Wednesday, November 7, 2012

ಮದರಂಗಿಯಲ್ಲಿ ನೆನಪಿನ ರಂಗು ತುಂಬಿದೆ








                ಮದುವೆ ಮನೆ ಎಂದರೆ ಇನ್ನಿಲ್ಲದ ಸಂಬ್ರಮ !  ತೀರ ಹತ್ತಿರದ ಮದುವೆ ಅಂದರೆ  ಸಂಬ್ರಮದ  ತೂಕ ಇನ್ನೂ ಹೆಚ್ಚು !!   ಪೆಟ್ಟಿಗೆಯಲ್ಲಿ ಮಡಚಿಟ್ಟ  ಹಳೆಯ ರೇಷ್ಮೆ ಸೀರೆಗೆ ಹೊರ ಪ್ರಪಂಚವನ್ನು ನೋಡುವ ಸಂಬ್ರಮ .., ಬ್ಲೌಸು ಮ್ಯಾಚಿಂಗ್ ಆಗತ್ತಾ ..?  ಅಳತೆ ಸರಿಯಾಗಿದೆಯ ?  ಈ ಸೀರೆ ಹೋದ ವರ್ಷ  ಉಟ್ಟಿರುವೆನ ? ಹೀಗೆ ಸಾಗುತ್ತದೆ ಹೆಂಗಸರ ಯೋಚನೆಗಳು !!  ಇನ್ನೂ ಹೆಣ್ಣುಮಕ್ಕಳಿಗಂತೂ  ಮುಗಿಯದ  ಶಾಪಿಂಗ್ !! ಮೊದಲ ಸಲ ಸೀರೆ ಉಡುವ ಸಂಬ್ರಮವಂತೂ  ಅನುಭವಿಸಿದ ಹುಡುಗಿಯರಿಗೆ ಗೊತ್ತು !! ಯಾವ ಸೀರೆ ಚೆನ್ನಾಗಿರತ್ತೆ ? ಯಾವ ಕಲರ್ ?  ಬ್ಲೌಸ್ ಯಾವ ಡಿಸೈನ್ ಇದ್ದರೆ ಚೆಂದ ? ಸೀರೆ ಉಟ್ಟರೆ ತಾನು ನಡೆಯಬಲ್ಲೇನ ?  ಮ್ಯಾಚಿಂಗ್  ಬಳೆ , ಸರ .. ಒಹ್..!! ಶಾಪಿಂಗ್  ಸುರಿಮಳೆ !!


       ನಗರ ಜೀವನ ನಡೆಸುತ್ತಿರುವವರು .., ಮದ್ಯದೊಂದು  ಭಾನುವಾರ ಬಂದರೆ 3 ದಿನ ರಜ ಹಾಕಬಹುದಲ್ಲ ಅಂತ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಾರೆ .., ಲಗ್ಗೆಜೆ ಪ್ಯಾಕ್  ಮಾಡಿಕೊಂಡು ಬ್ಯಾಗನ್ನು ಹೆಗಲಿಗೇರಿಸಿಕೊಂಡು , ಮುಂಚೆಯೇ ಬುಕ್ ಮಾಡಿಸಿದ ಬಸ್ಸನ್ನು  ಹತ್ತಿಕೊಳ್ಳುವಾಗ  ಎಂತದ್ದೋ ಸಂಬ್ರಮ !

         ಮದುವೆ ಮನೆಯಲ್ಲಿ   ತುಂಬಾ  ಇಷ್ಟವಾಗುವ ಸಂಗತಿಯೆಂದರೆ  , ನಾವು ಎಷ್ಟೋ ವರ್ಷಗಳಿಂದ  ನೋಡದೇ  ಇರುವ ಎಲ್ಲರನ್ನೂ ಒಟ್ಟಿಗೆ  ನೋಡಬಹುದು ! ಚಿಕ್ಕಮ್ಮ ,ಚಿಕ್ಕಪ್ಪ ,ಅತ್ತೆ , ಮಾವ , ಅವರ ಮಕ್ಕಳು ,ಅತ್ತಿಗೆ , ಭಾವ , ಅಜ್ಜ , ಅಜ್ಜಿ ಅಮ್ಮುಮ್ಮ .., ಹೀಗೆ ..,  ಹಾಗೆ ಸುಮ್ಮನೆ  ಎಲ್ಲರೂ ಸೇರುವುದು  ವಾಸ್ತವಕ್ಕೆ ದೂರವಾದ ಮಾತು , ಅದೇನೇ  ಚಿಕ್ಕ ಪುಟ್ಟ ಸಮಸ್ಯೆ, ತೊಂದರೆ  ತಾಪತ್ರಯಗಳಿದ್ದರೂಗಳಿದ್ದರೂ   ಮನೆಯೊಳಗೇ  ಇಟ್ಟು ಬಾಗಿಲು ಹಾಕಿ ಮದುವೆ  ಮನೆಗೆ ಹೊರಟು  ಬಿಡುತ್ತೇವೆ !

   
         ಹಳ್ಳಿಗಳಲ್ಲಿ  ಮದುವೆ  ಅಂದರೆ  2 ದಿನ ಮುಂಚೆಯೇ ಕಾರ್ಯಕ್ರಮಗಳು  ಶುರುವಿಟ್ಟು ಕೊಳ್ಳುತ್ತದೆ , ಗಂಡಿನ  ಮನೆಯಾದರೆ  ಸೋಮವರ್ಥನೆ , ಹೆಣ್ಣಿನ ಮನೆಯಾದರೆ ನಾಂದಿ ಇಟ್ಟುಕೊಳ್ಳುತ್ತಾರೆ .  ಮರುದಿನ ಬೆಳ್ಳಗ್ಗೆ ಬೇಗ ಎದ್ದು  ತಯಾರಿಯಾಗಿ ಗಂಡಿನವರಾದರೆ ದಿಬ್ಬಣ ಹೋರಡಬೇಕು , ಹೆಣ್ಣಿನವರಾದರೆ  ದಿಬ್ಬಣ ಬರಮಾಡಿಕೊಳ್ಳಬೇಕು . ಆ ನಂತರ ಹಾರ ಬದಲಾವಣೆ , ಮಾಂಗಲ್ಯ ಧಾರಣೆ , ಸಪ್ತಪದಿ ..  ಹೋಮ .. ಹೀಗೆ ಸಾಗುತ್ತದೆ  ಮದುವೆಯ ಶಾಸ್ತ್ರಗಳು .

     
       ಮದುವೆಗಳನ್ನು ಊರು ಹಳ್ಳಿಗಳ ಕಡೆ ನೋಡಿ ಅಬ್ಯಾಸವಿದ್ದ  ನನಗೆ ಬೆಂಗಳೂರು ಮದುವೆ  ನೋಡಿ ಆಶ್ಚರ್ಯ  ಪಟ್ಟಿದ್ದೆ  ! ಇಲ್ಲಿ ಮದುವೆ  ಅಂದರೆ  ಬಣ್ಣ ಹಚ್ಚಿಕೊಂಡ ಮದುಮಕ್ಕಳು ಸ್ಟೇಜ್  ಮೇಲೆ ನಿಂತಿರುತ್ತಾರೆ . ನಾವು ಸ್ಟೇಜ್  ಮೇಲೆ ಹೋಗಿ ಕ್ಲೋಸ್ ಅಪ್  ಆಡ್ ತರ  ಹಲ್ಲು ತೋರಿಸಿ ಹ್ಯಾಪಿ ಮ್ಯಾರೀಡ್  ಲೈಫ್ ಅಂತ ಉಸುರಿ ಫೋಟೋಗ್ರಾಫರ್  ಪರ್ಮಿಷನ್ ಕೊಟ್ಟಮೇಲೆ ಸ್ಟೇಜ್ ನಿಂದ ಕೆಳಗಿಳಿದು ಬರಬೇಕು ! ಹಾಗಾದರೆ ಮದುವೆ ಮುಗಿದಂತೆ !  ಅಥವಾ ನಾನು ನೋಡಿದ ಮದುವೆಗಳು ಮಾತ್ರ ಹಾಗಿತ್ತೇನೋ ..

       ನಗರದಷ್ಟಲ್ಲವಾದರೂ ಹಳ್ಳಿಗಳಲ್ಲಿ  ಮದುವೆಯ ರೀತಿ ರಿವಾಜು ಹಾಗೆ ಇದ್ದರೂ ಸ್ವರೂಪದಲ್ಲಿ ಬದಲಾವಣೆಯಾಗಿದೆ .  ಮನೆಯ ಮುಂದಿನ ಚಪ್ಪರ ಮರೆಯಾಗಿ ಅದೇ ಜಾಗದಲ್ಲಿ ಶಾಮಿಯಾನ ಬಂದು ನಿಂತಿದೆ . 4-5 ದಿನಗಳವರೆಗೆ ನಡೆಯುತ್ತಿದ್ದ ಮದುವೆಗಳು 2 ದಿನಕ್ಕೆ ಬದಲಾಗಿದೆ  . ಕೂಲಿ ಕೆಲಸಗಾರರ  ಅಭಾವ , ಜನರ ಅಭಾವ , ಸಮಯ ಅಭಾವಗಳು  ಮದುವೆಗಳಲ್ಲಿ  ಕೆಲವು ಮಾರ್ಪಾಡುಗಳನ್ನು ತಂದಿದೆ .

          
        ಅಣ್ಣನ ಮದುವೆ  ಮುಗಿಸಿ ಬೆಂಗಳೂರಿಗೆ ಬಂದು 4 ದಿನಗಳಾದರೂ ಇನ್ನೂ ಅದರದ್ದೇ ಗುಂಗು !   ಕೈಯಲ್ಲಿನ ಮದರಂಗಿ , ದಿಬ್ಬಣ ಬಸ್ಸಿನ ಅಂತಾಕ್ಷರಿ , ಎಲ್ಲರೂ ಸೇರಿ ಕಲೆತು  ಆಡಿದ ಮಾತು , ನಗು, ರಾತ್ರಿಯಲ್ಲಿ ಮಿನುಗುವ ಲೈಟ್ ಸೆಟ್ಟಿಂಗ್ಸ್ , ಹುಡುಗಿಯರ  ಗೆಜ್ಜೆ ದನಿ  , ಹೆಂಗಸರ ಬಳೆ ಸದ್ದು , ಮಕ್ಕಳ ಕೂಗಾಟ, ಎಲ್ಲರ ಗಡಿಬಿಡಿ , ಗಡಿಬಿಡಿಯಲ್ಲಿನ  ಸಂಬ್ರಮ , ಮದುವೆ  ಮನೆಯಲ್ಲಿ  4-5 ದಿನ ಹೇಗೆ ಕಳೆಯಿತು ತಿಳಿಯದಷ್ಟು ಸಂಬ್ರಮವಾಗಿ ಸಮಯ ಉರುಳಿತ್ತು .


       ಅಣ್ಣನ ಮದುವೆ ಮುಗಿಸಿ  ಅಲ್ಲಿಂದ ಹೊರಟುನಿಂತಾಗ  ಭಾರವಾಗಿದ್ದು;  ಬ್ಯಾಗನ್ನು ಏರಿಸಿಕೊಂಡ  ಹೆಗಲೊಂದೇ  ಅಲ್ಲ ಅನ್ನಿಸಿತ್ತು. ..!!   ಈಗ ಉಳಿದಿದ್ದು  ಮೊಣಕೈಯವರೆಗೆ  ಹಚ್ಚಿಕೊಂಡ ಮದರಂಗಿ ಮತ್ತು  ಅದನ್ನು ನೋಡಿದಾಗಲೆಲ್ಲ ಮರುಕಳಿಸುವ ಅಣ್ಣನ ಮದುವೆಯ  ಸಿಹಿ ನೆನಪು ಮಾತ್ರ !!!





9 comments:

----------------------------------