ಕಾಲೇಜಿನ ಕಾರಿಡಾರಿನ ಕಂಬಕ್ಕೊರಗಿ ಒಂದು ಕಾಲನ್ನು ಕಂಬಕ್ಕಾನಿಸಿ ಎದೆಯ ಮೇಲೆ ಕೈ ಕಟ್ಟಿ ನಿಂತ ನನಗೆ ನೀನು ಆ ತುದಿಯಿಂದ ಬರುವುದನ್ನು ನೋಡುತ್ತಿದ್ದರೆ ಕಾಲವು ಹಾಗೆ ನಿಂತು ಹೋಗಬಾರದೇ ಎನಿಸುತ್ತಿದ್ದುದು ಸುಳ್ಳಲ್ಲ .., ಕೆನ್ನೆ ಮೇಲೆ ಆಟವಾಡುತ್ತಿದ್ದ ಕೂದಲು .., ಕಿವಿಯಲ್ಲಿ ತೂಗುತ್ತಿದ್ದ ಚಿನ್ನದ ರಿಂಗು ನಿನ್ನ ಮಾತಿಗೆ ತಾಳ ಹಾಕುತ್ತಿದ್ದ ಪರಿ .., ಮಾತಿಗೊಮ್ಮೆ ವಿಸ್ಮಯದಿಂದ ಅಗಲವಾಗುತ್ತಿದ್ದ ಕಡು ಕಪ್ಪು ಕಣ್ಗಳು ...ಮತ್ತು ಅದರೊಳಗೆ ಜಾರಿ ಬಿದ್ದ ನಾನು .., ಗಾಳಿಗೆ ಕೊಂಚವೇ ಹಾರುತ್ತಿದ್ದ ನಿನ್ನ ಚೂಡಿದಾರದ ವೇಲು ..., ಒಮ್ಮೊಮ್ಮೆ ನೀನು ಮುಡುಯುತ್ತಿದ್ದ ಮಲ್ಲಿಗೆ ...ಅದರ ಗಂಧ ನನ್ನಲ್ಲಿ ತರುತ್ತಿದ್ದ ಸಣ್ಣನೆಯ ಕಂಪನ ... , ಅತಿ ಮೆಲ್ಲಗೆ ಕೇಳಿಸುತ್ತಿದ್ದ ಗೆಜ್ಜೆಯ ಸದ್ದಿಗೆ ತಪ್ಪುತ್ತಿದ್ದ ನನ್ನ ಹೃದಯ ಬಡಿತ..., ಎಲ್ಲಕಿಂತ ಮಿಗಿಲಾಗಿ ನಿನ್ನ ನಗು.... , ನೀನು ನಕ್ಕ ನಗುವನ್ನು ಹೆಕ್ಕಿ ನನ್ನ ಜೇಬಲ್ಲಿರಿಕೊಂಡಿದ್ದೇನೆ , ನಿನ್ನ ನಗೆಯ ತಂಪು ನನ್ನ ಎದೆಯ ತುಂಬೆಲ್ಲ ....., ನಿನ್ನಿಂದ ದೃಷ್ಟಿ ಬದಲಾಯಿಸಲು ನನ್ನ ಕಣ್ಣುಗಳು ನನಗೇ ಸಹಕರಿಸುತ್ತಿರಲ್ಲಿಲ್ಲ .., ಇದ್ಯಾವುದರ ಅರಿವೂ ನಿನಗಿರಲಿಲ್ಲ .., ಅಥವ ಇದ್ದಂತೆ ತೋರಿಸಿಕೊಕೊಳ್ಳುತ್ತಿರಲ್ಲಿಲ್ಲ ..., ನೀವು ಹುಡುಗಿಯರು ಸ್ವಲ್ಪ ಹಾಗೆ ತಾನೇ ...!?
ಗೆಳೆಯರು ಕೇಳುತ್ತಿದ್ದರು ' ಏನೋ ಲವ್ವಾ ..?' ತಲೆಬಗ್ಗಿಸಿ ಮೆಲುನಗುತ್ತಿದ್ದೆ , ನನಗೆ ಗೊತ್ತಿದ್ದರೆ ತಾನೇ ಹೇಳಲು ..! ಮಾತಡಸಲ್ವೇನೋ ...?' ಅನ್ನುತ್ತಿದ್ದರು , ಅದಕ್ಕೂ ನನ್ನ ನಗುವೇ ಉತ್ತರ .., ಕಾಲೇಜಿನ 3 ವರ್ಷದಲ್ಲಿ ಒಂದು ದಿನಕ್ಕೂ ನಾನು ನಿನ್ನ ಮಾತಾಡಿಸುವ ಪ್ರಯತ್ನವನ್ನೇ ಮಾಡಲ್ಲಿಲ್ಲ .., ಎಷ್ಟೋ ಸಲ ನಿಶ್ಯಬ್ದ ರಾತ್ರಿಯ ಒಂಟಿತನದಲ್ಲಿ ಯೋಚಿಸುತ್ತಿದ್ದೆ .., ಬಹುಷ.. ನನಗೆ ಪ್ರ್ರೀತಿ, ಗೀತಿ ಮದುವೆಯೆಂಬ ಗಂಭೀರತೆಯ ಸುಳಿಯಲ್ಲಿ ಸಿಕ್ಕಲು ಮನಸು ಭಯವಿಡುತ್ತಿತ್ತು , ಮನೆಯ ಮೇಲಿದ್ದ ಸಾಲ .. ಅಪ್ಪನ ಬೇಜಾವಬ್ದಾರಿತನ .., ಅಮ್ಮನ ಖಾಯಿಲೆ ..,ಅಕ್ಕನ ಮದುವೆ ಜವಾಬ್ದಾರಿ ..., ನನ್ನ ಮುಂದಿನ ಓದು.... ನಡೆಯಬೇಕಾದ ದಾರಿ ದೂರವೂ , ಕಷ್ಟವೂ ಅಸ್ಪಷ್ಟವೂ ಇದ್ದಂತನಿಸಿತು . ಊಹುಂ ... ನಿನ್ನನ್ನು, ನಿನ್ನ ನಗುವನ್ನು ನನ್ನ ಪರಧಿಯೊಳಕ್ಕೆ ಸೇರಿಸಿಕೊಳ್ಳಲು ಮನಸ್ಸು ಯಾಕೋ ನಿರಾಕರಿಸುತ್ತಿತ್ತು ..., ಮನಸು, ಕಾಲ ಎರಡೂ ಪಕ್ವವಾಗಿಲ್ಲ ಎನಿಸಿತ್ತು . ಅದಕ್ಕೆ ಇರುವಷ್ಟು ಕ್ಷಣ ನಿನ್ನ ನಗುವಿನ ಪರಧಿಯೊಳಕ್ಕೆ ನಾನಿದ್ದುಬಿಡುತ್ತಿದ್ದೆ .
" ಪಪ್ಪಾ .. ಲುಕ್ ಅಟ್ ಮೀ ....", ತಲೆ ಎತ್ತಿ ನೋಡಿದೆ , ಚಿಟ್ಟೆಯಂತೆ ಹಾರಿಬಂದ ಮಗಳು ಎದುರಿನ ಸೋಫಾ ಮೇಲೆ ಕುಳಿತ್ತಿದ್ದಳು , ಏನು ದೈರ್ಯ! ಏನು ಕಾನ್ಫಿಡೆನ್ಸು! ಸ್ವಲ್ಪವೂ ಸಿಗ್ಗಿಲ್ಲ ಹುಡುಗಿಗೆ !! ಮೆಚ್ಚುಗೆಯ ನಗು ನನ್ನ ತುಟಿಗಳ ಮೇಲೆ ! ಪಪ್ಪಾ .. ಗೈ ಇಸ್ ಸೋ ನೈಸ್ .. ಇಟ್ ಸೀಮ್ಸ್ ಹಿ ಲವ್ಸ್ ಮಿ ಪಪ್ಪಾ .. .." 2ನೇ puc ಓದುತ್ತಿದ್ದ ನನ್ನ ಮಗಳು ಇಷ್ಟೊಂದು ನೇರವಾಗಿ ಹೇಳುತ್ತಿದ್ದರೆ .., ಮೂಕವಾಗಿ ಕೇಳುವ ಸರದಿ ನನ್ನದಾಗಿತ್ತು . ಮಡದಿಯೊಂದಿಗೆ ಅಂದಿದ್ದೆ , ಕಾಲೇಜ್ ಡೇಸ್ ನಲ್ಲಿ ಒಂದು ಹುಡುಗಿಗೆ ಲೈನ್ ಹಾಕ್ತ ಇದ್ದಿದ್ದೆ ಕಣೆ... ' , ಅದಕ್ಕವಳು " ಅಯ್ಯೋ ಅವ್ಳಿನ್ನೇ ಮದುವೆಯಾಗೊದಲ್ವೇನ್ರಿ!! " ಅಂತ ನಗೆಯಾಡಿದ್ದಳು .
ಇವತ್ತು ನನ್ನ ಮಗಳಿಗೆ ಕೇಳಬೇಕಿದೆ , 'ಆತ ಬದುಕಿನ ಭಾರವನ್ನು ತೆಗೆದುಕೊಳ್ಳಲು ತಯಾರಾಗಿರುವನಾ ? ಅಥವ ನೀನು ನಕ್ಕ ನಗುವನ್ನು ಜೇಬಲ್ಲಿರಿಸಿಕೊಂಡು ಮುಂದೆ ನಡೆದುಬಿಡುತ್ತನಾ ? ಕಾಲ , ಮನಸು ಎರಡೂ ಪಕ್ವವಾಗಿಲ್ಲದ ಕತೆಯನ್ನು ಆಕೆಗೆ ಹೇಳಬೇಕಿದೆ ನಾನು ..........
ಚೈತ್ರ ಬಿ .ಜಿ.