ಅವಳು : ಪ್ರೀತಿ ಅಂದ್ರೆ ಏನು ....?
ಅವನು : ಹಮ್ಮ..., ಪ್ರೀತಿ ಅಂದ್ರೆ ನೀನೆ ಕಣೆ!
ಅವಳು : ಏ ಹೋಗು, ಹೇಳು ಪ್ರೀತಿ ಅಂದ್ರೆ ಏನು?
ಅವನು : ಹೋಗ್ಲಿ ನೀನೆ ಹೇಳು ಪ್ರೀತಿ ಅಂದ್ರೆ ಏನು ಅಂತ ?
ಅವಳು : ಪ್ರೀತಿ ಅಂದ್ರೆ ನಾನು ನಿನಗೆ ಏನು ಬೇಕಾದರೂ ಮಾಡ್ತೀನಿ ಅದೇ ಅಲ್ವ ಪ್ರೀತಿ ಅಂದ್ರೆ ?
ಅವನು : ಹಮ್ಮ... ಆಮೇಲೆ?
ಅವಳು : ಹಮ್ಮ.. ಆ ಮೇಲೆ ನಾನು ನಿಂಗೆ ಜೀವ ಬೇಕಾದರೂ ಕೊಡ್ತಿನಿ.
ಅವನು : ನಿನ್ನ ಜೀವ ತಗಂಡು ನಾನೇನು ಮಾಡಲೇ ..? ಹೋದ ಜೀವನ ಮೈನ್ಟೈನ್ ಮಾಡೋದು ತುಂಬಾ ಕಷ್ಟ!
ಅವಳು : ಏ ಹೋಗು ತಮಾಷೆ ಮಾಡಬೇಡ ನೀನು .., ಸೀರಿಯಸ್ ಆಗಿ ಹೇಳ್ತಾ ಇದ್ದೀನಿ, ನಾನು ನಿಂಗೆ ನನ್ನ ಜೀವ ಬೇಕಾದರೂ ಕೊಡ್ತಿನಿ.
ಅವನು : ನಾನೂ ಸೀರಿಯಸ್ ಆಗೇ ಹೇಳ್ತಾ ಇರೋದು ಕಣೆ, ಅಲ್ಲಾ ಯಾರದ್ದೂ ಜೀವ ತಗಂಡು. ಯಾರದ್ದೋ ಜೀವ ತಗೊಂಡು ಯಾರೂ ಏನೂ ಮಾಡೋದಕ್ಕೆ ಆಗಲ್ಲ ಕಣೆ!
ಅವಳು : ಜೀವ ಬೇಡ ಅಂದ್ರೆ ಬಿಡು, ಮತ್ತೆ ನಿನಗಾಗಿ ನಾನು ಏನು ಬೇಕಾದರೂ ಮಾಡ್ತೀನಿ ಗೊತ್ತಾ?
ಅವನು : ನಿನಗೊಂದು ವಿಷ್ಯ ಗೊತ್ತ? ಯಾರೂ ಯಾರಿಗೂ ತುಂಬಾ ಒಳ್ಳೇದು ಮಾಡೋಕೆ ಸಾದ್ಯ ಇಲ್ಲ ಕಣೆ?!
ಅವಳು : ಹಾಗಾದ್ರೆ ನೀನು ನನ್ನ ಪ್ರೀತಿಸಲ್ವ?
ಅವನು : ತುಂಬಾ ಪ್ರೀತಿಸ್ತಿನಿ !
ಅವಳು : ಹೇಳೋ ಪ್ರೀತಿ ಅಂದ್ರೆ ಏನು?
ಅವನು : ನೋಡೇ ಪ್ರೀತಿ ಅಂದ್ರೆ ನಿನ್ನ ಪ್ರೀತಿಸೋದು, ನಿನ್ನ ಪ್ರೀತಿಸೋದು ಅಂದ್ರೆ ನಿನ್ನ ವ್ಯಕ್ತಿತ್ವವನ್ನು ಪ್ರೀತಿಸೋದು!
ಅವಳು: ...!
ಅವನು : ವ್ಯಕ್ತಿತ್ವನ್ನು ಪ್ರೀತಿಸೋದು ಅಂದ್ರೆ ನಿನ್ನ ಅಭಿಪ್ರಾಯವನ್ನು ನಾನು ಒಪ್ಪದೇ ಇದ್ದಾಗಿಯೂ
ಗೌರವಿಸೋದು.
ಅವಳು : :...!
ಅವನು : ನೀನು ಅಂದ್ರೆ ಅದೇ ಕಣೆ, ನಿನ್ನ ಅಭಿಪ್ರಾಯ, ನಿನ್ನ ವ್ಯಕ್ತಿತ್ವ, ನಿನ್ನ ಕನಸು.
ಅವಳು :....!
ಅವನು : ನಮ್ಮ ಮದುವೆಯ ಗುರಿನೋ ಅದೇ, ನಾನೂ ಬೆಳೆದು ನಿನ್ನನ್ನೂ ಬೆಳೆಸೋದು, ನನ್ನ
ವ್ಯಕ್ತಿತ್ವ ನಿನ್ನ ಸಾನಿಧ್ಯದಲ್ಲಿ, ನಿನ್ನ ವ್ಯಕ್ತಿತ್ವ ನನ್ನ ಸಾನಿಧ್ಯದಲ್ಲಿ ಬೆಳಗೋದು, ಬೆಳೆಯೋದು!
ವ್ಯಕ್ತಿತ್ವ ನಿನ್ನ ಸಾನಿಧ್ಯದಲ್ಲಿ, ನಿನ್ನ ವ್ಯಕ್ತಿತ್ವ ನನ್ನ ಸಾನಿಧ್ಯದಲ್ಲಿ ಬೆಳಗೋದು, ಬೆಳೆಯೋದು!
ಅವಳು : ಇದು ಸಾದ್ಯನ ?
ಅವನು : ಯಾಕಿಲ್ಲ ? ಇನ್ನು ನೀನು ಹೇಳಿದ ಪ್ರೀತಿಯ ವಿಷ್ಯ ., ನಾನು ನಿನಗಾಗಿ ಏನೂ ಮಾಡಬೇಕಿಲ್ಲ!
ನೀನೂ ಕೂಡ! ನನ್ನ ಬೆಳಗಿನ ನಸುಕಿಗೊಂದು ನಿನ್ನ ನಗು ತುಂಬಿದ ಗುಡ್ ಮೊರ್ನಿಂಗು, ನಿನ್ನ ಹಬೆಯಾಡುವ ಕಾಫಿಗೊಂದು ನನ್ನ ಥ್ಯಾಂಕ್ಸ್, ಹೊರಟು ನಿಂತವನಿಗೊಂದು ಸ್ನೇಹ ತುಂಬಿದ ಟಾಟಾ, ದಣಿದು ಬಂದವನಿಗೊಂದು ನಿನ್ನ ಪ್ರೀತಿಯ ಸಾಂತ್ವಾನ, ನಿನ್ನ ಹೊಸ ಚೂಡಿದಾರಕ್ಕೊಂದು ನನ್ನ ಕಾಂಪ್ಲಿಮೆಂಟು, ನಿನ್ನ ಉಪ್ಪಿಟ್ಟಿಗೆ ಉಪ್ಪು ಮರೆತಾಗೊಮ್ಮೆ ನನ್ನ ಒಂದು ಹೋಗ್ಲಿ ಬಿಡು ಮನೆಗೆ ಬೇಗ ಬರೋ ಪ್ರಾಮಿಸ್ ಮಾಡಿ ಲೇಟ್ ಆದಾಗ
ನಿನ್ನ ಒಂದು 'ಇಟ್ಸ್ ಓಕೆ ', ನಂಗೆ ಕೋಪ ಬಂದಾಗ ನಾನು ಪೂರ್ತಿ 420 ಅಂತ ನಿಂಗೆ ಇರೋ ನೆನಪು, ನಿಂಗೆ ಸಿಟ್ಟು ಬಂದಾಗ, ಗುಡುಗು ಸಿಡಿಲು ಆದ್ಮೇಲೆ ಪ್ರೀತಿ ಮಳೆ ಸುರಿಯುತ್ತೆ ಅನ್ನೋ ನನ್ನ ಅರಿವು, ಉದ್ದೇಶವೇ ಇಲ್ಲದೆ ಆಡುವ ಹತ್ತು ನಿಮಿಷದ ಹರಟೆ, ಮತ್ತು ನಿನಗೆ
ಬೇಕೆನಿಸಿದಾಗಲೆಲ್ಲ ಸದಾ ಸಿದ್ಧವಿರುವ ನನ್ನ ಕಿವಿ!
ಅವಳು : ಕಿವಿನ ..?
ಅವನು : ಹೌದು ಕಣೆ .., ಪಾಪ ಹೆಣ್ಣು ಜೀವಗಳು! ತಾವು ಹೇಳುವುದನ್ನು ಕೇಳಿಸಿಕೊಳ್ಳಲು 2 ಕಿವಿ ಬೇಕು , ಹಾಗೆ ತಾನು ಹೇಳಿದ್ದೆಲ್ಲವನ್ನು ಕೇಳಿಸಿಕೊಳ್ಳುವ ಗಂಡನ್ನನ್ನು
ಪಡೆದ ಹೆಣ್ಣು ಜಗತ್ತಿನ ಅತ್ಯಂತ ತೃಪ್ತಿವಂತ ಹೆಂಡತಿ, ಹಾಗೆ ಕಿವಿ ತೆರೆದಿಟ್ಟು ಮೊಬೈಲ್ ಅಥವಾ ಲ್ಯಾಪ್ಟಾಪಿನಲ್ಲಿ ತಲೆ ಮುಳುಗಿಸದೆ, ಕಣ್ಣಲ್ಲಿ ಕೆಟ್ಟ ನಿರ್ಲಕ್ಷ್ಯವನ್ನು ಹೊರಗೆಡಹದೇ, ಹೇಳುವ ಮೊದಲೇ ಅದನ್ನು ಅಸಡ್ಡೆ ಎಂಬ ದೇಹ ಭಾಷೆ ತೋರಿಸದೆ, ಸ್ನೇಹ ಪೂರ್ವಕವಾಗಿ ಕೇಳಿಸಿಕೊಳ್ಳುವ ಗಂಡಸೇ ಅತ್ಯoತ ಯಶಸ್ವಿ ಗಂಡನಾಗಬಲ್ಲ!
ಅವಳು : ಹಾಗಾದರೆ ಗಂಡಸಿಗೂ ಕೇಳಲು ಎರಡು ಕಿವಿ ಬೇಡ್ವ ?
ಅವನು : ಹೆಚ್ಚಿನ ಸಲ ಆತನಿಗದು ಬೇಕಾಗದು, ಆತನು ಅಷ್ಟು ಸುಲಭವಾಗಿ ತೆರೆದುಕೊಳ್ಳಲಾರ, ಮೌನದ ಚಿಪ್ಪೊಳಗೆ ಆತನನ್ನು ಸ್ವಲ್ಪ ಹೊತ್ತು ಇರಗೊಟ್ಟರೆ ಆತನಿಗೆ ಅದೇ ಸಾಂತ್ವಾನ.
ಅವಳು : ಅಷ್ಟೆನ ಪ್ರೀತಿ ಅಂದ್ರೆ ..?
ಅವನು : ಹೌದು ಕಣೆ! ಸಂತೋಷ, ನೆಮ್ಮದಿ, ಪ್ರೀತಿಯನ್ನು ಇನ್ನೆಲ್ಲೋ ಇನ್ನ್ಯಾವುದರಲ್ಲೋ ಹುಡುಕಿಕೊಂಡು ಹೊರಟರೆ ಅದು ಎಂದಿಗೂ ಸಿಗಲಾರದ ಮರೀಚಿಕೆ ..! ಬದುಕಿನ ಪ್ರತಿ ಕ್ಷಣವನ್ನು, ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸೋದೆ ಪ್ರೀತಿ .., ಅದೇ ಜೀವನ ಪ್ರೀತಿ ....
* * *
ಕನಸು ಉದ್ದವಾಯಿತೇನೋ ಸ್ಟೌ ಮೇಲಿಟ್ಟಿದ್ದ ಟೀ ಉಕ್ಕಿಬಂದಿತ್ತು.
ಅವನು : ಎಷ್ಟೊತ್ತೆ ಒಂದು ಟೀ ಮಾಡೋಕೆ..? ಆಗಿಲ್ವೇನೆ ಇನ್ನೂ!
ಅವಳು : ಆಗೋಯ್ತು ತಂದೆ ....
ಅವನು : ಥೂ ... ಸಕ್ಕರೆ ಸಾಲ, ದಿನ ಮಾಡ್ತಿಯ ಎಷ್ಟು ಸಕ್ಕರೆ ಹಾಕ್ಬೇಕು ಗೊತ್ತಾಗಲ್ವ ..?
ಅವಳು :............
ಅವಳು : ಈಗ ತಂದೆ ...
ಅವನು : ಥೂ ದುಡಿದು ತಂದು ಹಾಕೋದು ಮಾತ್ರ ಕಾಣತ್ತೆ, ಈ ಮನೇಲೆ ಒಂದೂ ಬೇಕು ಅಂದಾಗ ಸಿಗಲ್ಲಾ ....
ಅವಳು: : ...........
ಅವನು : ನೋಡು ನೀನು ಆ ಪೀಟೀಲು ಕೊಯ್ತಾ ಕೂತ್ಕೊಬೇಡ ಈಗ ಜಗತ್ತು ಫಾಸ್ಟ್ ಆಗಿದೆ ,
ಪೀಟೀಲಿಗೆ ಸ್ಕೋಪೂ ಇಲ್ಲ, ಅದರಿಂದ ಪ್ರಯೋಜನನೂ ಇಲ್ಲ ಗೊತ್ತಾಯ್ತ ? ಅದೆಲ್ಲ ಬಿಟ್ಟು ಸರಿಯಾಗಿ ಮನೆ ನೋಡ್ಕೊಂಡು ಇರು, .ಮನೇಲಿ ನೆಮ್ಮದಿನೆ ಇಲ್ಲದ ಹಾಗಾಗ್ ಬಿಟ್ಟಿದೆ!
ಅವಳು : ......
ಅವನು : ನೋಡು ಸಂಜೆ ನನ್ನ ಫ್ರೆಂಡ್ಸ್, ಕಲೀಗ್ಸ್ ಬರ್ತಾ ಇದಾರೆ , ಅವ್ರ ಮುಂದೆ ಈ ತರಾ ಅಳುಮುಂಜಿ ಮುಖ ಇಟ್ಕೋಬೇಡ, ನಾನು ನಗ್ತಾ ಇರ್ತೀನಿ ಸ್ವಲ್ಪ ಕೊ ಆಪರೇಟ್ ಮಾಡು. ಹೇಳಿದ್ದು ಕೆಳಸ್ತ ?
ಅವಳು : ಹಮ್ಮ ...
ಅವನು : ಇದೆ ಅನ್ಬಿಟ್ಟು ಹನ್ನೆರಡು ಮೊಳ ರೇಷ್ಮೆ ಸೀರೆ ಉಟ್ಕೊಂಡು ಕೂತ್ಕೊಬೇಡ, ಸ್ವಲ್ಪ ನೀಟ್ ಆಗಿ ಡ್ರೆಸ್ ಮಾಡ್ಕೋ ಏನು?
ಅವಳು : ಹಮ್ಮ ..
ಅವನು ತಿರುಗಿಯೂ ನೋಡದೆ ದಡಾರನೆ ಬಾಗಿಲು ಎಳೆದುಕೊಂಡು ಹೋದಾಗ ಆಕೆಯ ಮನದಲ್ಲಿ
ಮಾರ್ದನಿಸುತ್ತಿತ್ತು
" ಬದುಕಿನ ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸೋದೆ ಪ್ರೀತಿ .."