇಜವಬ್ಧಾರಿತನಕ್ಕಾಗಿ ತಿಳಿಹೇಳಿದರೂ ನಿನಗದು ತಿಳಿಯುತ್ತಿಲ್ಲ.
ನಿನ್ನ ಪ್ರತಿ ಗುಲಾಬಿ ಹೂವಿಗೂ ಪ್ರತಿಯಾಗಿ ನನ್ನಲ್ಲಿ ಪ್ರತಿದ್ವನಿಸುತ್ತಿದ್ದ ಪ್ರೀತಿ ಇವತ್ತು ಅಗತ್ಯತೆಗ. ಪರಿಮಿತಿಯೊಳಗೆ ಕುಳಿತುಬಿಟ್ಟಿದೆ , ನಿನ್ನ ತುಂಟತನ, ಬೇಜವಾಬ್ದಾರಿತನ ಅದೇ ನೆಚ್ಚಿಕೆಯೆನಿಸುತ್ತಿದ್ದ ನನಗೆ ಇವತ್ತು ವಾಸ್ತವತೆಯ ಒಂದೊಂದು ಪುಟಗಳು ನನ್ನೆದುರು ತೆರೆದುಕೊಳ್ಳುವಾಗಲೂ
ನನ್ನ ಪ್ರೇಮ ಸೌಧದ ಒಂದೊಂದೇ ಮಜಲು ಕುಸಿಯುತ್ತಿದೆ , ನನ್ನ ಭವಿತವ್ಯದ ಕನಸುಗಳೆಲ್ಲ ಕಲೆಯಾಗಿದೆ, ಇಲ್ಲ ಕೊಲೆಯೇ ಆಗಿದೆ .................