Tuesday, June 11, 2013

ಅವರ ಹೊಟ್ಟೆ ಯಾವತ್ತೂ ತಣ್ಣಗಿರಲಿ ...

     

    
     
ಮೊದಲೆಲ್ಲಾ  ನಾನೂ ಹಾಗೆ ಮಾಡುತ್ತಿದ್ದೆ,  ಮನೆ ಮುಂದೆ ಬಂದ  ತರಕಾರಿ ಮಾರುವವನ  ಗಾಡಿಯಲ್ಲಿರುವ ಟೊಮೇಟೊವನ್ನು ಮುಟ್ಟಿ  ಮುಟ್ಟಿ  ಪರಿಶೀಲಿಸಿ ತೆಗೆದುಕೊಳ್ಳುತ್ತಾ , ' ಯಾಕ್ರೀ ಅಂಗಡಿಯಲ್ಲಿ ಇಷ್ಟು ನಿಮ್ದ್ಯಾಕ್ರೀ   1  ರುಪಾಯೇ ಜಾಸ್ತಿ ? ಎನ್ನುತ್ತಿದ್ದೆ ,  ಎಳನೀರು ಹೊಟ್ಟೆ ತುಂಬಾ ಕುಡಿದು ಯಾಕೆ ಒಂದು ರುಪಾಯೀ ಜಾಸ್ತಿ ಪಕ್ಕದ ಬೀದಿಯಲ್ಲಿ ಕಡಿಮೆ ? ಎನ್ನುತ್ತಿದ್ದೆ ,  ಸಿಗ್ನಲ್ಲಿ ಪೆರೆಲೆ ಕಾಯಿಯೂ ಮಾವಿನ ಕಾಯಿಯೋ  ಬಂದರೆ 1೦ ರುಪಾಯಿಗೆ 3 ರೆನಾ? 4 ಕೊಡಿ ಎನ್ನುತ್ತಿದ್ದೆ, ಹೀಗೆ  ಚೌಕಾಸಿ ಮಾಡುವುದು  ಅದೇನೋ  ರೂಢಿಗತವಾಗಿಬಿಟ್ಟಿತ್ತು .
ಆದರೆ  ಒಮ್ಮೆ ಯೋಚಿಸಿ ನೋಡೋಣ, ತರಕಾರಿ  ತರುವವನು ಬೆಳಗ್ಗೆ 3 ಗಂಟೆಗೆ ಎದ್ದು, ಸೈಕಲ್ ತುಳಿದು, ಯಶವಂತ ಪುರ ಮಾರ್ಕೆಟ್ಗೋ, HAL ಗೋ  ಅಥವ ಇನ್ನೆಲ್ಲೋ  ಮೈಲುಗಟ್ಟಲೆ ಹೋಗಿ, ತರಕಾರಿ ತಂದು, ಮತ್ತೆ ಅದನ್ನು ಪ್ರತಿ ಮನೆ ಮನೆಗೂ ಮಾರಿ, ಅವರ ಉಲ್ಟಾ ಪಲ್ಟ ಮಾತನ್ನೂ  ಕೇಳಿಸಿಕೊಂಡು,  ಅಷ್ಟಕ್ಕೂ ಅವರಿಗೆ ಸಿಗುವ  ಲಾಭದ ಪರಿಮಾಣವಾದರೂ ಎಷ್ಟು ?   kg ಗೆ ಒಂದು ರುಪಾಯೀ? ಎರಡು ರುಪಾಯೀ ? ಬೇಡ 3 ರುಪಾಯೀ ? ಎಳನೀರಾತನಿಗೆ ಸಿಗುವ ಲಾಭವಾದರೂ ಎಷ್ಟಿದ್ದೀತು?  ಸಿಗ್ನಲ್ಲಲ್ಲಿ ಪೆರೆಲೆ ಕಾಯಿಯನ್ನೊ ಮಾವಿನಕಾಯಿಯನ್ನೋ  ಮಾರುವವರ ಲಾಭದ ಪರಿಮಾಣ ಎಷ್ಟು ಪೈಸೆ ಅಥವ ಎಷ್ಟು ರುಪಾಯೀ ಇದ್ದೀತು?

  ವಿಷಯ  ಇಷ್ಟೇ ಅಲ್ಲ ...

ನಾವುಗಳು ಮಾಲ್  ಹೊಕ್ಕರೆ   ಸಾವಿರದ ನೋಟು ಚಿಕ್ಕದೆನಿಸುತ್ತದೆ, ಹೋಟೆಲೊಳಗೆ  ಹೊಕ್ಕು ಕುಳಿತರೆ ಮಿತಿಮೀರಿದ  ಬಿಲ್  ಜೊತೆಗೆ  ಮುಲಾಜಿಗಾದರೂ ಟಿಪ್ಸ್ ಅಂತ ಬಿಟ್ಟು ಬರುತ್ತೇವೆ, ಪೆಟ್ರೋಲನ್ನು ಬಕಾಸುರನಂತೆ ಕುಡಿದು  5  ಜನರು ಓಡಾಡುವ ಕಾರಿನಲ್ಲಿ  ದಿಲ್ ಅಂತ ಒಬ್ಬರೇ ಓಡಾಡುತ್ತೇವೆ, ಸಿನೆಮಾಕ್ಕೆ ಹೋಗಿ ಕುಳಿತರೆ ಅಲ್ಲಿಯ ಪೋಪ್ಕೊನ್ರ್ನ್ ಗೆ  ದುಪ್ಪಟ್ಟು ದುಡ್ಡು   ಚೆಲ್ಲುತ್ತೇವೆ,  ಪಟ್ಟಿ ಉದ್ದಕ್ಕೆ ಬೆಳೆಯುತ್ತಲೇ  ಹೋಗುತ್ತದೆ....

ರಿಲಯನ್ಸ್ ಫ್ರೆಶ್ ನಲ್ಲಿ  ವ್ಯಾಕ್ಸ್ ಬಳಿದಿಟ್ಟ, ಸಕ್ಕರೆ ಇಂಜೆಕ್ಷನ್ ಚುಚ್ಚಿದ  ಫಳ್ಳನೆ ಹೊಳೆಯುವ  ಸೇಬುವಿಗೆ kg  ಗೆ ನೂರಿಪ್ಪತ್ತಾದರೂ ಕೊಡುತ್ತೇವೆ, ಮತ್ತೆಷ್ಟಾದರೂ ಕೊಡುತ್ತೇವೆ, ಕೊಟ್ಟು ಕವರೊಳಗೆ ತುಂಬಿಸಿಕೊಳ್ಳುತ್ತೆವೆ, ಆ ಕವರಿಗೆ ಮತ್ತೆ  ಒಂದೋ  ಎರಡೋ ರುಪಾಯೀಯನ್ನೂ  ಕೊಡುತ್ತೇವೆ, ಬಿಸಿಲಿನಲ್ಲಿ ತಲೆ ಮೇಲೆ ಹೊತ್ತ ನಮ್ಮದೇ  ನೆಲದ ಪೇರಲೆ ಹಣ್ಣಿಗೆ ಇಪ್ಪತ್ತು ರುಪಾಯೆಗೆ ನಾಲ್ಕು ಕೇಳುತ್ತವೆ, ತಯಾರಿಕೆಗೆ ಕೇವಲ ಎರಡು ರುಪಯೀ  ಖರ್ಚಾಗುವ  ಪೆಪ್ಸಿ ಗೆ   2 5  ರುಪಾಯೆಯನ್ನು ಕೊಡುವಾಗ ನಾವು ತಪ್ಪಿಯೂ ಚೌಕಾಸಿ ಮಾಡುವುದಿಲ್ಲ ,  ದುಡ್ಡು ಕೊಟ್ಟು ಆರೋಗ್ಯ ಕೆಡಿಸಿಕೊಳ್ಳುತ್ತೇವೆ.  ಇಲ್ಲೇ ಮಂಡ್ಯದವನೋ  ತಿಪಟೂರವನೋ  ಬೆಳೆದ ಎಳನೀರಿಗೆ  ಅದನ್ನ ಮಾರುವವನಿಗೆ ನಮ್ಮದು ಒಂದು ರುಪಾಯೀ ಎರಡು ರುಪಾಯಿಗೆ ಚೌಕಾಸಿ !
  
       ಅದೇನಾಯಿತೋ ..,  ಇತ್ತೀಚಿಗೆ  ಶ್ರಮ  ಪಟ್ಟು ಕೆಲಸ ಮಾಡುವ ಇಂತವರ ಜೊತೆ  ಚೌಕಾಸಿ ಮಾಡಬೇಕಿನಿಸುತ್ತಿಲ್ಲ  ಉಳಿತಾಯ ಮಾಡುವ ಮನಸಿದ್ದರೆ ಬೇಕಷ್ಟು ಮಾರ್ಗಗಳಿವೆ, ಅವರ ಶ್ರಮದ ಬೆವರು ಬೇಡ,  ಈ ತರ ಚೌಕಾಸಿ ಮಾಡಿ ಬುದ್ದಿವಂತೆ ಎನಿಸಿಕೊಳ್ಳುವುದಕ್ಕಿಂತ  ದಡ್ಡಿಯಾಗಿರಲೇ  ಇಷ್ಟ ಪಡುತ್ತೇನೆ, ಇತ್ತೀಚಿಗೆ  'ಯಾಕೆ ಒಂದು ರುಪಾಯೇ ಜಾಸ್ತಿ'  ಎನ್ನುವ ಬದಲು  ತರಕಾರಿ ಗಾಡಿಯವನ ಬಳಿ , 'ಎಲ್ಲಿಂದ ತರ್ತೀರಾರೀ?, ಎಷ್ಟು ಕೊಡ್ತೀರಾರೀ ? ', ತರಕಾರಿ ಕೊಳೆತರೆ ಏನು ಮಾಡ್ತೀರಾ?  ಕೇಳುತ್ತೇನೆ ,  ಎಳನೀರಾತನೊಂದಿಗೆ , ' ಎಲ್ಲಿಂದ  ಬರತ್ತೆ? ನಿಮಗೆ ಎಷ್ಟಕ್ಕೆ ಸಿಗತ್ತೆ , ಲಾಭ ಆಗತ್ತಾ ? ಹಾಳು ಆದರೆ ಏನು ಮಾಡ್ತೀರಾರೀ?  ಎನ್ನುತ್ತೇನೆ, ಅವಾಗಲೇ ಗೊತ್ತಾಗಿದ್ದು ನನಗೆ ಪೋಲಿಸಿನವರಿಗೂ ಪಾಲು ಕೊಡಬೇಕಂತೆ! ಕೇಳಿದಾಗಲೆಲ್ಲಾ  ಎಳನೀರೂ  ಕೊಡಬೇಕಂತೆ !
ರೆಡಿಮೇಡ್  ಫುಡ್ ಪ್ಯಾಕೆಟ್, ಪೆಪ್ಸಿ ಕೋಕಾಕೋಲ,  ಐಸ್ ಕ್ರೀಂ, ಕೇಕ್,  ಹಾಳು  ಮೂಳು ಅಂತ ದುಡ್ಡು ಚೆಲ್ಲಿ  ನಮ್ಮ ಆರೋಗ್ಯವನ್ನೂ ಕೆಡಿಸಿಕೊಂಡು ಬೇರೆ ದೇಶದವರ ಹೊಟ್ಟೆ ತುಂಬಿಸುವುದು, ಅವರನ್ನು ಶ್ರೀಮಂತಗೊಳಿಸುವುದು  ನಮ್ಮ ಯಾವತ್ತಿನ ಕೆಲಸವೇ ! ಇರಲಿ ಬಿಡಿ, ಆದರೆ ನಮ್ಮ ರಾಮನಗರದ ತಿಪ್ಪಣ್ಣ, ಚಿಕ್ಕಬಳ್ಳಾಪುರದ  ಮಂಜಣ್ಣ , ಮಂಡ್ಯದ ಸೋಮಣ್ಣ , ತಿಪಟೂರಿನ ಮತ್ಯಾವುದೋ ಅಣ್ಣ , ಅವರೂ ಸ್ವಲ್ಪ ಬೆಳೆಯಲಿ, ನಮ್ಮ ದೇಹಕ್ಕೆ ಅಗತ್ಯವಾದ  ತರಕಾರಿ, ಇನ್ನಿತರ ಆರೋಗ್ಯಕರ ಬೆಳೆ ಬೆಳೆಯುವವರ, ಮಾರುವವರ  ಹೊಟ್ಟೆ ಯಾವತ್ತೂ ತಣ್ಣಗಿರಲಿ.....

ಕೊನೆಗೆ,

ಕೊಟ್ಟ ಭಿಕ್ಷೆ ಕೂಡ ಸೋಮಾರಿತನಕ್ಕೆ ಪ್ರೋತ್ಸಾಹವಾಗಬಹುದು, ದೇವರ ಹುಂಡಿಗೆ ಬಿದ್ದ ದುಡ್ಡು ಕೂಡ ಎಲ್ಲೋ ಯಾರದ್ದೋ ಹೊಟ್ಟೆ ತುಂಬಿದವರನ್ನೇ  ಇನ್ನಷ್ಟು ತುಂಬಿಸಬಹುದು,  ಆದರೆ  ನಮ್ಮಂತವರ  ಒಂದು ಎರಡು ರುಪಾಯೀ ಲಾಭ ಅವತ್ತಿನ ಅವನ ಅನ್ನವಾಗಬಹುದು, ಅಲ್ಲವೇ....?
     


                             

Tuesday, June 4, 2013

ಲೋಕದ ಮೆಚ್ಚುಗೆಯೋ ...? ಮನದ ಒಪ್ಪಿಗೆಯೋ ... ?



ಇದ್ದ ಒಬ್ಬ ಪತ್ನಿಯ ರಕ್ಷಣೆಯಲ್ಲಿ
ಸೋತ ರಾಮ
ನೋವಿಗೆ ಇನ್ನೊಂದು ಹೆಸರನ್ನೇ ಸೀತೆಯನ್ನಾಗಿಸಿದ  !


ಕೂದಲೂ ಕೊಂಕದಂತೆ  ಕಾದವನು
ಹದಿನಾರು ಸಾವಿರ ಹೆಂಡತಿಯರಲ್ಲಿ
 ಯಾರನ್ನೂ  ನೋಯಿಸಿದ್ದಿಲ್ಲ ಕೃಷ್ಣ!


ಬೇಕಿತ್ತಾ ರಾಮನಿಗೆ ಲೋಕದ ಮೆಚ್ಚುಗೆ !?
ಸಾಕಿತ್ತಾ  ಕೃಷ್ಣನಿಗೆ ಮನದ ಒಪ್ಪಿಗೆ!? 
ಕೇಳಬೇಕಿತ್ತು .... ಪ್ರೀತಿ ಅಂದರೆ ಯಾವುದೆಂದು ... !?