Saturday, November 24, 2012

ಸ್ವಲ್ಪ ನಿಜಾ ... ಸ್ವಲ್ಪ ಮಜಾ.. ಕಣ್ರೀ ...


ಒಂದೇ  ವ್ಯಕ್ತಿ  ಒಂದೇ  ವಿಷಯವನ್ನು,  ಬೇರೆ ಬೇರೆ ದ್ರಷ್ಟಿಕೋನದಿಂದ  ನೋಡಲು ಸಾದ್ಯಾನ ?
 ಹಾಗಂದ್ರೇನು ? ನೋಡೋಣ ಬನ್ನಿ .....!

  ಶಾರದಮ್ಮ :-       ಏನ್ರಿ ಗಿರಿಜಮ್ಮ  ಚೆನ್ನಾಗಿದ್ದೀರ ?
ಗಿರಿಜಮ್ಮ :-            ಏನ್ ಚೆಂದ ಬಂತುರೀ .. ಏನೋ ಇದೀನಿ ..

 ಶಾರದಮ್ಮ  :-         ಯಾಕ್ರೀ ಹಾಗಂತೀರಾ ...ಹೊಸ  ಸೊಸೆ ಬಂದಿದಾಳೆ .... ಏನ್ ಕತೆ?  ಹೇಗಿರಬೇಕು ನೀವು ..?
 ಗಿರಿಜಮ್ಮ :-            ಅಯ್ಯೋ   ಬಿಡ್ರಿ  ಅದೇನ್ ಕೇಳ್ತೀರಾ ..., ಹೆಸರಿಗೆ ಸೊಸೆ ಕಣ್ರೀ ಎಲ್ಲ ಕೆಲಸಾನೂ ನಾನೇ ಮಾಡಬೇಕು

 ಶಾರದಮ್ಮ  :-        ಅಯ್ಯೋ  ಹೌದೇನ್ರಿ ..?
ಗಿರಿಜಮ್ಮ :-             ಹೌದು ಕಣ್ರೀ , ಅದೇನ್ ಅವ್ರ ಅಪ್ಪ ಅಮ್ಮ ಏನೂ ಕಲ್ಸಿಕೊಟ್ಟಿಲ್ಲ ಕಣ್ರೀ ..., ಹುಡುಗಿ ಹಾಗೆ                                                    .ಓಡಾಡ್ಕೊಂಡು ಇರತ್ತೆ , ಎಲ್ಲದಕ್ಕೂ ನಾನೇ ಸಾಯಿಬೆಕೂ ..., ನಮ್  ಕಾಲದಲ್ಲಿ ಹಿಗಿತ್ತೆನ್ರೀ                      ಕೆಲಸಕಾರ್ಯ ಹಾಡು    ಹಸೆ  ಎಲ್ಲ  ಬರ್ಬೇಕಿತ್ತು  ಅಲ್ವೇನ್ರೀ ..                    
                        
ಶಾರದಮ್ಮ  :-         ಹೌದ್ರೀ....
 ಗಿರಿಜಮ್ಮ :-          ಅಲ್ಲಾ ... ಅತ್ತೆ ಅಂದ್ರೆ ಏನ್ ಗೌರವ .. ಮರ್ಯಾದೆ ,  ನನ್ನ ಸೊಸೆಗೆ ನನ್  ಕಂಡ್ರೆ ಒಂಚೂರೂ ಗೌರವನೆ
                            ಇಲ್ಲಾರೀ ..
  ಶಾರದಮ್ಮ    :-    ಹೌದೇನ್ರೀ .....?

 ಗಿರಿಜಮ್ಮ :-           ಹುನ್  ರೀ  ಅದೇನು ಬಟ್ಟೆ ..ಏನು ಪ್ಯಾಷನ್ನು , ಅಲ್ಲಾರೀ  ಕೂದಲನ್ನು  ಉದ್ದ ಗಿಡ್ಡ ಕತ್ತರಿಸಿಕೊಳ್ಳೋದು
                           ಯಾವ್  ಪ್ಯಾಶನರೀ ...., ಚೀ .., ಆ  ವೇಷ  ನೋಡಕ್ಕಾಗಲ್ಲರೀ ....

 ಶಾರದಮ್ಮ  :-     ನಿಮ್  ಮಗ  ಏನೂ  ಅನ್ನಲ್ವೇನ್ರೀ .....
 ಗಿರಿಜಮ್ಮ    :-     ಇಲ್ಲಾ  ಕಣ್ರೀ ..,ಅವ್ನು  ಹೆಂಡ್ತಿ ಹೇಳಿದಾಗೆ  ಕುಣಿತಾನೆ  ಕಣ್ರೀ ...,
-                          ಚಿಕ್ಕವನಿದ್ದಾಗ   ನಾನ್  ಹೇಳಿದ್ದ  ಮಾತೆ ಕೇಳ್ತಾ ಇದ್ದ ..., ಈಗ ನೋಡ್ರೀ
                            ಕಾಲ  ಕೆಟ್ಟಬಿಡ್ತು  ಕಣ್ರೀ ......

ಶಾರದಮ್ಮ    :-        ಹಮ್ಮ್ ....ಅಂದ  ಹಾಗೇ ನಿಮ್  ಮಗಳು ಇವತ್ತು ಬರ್ತಾಳೆ ಅಲ್ವೇನ್ರೀ ...., ಅವ್ಳಿಗೆ  ಈ
                              ಹೂ   ಕೊಟ್ಟಬಿಡ್ರೀ ...
ಗಿರಿಜಮ್ಮ :-           ಅಯ್ಯೋ   .. ನಮ್  ಮಗುಗಾ ..?  ಅವ್ಳಿದ್ದು ಬಾಬ್    ಕಣ್ರೀ    .ಅವ್ಳು   ಹೂವು  ಗೀವು                                                       ಮುಡ್ಕೊಳಲ್ಲ .  ಪಾಪ .., ಈಗಿನ್ ಕಾಲದ ಹುಡುಗ್ರು ನೋಡಿ ....


                           .
ಶಾರದಮ್ಮ               ಅದೂ  ಹೌದು  ಬಿಡಿ ..., ಹೇಗೂ ನಿಮ್ ಮಗಳು ಬರ್ತಿದಾಳೆ , ನಾಳೆ ನಿಮ್ ಅಡಿಗೆಗೆ
                                          ಒಂದಿಷ್ಟು          ಸಹಾಯವಾಗುತ್ತೆ ....
                       
ಗಿರಿಜಮ್ಮ :-         ಅಯ್ಯೋ .... ಪಾಪ  ಆ ಮಗು ಏನ್ ಮಾಡತ್ತೆ ...?  ಅದಕೊಂದು ಕಾಪಿ  ಮಾಡೋಕೂ ಬರಲ್ಲಾರೀ  ....
                            ಓದೋ  ಮಗುಗೆ ಯಾಕ ತೊಂದ್ರೆ ಅಂತ  ಅದನ್ನೆಲ್ಲ  ನಾನೇ ಮಾಡ್ತಾ ಇದ್ದೇರೀ , ಈಗ್ಲೂ ಅಷ್ಟೇ 
                            ಮಗು ಕೆಲಸಕ್ಕೆ  ಹೋಗ್ಬರೋಷ್ಟರಲ್ಲಿ ಸುಸ್ತ್ಹಾಗಿರತ್ತೆ  ಅಂತ ಎಲ್ಲ ಅವರತ್ತೇನೆ ಮಾಡ್ತಾರೆ ...

ಶಾರದಮ್ಮ  :-          ಅದೂ  ಸರಿ ಬಿಡಿ..ನಾಳೆ ನಿಮ್ಮ ಅಳಿಯನೂ ಬರ್ತಾ ಇದಾನೆನ್ರಿ ?
 ಗಿರಿಜಮ್ಮ :-  ಹೌದ್ರೀ .., ಎಂತ ಒಳ್ಳೆ ಅಳಿಯ ಅಂತೀರಿ! ನಮ್  ಮಗಳ ಯಾವ ಮಾತಿಗೂ ಇಲ್ಲ ಅನ್ನಲ್ಲಾರೀ ...., ಇಬ್ರೂ
                    ಎಷ್ಟು ಚೆನ್ನಾಗಿ ಹೊಂದುಕೊಂಡು ಇದಾರೆರೀ ...

ಶಾರದಮ್ಮ  :- ಒಳ್ಳೇದು ಬಿಡ್ರೀ .., ಬರ್ತೀನ್ರೀ .........


ಇದು  ಅತ್ತೆಯಂದಿರಿಗೆ ಮಾತ್ರ ಸೀಮಿತ ಅಲ್ಲ .., ನಿರೂಪಿಸಲು  ವಿನೋದಾಥ್ಮಕ  ಎಳೆ ಅಷ್ಟೇ ...,
ಒಂದೇ ಸಂಗತಿಯಲ್ಲಿನ  ವಿಭಿನ್ನ ದೃಷ್ಟಿಕೋನಕ್ಕೆ .. ಮತ್ತೊಂದಿಷ್ಟು  ವಿಷಯಗಳು:-

                 ##                                                                          ##

ಹುಡುಗಿ ತುಂಬಾ ಚೆಲ್ಲು ..                                                    ಹುಡುಗಿ  ಸೋಶಿಯಲ್

 ಮಾತು ಕಡಿಮೆ, ಜಂಬ                                                       ಹುಡುಗಿ ಗಂಬೀರ

 ತುಂಬಾ ನಿದಾನಿ                                                                ತುಂಬಾ ಸಮಾದಾನಿ

ಆಕೆಗೆ ಗಡಿಬಿಡಿ                                                                      ತುಂಬಾ ಚುರುಕು

ಓದೋದು ಬಿಟ್ಟು ಬೇರೆ ಪ್ರಪಂಚಾನೇ ಗೊತ್ತಿಲ್ಲ                              ಓದಲು ತುಂಬಾ ಜಾಣೆ

ಆತ  ನಿಷ್ಟುರಿ                                                                          ಆತ  ತುಂಬಾ ನೇರ


ಕೊರೆತ .., ಮಾತು ಜಾಸ್ತಿ                                                          ಒಳ್ಳೆ ವಾಗ್ಮಿ


      ಸಹಜ  ಅನ್ಸತ್ತೆ ಅಲ್ವ ..!  ಟೇಕ್ ಇಟ್ ಈಸೀ  ಬಿಡ್ರೀ ...


ಚೈತ್ರ  .ಬಿ .ಜಿ . ಕಾನುಗೋಡು





                       

Saturday, November 17, 2012

ಇದನ್ನು ನನ್ನ ಅಪ್ಪ ಅಮ್ಮಂಗೆ ಹೇಳಿ ಪ್ಲೀಸ್ .....


                ಹಮ್ಮ್ ..,ಇನ್ನೂ ಹೊಮೆವೊರ್ಕ್ ಮಾಡ್ಬೇಕು ..,   ಹಾಲು ಕುಡೀಬೇಕು .., ಯಾಕೋ ಬೇಜಾರು ನಂಗೆ ..! ನನ್ನ ಜೊತೆ ಆಡೋಕೆ ಯಾರೂ ಇಲ್ಲ ಇಲ್ಲಿ ...., ನನ್ನ  ಜೊತೆ ಮಾತಾಡೋಕೆ ಯಾರಿಗೂ ಟೈಮ್ಮ್ ಇಲ್ಲಾ ...,     ನಂಗೆ  ಕೆಲವು ವಿಷಯಗಳು ಅರ್ಥವೇ ಆಗೋದಿಲ್ಲ .. 




          ಅಲ್ಲಾ .. ಅಮ್ಮ ಅಂತಾಳೆ , "ನೀನು ತುಂಬಾ ಚಿಕ್ಕವಳು , ನಿಂಗೆ  ಗೊತ್ತಾಗಲ್ಲ ಸುಮ್ನೆ ಇರು " , ಇನ್ನೊಮ್ಮೆ ಅಂತಾಳೆ , " ದೊಡ್ದವಾಗಿದ್ದಿಯ ಅಷ್ಟು ಗೊತ್ತಾಗಲ್ವ ನಿಂಗೆ ?",  .., ಹಾಗಾದರೆ ನಾನು ಚಿಕ್ಕವಳ ?  ದೊಡ್ಡವಳ?
          
            ನಮ್ಮ ಮಿಸ್ಸ್  ಅಂತಾರೆ ..., ಸುಳ್ಳು ಹೇಳಬಾರದು ಅಂತ , ಆದ್ರೆ ಮೊನ್ನೆ ಫೋನ್ ಬಂದಾಗ , ಅಪ್ಪ ಮನೇಲೆ ಇದ್ರೂ .., ನಾನಿಲ್ಲ ಹೇಳು ಅಂದ್ರು .., ಹಾಗಾದರೆ ಸುಳ್ಳು ಹೇಳ್ಬೇಕ ? ಅಥವ ಹೇಳ್ಬಾರ್ದ ?     



         

ಚಿತ್ರ :ಅಂತರ್ಜಾಲ ಕೃಪೆ 

           

 

          ನಂಗೆ  ಯಾವಾಗಲೂ  B + grede ಬರೋದು .., ಮೊನ್ನೆ ಯಾವುದೊ function ನಲ್ಲಿ ಅಮ್ಮ  ,'ನನ್ನ ಮಗಳು ಕ್ಲಾಸಿಗೆ ಫಸ್ಟ್' ಅಂತಿದ್ಲು , 10 ರಾಂಕ್  ಬಂದ್ರೆ 1 rank u ಅನ್ಬೇಕಾ ?  ಯಾಕೆ ?




           ಮೊನ್ನೆ ಎಷ್ಟು ಚೆನ್ನಾಗಿ ಡ್ರಾಯಿಂಗ್ ಮಾಡಿದ್ದೆ ಗೊತ್ತಾ   ..? ಅಮ್ಮಂಗೆ ತೋರ್ಸಾಕ್ ಹೋದ್ರೆ  ಟೆನ್ಶನ್ ನಲ್ಲಿ ಇದ್ದೀನಿ ಅಷ್ಟು ಗೊತ್ತಾಗಲ್ವ ಅಂತ  ರೆಗ್ಬಿಟ್ರು  ! ಎಷ್ಟು ಬೇಜಾರು ಆಯಿತು ಗೊತ್ತಾ   ನಂಗೆ ...?  ಮತ್ತೆ ಯಾಕೋ ಡ್ರಾಯಿಂಗ್ ಮಾಡೋಕೆ ಮನಸೇ ಬರ್ತಿಲ್ಲ ..

             
           ಸ್ಕೂಲ್ ನಲ್ಲಿ  ನಮ್ ಮಿಸ್ ಅಂತಾರೆ ಜಗಳ ಆಡಬಾರದು , ಅಮ್ಮ ಅನ್ನೋದೂ ಹಾಗೆ ..., ಆದ್ರೆ ಅಪ್ಪ ಅಮ್ಮ 'ನಿಂದೆ ತಪ್ಪು, ನಿಂದೆ ತಪ್ಪು' , ಅಂತ ಎಷ್ಟೊಂದು ಜಗಳ ಆಡ್ತರಲ್ಲ್ವ ? ನಾನು ಸ್ವಲ್ಪ ಪಕ್ಕದ ಮನೆ ಸಂಜು ಜೊತೆ ಜಗಳ ಆಡಿದ್ರೆ ಅದ್ರಲ್ಲಿ ತಪ್ಪೇನು ?  ಅಪ್ಪ ಅಮ್ಮ ಜಗಳ ಆಡ್ಕೊಂಡು ಸ್ವಲ್ಪ ಹೊತ್ತು ಮಾತೆ ಬಿಡ್ತಾರೆ .., ನಾನು ಅಮ್ಮನತ್ರ ಮಾತು ಬಿಟ್ರೆ " ಜಾಣ  ಮಕ್ಕಳು ಹಾಗ್ ಮಾಡ್ತಾರ ..?" ಅಂತಾಳೆ ; ಹಾಗಾದ್ರೆ ಅಪ್ಪ ಅಮ್ಮ ಜಾಣರಲ್ವ ...?

   
             ಅಮ್ಮಂಗೆ  ಬೆಳ್ಳಗ್ಗೆ  ಟೈಮ್ಮೆ  ಇರಲ್ಲ .., ಬೇಗ ಬೇಗ ಹೊರಟ್ಬಿಡ್ತಾಳೆ  ಆಫೀಸ್ ಗೆ .., ಸಂಜೆ ತುಂಬಾ ಸುಸ್ತಾಗಿರತ್ತೆ  ಅಮ್ಮಂಗೆ ! ಒಮ್ಮೊಮ್ಮೆ ಅಪ್ಪ ಬರೋಷ್ಟರಲ್ಲಿ  ನಾನು  ಮಲಗ್ಬಿಟ್ಟಿರ್ತೀನಿ .., ಬೆಳಗ್ಗೆ ಅಪ್ಪ ತುಂಬಾ ಬ್ಯುಸಿ ...,ಎಷ್ಟೋ ಸಲ ನಾನೆಳೋಷ್ಟರಲ್ಲಿ  ಅಪ್ಪ ಮನೆ ಬಿಟ್ಟಿರ್ತಾರೆ ..! 

             
             ನಾನು ಟೀವಿ ನೋಡ್ಬೇಕು ಅನ್ಕೊತೀನಿ .., ಟೈಮ್ ಆಯಿತು ಹೊಮೆವೊರ್ಕ್ ಮಾಡು ಅಂತಾರೆ, ಆಟ ಆಡಬೇಕು ಅನ್ಕೋತೀನಿ .. ಇದು ಟೀವಿ ನೋಡೋ ಟೈಮ್ ಅಂತಾರೆ.., ಅಲ್ಲ .. ಈ ಟೈಮ್ ಅನ್ನೋದು ಯಾಕಾದ್ರೂ ಇದ್ಯೋ ..? ..., ಕಣ್ಣು ಮುಚ್ಚಿ ಮಲ್ಕೊಂಡಾಗ    'ಮಲಗಿದ್ಯ ಪುಟ್ಟಿ .. ಅಂತ ಹಣೆಗೆ ಒಂದು ಮುತ್ತು ಕೊಡ್ತಾಳೆ ಅಮ್ಮ ..' ಮುತ್ತು ಕೊಟ್ಳು ಅಂತ ಕಣ್ಬಿಟ್ರೆ ,' ಟೈಮ್ ಆಯಿತು ಮಲಕ್ಕೋ ಅಂತಾ ಬೈತಾಳೆ ..' ಅಮ್ಮಂಗೆ ಎದ್ದಾಗ   ಮುತ್ತು ಕೊಡೋಕೆ ಏನು  ಕಷ್ಟ ...? 

         
           ಇದನ್ನೆಲ್ಲಾ ಅಪ್ಪ ಅಮ್ಮಂಗೆ ಹೇಳಕ್ ಹೋದ್ರೆ "ತುಂಬಾ ಮಾತೊಡೋದು ಕಲ್ತಿದಿಯ  ನೀನು   ..ಟೀವಿ ನೋಡೋದು ಸ್ವಲ್ಪ ಕಡಿಮೆ ಮಾಡು, ನಾವು ಇಷ್ಟೆಲ್ಲಾ ಕಷ್ಟ ಪಡ್ತಾ ಇರೋದು ನಿಂಗಾಗೇ .." ಅಂತಾರೆ ,  ನಂಗೆ ನಂಜೊತೆ ಆಟ ಆಡಿದ್ರೆ  ಸಾಕು , ಮಾತಾಡಿದ್ರೆ ..ಸಾಕು .., ಅದಿಕ್ಕ್ ಕಷ್ಟ ಯಾಕ್ ಪಡ್ಬೇಕು !?
 
   
ಇದನ್ನು ನನ್ನ ಅಪ್ಪ ಅಮ್ಮಂಗೆ  ಹೇಳಿ ಪ್ಲೀಸ್ ..... 

Wednesday, November 7, 2012

ಮದರಂಗಿಯಲ್ಲಿ ನೆನಪಿನ ರಂಗು ತುಂಬಿದೆ








                ಮದುವೆ ಮನೆ ಎಂದರೆ ಇನ್ನಿಲ್ಲದ ಸಂಬ್ರಮ !  ತೀರ ಹತ್ತಿರದ ಮದುವೆ ಅಂದರೆ  ಸಂಬ್ರಮದ  ತೂಕ ಇನ್ನೂ ಹೆಚ್ಚು !!   ಪೆಟ್ಟಿಗೆಯಲ್ಲಿ ಮಡಚಿಟ್ಟ  ಹಳೆಯ ರೇಷ್ಮೆ ಸೀರೆಗೆ ಹೊರ ಪ್ರಪಂಚವನ್ನು ನೋಡುವ ಸಂಬ್ರಮ .., ಬ್ಲೌಸು ಮ್ಯಾಚಿಂಗ್ ಆಗತ್ತಾ ..?  ಅಳತೆ ಸರಿಯಾಗಿದೆಯ ?  ಈ ಸೀರೆ ಹೋದ ವರ್ಷ  ಉಟ್ಟಿರುವೆನ ? ಹೀಗೆ ಸಾಗುತ್ತದೆ ಹೆಂಗಸರ ಯೋಚನೆಗಳು !!  ಇನ್ನೂ ಹೆಣ್ಣುಮಕ್ಕಳಿಗಂತೂ  ಮುಗಿಯದ  ಶಾಪಿಂಗ್ !! ಮೊದಲ ಸಲ ಸೀರೆ ಉಡುವ ಸಂಬ್ರಮವಂತೂ  ಅನುಭವಿಸಿದ ಹುಡುಗಿಯರಿಗೆ ಗೊತ್ತು !! ಯಾವ ಸೀರೆ ಚೆನ್ನಾಗಿರತ್ತೆ ? ಯಾವ ಕಲರ್ ?  ಬ್ಲೌಸ್ ಯಾವ ಡಿಸೈನ್ ಇದ್ದರೆ ಚೆಂದ ? ಸೀರೆ ಉಟ್ಟರೆ ತಾನು ನಡೆಯಬಲ್ಲೇನ ?  ಮ್ಯಾಚಿಂಗ್  ಬಳೆ , ಸರ .. ಒಹ್..!! ಶಾಪಿಂಗ್  ಸುರಿಮಳೆ !!


       ನಗರ ಜೀವನ ನಡೆಸುತ್ತಿರುವವರು .., ಮದ್ಯದೊಂದು  ಭಾನುವಾರ ಬಂದರೆ 3 ದಿನ ರಜ ಹಾಕಬಹುದಲ್ಲ ಅಂತ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಾರೆ .., ಲಗ್ಗೆಜೆ ಪ್ಯಾಕ್  ಮಾಡಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು , ಮುಂಚೆಯೇ ಬುಕ್ ಮಾಡಿಸಿದ ಬಸ್ಸನ್ನು  ಹತ್ತಿಕೊಳ್ಳುವಾಗ  ಎಂತದ್ದೋ ಸಂಬ್ರಮ !

         ಮದುವೆ ಮನೆಯಲ್ಲಿ   ತುಂಬಾ  ಇಷ್ಟವಾಗುವ ಸಂಗತಿಯೆಂದರೆ  , ನಾವು ಎಷ್ಟೋ ವರ್ಷಗಳಿಂದ  ನೋಡದೇ  ಇರುವ ಎಲ್ಲರನ್ನೂ ಒಟ್ಟಿಗೆ  ನೋಡಬಹುದು ! ಚಿಕ್ಕಮ್ಮ ,ಚಿಕ್ಕಪ್ಪ ,ಅತ್ತೆ , ಮಾವ , ಅವರ ಮಕ್ಕಳು ,ಅತ್ತಿಗೆ , ಭಾವ , ಅಜ್ಜ , ಅಜ್ಜಿ ಅಮ್ಮುಮ್ಮ .., ಹೀಗೆ ..,  ಹಾಗೆ ಸುಮ್ಮನೆ  ಎಲ್ಲರೂ ಸೇರುವುದು  ವಾಸ್ತವಕ್ಕೆ ದೂರವಾದ ಮಾತು , ಅದೇನೇ  ಚಿಕ್ಕ ಪುಟ್ಟ ಸಮಸ್ಯೆ, ತೊಂದರೆ  ತಾಪತ್ರಯಗಳಿದ್ದರೂಗಳಿದ್ದರೂ   ಮನೆಯೊಳಗೇ  ಇಟ್ಟು ಬಾಗಿಲು ಹಾಕಿ ಮದುವೆ  ಮನೆಗೆ ಹೊರಟು  ಬಿಡುತ್ತೇವೆ !

   
         ಹಳ್ಳಿಗಳಲ್ಲಿ  ಮದುವೆ  ಅಂದರೆ  2 ದಿನ ಮುಂಚೆಯೇ ಕಾರ್ಯಕ್ರಮಗಳು  ಶುರುವಿಟ್ಟು ಕೊಳ್ಳುತ್ತದೆ , ಗಂಡಿನ  ಮನೆಯಾದರೆ  ಸೋಮವರ್ಥನೆ , ಹೆಣ್ಣಿನ ಮನೆಯಾದರೆ ನಾಂದಿ ಇಟ್ಟುಕೊಳ್ಳುತ್ತಾರೆ .  ಮರುದಿನ ಬೆಳ್ಳಗ್ಗೆ ಬೇಗ ಎದ್ದು  ತಯಾರಿಯಾಗಿ ಗಂಡಿನವರಾದರೆ ದಿಬ್ಬಣ ಹೋರಡಬೇಕು , ಹೆಣ್ಣಿನವರಾದರೆ  ದಿಬ್ಬಣ ಬರಮಾಡಿಕೊಳ್ಳಬೇಕು . ಆ ನಂತರ ಹಾರ ಬದಲಾವಣೆ , ಮಾಂಗಲ್ಯ ಧಾರಣೆ , ಸಪ್ತಪದಿ ..  ಹೋಮ .. ಹೀಗೆ ಸಾಗುತ್ತದೆ  ಮದುವೆಯ ಶಾಸ್ತ್ರಗಳು .

     
       ಮದುವೆಗಳನ್ನು ಊರು ಹಳ್ಳಿಗಳ ಕಡೆ ನೋಡಿ ಅಬ್ಯಾಸವಿದ್ದ  ನನಗೆ ಬೆಂಗಳೂರು ಮದುವೆ  ನೋಡಿ ಆಶ್ಚರ್ಯ  ಪಟ್ಟಿದ್ದೆ  ! ಇಲ್ಲಿ ಮದುವೆ  ಅಂದರೆ  ಬಣ್ಣ ಹಚ್ಚಿಕೊಂಡ ಮದುಮಕ್ಕಳು ಸ್ಟೇಜ್  ಮೇಲೆ ನಿಂತಿರುತ್ತಾರೆ . ನಾವು ಸ್ಟೇಜ್  ಮೇಲೆ ಹೋಗಿ ಕ್ಲೋಸ್ ಅಪ್  ಆಡ್ ತರ  ಹಲ್ಲು ತೋರಿಸಿ ಹ್ಯಾಪಿ ಮ್ಯಾರೀಡ್  ಲೈಫ್ ಅಂತ ಉಸುರಿ ಫೋಟೋಗ್ರಾಫರ್  ಪರ್ಮಿಷನ್ ಕೊಟ್ಟಮೇಲೆ ಸ್ಟೇಜ್ ನಿಂದ ಕೆಳಗಿಳಿದು ಬರಬೇಕು ! ಹಾಗಾದರೆ ಮದುವೆ ಮುಗಿದಂತೆ !  ಅಥವಾ ನಾನು ನೋಡಿದ ಮದುವೆಗಳು ಮಾತ್ರ ಹಾಗಿತ್ತೇನೋ ..

       ನಗರದಷ್ಟಲ್ಲವಾದರೂ ಹಳ್ಳಿಗಳಲ್ಲಿ  ಮದುವೆಯ ರೀತಿ ರಿವಾಜು ಹಾಗೆ ಇದ್ದರೂ ಸ್ವರೂಪದಲ್ಲಿ ಬದಲಾವಣೆಯಾಗಿದೆ .  ಮನೆಯ ಮುಂದಿನ ಚಪ್ಪರ ಮರೆಯಾಗಿ ಅದೇ ಜಾಗದಲ್ಲಿ ಶಾಮಿಯಾನ ಬಂದು ನಿಂತಿದೆ . 4-5 ದಿನಗಳವರೆಗೆ ನಡೆಯುತ್ತಿದ್ದ ಮದುವೆಗಳು 2 ದಿನಕ್ಕೆ ಬದಲಾಗಿದೆ  . ಕೂಲಿ ಕೆಲಸಗಾರರ  ಅಭಾವ , ಜನರ ಅಭಾವ , ಸಮಯ ಅಭಾವಗಳು  ಮದುವೆಗಳಲ್ಲಿ  ಕೆಲವು ಮಾರ್ಪಾಡುಗಳನ್ನು ತಂದಿದೆ .

          
        ಅಣ್ಣನ ಮದುವೆ  ಮುಗಿಸಿ ಬೆಂಗಳೂರಿಗೆ ಬಂದು 4 ದಿನಗಳಾದರೂ ಇನ್ನೂ ಅದರದ್ದೇ ಗುಂಗು !   ಕೈಯಲ್ಲಿನ ಮದರಂಗಿ , ದಿಬ್ಬಣ ಬಸ್ಸಿನ ಅಂತಾಕ್ಷರಿ , ಎಲ್ಲರೂ ಸೇರಿ ಕಲೆತು  ಆಡಿದ ಮಾತು , ನಗು, ರಾತ್ರಿಯಲ್ಲಿ ಮಿನುಗುವ ಲೈಟ್ ಸೆಟ್ಟಿಂಗ್ಸ್ , ಹುಡುಗಿಯರ  ಗೆಜ್ಜೆ ದನಿ  , ಹೆಂಗಸರ ಬಳೆ ಸದ್ದು , ಮಕ್ಕಳ ಕೂಗಾಟ, ಎಲ್ಲರ ಗಡಿಬಿಡಿ , ಗಡಿಬಿಡಿಯಲ್ಲಿನ  ಸಂಬ್ರಮ , ಮದುವೆ  ಮನೆಯಲ್ಲಿ  4-5 ದಿನ ಹೇಗೆ ಕಳೆಯಿತು ತಿಳಿಯದಷ್ಟು ಸಂಬ್ರಮವಾಗಿ ಸಮಯ ಉರುಳಿತ್ತು .


       ಅಣ್ಣನ ಮದುವೆ ಮುಗಿಸಿ  ಅಲ್ಲಿಂದ ಹೊರಟುನಿಂತಾಗ  ಭಾರವಾಗಿದ್ದು;  ಬ್ಯಾಗನ್ನು ಏರಿಸಿಕೊಂಡ  ಹೆಗಲೊಂದೇ  ಅಲ್ಲ ಅನ್ನಿಸಿತ್ತು. ..!!   ಈಗ ಉಳಿದಿದ್ದು  ಮೊಣಕೈಯವರೆಗೆ  ಹಚ್ಚಿಕೊಂಡ ಮದರಂಗಿ ಮತ್ತು  ಅದನ್ನು ನೋಡಿದಾಗಲೆಲ್ಲ ಮರುಕಳಿಸುವ ಅಣ್ಣನ ಮದುವೆಯ  ಸಿಹಿ ನೆನಪು ಮಾತ್ರ !!!