Saturday, November 17, 2012

ಇದನ್ನು ನನ್ನ ಅಪ್ಪ ಅಮ್ಮಂಗೆ ಹೇಳಿ ಪ್ಲೀಸ್ .....


                ಹಮ್ಮ್ ..,ಇನ್ನೂ ಹೊಮೆವೊರ್ಕ್ ಮಾಡ್ಬೇಕು ..,   ಹಾಲು ಕುಡೀಬೇಕು .., ಯಾಕೋ ಬೇಜಾರು ನಂಗೆ ..! ನನ್ನ ಜೊತೆ ಆಡೋಕೆ ಯಾರೂ ಇಲ್ಲ ಇಲ್ಲಿ ...., ನನ್ನ  ಜೊತೆ ಮಾತಾಡೋಕೆ ಯಾರಿಗೂ ಟೈಮ್ಮ್ ಇಲ್ಲಾ ...,     ನಂಗೆ  ಕೆಲವು ವಿಷಯಗಳು ಅರ್ಥವೇ ಆಗೋದಿಲ್ಲ .. 




          ಅಲ್ಲಾ .. ಅಮ್ಮ ಅಂತಾಳೆ , "ನೀನು ತುಂಬಾ ಚಿಕ್ಕವಳು , ನಿಂಗೆ  ಗೊತ್ತಾಗಲ್ಲ ಸುಮ್ನೆ ಇರು " , ಇನ್ನೊಮ್ಮೆ ಅಂತಾಳೆ , " ದೊಡ್ದವಾಗಿದ್ದಿಯ ಅಷ್ಟು ಗೊತ್ತಾಗಲ್ವ ನಿಂಗೆ ?",  .., ಹಾಗಾದರೆ ನಾನು ಚಿಕ್ಕವಳ ?  ದೊಡ್ಡವಳ?
          
            ನಮ್ಮ ಮಿಸ್ಸ್  ಅಂತಾರೆ ..., ಸುಳ್ಳು ಹೇಳಬಾರದು ಅಂತ , ಆದ್ರೆ ಮೊನ್ನೆ ಫೋನ್ ಬಂದಾಗ , ಅಪ್ಪ ಮನೇಲೆ ಇದ್ರೂ .., ನಾನಿಲ್ಲ ಹೇಳು ಅಂದ್ರು .., ಹಾಗಾದರೆ ಸುಳ್ಳು ಹೇಳ್ಬೇಕ ? ಅಥವ ಹೇಳ್ಬಾರ್ದ ?     



         

ಚಿತ್ರ :ಅಂತರ್ಜಾಲ ಕೃಪೆ 

           

 

          ನಂಗೆ  ಯಾವಾಗಲೂ  B + grede ಬರೋದು .., ಮೊನ್ನೆ ಯಾವುದೊ function ನಲ್ಲಿ ಅಮ್ಮ  ,'ನನ್ನ ಮಗಳು ಕ್ಲಾಸಿಗೆ ಫಸ್ಟ್' ಅಂತಿದ್ಲು , 10 ರಾಂಕ್  ಬಂದ್ರೆ 1 rank u ಅನ್ಬೇಕಾ ?  ಯಾಕೆ ?




           ಮೊನ್ನೆ ಎಷ್ಟು ಚೆನ್ನಾಗಿ ಡ್ರಾಯಿಂಗ್ ಮಾಡಿದ್ದೆ ಗೊತ್ತಾ   ..? ಅಮ್ಮಂಗೆ ತೋರ್ಸಾಕ್ ಹೋದ್ರೆ  ಟೆನ್ಶನ್ ನಲ್ಲಿ ಇದ್ದೀನಿ ಅಷ್ಟು ಗೊತ್ತಾಗಲ್ವ ಅಂತ  ರೆಗ್ಬಿಟ್ರು  ! ಎಷ್ಟು ಬೇಜಾರು ಆಯಿತು ಗೊತ್ತಾ   ನಂಗೆ ...?  ಮತ್ತೆ ಯಾಕೋ ಡ್ರಾಯಿಂಗ್ ಮಾಡೋಕೆ ಮನಸೇ ಬರ್ತಿಲ್ಲ ..

             
           ಸ್ಕೂಲ್ ನಲ್ಲಿ  ನಮ್ ಮಿಸ್ ಅಂತಾರೆ ಜಗಳ ಆಡಬಾರದು , ಅಮ್ಮ ಅನ್ನೋದೂ ಹಾಗೆ ..., ಆದ್ರೆ ಅಪ್ಪ ಅಮ್ಮ 'ನಿಂದೆ ತಪ್ಪು, ನಿಂದೆ ತಪ್ಪು' , ಅಂತ ಎಷ್ಟೊಂದು ಜಗಳ ಆಡ್ತರಲ್ಲ್ವ ? ನಾನು ಸ್ವಲ್ಪ ಪಕ್ಕದ ಮನೆ ಸಂಜು ಜೊತೆ ಜಗಳ ಆಡಿದ್ರೆ ಅದ್ರಲ್ಲಿ ತಪ್ಪೇನು ?  ಅಪ್ಪ ಅಮ್ಮ ಜಗಳ ಆಡ್ಕೊಂಡು ಸ್ವಲ್ಪ ಹೊತ್ತು ಮಾತೆ ಬಿಡ್ತಾರೆ .., ನಾನು ಅಮ್ಮನತ್ರ ಮಾತು ಬಿಟ್ರೆ " ಜಾಣ  ಮಕ್ಕಳು ಹಾಗ್ ಮಾಡ್ತಾರ ..?" ಅಂತಾಳೆ ; ಹಾಗಾದ್ರೆ ಅಪ್ಪ ಅಮ್ಮ ಜಾಣರಲ್ವ ...?

   
             ಅಮ್ಮಂಗೆ  ಬೆಳ್ಳಗ್ಗೆ  ಟೈಮ್ಮೆ  ಇರಲ್ಲ .., ಬೇಗ ಬೇಗ ಹೊರಟ್ಬಿಡ್ತಾಳೆ  ಆಫೀಸ್ ಗೆ .., ಸಂಜೆ ತುಂಬಾ ಸುಸ್ತಾಗಿರತ್ತೆ  ಅಮ್ಮಂಗೆ ! ಒಮ್ಮೊಮ್ಮೆ ಅಪ್ಪ ಬರೋಷ್ಟರಲ್ಲಿ  ನಾನು  ಮಲಗ್ಬಿಟ್ಟಿರ್ತೀನಿ .., ಬೆಳಗ್ಗೆ ಅಪ್ಪ ತುಂಬಾ ಬ್ಯುಸಿ ...,ಎಷ್ಟೋ ಸಲ ನಾನೆಳೋಷ್ಟರಲ್ಲಿ  ಅಪ್ಪ ಮನೆ ಬಿಟ್ಟಿರ್ತಾರೆ ..! 

             
             ನಾನು ಟೀವಿ ನೋಡ್ಬೇಕು ಅನ್ಕೊತೀನಿ .., ಟೈಮ್ ಆಯಿತು ಹೊಮೆವೊರ್ಕ್ ಮಾಡು ಅಂತಾರೆ, ಆಟ ಆಡಬೇಕು ಅನ್ಕೋತೀನಿ .. ಇದು ಟೀವಿ ನೋಡೋ ಟೈಮ್ ಅಂತಾರೆ.., ಅಲ್ಲ .. ಈ ಟೈಮ್ ಅನ್ನೋದು ಯಾಕಾದ್ರೂ ಇದ್ಯೋ ..? ..., ಕಣ್ಣು ಮುಚ್ಚಿ ಮಲ್ಕೊಂಡಾಗ    'ಮಲಗಿದ್ಯ ಪುಟ್ಟಿ .. ಅಂತ ಹಣೆಗೆ ಒಂದು ಮುತ್ತು ಕೊಡ್ತಾಳೆ ಅಮ್ಮ ..' ಮುತ್ತು ಕೊಟ್ಳು ಅಂತ ಕಣ್ಬಿಟ್ರೆ ,' ಟೈಮ್ ಆಯಿತು ಮಲಕ್ಕೋ ಅಂತಾ ಬೈತಾಳೆ ..' ಅಮ್ಮಂಗೆ ಎದ್ದಾಗ   ಮುತ್ತು ಕೊಡೋಕೆ ಏನು  ಕಷ್ಟ ...? 

         
           ಇದನ್ನೆಲ್ಲಾ ಅಪ್ಪ ಅಮ್ಮಂಗೆ ಹೇಳಕ್ ಹೋದ್ರೆ "ತುಂಬಾ ಮಾತೊಡೋದು ಕಲ್ತಿದಿಯ  ನೀನು   ..ಟೀವಿ ನೋಡೋದು ಸ್ವಲ್ಪ ಕಡಿಮೆ ಮಾಡು, ನಾವು ಇಷ್ಟೆಲ್ಲಾ ಕಷ್ಟ ಪಡ್ತಾ ಇರೋದು ನಿಂಗಾಗೇ .." ಅಂತಾರೆ ,  ನಂಗೆ ನಂಜೊತೆ ಆಟ ಆಡಿದ್ರೆ  ಸಾಕು , ಮಾತಾಡಿದ್ರೆ ..ಸಾಕು .., ಅದಿಕ್ಕ್ ಕಷ್ಟ ಯಾಕ್ ಪಡ್ಬೇಕು !?
 
   
ಇದನ್ನು ನನ್ನ ಅಪ್ಪ ಅಮ್ಮಂಗೆ  ಹೇಳಿ ಪ್ಲೀಸ್ ..... 

9 comments:

----------------------------------