ಮೌನ..!
Thursday, December 14, 2023
Friday, December 4, 2020
ಬಹುಶಃ ಎಲ್ಲಾ ಪಾಲಕರನ್ನು ಬಹುವಾಗಿ ಚಿಂತೆಗೀಡುಮಾಡುವ ಒಂದು ಸಮಸ್ಯೆ ಎಂದರೆ ಅದು ಮಕ್ಕಳು ಮೊಬೈಲು ಟ್ಯಾಬ್ ಲ್ಯಾಪ್ಟಾಪ್ ಗಳಲ್ಲಿ ಮುಳುಗಿ ಹೋಗುತ್ತಿರುವುದು. ಅದರಿಂದ ಆಗಬಹುದಾದ ಕಣ್ಣು ಮತ್ತು ಆರೋಗ್ಯಕ್ಕೆ ಸಂಭಂದಿಸಿದ ಸಮಸ್ಯೆಗಳು ಒಂದು ಕಡೆಯಾದರೆ ಇನ್ನೊಂದು ಕಡೆಯಿಂದ ಅವರ ದೈಹಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇತರ ಮಕ್ಕಳೊಂದಿಗೆ ಬೆರೆತು ಆಡುವುದರಿಂದ ಸಿಗಬಹುದಾದ ವಾಸ್ತವತೆಯ ಅನುಭವದಿಂದ ವಂಚಿತರಾಗುತ್ತಾರೆ. ಇದ್ದಿರಬಹುದಾದ ಬೆಳೆಸಿಕೊಳ್ಳಬಹುದಾದ ಕಲೆ ಕೌಶಲ್ಯ ಗಳ ಸಾಧ್ಯತೆಗಳಿಂದ ಹೊರತಾಗುತ್ತಾರೆ. ಮನೋರಂಜನೆ ಮಿತಿ ಮೀರಿ ಬಾಲ್ಯದ ಹದವನ್ನು ತಪ್ಪಿಸುತ್ತಿದೆಯಾ ಎನ್ನುವ ದಿಗಿಲಾಗುತ್ತದೆ ಒಮ್ಮೊಮ್ಮೆ ಪಾಲಕರಿಗೆ.
ಮಕ್ಕಳು ಮೊಬೈಲನ್ನು ಅತಿಯಾಗಿ ನೋಡುತ್ತಾರೆ, ಯಾವಾಗಲೂ ಬರಿಯ ಗೇಮನ್ನೇ ಆಡುತ್ತಾ ಇರುತ್ತಾರೆ, ಯೂಟ್ಯೂಬಿನಲ್ಲಿ ಬೇಕಾದ್ದು ಬೇಡವಾದ್ದು ಎಲ್ಲವನ್ನೂ ನೋಡುತ್ತಾರೆ ಎನ್ನುವ ದೂರು, ಆತಂಕ ಎಲ್ಲಾ ಪಾಲಕರದ್ದೂ ಇರಬಹುದು. ಹೇಳಿದರೆ ಅಷ್ಟು ಸುಲಭಕ್ಕೆ ಮಕ್ಕಳು ಕೇಳುವುದಿಲ್ಲ. ಸ್ವಲ್ಪ ಚಿಕ್ಕ ಮಕ್ಕಳು ಅತ್ತು ಕರೆದು ರಂಪ ಮಾಡಿದರೆ ಹದಿ ಹರೆಯಕ್ಕೆ ತಲುಪಿದ ಮಕ್ಕಳ ಬಳಿ ಮಾತಾಡುವುದೇ ದುಸ್ತರ, ಒಂದು ಮಾತಿಗೆ ಎರಡು ಮಾತು ಆ ಕಡೆಯಿಂದ ಕಿವಿಗೆ ಅಪ್ಪಳಿಸುತ್ತದೆ. ಪಾಲಕರೂ ಒಮ್ಮೊಮ್ಮೆ ಬೇಸತ್ತು ಈ ರಗಳೆಗಳಿಗೆಲ್ಲ ಅಂಜಿ ಎದುರಿಸಲಾರದೆ ಏನಾದರೂ ಮಾಡಿಕೋ ಎನ್ನುತ್ತಾ ಮೊಬೈಲು ಕೈಗಿಟ್ಟು ಮಾಡಲು ಬೇಕಾದಷ್ಟು ಕೆಲಸವಿರುವಾಗ ಅದರೊಳಗೆ ತೂರಿ ಕೊಳ್ಳುತ್ತಾರೆ. ಮತ್ತದೇ ಬೇಸರ ಶುರುವಿಟ್ಟುಕೊಳ್ಳುತ್ತದೆ, ಮಗು ಯಾವಾಗಲೂ ಮೊಬೈಲ್ ನೋಡುತ್ತದೆ ಎನ್ನುವುದು.
ಯಾಕೆ ಹೀಗೆ ಆಗುತ್ತದೆ?
ಪಾಲಕರ ಉದ್ದೇಶ ಸರಿ ಇದ್ದರೂ ಕೂಡ ಅವರು ಅನುಸರಿಸುವ ಮಾರ್ಗ ಅಷ್ಟು ಸಮಂಜಸ ಆಗಿರುವುದಿಲ್ಲ, ಸಾಮಾನ್ಯವಾಗಿ ಪಾಲಕರು ಏನು ಮಾಡುತ್ತಾರೆ? ಮಗುವಿನ ಮುಂದೆ 'ಬೇಡಿಕೆ' ಇಡಬಹುದು, ಆಸಕ್ತಿಯ ತುತ್ತ ತುದಿಯಲ್ಲಿ ಮುಳುಗಿದ ಮಗು ಕಿವಿಗೆ ಹಾಕಿ ಕೊಳ್ಳುವುದಿಲ್ಲ. ಗದರುವಿಕೆ ಕಿರುಚುವುದು, ಬೈಯುವಿಕೆಯಿಂದ ಪ್ರಯೋಜನವಿಲ್ಲ ನಮ್ಮ ಅಸಹಾಯಕತೆ ಮತ್ತು ಬಲಹೀನತೆಯನ್ನು ಸೂಚಿಸುತ್ತದೆ. ಮಗುವಿನಲ್ಲಿ ಆಕ್ರೋಶ ಭಾವವನ್ನು ಹುಟ್ಟು ಹಾಕುತ್ತದೆ. ಮತ್ತು ಕೆಲವೊಮ್ಮೆ ಮಗುವು ತಾನಾಗಿಯೇ ತಿಳಿದುಕೊಳ್ಳಬೇಕು ಎಂದು ಪಾಲಕರು ಅಂದುಕೊಳ್ಳುತ್ತಾರೆ ಇಲ್ಲ ಇದು ವರ್ಕ್ ಔಟ್ ಆಗದು ಸಾಮಾನ್ಯವಾಗಿ ಯಾವ ಅಭ್ಯಾಸಗಳಿಗೂ ಇದು ಯಶಸ್ವಿಯಾಗದು.
ಮೊಬೈಲು ಟ್ಯಾಬ್ಗಳನ್ನು ಮಕ್ಕಳಿಗೆ ಕೊಡಲೇ ಬಾರದೆ?
ಎಲ್ಲವಕ್ಕೂ ತಂತ್ರಜ್ಞಾನವನ್ನೇ ಬಳಸಿಕೊಳ್ಳುವ ಅಳವಡಿಸಿಕೊಂಡಿರುವ ನಾವು ಮಕ್ಕಳನ್ನು ಮಾತ್ರ ಅದರಿಂದ ಹೊರತುಪಡಿಸಲು ಸಾಧ್ಯವೇ!? ಸಾಧುವೇ!? ಕಾಲಕ್ಕೆ ಪರಿಸ್ಥಿತಿಗೆ ತಕ್ಕಂತೆ ಮಕ್ಕಳಿಗೂ ಅವೆಲ್ಲದರ ಜ್ಞಾನ ಅತ್ಯವಶ್ಯಕ. ಬಳಸಲೇ ಬಾರದು ಎನ್ನುವ ಕಟ್ಟು ನಿಟ್ಟು ಸಲ್ಲ. ಅದರಲ್ಲೂ ಈಗ ಮಕ್ಕಳಿಗೆ ಅದರಲ್ಲಿಯೇ ತರಗತಿಗಳು ನಡೆಯುತ್ತಿವೆಯಾದ್ದರಿಂದ ಎಲ್ಲರ ಅಂಗೈಯಲ್ಲೂ ಫೋನೋ ಟ್ಯಾಬೋ ಲ್ಯಾಪ್ಟಾಪ್ ಗಳು ಲಭ್ಯವಿದ್ದೇ ಇರುತ್ತದೆ. ಇನ್ನೂ ಮುಖ್ಯ ಎಂದರೆ ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಗೊತ್ತಿದ್ದರೆ ಇವುಗಳು ಪೂರಕವೇ. ಆದರೆ ಸಮಸ್ಯೆ ಇರುವುದು ಅದರ ಮಿತಿಮೀರಿದ ಬಳಕೆಯಲ್ಲಿ. ಹುಟ್ಟಿ ಆರು ತಿಂಗಳು ಕಳೆದಿರದ ಮಗುವೂ ಮೊಬೈಲಿನ ಎಡೆಗೆ ಆಕರ್ಷಿತವಾಗುತ್ತದೆ. ಎರಡು ವರ್ಷದ ಮಗುವಿಗೆ ಮೊಬೈಲಿದ್ದರೆ ಮಾತ್ರ ಊಟ ಸೇರುತ್ತದೆ. ನಾಲ್ಕು ವರ್ಷದ ಮಗುವಿಗೆ ಮೊಬೈಲಿನಲ್ಲಿ ಅದರಿಷ್ಟದ ರೈಮ್ಸ್ ಹಾಕಿಕೊಡಲೇ ಬೇಕು. ಅದರ ಮೇಲ್ಪಟ್ಟ ಮಕ್ಕಳು ಗೇಮ್ಸ್, ಯೂಟ್ಯೂಬ್ ಮತ್ತೊಂದು ಇನ್ನೊಂದು ಅಂತ ನೋಡುತ್ತಲೇ ಇರುತ್ತವೆ. ಮೊನ್ನೆ ಒಂದು ಮದುವೆ ಮನೆಯಲ್ಲಿ ಕಂಡ ದೃಶ್ಯ ಎಂದರೆ ಹೆಚ್ಚು ಕಡಿಮೆ ವಯಸ್ಸಿನ ಒಂದು ಎಂಟು ಹತ್ತು ಮಕ್ಕಳು ಪಕ್ಕ ಪಕ್ಕದಲ್ಲಿ ಕುಳಿತು ತಮ್ಮ ಕೈಯಲ್ಲಿದ್ದ ಮೊಬೈಲು ಟ್ಯಾಬಿನಲ್ಲಿ ಮುಳುಗಿ ಹೋಗಿದ್ದರು. ಮೊಬೈಲು ಬೇಕು ನಿಜ ಆದರೆ ಅದರ ಬಳಕೆ ಹೆಚ್ಚಾದರೆ? ಅನೇಕ ರೀತಿಯ ಅಡ್ಡ ಪರಿಣಾಮಗಳು ಆಗುತ್ತಲೇ ಹೋಗಿಬಿಡುತ್ತದೆ.
ಹಾಗಾದರೆ ಮತ್ತೆ ಏನು ಮಾಡಬೇಕು? ಹೇಗೆ ಮಕ್ಕಳನ್ನು ಸ್ಕ್ರೀನ್ ಟೈಮನ್ನು ಮ್ಯಾನೇಜ್ ಮಾಡಬೇಕು? ಕೆಲವಷ್ಟಿದೆ ಸರಳ ಸುಲಭ ವಿದಾನಗಳು. ಪ್ರತಿ ಮಗುವು ಭಿನ್ನ ಅಳವಡಿಸಿಕೊಳ್ಳುವಾಗ ಮಗುವಿನ ವಯಸ್ಸು, ತಿಳುವಳಿಕೆಯನ್ನು ಗಮನದಲ್ಲಿರಿಸಿಕೊಳ್ಳಬೇಕು.
1. ನಿಗದಿತ ಸಮಯ
ಮಕ್ಕಳಿಗೆ ಮೊಬೈಲನ್ನು ನೋಡಲು ವಯಸ್ಸಿಗೆ ಅನುಗುಣವಾಗಿ ಇಂತಿಷ್ಟೇ ಸಮಯ ಅಂತ ಮೀಸಲಿಡಬೇಕು. ಎಷ್ಟು ಸಮಯ? ಇಂತಿಷ್ಟೇ ಅಂತ ಸಾರಸಾಗಟವಾಗಿ ಹೇಳುವುದು ಕಷ್ಟ. ಮಗು ಬರೀ ಯೂಟ್ಯೂಬ್ ಅದು ಇದು ನೋಡುತ್ತದೆಯಾದರೆ 45 ನಿಮಿಷ ಹೆಚ್ಚು. ಡಾಕ್ಯುಮೆಂಟರಿಯಾದರೆ 3 ಗಂಟೆ ಬೇಕಾಗುತ್ತದೆ. ಗೇಮ್ಸ್ ಆದರೆ ಇನ್ನೊಂದು ತರಹ. ಹಾಗೆಯೇ ಅವರವರೇ ಎಷ್ಟು ಎನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಯಾವ ಸಮಯ? ಮಕ್ಕಳು ದೊಡ್ಡವರಿದ್ದರೆ ಅದನ್ನು ಅವರೊಂದಿಗೆ ಚರ್ಚಿಸಿ ನಿರ್ಧರಿಸಬಹುದು. ಉದಾಹರಣೆಗೆ ಮಗು 12 ವರ್ಷ ಮೇಲ್ಪಟ್ಟಿದ್ದರೆ, ಹೀಗೆ ಹೇಳಬಹುದು, ' ನಿನ್ನ ಸಮಯ ಇಂತಿಷ್ಟು ನಿನಗೆ ಯಾ ಆ ಸಮಯ ಅನೂಕೂಲ? ಅಥವಾ ಇದನ್ನು ವಿಭಾಗಿಸಿಕೊಳ್ಳ ಅಹುದು" ಮಗುವಿಗೆ ಆಲೋಚನೆ ಬದಲಾಗುತ್ತದೆ ತನಗೆ ಕೊಟ್ಟ ಸ್ವಾತಂತ್ರ್ಯ ಖುಷಿ ಪಡು ತ್ತದೆ. ತಾ ಈ ಆಯ್ದುಕೊಂಡ ಸಮಯವಾದದರಿಂದ ಮಗುವಿನಲ್ಲೋ ದು ಭಾಧ್ಯತೆ ಬೆಳೆಯುತ್ತ ದೇ. ಮಗು ಚಿಕ್ಕದಿದ್ದರೆ ನಾವೇ ಒಂದು ಸಮಯವನ್ನು ನಿರ್ಧರಿಸಬೇಕಾಗುತ್ತದೆ.
2. ಖಂಡಿತ ಪಾಲಿಸಬೇಕು
ಸಮಯ ನಿಗದಿ ಮಾಡಿಕೊಳ್ಳುವುದು ಸುಲಭ ಆದರೆ ಪಾಲಿಸುವುದಿದೆಯಲ್ಲ ಅಲ್ಲೇ ಪಾಲಕರು ಎಡವುವುದು. ಯಾವ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯಬಾರದು. ಎಷ್ಟು ಸಮಯವೋ ಅಷ್ಟೇ ಕೊಡಬೇಕು. ಪಾಲಕರ ಜಾಣ್ಮೆ ಹಾಗೂ ತಾಳ್ಮೆ ಇಲ್ಲಿ ಬಹಳ ಮುಖ್ಯ. ಮಗು ಸಮಯವನ್ನು ವಿಸ್ತರಿಸಲು ತಪ್ಪಿಸಲು ಸಾವಿರ ನೆಪಗಳನ್ನು ಹುಡುಕುತ್ತದೆ. ಅವಕ್ಕೆಲ್ಲಾ ಬಗ್ಗುಬಾರದು ನಿರ್ದಾರದಿಂದ ಹಿಂದೆ ಸರಿಯಬಾರದು. ಉದಾಹರಣೆಗೆ, ಮಗು " ಅಮ್ಮ ಪ್ಲೀಸ್ ಅರ್ಧ ಆಗಿದೆ ಪೂರ್ತಿ ನೋಡಿಕೊಳ್ಳಲಾ ?" ಎನ್ನುತ್ತದೆ ಎಂದುಕೊಳ್ಳಿ ಅದು ನಿಜವೂ ಇರಬಹುದು. ಹೂ ಎಂದರೆ ಅದನ್ನೇ ಮಗು ಅಭ್ಯಾಸ ಮಾಡಿಕೊಳ್ಳುತ್ತದೆ, ಉಹೂಂ ಎಂದರೆ ನಿಜವಾಗಿಯೂ ಮಗುವು ಆಸಕ್ತಜಿದಾಯಕವಾಗಿ ನೋಡುತ್ತಿದ್ದರೆ ಅದಕ್ಕೆ ನೋಡಿದ ತೃಪ್ತಿ ಸಿಗದೆ ಇರಬಹುದು. ಆಗ ಮಗೂ ಇವತ್ತು ಎಷ್ಟು ಸಮಯ ಹೆಚ್ಚು ನೋಡುತ್ತೀಯೋ ಅಷ್ಟು ಸಮಯ ನಾಳೆ ಕಡಿಮೆ ಮಾಡಿಕೋ ಎಂದು ಮೃದುವಾಗಿ ಆದರೆ ದೃಢವಾಗಿ ಹೇಳಬೇಕು. ನೀವು ಕೇಳಬಹುದು ಇಷ್ಟೆಲ್ಲಾ ಬೇಕೇ ಮಗುವಿಗೆ ಕೊಟ್ಟರೆ ಆಗದೆ? ಇಲ್ಲ ಎಂದೇ ಹೇಳಬೇಕು. ಯಾವುದೇ ನಿಯಮವಿರಲಿ ಅದನ್ನು ಪಾಲಿಸದಿದ್ದರೆ ಅದು ವ್ಯರ್ಥ ಮಗು ಅದನ್ನು ಹಗುರಾವಾಗಿ ಪರಿಗಣಿಸುತ್ತದೆ. ಮುಂದೆ ಯಾವುದೇ ನಿಯಮಕ್ಕೆ ಮಗು ಜಗ್ಗುವುದೂ ಇಲ್ಲ ಬಗ್ಗುವುದೂ ಇಲ್ಲ.
3. ಅರ್ಥೈಸಬೇಕು
ಮಗುವಿಗೆ ಹಾಗೆ ಮಾಡು ಹೀಗೆ ಮಾಡು ಎನ್ನುವುದಕ್ಕಿಂತ ಅದು ಯಾಕೆ ಎನ್ನುವುದನ್ನು ಸದಾ ಹೇಳಬೇಕು. ಮಗು ಅದಿಲ್ಲವಾದರೂ ಮಗು ಒಂದು ಒಳ್ಳೆಯ ಕಾರಣಕ್ಕೆ ಎನ್ನುವುದು ಅರ್ಥ ಮಾಡಿಕೊಳ್ಳುತ್ತದೆ. ಹೇಗೂ ಮಗು ನೋಡಿಕೊಳ್ಳುತ್ತದೆ ಆದಷ್ಟು ಮಗುವಿನ ಆಸಕ್ತಿಗೆ ಅನುಗುಣವಾಗಿ ಉಪಯುಕ್ತ ಮತ್ತು ಅವಶ್ಯಕವಾದದ್ದನ್ನು ಪರಿಚಯಿಸುತ್ತಾ ಹೋಗಬೇಕು.
4. ಬದಲು ಕೊಡಬೇಕು
ಮಕ್ಕಳಿಗೆ ದೈಹಿಕ ಚಟುವಟಿಕೆ ಅತ್ಯಂತ ಅವಶ್ಯಕ. ಮಗು ತನ್ನೆಲ್ಲಾ ಚಟುವಟಿಕೆಗಳಿಂದ ಹೊರತಾಗಿ ಸ್ಕ್ರೀನ್ ನೋಡುವುದನ್ನು ಯಾವುದೇ ಕಾರಣಕ್ಕೂ ಪ್ರೇರೇಪಿಸಬಾರದು. ದೈಹಿಕ ಚಟುವಟಿಕೆ ಜೊತೆ ಜೊತೆಗೆ ಸ್ಕ್ರೀನ್ ನೋಡುತ್ತಿದೆಯಾದರೆ ಹೆಚ್ಚು ಚಿಂತಿಸಬೇಕಾಗಿಲ್ಲ.
ಇಷ್ಟೆಲ್ಲಾ ಮಾಡಬೇಕಾ ?
ಮಾಜಿ
ಮಕ್ಕಳು ಮೊಬೈಲು ಇತ್ಯಾದಿಗಳನ್ನು ನೋಡಬಾರದೆ?
ಇದು ಸಾದ್ಯವೂ ಇಲ್ಲ ಸಾಧುವೂ ಅಲ್ಲ. ಪ್ರತಿಯೊಂದಕ್ಕೂ ಟೆಕ್ನಾಲೊಜಿ ಯನ್ನು ಉಪಯೋಗಿಸುವ ನಾವು ಮಕ್ಕಳನ್ನು ಅದರಿಂದ ದೂರ ಇಡಬೇಕು ಎಂದರೆ ಹೇಗೆ ಸಾಧ್ಯ?
1.
Friday, January 23, 2015
ಲೈಫ್ ಇಸ್ ಬ್ಯೂಟಿಫುಲ್ ...!!!!!
Wednesday, January 14, 2015
ಒಂದು ಮುಗುಳ್ನಗುವಿನಲ್ಲಿ ...!
ನಾಲ್ಕು ವರ್ಷಗಳ ಹಿಂದೆ ..
Thursday, October 16, 2014
ಮಗೂ .. ಕಲಿಸು ನಿನ್ನಂತಾಗಲು....
ವಿಸ್ಮಯವಾಗಿ;
ಸ್ವಚ್ಚವಾಗಿ;
ಆಪ್ತವಾಗಿ ;
ಶುದ್ಧವಾಗಿ ;
ಪರಿಶುದ್ದವಾಗಿ ;
ಅಳಲು ;
ನಗಲು ;
ಇದ್ದು ಬಿಡಲು ನಾನು... ನನ್ನಂತೆ .....
Wednesday, June 18, 2014
ನಿನ್ನ ಪ್ರೀತಿಗೆ ಚಿಯರ್ಸ್ ಅಪ್ಪ..!
Wednesday, September 11, 2013
ಹೇಳು ಪುರುಷೋತ್ತಮ ..
Tuesday, June 11, 2013
ಅವರ ಹೊಟ್ಟೆ ಯಾವತ್ತೂ ತಣ್ಣಗಿರಲಿ ...
Tuesday, June 4, 2013
ಲೋಕದ ಮೆಚ್ಚುಗೆಯೋ ...? ಮನದ ಒಪ್ಪಿಗೆಯೋ ... ?
Tuesday, February 19, 2013
ನೀನು ತರುವ ಗುಲಾಬಿ ಇಷ್ಟವಾಗುತ್ತಿಲ್ಲ ನನಗೆ .., ಜೊತೆಗೆ ನೀನು ಕೂಡ ...!
ನಾಳೆಗಳಲ್ಲಿ ನನಗೆ ಬಂಗಾರದ ಅಂಚು ಬೆಳ್ಳಿಯ ನೂಲಿನ ಸೀರೆ ತಂದುಕೊಡುವ ಬಣ್ಣದ ಕನಸು ನಿನಗೆ, ಇದೇ ನಿನ್ನ ಕನಸುಗಳಲ್ಲಿ ನಾನೂ ಬದುಕಿಬಿಡುತ್ತೆನೆಂದ ನನಗೆ, ನಿನ್ನ ನಾಳೆಯ ಕನಸುಗಳು ನನ್ನ ಇವತ್ತಿನ ಬಣ್ಣಗೆಟ್ಟ ಸೀರೆಗೆ ಯಾವ ಬಣ್ಣವನ್ನೂ ತುಂಬುತ್ತಿಲ್ಲ!
ಅರ್ಧ ಅರ್ಧ ಮುತ್ತನ್ನೇ ಹಂಚಿಕೊಂಡು ತಿಂದರಾಯಿತು ಎಂದ ನಿನ್ನ ಮಾತುಗಳನ್ನು ಹೃದಯದಲ್ಲಿ ತುಂಬಿಕೊಂಡಿದ್ದ ನನಗೆ, ಇಲ್ಲ ಅಡಿಗೆಗೆ ಅಕ್ಕಿ ಬೇಳೆ ಬೇಕೇ ಬೇಕು, ಯಾವ ಮುತ್ತೂ ಹೊಟ್ಟೆ ತುಂಬಿಸುತ್ತಿಲ್ಲ.
ನನ್ನ ಕೈಯನ್ನು ನಿನ್ನ ಅಂಗೈಯಲ್ಲಿರಿಸಿಕೊಂಡು "ನಿನ್ನ ನೋವು ಅರ್ಥ ಆಗತ್ತೆ ಕಣೇ " ಅನ್ನುತ್ತಿ, ಆ ಒಂದು ಮಾತಿಗಾಗಿ ಹಪಹಪಿಸುತ್ತಿದ್ದ ನನಗೆ ಉಹುಮ್ಮ್, ಇಲ್ಲ ಅಷ್ಟೇ ಸಾಲದು ಯಾವುದೇ ಅರ್ಥಮಾಡಿಕೊಳ್ಳುವಿಕೆಯೂ ಮಗನ ಸ್ಕೂಲಿನ ಫೀಸನ್ನು ಕಟ್ಟಿ ಬರುತ್ತಿಲ್ಲ.
"ಎಲ್ಲ ಸರಿಯಾಗುತ್ತೆ ಬಿಡು" ನೂರು ಭರವಸೆಯ ಭಾವಗಳನ್ನು ತಂದುಕೊಡುತ್ತಿದ್ದ ಅದೇ ನಿನ್ನ ಮಾತುಗಳು, ಇಲ್ಲ ಮಗಳ ಬಿಡುವಿಲ್ಲದ ಜ್ವರಕ್ಕೆ ಔಷಧವೇ ಬೇಕು, "ಎಲ್ಲ ಸರಿಯಾಗುತ್ತದೆ" ಎಂದ ಮಾತುಗಳಿಗೆ ಜ್ವರ ಇಳಿಯುತ್ತಿಲ್ಲ.
ಕೋಪ ಬಂದರೆ ಸಾವಿರ ಮಾತುಗಳಲ್ಲಿ ರಮಿಸುತ್ತಿದ್ದ ನೀನು ಮತ್ತು ಅದರಲ್ಲೇ ಮೈ ಮರೆಯುತ್ತಿದ್ದ ನನಗೆ, ಇವತ್ತು ಮನೆಯಿಂದ ಹೊರಬಿದ್ದರೆ ದಿಟ್ಟಿಸುವ ಸಾಲಗಾರರ ಎದುರಿಸಲು ಬೇಕಿರುವುದು ದುಡಿಮೆಯೆಂಬ ನಿಯತ್ತಿನ ತಾಕತ್ತು, ನಿನ್ನ ಬಣ್ಣದ ಮಾತುಗಳು ನನ್ನ ಮನದಾಳದ ಕೋಪವನ್ನು ತಣಿಸುತ್ತಿಲ್ಲ.
ಬೆಟ್ಟವನ್ನು ಅಂಗೈಯಲ್ಲಿ ಎತ್ತುವ ಗುರಿಯ ಅಮಲಿನಲ್ಲಿರುವ ನಿನಗೆ, ಅದನ್ನೇ ನಂಬಿಕೊಂಡ ನನಗೆ ಎದುರಿಗಿರುವ ಹುಲ್ಲನ್ನೂ ನೀನು ಕೀಳಲಾರೆ ಎನ್ನುವ ಸತ್ಯದ ಅರಿವಿಗೆ ಕಣ್ಣು ಮುಚ್ಚಿದರೂ ನನಗೆ ನಿದ್ದೆ ಹತ್ತುತ್ತಿಲ್ಲ.
Friday, January 25, 2013
ನಿಮಗೂ ಹೀಗನಿಸಿತ್ತಾ .....??
ಊಟ ನಿದ್ದೆಗಳ ಪರಿವೆಯಿಲ್ಲದೆ ಅವರು ಅಲ್ಲಿ ದೇಶವನ್ನು ಕಾಯುತ್ತಿದ್ದಾರೆ..., ಇವರಿಲ್ಲಿ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.
ದೇಶದ ಗಡಿಗಾಗಿ ಜೀವವನ್ನು ಪಣವಾಗಿಟ್ಟರೆ ಅವರು .. ಇವರು ದೇಶದೊಳಗೆ ಗಡಿಯ ಗಲಭೆಯೆಬ್ಬಿಸುತ್ತಿದ್ದಾರೆ.
ಅವರಲ್ಲಿ ಹಿಮಾಲಯದ ತಪ್ಪಲಿನಲ್ಲಿ -10 ಡಿಗ್ರೀ ಚಳಿಯಲ್ಲಿ ಅನವರತ ನಡೆಯಿತ್ತಿದ್ದರೆ ...... ಇವರಿಲ್ಲಿ AC ರೂಮಿನಲ್ಲಿ ಕುಳಿತು ಭ್ರಷ್ಟಾಚಾರದ ಕತೆಗೆ ಮುನ್ನುಡಿ ಬರೆಯುತ್ತಿದ್ದಾರೆ
ಹುಟ್ಟಿದ ಹಸು ಕಂದಮ್ಮಗಳನ್ನು ಬಿಟ್ಟು ಚೀರುವ ಹೃದಯ ಹೊತ್ತು ಹೊರಟು ನಿಂತಿದ್ದರೆ .., ಇವರಿಲ್ಲಿ ಮಕ್ಕಳಷ್ಟೇ ಅಲ್ಲ .., ಅವರ ಮಕ್ಕಳು ಮೊಮ್ಮಕಳು .., ಮರಿ ಮಕ್ಕಳ ಆಸ್ತಿಗಾಗಿ ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ .
ಒಲಿದ ಒಲುಮೆಯ ಸಂಗಾತಿ ..., ತುಂಬಿದ ಕಣ್ಣುಗಳು .., ಆಕೆಯ ಮನಸ್ಸು ಇನ್ನಿಲ್ಲದಷ್ಟು ಭಾರ .., ಇವರ ಮನೆಯ ಮನೆಯೊಡತಿಗೂ ಅಷ್ಟೇ .. ಯಾರದ್ದೋ ಚೆಲ್ಲಿದ ರಕ್ತದ ಡಿಸೈನ್ ಒಡವೆ ... ಮೈ ತುಂಬಾ ಭಾರೀ ಭಾರ ..
ಯಾವುದೊ ಆಟಗಾರ ಗೆದ್ದಮಾತ್ರಕ್ಕೆ ಹಲವು ಕೋಟಿಗಳನ್ನು ಬಹುಮಾನಿಸುವ ಇವರು .., ಕೊನೆಗೆ ಅವರಲ್ಲಿ ದೇಶಕ್ಕಾಗಿ ಸತ್ತರೂ ಕೂಡ ಅದರ ಬೆಲೆ ಹೆಚ್ಚೆಂದರೆ ಕೆಲವು ಲಕ್ಷಗಳು .
ದೇಶದ ಎಲ್ಲ ಸೈನಿಕರಿಗೂ ಕೋಟಿ ಕೋಟಿ ಹೃದಯಗಳ ನಮನ ...., ಭೃಷ್ಟ ರಾಜಕಾರಣಿಗಳಿಗೆ ಅವರ ದುಷ್ಟತನಕ್ಕೆ ಕೋಟಿ ಕೋಟಿ ಹೃದಯಗಳ ದಿಕ್ಕಾರವಿರಲಿ ...
ಮೇರ ಭಾರತ್ ಮಹಾನ್
ಜೈ ಹಿಂದ್
ಚೈತ್ರ ಬಿ .ಜಿ.
Friday, January 11, 2013
ನಾನು ತುಂಬಾ ಸುಖವಾಗಿದ್ದೇನೆ ಗೊತ್ತಾ ನಿಮಗೆ ...!
ಒಂದು ಹೆಣ್ಣಿನ ಆತ್ಮ ಸ್ವಗತ ..
PUC ನಲ್ಲಿ 85% ಬಂದಿದ್ದರೂ ಇಂಜಿನಿಯರಿಂಗ್ ಹೋಗದೆ ಡಿಗ್ರಿ ಗೆ ಸೇರಿಕೊಂಡಿದ್ದು , ಅಣ್ಣಂಗೆ 65% ಬಂದಿದ್ದರೂ ಕಷ್ಟಪಟ್ಟು ಇಂಜಿನಿಯರಿಂಗ್ ಕಾಲೆಜ್ ನಲ್ಲಿ ಸೀಟ್ ದಕ್ಕಿಸಿಕೊಟ್ಟಿದ್ದು .., ಬಿಡಿ ಎಷ್ಟಾದರೂ ಮದುವೆಯಾಗಿ ಬೇರೆ ಮನೆ ಸೇರೋ ನನ್ನ ಮೇಲೆ ಇನ್ವೆಸ್ಟ್ ಮಾಡೋದು ವೇಸ್ಟ್ ತಾನೇ ...? ಹಾಗೆನಿಲ್ಲಪ್ಪ ಅಪ್ಪ ಅಮ್ಮನನ್ನು ಬಿಟ್ಟು ಅಷ್ಟು ದೂರ ಇರೋ ಸಿಟಿಗೆ ಹೋಗಿ ನಂಗೆ ಓದ್ದೊಕಾಗಲ್ಲಪ್ಪ ....
ಬಿ.ಎಸ್ಸಿ ಮುಗಿಸಿದ್ದರಿಂದ ಎಮ್ ಎಸ್ಸಿ ಮಾಡುತ್ತೆನೆಂದು ಆಸೆ ತುಂಬಿದ ಕಂಗಳಿಂದ ಗಂಡನನ್ನು ಕೇಳಿದಾಗ , 'ಯಾಕೆ ಚಿನ್ನ ಕಷ್ಟ ಪಡ್ತೀಯ ... ಅರಾಮಗಿ ಇದ್ದುಬಿಡು' ಎಂದವನು ಇದೆ ಫೈನಲ್ ಅಂತ ನಯವಾಗಿ ಹೇಳಿ ಹೊದಾಗ ಹಿಂಡಿದ್ದು ಒಗೆದ ಬಟ್ಟೆಯನ್ನು...., ನನ್ನ ಮನಸ್ಸನ್ನೇನಲ್ಲ ಬಿಡಿ .....
ಅರ್ಧಕ್ಕೆ ಬಿಟ್ಟ ನನ್ನ ಸಂಗೀತವನ್ನು ಮುಂದುವರಿಸಲುಹೋದಾಗ ಮಾವ ಹೇಳಿದ್ದು 'ನಮ್ಮ ಮನೆ ಮಹಾಲಕ್ಷೀನಮ್ಮ ನೀನು , ನೀನು ಮಾತಾಡಿದರೆ ಸಂಗೀತದಂತೆ , ಮನೆ ಗಂಡ ಮಕ್ಕಳನ್ನು ಬಿಟ್ಟು ಯಾಕಮ್ಮ ನಿನಗೆ ಸಂಗೀತ ಗಿಂಗೀತಾ....? ಬೆಚ್ಚಗೆ ಸಂಸಾರ ನೋಡಿಕೊಂಡಿದ್ರೆ ಬೇಕಾದಷ್ಟಾಯಿತಲ್ಲಮ್ಮ ..' ಅಂತ ನಗೆ ಸೂಸಿದಾಗ ಸುಟ್ಟಿದ್ದು ನನ್ನ ದಂಡಿ ದಂಡಿ ಕನಸುಗಳನಲ್ಲ, ಅಡಿಗೆ ಮಾಡುವಾಗ ಎಲ್ಲೋ ಒಂಚೂರು ಮುಂಗೈಗೆ ಬೆಂಕಿ ತಗುಲಿತಷ್ಟೇ .....!
ಅಮ್ಮ .. ನಂಗೆ ಇಲ್ಲೇ ನೀರು ತಂದು ಕೊಡು .., ಅಮ್ಮ ನಂಗೆ ಶೂ ಹಾಕು , ಅಮ್ಮ ನನ್ನ ಬ್ಯಾಗ್ ತಂದುಕೊಡು ಎಂದು ಕುಳಿತಲ್ಲಿಯೇ ಸೇವೆ ಮಾಡಿಸಿಕೊಳ್ಳುವ ನನ್ನ ಮಗರಾಯನಿಗೆ 'ಸರದಾರ ಅವನು, ತಾನೇ ಮಾಡಿಕೊಳ್ಳಲು ಅವನದೇನು ನಿನ್ನಂತೆ ಹೆಣ್ಣೇ ...?' ನನ್ನ ಅತ್ತೆ ಸೊಲ್ಲು ನುಡಿವಾಗ ಅವಡು ಕಚ್ಚಿ ಬರುವಷ್ಟು ಕೊಪವಾದರೂ ......, ಬಿಡಿ ನಂಗೆ ಕೋಪ ಬರುವುದೇ ಇಲ್ಲ ..., ನನ್ನದು ಭಾರೀ ಶಾಂತ ಸ್ವಭಾವ ......!
ಕುರ್ತಾ ಜೀನ್ಸ್ ಹಾಕಿಕೊಂಡು ಬಿಂದಾಸ್ ಆಗಿ ಓಡಾಡುತ್ತಿದ್ದ ನನ್ನ ನಾದಿನಿಯನ್ನು ' ಎಲ್ಲಿ ತಗೊಂಡ್ಯೇ ಎಷ್ಟು ಚೆನ್ನಾಗಿದೆ ! ಅಂದಿದಕ್ಕೆ , ' ಬಿಡಿ ಅತ್ತಿಗೆ ನಿಮಗೆ ಸೀರೆ ಚೂಡಿದಾರನೇ ಒಪ್ಪುತ್ತೆ' ಅಂದ ಅವಳ ಜಾಣ್ಮೆಯ ಉತ್ತರಕ್ಕೆ ' ನಿನ್ನ ಆನೆ ಗಾತ್ರಕ್ಕೆ ಒಪ್ಪುತ್ತೆನಮ್ಮಾ ..?' ಅಂತ ನಾನೇನೂ ಕೇಳಲ್ಲ ಬಿಡಿ ..., ನಂಗೆ ಕೆಲವೊಮ್ಮೆ ಗಂಟಲ್ಲಲ್ಲಿ ಕಲ್ಲು ಸಿಕ್ಕಿ ಹಾಕಿಕೊಂಡಿರುವುದರಿಂದ ಎಷ್ಟೋ ಸಲ ಮಾತಾಡುವುದರ ಬದಲು ಸುಮ್ಮನಿದ್ದುಬಿಡುತ್ತೇನೆ .....!
ನನಗೆ ಎಷ್ಟು ಆರಾಮು ಎಂದರೆ .., ಮಾವನಿಗೆ ಕೋಪ ಬಂದೀತೆ ..? ಅತ್ತೆಗೆ ಬೇಸರವಾದೀತೇ ...? ಮಗನಿಗೆ ಸಕಲ ಸೌಕರ್ಯ ತಯಾರಾಗಿದೆಯೇ ...? ಗಂಡ ಸಿಟ್ಟಾದನೆ ...? ಬಂದ ನೆಂಟರಿಗೆ ಸಮಧಾನವಾಯಿತೆ ...? ಬರೀ 'ಇ..ಷ್ಟೇ' ನೋಡಿಕೊಂಡರಾಯಿತು ..., ಮತ್ತೆ ನನ್ನ ಕೋಪ , ಬೇಸರ , ಸೌಕರ್ಯ , ಸಿಟ್ಟು , ಸಮಾದಾನ ..? ಛೆ .., ಛೆ .., ನಂಗೆ ಅವೆಲ್ಲ ಏನೂ ಆಗಲ್ಲ ಬಿಡಿ ...., ಮನೆ ಮಹಾಲಕ್ಷ್ಮಿಯಲ್ಲವೇ ನಾನು.....!
ಅಡಿಗೆ ಮನೆಯ ನನ್ನ ಹೆಡ್ ಆಫೀಸಿನಲ್ಲಿ ನನ್ನ ಕನಸುಗಳು ನನ್ನನ್ನು ಗೇಲಿ ಮಾಡುವಾಗ.., ನನಗೆ ನಾನೇ ಅಪರಿಚಿತವೆನಿಸುವಾಗ .. ಸುಮ್ಮನೆ ಕಣ್ಣಲ್ಲಿ ಬಂದ ನೀರು ....ಈರುಳ್ಳಿ ಹೆಚ್ಚಿದ್ದಕ್ಕಾಗಿ ಮಾತ್ರ .....!!
Friday, January 4, 2013
ಹಕ್ಕಿ ಹಾಡು
ಆಸೆ ನಿರಾಸೆ
ಏನಾದರೂ ಕೊಡು ನೀನು
ದೀಪವೂ ನಿನ್ನದೇ ಗಾಳಿಯೂ ನಿನ್ನದೇ.
* * *
ಅದಿಲ್ಲ ಇದಿಲ್ಲ
ಇರುವುದು ನಮಗೆ ಬೇಕಿಲ್ಲ
ಇರದಿದುದರ ಕಡೆಗೆ ತುಡಿವುದೇ ಜೇವನ.
ಬರುವೆಯೋ ಬಾರೆಯೋ
ಒಂಟಿ ಹಕ್ಕಿ ಹಾಡು
ಕಾಂತನಿಲ್ಲದ ಮೇಲೆ ಏಕಾಂತವ್ಯಾಕೆ..
* * *
ಸುಖ ದುಃಖ
ಒಂದನ್ನೇ ತೆಗೆದುಕೊಳ್ಳಲಾರೆ
ಯಾರಿಗಿಂಟು ಯಾರಿಗಿಲ್ಲ ಬಾಳೆಲ್ಲ ಬೇವುಬೆಲ್ಲ.
* * *
ಬಿಸಿ ಬೆಳಕು
ಪ್ರತೀಕ್ಷೆಯ ಹಣತೆ ನೀನು
ತನುವು ನಿನ್ನದು ಮನವು ನಿನ್ನದು.
* * *
ಪ್ರೀತಿ ಪ್ರೇಮ
ಕಡಿಮೆಯಿಲ್ಲ ಕೊರತೆಯಿಲ್ಲ
ಯಾಕೋ ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆನ್ನ ಮನಸು.
* * *
ಮಾತು ಮೌನ
ಎರಡೂ ಏನೋ ಎಂತೋ
ಬದುಕು ಮಾಯೆಯ ಮಾಟ ಮಾತು ನೆರೆತೆರೆಯಾಟ.
* * *
ಕರೆದಾಗ ಅವನು
ಹೋಗಲೇಬೇಕು ನಾವು
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ..
Friday, December 21, 2012
ಪ್ರೀತಿ ಅಂದ್ರೆ ....?
ಅವನು : ವ್ಯಕ್ತಿತ್ವನ್ನು ಪ್ರೀತಿಸೋದು ಅಂದ್ರೆ ನಿನ್ನ ಅಭಿಪ್ರಾಯವನ್ನು ನಾನು ಒಪ್ಪದೇ ಇದ್ದಾಗಿಯೂ
ಗೌರವಿಸೋದು.
ವ್ಯಕ್ತಿತ್ವ ನಿನ್ನ ಸಾನಿಧ್ಯದಲ್ಲಿ, ನಿನ್ನ ವ್ಯಕ್ತಿತ್ವ ನನ್ನ ಸಾನಿಧ್ಯದಲ್ಲಿ ಬೆಳಗೋದು, ಬೆಳೆಯೋದು!
ಅವನು : ಹೌದು ಕಣೆ .., ಪಾಪ ಹೆಣ್ಣು ಜೀವಗಳು! ತಾವು ಹೇಳುವುದನ್ನು ಕೇಳಿಸಿಕೊಳ್ಳಲು 2 ಕಿವಿ ಬೇಕು , ಹಾಗೆ ತಾನು ಹೇಳಿದ್ದೆಲ್ಲವನ್ನು ಕೇಳಿಸಿಕೊಳ್ಳುವ ಗಂಡನ್ನನ್ನು
ಪಡೆದ ಹೆಣ್ಣು ಜಗತ್ತಿನ ಅತ್ಯಂತ ತೃಪ್ತಿವಂತ ಹೆಂಡತಿ, ಹಾಗೆ ಕಿವಿ ತೆರೆದಿಟ್ಟು ಮೊಬೈಲ್ ಅಥವಾ ಲ್ಯಾಪ್ಟಾಪಿನಲ್ಲಿ ತಲೆ ಮುಳುಗಿಸದೆ, ಕಣ್ಣಲ್ಲಿ ಕೆಟ್ಟ ನಿರ್ಲಕ್ಷ್ಯವನ್ನು ಹೊರಗೆಡಹದೇ, ಹೇಳುವ ಮೊದಲೇ ಅದನ್ನು ಅಸಡ್ಡೆ ಎಂಬ ದೇಹ ಭಾಷೆ ತೋರಿಸದೆ, ಸ್ನೇಹ ಪೂರ್ವಕವಾಗಿ ಕೇಳಿಸಿಕೊಳ್ಳುವ ಗಂಡಸೇ ಅತ್ಯoತ ಯಶಸ್ವಿ ಗಂಡನಾಗಬಲ್ಲ!
ಅವನು : ಹೆಚ್ಚಿನ ಸಲ ಆತನಿಗದು ಬೇಕಾಗದು, ಆತನು ಅಷ್ಟು ಸುಲಭವಾಗಿ ತೆರೆದುಕೊಳ್ಳಲಾರ, ಮೌನದ ಚಿಪ್ಪೊಳಗೆ ಆತನನ್ನು ಸ್ವಲ್ಪ ಹೊತ್ತು ಇರಗೊಟ್ಟರೆ ಆತನಿಗೆ ಅದೇ ಸಾಂತ್ವಾನ.
ಅವನು : ಹೌದು ಕಣೆ! ಸಂತೋಷ, ನೆಮ್ಮದಿ, ಪ್ರೀತಿಯನ್ನು ಇನ್ನೆಲ್ಲೋ ಇನ್ನ್ಯಾವುದರಲ್ಲೋ ಹುಡುಕಿಕೊಂಡು ಹೊರಟರೆ ಅದು ಎಂದಿಗೂ ಸಿಗಲಾರದ ಮರೀಚಿಕೆ ..! ಬದುಕಿನ ಪ್ರತಿ ಕ್ಷಣವನ್ನು, ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸೋದೆ ಪ್ರೀತಿ .., ಅದೇ ಜೀವನ ಪ್ರೀತಿ ....
ಅವನು : ಥೂ ... ಸಕ್ಕರೆ ಸಾಲ, ದಿನ ಮಾಡ್ತಿಯ ಎಷ್ಟು ಸಕ್ಕರೆ ಹಾಕ್ಬೇಕು ಗೊತ್ತಾಗಲ್ವ ..?
ಅವನು : ಥೂ ದುಡಿದು ತಂದು ಹಾಕೋದು ಮಾತ್ರ ಕಾಣತ್ತೆ, ಈ ಮನೇಲೆ ಒಂದೂ ಬೇಕು ಅಂದಾಗ ಸಿಗಲ್ಲಾ ....
Tuesday, December 11, 2012
ಚಲ್ತಿ ಕಾ ನಾಮ್ ಗಾಡಿ..? ಯಾ ಜಿಂದಗಿ ..?
ಒಂದು ಚಳಿಯಾದ ಬೆಳಗಿನಲ್ಲಿ ಬೆಲ್ಲ ತುಪ್ಪದೊಂದಿಗೆ ಗರಿ ಗರಿಯಾದ ದೋಸೆಯನ್ನು ತಿನ್ನುತ್ತ ಕುಳಿತ್ತಿದ್ದಾಗ ನಾನಂದೆ ' ಅಪ್ಪ ನಂಗೆ ಒಂದು ಸ್ಕೂಟಿ ಬೇಕು ..!' ಅಪ್ಪಂಗೆ ಪಕ್ಕದಲ್ಲೇ ಬಾಂಬ್ ಬಿದ್ದ ಹಾಗೆ ಆಗಿತ್ತೋ ಏನೋ .., 'ಹಮ್ಮ ..?' ಎಂದರು ತಲೆ ಎತ್ತಿ .., ನಾನಂದೆ ' ಹುಮ್ಮ್.. ನಂಗೆ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟಿ ಬೇಕು ..!' , ಅಪ್ಪ 'ನೋಡನ ' ಅಂತಷ್ಟೇ ಹೇಳಿ ದೋಸೆ ತಿನ್ನುವುದರಲ್ಲಿ ಮಗ್ನವಾದರು .
15 ದಿನ ಅದೇ ಯೋಚನೆಯಲ್ಲಿದ್ದೆ , ಅಪ್ಪ 'ನೋಡನ ' ಅಂದರೆ ಅದು 'ok ' ಅಂತ ನಂಗೆ ಚೆನ್ನಾಗಿ ಗೊತ್ತಿತ್ತು ! ಅಪ್ಪ ಸೆಕೆಂಡ್ ಹ್ಯಾಂಡ್ ಸ್ಕೂಟಿ ಯಾರ ಬಳಿ ಇದೆ ಎಂದು ವಿಚಾರಿಸುತ್ತಿರಬಹುದು .., ಶೋ ರೂಂ ನಲ್ಲೂ ಸೆಕೆಂಡ್ ಹ್ಯಾಂಡ್ ಸಿಗುತ್ತಂತೆ ಅಂತ ಲೆಕ್ಕಾಚಾರ ಹಾಕುತ್ತಿತ್ತು ಮನಸ್ಸು , ನಾನಾಗ ಸಾಗರದ ಹಾಸ್ಟೆಲ್ನಲ್ಲಿ ಇದ್ದುಕೊಂಡು ಓದುತ್ತಿದ್ದೆ , ಅಪ್ಪ ಸಾಗರಕ್ಕೆ ಬಂದವರೇ , 'ತಗಳದೆ ಆದ್ರೆ ಸೆಕೆಂಡ್ ಹ್ಯಾಂಡ್ ಯಾಕೆ.. , ಸ್ಕೂಟಿ ಪೆಪ್ ಅಂತ ಹೊಸುದು ಬಂದಿದ್ದು , ಕೋಟೆಷನ್ ನೋಡು 32೦೦೦ ಶೋ ರೂಮ್ ಪ್ರೈಸ್ , 38೦೦೦ ಆನ್ ರೋಡ್ ಪ್ರೈಸ್ , ನಾನು ಶೋ ರೂಮ್ ನಲ್ಲಿ ಮಾತಡಿದ್ದಿ , ನಿಂಗೆ ಯಾವ ಕಲರ್ ಬೇಕು ಅಂತ ಸೆಲೆಕ್ಟ್ ಮಾಡು' ಅಂತ ಕೈಗೆ ಕೋಟೆಷನ್ ಕೊಟ್ಟೆ ಬಿಡೋದಾ ! ಪಕ್ಕದಲ್ಲೇ ಬಾಂಬ್ ಬಿದ್ದ ಹಾಗಾಗುವ ಸರದಿ ನನ್ನದಾಗಿತ್ತು !. 10 ಸಾವಿರಕ್ಕೋ , 15 ಸಾವಿರಕ್ಕೋ ಸಿಗುವ ಸೆಕೆಂಡ್ ಹ್ಯಾಂಡ್ ಸ್ಕೂಟಿ ತೆಗೆದುಕೊಳ್ಳುವ ಯೋಚನೆಯಿತ್ತೆ ಹೊರತು ಹೊಸ ಸ್ಕೂಟಿ ಬಗ್ಗೆ ಯೋಚಿಸಿಯೂ ಇರಲ್ಲಿಲ್ಲ ..! ಸರಿ ಶೋ ರೂಂ ಗೆ ಹೋಗಿ ಕಲರ್ ಎಲ್ಲ ನೋಡಿ ಕೆಂಪು ಬಣ್ಣದ್ದು ಸೆಲೆಕ್ಟ್ ಮಾಡಿ ಹಾಸ್ಟೆಲ್ ಗೆ ಬಂದರೂ ಮನಸ್ಸು ಪೂರ್ತಿಯಾಗಿ ಖುಷಿ ಪಡದೆ ಇನ್ಸ್ಟಾಲ್ ಮೆಂಟ್ ನಲ್ಲಿ ಖುಷಿಯನ್ನು ಆಸ್ವಾದಿಸುತ್ತಿತ್ತು .
ಕೊನೆಗೂ ಪ್ರೊಸೀಜರ್ ಎಲ್ಲ ಮುಗಿದು ಅದೇ ಶೋ ರೂಮ್ ನಲ್ಲಿ ಉದುಬತ್ತಿ ಹಚ್ಚಿ ಗಣಪತಿ ಪೂಜೆಯನ್ನೂ ಮಾಡಿ ಸ್ಕೂಟಿ ಕೀ ನನ್ನ ಕೈಗೆ ಬಂದು ಸ್ಕೂಟಿ ಹತ್ತಿ ಕೂತು ಹೋಗ್ತಾ ಇದ್ರೆ ಆಕಾಶದಲ್ಲೇ ಸ್ಕೂಟಿ ಹೊಡೆದ ಅನುಬವ ! ಆಕಾಶವೇ ಅಂಗೈಯಲ್ಲಿ ಸಿಕ್ಕಿದಷ್ಟು ಆನಂದ ! ನನ್ನ ಸ್ಕೂಟಿ , ನನ್ನ ಹೆಸರಲ್ಲೇ ರಿಜಿಸ್ಟ್ರೇಷನ್ ! ಹಮ್ಮ .. ಅವತ್ತಿನಿಂದ ಇವತ್ತಿನವರೆಗೂ ಪ್ರತೀ ಸಲ ನನ್ನ ಪ್ರೀತಿಯ ಸ್ಕೂಟಿ ನೋಡಿದಾಗಲೂ ಮನಸಿನ ಯಾವೊದೋ ಮೂಲೆಯಲ್ಲಿ ಒಂದು ಖುಷಿಯ ಪಲಕು! ಗಣಪತಿ ಕೆರೆಯ ಬಳಿಯ ಹಾಸ್ಟೆಲ್ನಿಂದ ಸ್ಕೂಟಿ ಹೊರಟರೆ BH ರೋಡ್ ದಾಟಿ ಇಕ್ಕೇರಿ ರೋಡಲ್ಲಿ ಇರುವ ನನ್ನ ಕಾಲೇಜು ತಲಪಲು ೧೦ ನಿಮಿಷ ! ವಾವ್ ..! ಸ್ವಲ್ಪ ದಿನ ಸಮಯವೇ ನನ್ನ ಕೈಲಿದ್ದಷ್ಟು ಖುಷಿ ನನಗೆ !
ಹಾಸ್ಟೆಲ್ ಎದುರಿಗೆ ಇದ್ದ ನೀರಿನ ಟ್ಯಾಂಕ್ ನಲ್ಲಿ ನನ್ ಸ್ಚೂಟಿಗೆ ದಿನ ಬಿಟ್ಟು ದಿನ ಸ್ನಾನ , ಮಿರ ಮಿರ ಮಿಂಚುವಂತೆ ದಿನ ಬಟ್ಟೆಯಿಂದ್ ಒರೆಸುವಷ್ಟು ಉಪಚಾರ ! ಪೆಟ್ರೋಲ್ ಪ್ರೈಸ್ ಒಂದು ಲೀಟರ್ ಗೆ Rs 42 ಇತ್ತು ಅವಾಗ , ಅಪ್ಪ ಅಷ್ಟೊಂದು ಸ್ಟ್ರಿಕ್ಟ್ ಆಗಿ ಏನೂ ಹೇಳದ್ದಿದ್ದರೂ ಅದೇನೋ ಗೊತ್ತಿಲ್ಲ ನಂಗೆ ನಾನೇ ಕೆಲವು ನಿಯಮವನ್ನು ಹಾಕಿಕೊಂಡುಬಿಟ್ಟಿದ್ದೆ , ತಿಂಗಳಿಗೆ ಇಂತಿಷ್ಟೇ ಪೆಟ್ರೋಲ್ ಹಾಕ್ಬೇಕು , ಸುಮ್ಸುಮ್ನೆ ಎಲ್ಲೆಂದರಲ್ಲಿ ಸುತ್ತಬಾರದು , ಅನಾವಶ್ಯಕವಾಗಿ ಸ್ಕೂಟಿ ಹೊಡಿಬಾರದು, ಸ್ಕೂಟಿ ನ ತುಂಬಾ ಚೆನ್ನಾಗಿ ಮೈಂಟೈನ್ ಮಾಡ್ಬೇಕು etc ... etc..ಹಮ್ಮ .. ಕಾಲೇಜು ಬಿಟ್ಟರೆ ನನ್ನ ಸ್ಕೂಟಿಗೆ ಸಾಗರದಲ್ಲಿರುವ ಪ್ರತಿ ಲೈಬ್ರರಿಯೂ ಚಿರಪರಿಚಿತ ! ನಾನು ಬಯಸಿದಾಗಲೆಲ್ಲ ಕ್ಷಣ ಮಾತ್ರದಲ್ಲಿ ನನ್ನನ್ನು ಲೈಬ್ರರಿಯ ಎದುರಿಗೆ ತಂದು ನಿಲ್ಲಿಸುತ್ತಿತ್ತು
ಫೈನಲ್ ಸೆಮ್ ನಲ್ಲೆ ಮದುವೆ ಫಿಕ್ಸ್ , ಹಾಸ್ಟೆಲ್ ನಲ್ಲಿ ಎಲ್ರೂ ಅಂತಿದ್ರು , " ಚೈತ್ರನಿಗೆ ಹೊಸ ಗಂಡ ಸಿಕ್ಕದ ಅಂತ ಹಳೆ ಗಂಡನ ಬಗ್ಗೆ ಅಸ್ಥೆ ಕಡಿಮೆ ಆಯಿತು ",. ಅದೇನೋ ಮದುವೆಗೆ ಸಮಯ ತುಂಬಾ ಕಡಿಮೆ ಇದ್ದಿದ್ರಿಂದ ಶಾಪಿಂಗ್.. ಸ್ಟಿಚ್ಚಿಂಗು.. ಅದು.. ಇದು.. ಅಂತ ನನ್ನ ಪ್ರೀತಿಯ ಸ್ಕೂಟಿ ಕಡೆ ಗಮನವೇ ಕೊಡೋದಕ್ಕೆ ಆಗ್ತಾ ಇರ್ಲಿಲ್ಲ .., ಪಾಪ ಅದಕ್ಕೆ ಬೇಜಾರಾಗಿತ್ತೋ ಏನೋ ...
ಬೆಂಗಳೂರಿಗೆ ನನ್ನೊಂದಿಗೆ ಬಂದ ನನ್ನ ಸ್ಕೂಟಿ ನಾನೇ ಆಶ್ಚರ್ಯ ಪಡುವಷ್ಟು ಬೇಗನೆ ಇಲ್ಲಿನ ಸಿಗ್ನಲ್ಲು ಟ್ರಾಫಿಕ್ ಗೆ ಒಗ್ಗಿಕೊಂಡಿತು , ಆದರೆ ಪಾಪ ಬೆಂಗಳೂರಿನ ೨೫ ರೋಡ್ಗಳು ಅದಕ್ಕೆ ಸದಾ ಗೊಂದಲ ! ಯಾವ ಕಡೆ ಹೋಗೋದು ಅಂತ ದಿಕ್ಕೇ ತೋಚದ ಸ್ತಿತಿ , ಒಮ್ಮೆ ನೋಡಿದ ರೋಡು ಮತ್ತೊಮ್ಮೆ ನೋಡುವಾಗ ಚೇಂಜು ! ಪಾಪ ನನ್ನ ಸ್ಕೂಟಿ ಏನು ಮಾಡಲು ಸಾದ್ಯ ? ಈಗ್ಲೂ ಅಷ್ಟೇ ಎರಡು ಮೂರು ಕವಲುಗಳ ದಾರಿಯಲ್ಲಿ ' I Cant ' ಅಂತ ಒಮ್ಮೊಮ್ಮೆ ಮುಷ್ಕರ ಹೂಡಿಬಿಡುತ್ತದೆ ..!
ಮಗಳನ್ನು ಸ್ಕೂಲ್ನಿಂದ ಪಿಕ್ ಮಾಡೋದು, ತರಕಾರಿ ತರೋದು, ಚಿಕ್ಕ ಪುಟ್ಟ ಶಾಪಿಂಗು , ಗೆಳತಿಯರೊಡನೆ ಓಡಾಟ, ಅದು ಇದು ಸಣ್ಣ ಪುಟ್ಟ ಕೆಲಸ ..ಎಲ್ಲವನ್ನೂ ನನ್ನ ಸ್ಕೂಟಿ ಸ್ವಲ್ಪವೂ ಬೇಜಾರಿಲ್ಲದೆ ಮಾಡುತ್ತಿದೆ .., ಏನೇ ಆದರೂ 10 ವರುಷದಿಂದ ಇವತ್ತಿನವರೆಗೂ ನನ್ನ ಜೊತೇನೆ ಇತ್ತು , ನನ್ನ ಜೊತೇನೆ ಇದೆ ., ಮುಂದೇನೂ ಇ..ರ...ತ್ತೆ ...
ಇಷ್ಟರ ಮದ್ಯೆ ಪ್ರೀತಿಯ ಸ್ಕೂಟಿ ನನ್ನ ತಂಗಿ ನನ್ನ ತಮ್ಮನನ್ನು ಹೊತ್ತುಕೊಂಡು ತಿರುಗಾಡಿತ್ತು . ಕಾಲೇಜು, ಎಗ್ಸಾಮ್, ಎಂಗೇಜ್ಮೆಂಟ್ , ಮದುವೆ , ಆ ಮನೆ, ಈ ಮನೆ , ಬೆಂಗಳೂರು , ಆ ನಗರ , ಈ ನಗರ , ಮತ್ತೊಂದು ಮನೆ , ಮಗಳು .. ಅವಳ ಸ್ಕೂಲ್ .. ಅಬ್ಬಬ್ಬ ..!!! ಹತ್ತು ವರುಷದಲ್ಲಿ ಏನೆಲ್ಲಾ ...!! ಇನ್ನೆಷ್ಟು ಘಟ್ಟ , ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತೋ ನನ್ನ ಪ್ರೀತಿಯ ಸ್ಕೂಟಿ ಗೊತ್ತಿಲ್ಲ ..! ಲವ್ ಯು ಸ್ಕೂಟಿ ..!
Monday, December 3, 2012
ಬದುಕ ಮನ್ನಿಸು ಮನವೇ
ಬದುಕ ಮನ್ನಿಸು ಮನವೇ...
ಸಮಸ್ಯೆಯಾದರೆ ಪರಿಹರಿಸಿಕೊಳ್ಳಬಹುದು , ದುಃಖವಾದರೆ ಇಂತಿಷ್ಟು ಕಾಲ ಅಂತಿರುತ್ತದೆ, ನಂತರ ಅದರ ತೀವ್ರತೆ ಕಡಿಮೆಯಾಗಿ ಮರೆತುಬಿಡಬಹುದು. ಬದುಕು ಎಂಬ ಇಡೀ ಪ್ಯಾಕೇಜ್ ನಲ್ಲಿ 'ಒಂದು ಸಮಸ್ಯೆಯ' ಆಯುಷ್ಯ ತುಂಬಾ ಚಿಕ್ಕದು. ಏನೇ ಆದರೂ ಬದುಕು ಹಾಗೆ ಸಾಗುತ್ತಿರುತ್ತದೆ. ಆದರೆ ಕೆಲವೇ ಕೆಲವು ಸಂಗತಿಗಳು ಮಾತ್ರ ಪ್ರತಿಕ್ಷಣದ ಬದುಕನ್ನೂ ಸವಾಲಿಗೊಡ್ದುವಂತದ್ದು .
ಹೇಳಲು ಹೊರಟಿರುವುದು ಬುದ್ದಿಮಾಂದ್ಯ ಅಂತ ಇರುತ್ತಾರಲ್ಲ ಅಂತ ಮಕ್ಕಳ ಬಗ್ಗೆ, ಅವರ ತಂದೆ ತಾಯಿಯರ ಬಗ್ಗೆ, ಅಂತವರಿಗೆ ಜೀವನದ ಪ್ರತಿ ಕ್ಷಣವೂ ಹೊರಾಟ, ಪ್ರತಿ ಹೆಜ್ಜೆಯೂ ಸವಾಲು , ಪ್ರತಿ ನಗುವಿನ ಹಿಂದೊಂದು ನೋವಿನ ಸೆಲೆಯನ್ನು ಎದುರಿಗೆ ಬಾರದಂತೆ ತಡೆದು ನಿಲ್ಲಿಸಿಕೊಂಡಿರುತ್ತಾರೆ. ಅದು ನಮ್ಮ ನಿಮ್ಮ ದುಃಖಗಳ ಹಾಗೆ ಇವತ್ತಿದ್ದು ನಾಳೆ ಹೊರಟುಬಿಡುವಂತದ್ದಲ್ಲ , ಯಾರೋ ಸಾವಿನಲ್ಲಿ ಆಗಲಿದ ದುಃಖ ಕೂಡ ಒಂದು ಕಾಲದ ಮಿತಿಯಲ್ಲಷ್ಟೇ ನಮ್ಮನ್ನು ನರಳಿಸಬಹುದು. ಇದು ಹಾಗೂ ಅಲ್ಲ.
ಮೊನ್ನೆ ಯಾವೊದೋ ಕಾರಣಕ್ಕಾಗಿ ಮಣಿಪಾಲ ಆಸ್ಪತ್ರೆಗೆ ಹೋಗಿದ್ದೆ, ವಿಸಿಟರ್ಸ್ ಸೀಟ್ ನಲ್ಲಿ ಕುಳಿತ 5 ನಿಮಿಷಕ್ಕೆ ನನ್ನ ಎದುರಿಗೆ ಒಬ್ಬ ತಾಯಿ ಮಗಳು ಬಂದು ಕುಳಿತರು. ಮಗಳು ವಿಚಿತ್ರವಾಗಿ ಶಬ್ದ ಹೊರಳಿಸುತ್ತ ಏನೋ ಹೇಳಲು ಪ್ರಯತ್ನಿಸುತ್ತಿದ್ದಳು ಆಕೆಗೆ ತನ್ನ ನಾಲಿಗೆ ತುಟಿ ಅಂಗಾಂಗಗಳ ಮೇಲೆ ಎಚ್ಚರವಿರಲಿಲ್ಲ, ಅವರಮ್ಮ ಆಕೆಯನ್ನು ಸಂಬಾಳಿಸುವುದರಲ್ಲಿ ಸೋಲುತ್ತಿದ್ದರು. ಅವರ ಮುಖದಲ್ಲಿದ್ದ ಆ ನೋವು, ಮುಜುಗರ, ಆಳವಾದ ಕಣ್ಣಲ್ಲಿದ್ದ ಅತಿಯಾದ ನೋವು..., ನನಗೆ ಇಂಥ ದೃಶ್ಯಗಳನ್ನು ನೋಡಲು ಮನಸು ಸಹಕರಿಸದು.., ಗಂಟಲುಬ್ಬಿ ಕಣ್ಣು ತುಂಬಿ ಬಂತು. ಟಿಪಾಯಿ ಮೇಲಿದ್ದ ನ್ಯೂಸ್ ಪೇಪರ್ ಮುಖಕ್ಕೆ ಅಡ್ಡ ಹಿಡಿದೆ. ಸುಮ್ಮನೆ ಯೋಚಿಸಿದೆ.. ನಮ್ಮ ಚಿಕ್ಕ ಪುಟ್ಟ ಸಮಸ್ಯೆಗಳ ಸುತ್ತವೇ ನಮ್ಮ ಮನಸು ಸುತ್ತುತ್ತಿದ್ದರೆ...., ಅವರ ಮನಸು ಹೇಗಿರಬಹುದು..! ಸೀರೆ, ಮನೆ ಅದು, ಇದು ಅಂತ ಯೋಚಿಸುತ್ತಿದ್ದರೆ ಆಕೆಯ ಪ್ರಿಯರಿಟಿ ಏನಿರಬಹುದು ?? ನಮ್ಮ ಮಗ, ಮಗಳು A ಗ್ರೇಡ್ ಬಂದಿಲ್ಲವಲ್ಲ ಅಂತ ಚಿಂತಿಸುತ್ತಿದ್ದರೆ ಆಕೆ ಏನು ಚಿಂತಿಸುತ್ತಿರಬಹುದು ? ಮತ್ತೂ ಎಂದರೆ ಇಂತ ವಿಷಯಗಳಲ್ಲಿ ತಾಯಿಯನ್ನು ಕಾಡುವ ಮತ್ತೊದು ಯೋಚನೆ... ಮಗು ಹೆಣ್ನಾಗಿದ್ದರೆ ಪ್ರಕೃತಿ ಕೊಡಮಾಡುವ ಅನೇಕ ಘಟ್ಟಗಳು..! 'ನಾನು ಇರುವ ತನಕ ನೋಡಿಕೊಳ್ಳಬಲ್ಲೆ ಮುಂದೇನು?' ಎನ್ನುವ ವಿಚಾರವೊಂದು ಆಕೆಯ ಸುತ್ತ ಗಿರಾಕಿ ಹೊಡೆಯುತ್ತಿರುತ್ತದೆ. ಮನಸ್ಸು ಭಾರವಾಗಿತ್ತು. ನಾವು ಯಾವು ಯಾವುದೋ ವಿಷಯಗಳಿಗೆ ದುಃಖಿಸುತ್ತೆವಲ್ಲ ಅಂತ ಆ ಕ್ಷಣಕ್ಕೆ ಅನಿಸಿಬಿಟ್ಟಿತು ನನಗೆ.
ಮನೆಗೆ ಬಂದವಳೇ ಗೂಗಲ್ ಒಳಗೆ ಹೋಗಿ ಕುಳಿತುಕೊಂಡೆ .., ಈ ತರದ ಮಕ್ಕಳ ಬಗ್ಗೆ ಸಾಕಷ್ಟು ಓದಿದೆ, ಓದುತ್ತಿದ್ದ ಹಾಗೆ ಸ್ವಲ್ಪ ಸಮದಾನವಾದ ಹಾಗಾಯಿತು , ಕೆಲವನ್ನು ಬದಲಾಯಿಸಲು ಸಾಧ್ಯವಿಲ್ಲವಲ್ಲ...? ಅದರ ಜೊತೆಗೆ ಬದುಕನ್ನು ಅಭ್ಯಸಿಸಿಕೊಳ್ಳಬೇಕು, ಸುಂದರವಾದ ಬದುಕನ್ನು ರೂಪಿಸಿಕೊಳ್ಳಬೇಕು. ಅರುಣಶೌರಿಯವರು ನಿಮಗೆ ಗೊತ್ತಿರಬಹುದು, ಅವರಿಗೆ ಒಬ್ಬ ಮಗನಿದ್ದಾನೆ.., ಅವನ ಬಗ್ಗೆ ಶೌರಿಯಯವರು ಏನೆನ್ನುತ್ತಾರೆ ಗೊತ್ತಾ..? " ನನಗೆ ನನ್ನ ಮಗ ಕೊಡುವ ಕಾನ್ಫಿಡೆನ್ಸ್ ತುಂಬಾ ದೊಡ್ಡದು, ಏಕೆಂದರೆ ಅವನು ನಾನು ಎದ್ದಾಗಲೂ ಬಿದ್ದಾಗಲೂ ನನ್ನನ್ನು ಒಂದೇ ತರಾ ನೋಡುತ್ತಾನೆ ", ಎನ್ನುತ್ತಾರೆ , ವಿಷಯ ಅಂದರೆ.. ಅವರ ಮಗ ಮೆಂಟಲಿ ಚಾಲೆಂಜ್ಡ್ ! . ಇನ್ನೊಬ್ಬ ತಂದೆಗೆ 2 ಗಂಡುಮಕ್ಕಳು.., ಒಬ್ಬ ಬುದ್ದಿಮಾಂದ್ಯ , ಇನ್ನೊಬ್ಬ ಅತಿ ಬುದ್ದಿವಂತ , ಅವನೇನು ಅನ್ನುತ್ತಾನೆ ಅಂದರೆ, " ನಂಗೆ ಇಬ್ಬರೂ ಮಕ್ಕಳು ಸಮಾನರು ಇವನು ಚಿನ್ನದ ಪದಕ ತಂದಾಗ ಆಗುವಷ್ಟೇ ಸಂತೋಷ ಆತ ತನ್ನ ಶೂ ಲ್ಯೇಸ್ ನ್ನು ತಾನೇ ಕಟ್ಟಿಕೊಂಡಾಗ ಅನುಬವಿಸುತ್ತೇನೆ" ಎನ್ನುತ್ತಾನೆ. ಇಂತಹ ಅನೇಕ ಉದಾಹರಣೆ ಓದಿದಾಗ ಮನಸು ಸ್ವಲ್ಪ ತಹಬದಿಗೆ ಬಂದಿತ್ತು.
ಮೊದಲು ಸಮಾಜ ಅಂತವರನ್ನು ಯಾವುದೇ ಕಾರಣಕ್ಕೂ ಕರುಣೆಯ ದೃಷ್ಟಿಯಿಂದ ನೋಡಬಾರದು, ಸಹಜತೆ ಇರಬೇಕು ನಡೆ ನುಡಿ ನೋಟದಲ್ಲಿ , ಇನ್ನೂ ಎಂದರೆ ಪರೀಕ್ಷೆಯಲ್ಲಿ ನಮಗಿಂತ ಜಾಸ್ತಿ ಅಂಕ ತೆಗೆದುಕೊಂಡವರೆಡೆಗೊಂದು ನಮಗೆ ಗೌರವ ಇರುತ್ತಲ್ಲ ಅಂತದೊಂದು ಗೌರವವಿರಬೇಕು ಅವರ ಪಾಲಕರೆಡೆಗೆ , ಏಕೆಂದರೆ ಬದುಕನ್ನು ಅವರು ನಮಗಿಂತ ತೀವ್ರವಾಗಿ, ಆಳವಾಗಿ ಅನುಭವಿಸುವವರು. ನಾನೂ ಅಂತವರಿಗೆ ಮುಂದೊಂದು ದಿನ ಏನಾದರೂ ಮಾಡಬೇಕು ಅನಿಸಿದ್ದಂತೂ ನಿಜ.
ಕಡೇ ಪಕ್ಷ.....
ಸಮಸ್ಯೆಗಳು, ನೋವು, ದುಃಖ ಇವುಗಳಿಂದ ಹೊರತಾಗಿರಲಂತೂ ಸಾದ್ಯವಿಲ್ಲದೆ ಇರಬಹುದು...., ಅಟ್ಲೀಸ್ಟ್ ದುಃಖ ಪಡುವಷ್ಟು ಆ ದುಃಖ 'ವರ್ತ್' ಆಗಿರಲಿ..., ಪಟ್ಟ ಪ್ರತಿ ದುಃಖವೂ ಅನುಭವವಾಗಿ ಮನಸ್ಸು ಇನ್ನೂ ಪಕ್ವವಾಗಲಿ..., ಆಗದ, ಹೋಗದ, ಇಲ್ಲದ, ಸಲ್ಲದ, ಬೇಡದ ವಿಷಯಗಳಿಗೆ ಕೊರಗುವುದನ್ನು ದುಃಖಿಸುವುದನ್ನು ನಮ್ಮ ಮನಸು ಮೊದಲು ನಿಲ್ಲಿಸಲಿ. ದುಃಖ ನೋವುಗಳಲ್ಲಿಯೂ ನಮ್ಮ ಮನಸ್ಸು ಚೂಸಿಯಾಗಿರಲಿ. ಸದ್ಯಕ್ಕೆ ಇಷ್ಟಾದರೂ ಮಾಡೋಣ ಅನ್ನಿಸಿತು.
ಕೊನೆಯಲ್ಲಿ,
ಭಗವಧ್ಗೀತೆಯಲ್ಲಿ ಹೇಳಿದ ಹಾಗೆ , ' ಬದಲಾಯಿಸಬಲ್ಲದ್ದನ್ನು ಬದಲಾಯಿಸವ ಶಕ್ತಿ ಇರಲಿ, ಬದಲಾಯಿಸಲು ಸಾದ್ಯವಿಲ್ಲದ್ದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿರಲಿ ' ಅಲ್ಲವೇ ...
.