Thursday, October 25, 2012

ಬರಿದೆ ಕಾಡುವ ನೆನಪುಗಳಲ್ಲಿ ಏನೂ ಇಲ್ಲ .....!


      
         ಬೇಡವೆಂದರೂ ಬರುವ ನೆನಪುಗಳು ಸುಮ್ಮನಿರಲು ಏನು ಮಾಡಬೇಕು ...?  ಹಾಗಲ್ಲ... ಪ್ರಯತ್ನ ಮಾಡಿದಷ್ಟೂ ಹೆಚ್ಚು ಕಾಡುವ  ನೆನಪುಗಳು  ಥೇಟ್  ರಚ್ಚೆ ಹಿಡಿದ ಮಗುವಿನಂತೆ  ; ಮಾತು ಕೇಳಲು ಸುತರಾಂ ಒಪ್ಪದು !  ಬರಿದೆ  ಕಾಡುವ ನೆನಪುಗಳಲ್ಲಿ  ಏನೂ ಇಲ್ಲ !  ಇವತ್ತಿಗೂ ಗೊತ್ತಾಗುತ್ತಿಲ್ಲ ನಾನು ಮಾಡಿದ್ದು ಸರಿಯ ? ತಪ್ಪಾ ?  ಮರಳು ನನಗೆ!  ತಪ್ಪು ಸರಿಗಳ ಎಲ್ಲೆ  ದಾಟಿ ಬಹಳ ದೂರ  ಬಂದದ್ದಾಗಿದೆ ! ಈಗೇನು ಹುಚ್ಚು ವಿಮರ್ಶೆ ನನ್ನದು !  ಅಪ್ಪ, ಅಮ್ಮ  ಅಣ್ಣ , ಅಜ್ಜಿ , ಮನೆ ಊರು  ಸರ್ವಸ್ವವನ್ನು   ಬಿಟ್ಟು ಬರಲು ನನಗೆ ಪ್ರೇರೇಪಿಸಿದ  ಅಷ್ಟು ದೊಡ್ಡ ಸಂಗತಿಯಾದರೂ ಯಾವುದು ?  ಸೊ ಕಾಲ್ಡ್  ಪ್ರೀತಿ ??


             ಕಾಲೇಜು ಮೆಟ್ಟಿಲು ಹತ್ತಿದ್ದೇ  ಒಂದು ದಿಗ್ವಿಜಯ ನನ್ನ ಪಾಲಿಗೆ !  ಭಟ್ರ ಮಗಳು ಬೇರೆ!  ಅಷ್ಟು ಸಲೀಸಾಗಿ ಕಾಲೆಜಿಗೆ ಹೋಗೋದು ಅಂದ್ರೆ ಏನು ?  ಓದೋದು ಅಂದ್ರೆ ಏನು ? ಓದಿ ಮಾಡಬೆಕಾದ್ದು ಏನು ?  ಅದು ಹೇಗೋ ಅಣ್ಣನ ಕಣ್ಣು ಕಾವಲಿನ ಜೊತೆಗೆ ಕಾಲೇಜಿಗೆ ಹೋಗಿಬಂದದ್ದೂ ಆಯಿತು ! ಅವನ ಕಣ್ತಪ್ಪಿಸಿ  ಲೆಕ್ಟುರನ ಪ್ರೀತಿಯಲ್ಲಿ  ಬಿದ್ದಿದ್ದೂ   ಆಯಿತು !   ಎಷ್ಟು ದಿನ ಕಣ್ತಪ್ಪಿಸಲು ಸಾದ್ಯ ? ಮನೆಯವರಿಗೆ ವಿಷಯ ಗೊತ್ತಾಗಿಬಿಟ್ಟಿತ್ತು !  ಚಿಕ್ಕವಳಿದ್ದಾಗಿನಿಂದ  ರಾಮಾಯಣ ಮಹಾಭಾರತದ ಕತೆಯನ್ನು ಕೇಳಿದ್ದರೂ ಅದರ ಅನುಭವ ಆದದ್ದೂ ಮಾತ್ರ ಅವತ್ತೇ !!  ಅಪ್ಪ, ಅಣ್ಣನ ರುದ್ರವತಾರ! , ಅಮ್ಮನ ಕಣ್ನೀರಿನ  ಕಟ್ಟೆಯೊಡೆದು  ಊರಿಗೆಲ್ಲ ಸಾಕಾಗುವಷ್ಟು  ನೀರು ! ಅವತ್ತು ನಮ್ಮ ಮನೆ ಥೇಟ್  ಯುದ್ದಭೂಮಿ !

   
               
           ಹೆದರಿಸಿ ಹೇಳಿದ್ದಾಯಿತು , ಹೊಡೆದು ಬಡಿದಿದ್ದೂ ಆಯಿತು , ನೆಂಟರಿಷ್ಟರಿಂದ  ಒಂದು ರೌಂಡ್  ಕೌನ್ಸಲಿಂಗೂ   ಆಯಿತು , ಉಪವಾಸ ಸತ್ಯಾಗ್ರಹ .., ಉಹ್ಹುಂ .., ನನ್ನದು ಒಂದೇ ಹಠ , ನಾನು ಅವನನ್ನೇ ಮದುವೆಯಾಗೋದು ! "ಆಯಿತಮ್ಮ ನಿನ್ನಿಷ್ಟ "  ಅಂದು ಮದುವೆ  ನಡೆಸಿಕೊಡಲು ಅದೇನು ಈಗಿನ ಕಾಲವೇ! ?  ಎಳೆದು ತಂದಾದರೂ ಮದುವೆಯನ್ನು  ಮಾಡಿಬಿಡುತ್ತಿದ್ದ ಕಾಲವದು !  ಗಂಟುಮೂಟೆ ಕಟ್ಟಿಕೊಂಡು  ರಾತ್ರಿ 1 ಗಂಟೆಯ ಸುಮಾರಿಗೆ ಥೆಟ್  ಸಿನಿಮ ಶೈಲಿಯಲ್ಲಿ  ಮನೆ ಬಿಟ್ಟು ಹೊರಟುಬಿಟ್ಟೆ !  ಹಾಗೆ ಬಂದವಳು ಇವತ್ತಿಗೂ ಹಿಂದಿರುಗಿಲ್ಲ !  ಬಂದ ಒಂದೆರಡು ವರುಷಗಳ ನಂತರ ಅಪ್ಪ ಅಮ್ಮನ ನೆನಪಾಗುತ್ತಿತ್ತು .. 8- 10 ವರುಷಗಳ ನಂತರ ಅವರ  ಮರಣದ  ಸುದ್ದಿ ಕೇಳಿ .., ಬೇಸರವಾದರೂ ಊರಿನ ನೆನಪು  ಮಸುಕಾಗಿ ಕ್ರಮೇಣ ಸೆಳೆತ ಕಡಿಮೆಯಾಗಿತ್ತು .

            
               ಎಲ್ಲ ಬಿಟ್ಟು ಕಟ್ಟಿಕೊಂಡು  ಬಂದ ಈತನಾದರೂ ಎಂತವನು ? ಸಭ್ಯ , ಒಳ್ಳೆಯವ , ಸಾಮನ್ಯ ಬುದ್ದಿವಂತಿಕೆ , ಸಾಮಾನ್ಯ  ವಿದ್ಯೆ , ಸಾಮನ್ಯ ವ್ಯಕ್ತಿತ್ವ , ಎಲ್ಲದರಲ್ಲೂ 40 -50 ಮಾರ್ಕ್ಸು ಕೊಡಬಹುದಾದ  ಸಾಮನ್ಯ ಪ್ಯಾಕೆಜಿನಂತಿದ್ದ .
ಸಾಮಾನ್ಯ ಬದುಕು ಸಾಗುತ್ತಿತ್ತು . 'ಚಂದ್ರನನ್ನು ತೋರಿಸು ' ಅಂದರೆ ರೋಮ್ಯಾಂಟಿಕ್  ಆಗಿ ಉತ್ತರಿಸಲು ಬರದಿದ್ದರೂ ' ನಿಂಗೆ ಕಣ್ಣೂ ಕಾಣೋಲ್ಲವ?' ಎನ್ನುವಷ್ಟು ಒರಟನಾಗಿರಲಿಲ್ಲ !    ಅದು ನಾನು ಕಟ್ಟಿಕೊಂಡು ಬಂದ ಪುಣ್ಯ ಎನಿಸುತ್ತದೆ ನಂಗೆ !  ನಂಗೆ ಆತನ ಬಗ್ಗೆ  ಒಂದಷ್ಟೂ ಗೊತ್ತಿರಲ್ಲಿಲ್ಲ !  ಕುಡುಕ ಪಡುಕನೂ , ಕಳ್ಳನೂ, ಸುಳ್ಳನೂ , ಅಷ್ಟೇ ಏಕೆ ಆತನಿಗೆ ಇನ್ನೊಂದು ಮದುವೆಯೇ ಆಗಿದ್ದರೂ ನನಗೆ ತಿಳಿಯುವ ಸಂದರ್ಭ, ಬುದ್ದಿ ಎರಡೂ ಇರಲಿಲ್ಲ ..! ಏನೋ ಪ್ರೀತಿ  ಅಂಥದ್ದೇನೋ  ಅನಿಸಿತ್ತು  , ತುಂಬಾ ಯೋಚಿಸದೆ ಆತನ ಹಿಂದೆ ನಡೆದುಬಂದು ಬಿಟ್ಟಿದ್ದೆ !!


             
           ಆತನ ಬಗ್ಗೆ ಒಂದಷ್ಟೂ ಗೊತ್ತಿರಲ್ಲಿಲ್ಲ ಎನ್ನುವುದು ನಿಜ ., ಏನೂ ಯೋಚಿಸದೆ ಬಂದುಬಿಟ್ಟಿದ್ದು ಎಷ್ಟು ನಿಜ ?  ಸಾಕಾಗಿತ್ತು ನಂಗೆ ಆ ಊರು !  ಆ ಬದುಕು ! ಜಾತ್ರೆಯಲ್ಲಿ ಕಂಡ ಬಣ್ಣದ ಲಂಗವನ್ನು ತೆಗೆದುಕೊಳ್ಳಲಾಗದಷ್ಟು ಕಟ್ಟಳೆ,   ಸ್ವತಂತ್ರವಾಗಿ ಓಡಾಡಲಾಗದಷ್ಟು  ಅಣ್ಣನ ಕಾವಲು , ತಂದದ್ದನ್ನೇ ಉಟ್ಟು ತೊಟ್ಟುಕೊಳ್ಳಬೇಕಾಗಿದ್ದ  ಅಭಿರುಚಿಹೀನ  ಬದುಕು . ಎಲ್ಲದಕ್ಕಿಂತ ಹೆಚ್ಚಾಗಿ  ನಾನು ನೋಡಿದ  ನನ್ನ ಅಕ್ಕನ ಬದುಕು .., ಬೆಳೆಗ್ಗೆಯಿಂದ ಸಂಜೆಯ ತನಕ ಸ್ವಲ್ಪವೂ ಬಿಡುವಿಲ್ಲದ ಕತ್ತೆಯ ದುಡಿತ !  ಅವರಿವರ ಮರ್ಜಿಯಲ್ಲೇ ಕಳೆದು ಬಿಟ್ಟ ಜೀವನ ! ಅಂಜಿ ಅಂಜಿ ಆಡುತ್ತಿದ್ದ ಮಾತು , ನಡೆ ! ಎರಡು  ಸುಂಬಳ ಸುರಿಯುವ ಮಕ್ಕಳು , ಅವಕ್ಕೇ ಕೈಗಿದ್ದರೆ ಕಾಲಿಗಿಲ್ಲ ,ಕಾಲಿಗಿದ್ದರೆ ಕೈಗಿಲ್ಲ ! ಮತ್ತೆ  ಮೂರನೆಯದಕ್ಕೆ ತಯಾರಿ !   ನಂಗೂ ಇದಕ್ಕಿಂತ ಹೆಚ್ಚಿನದು ಇನ್ನೇನೂ ಸಿಗಲು ಸಾದ್ಯ ಇರಲಿಲ್ಲ ! 

         
             
             ಮತ್ತೆ ಕಣ್ಣು ಟೀಪಾಯೀಯತ್ತ  ಹೊರಳಿತು ,   ಅಲ್ಲಿದ್ದಿದ್ದು ಅಕ್ಕನ ಮಗಳ ಮದುವೆಯ ಇನ್ವಿಟೇಶನ್ ಕಾರ್ಡ್  . ಲವ್ ಮ್ಯಾರೇಜು !  ಹುಡುಗ ಬೇರೆ  ಜಾತಿಯವನು ,  ಇಬ್ರೂ ಸಾಫ್ಟ್ವೇರ್  ಎನ್ಜನೀರ್ಸ್. ಏನೂ ಗೊತ್ತಿಲ್ಲದೇ ಆಕೆ ಆತನೊಂದಿಗೆ ಬದುಕಿನ ಹೆಜ್ಜೆ ಇಡುವವಳಲ್ಲ;  ಆತ ಸಾಮಾನ್ಯ ಪ್ಯಾಕೆಜೂ ಅಲ್ಲ ... ;  ಮತ್ತು  ಮದುವೆಯನ್ನು  ಮನೆಯಲ್ಲೇ ಮಾಡಿಕೊಡುತ್ತಿದ್ದಾರೆ  ಅದ್ದೂರಿಯಿಂದ!
ಚೈತ್ರ  ಬಿ . ಜಿ . 

          

 

       
                 
           


4 comments:

----------------------------------