Wednesday, September 26, 2012

ಮಹಿಳೆ ..... ಸಾಧನೆಗೆ ಸವಾಲುಗಳ ಸರಮಾಲೆ :-

ಮಹಿಳೆ .....
 ಸಾಧನೆಗೆ  ಸವಾಲುಗಳ ಸರಮಾಲೆ :
 



ಆಕೆ :
      ಬೆಳಗ್ಗೆ 6  ಘಂಟೆಗೆ   ಏಳುತ್ತಾಳೆ,  ಕಾಫೀ ಮಾಡಿ ತಿಂಡಿ ರೆಡಿ ಮಾಡಿ ಮಧ್ಯಾನಕ್ಕೆ  ಲಂಚ್ ಬಾಕ್ಸ್  ರೆಡಿ ಮಾಡಿ, ಮಗುವನ್ನು ಎಬ್ಬಿಸಿ,  ಬೃಶ್  ಮಾಡಿಸಿ,  ಸ್ನಾನ ಮಾಡಿಸಿ ರೆಡಿ ಮಾಡಿ ಸ್ಕೂಲ್ ಬಸ್ ಹತ್ತಿಸಿ ತಾನು ಆಫೀಸ್  ತಲುಪಿಕೊಳ್ಳುವಷ್ಟರಲ್ಲಿ 10 ನಿಮಿಷ ಲೇಟ್ ಆಗಿಬಿಟ್ಟಿರುತ್ತದೆ,  ರಾತ್ರೆ ಬಂದು ಮತ್ತದೇ ಕೆಲಸ.. ಅಡಿಗೆ ....... ಮುಗಿಸುವಷ್ಟರಲ್ಲಿ  , ಮನಸು ದೇಹ ಎರಡೂ ದಣಿದಿರುತ್ತದೆ

 ಆತ :
 ಬೆಳಗ್ಗೆ ಎದ್ದು ತಿಂಡಿ ತಿಂದು ರೆಡಿ  ಆಗಿ ಆಫೀಸ್ ಸೇರಿಕೊಳ್ಳುವಷ್ಟರಲ್ಲಿ ಸಮಯ ಸರಿಯಾಗಿರುತ್ತದೆ, ಮತ್ತೆ ಆತ ರಾತ್ರೆ ಮನೆ ತಲುಪುವುದು ಇನ್ನು ಎಷ್ಟು ಹೊತ್ತಿಗೋ...
  
 ಇನ್ನು ಮಗು ಚಿಕ್ಕದಾದರೆ ಬೆಳಿಗ್ಗೆಯಿಂದ ಸಂಜೆಯವರೆಗೆ,  ' Day  Care '  ಸ್ಕೂಲ್ ಗೆ ಹೋಗುವ ಮಗುವಾದರೆ ಅಲ್ಲಿಂದ ಡೈರೆಕ್ಟ್ Day  Care  ಇನ್ನು ತಂದೆ ತಾಯಿಯಂದಿರಿಗೆ ತಮ್ಮ ಮಕ್ಕಳೊಂದಿಗೆ ಕಳೆಯಲು ಸಮಯವಾದರೂ ಎಲ್ಲಿ ?

          ಇದು ಬೆಂಗಳೂರು ಅಥವ ಇನ್ನಿತರ  ನಗರ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.  


           ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಹೆತ್ತವರ ಪಾತ್ರ ಅತೀ ಅಗತ್ಯ , ತಜ್ನ್ಯರ ಪ್ರಕಾರ ಮಗುವಿನ ಮಾನಸಿಕ ಬೆಳವಣಿಗೆಗೆ ತಾಯಿಯ ಪಾತ್ರ ಅತಿ ಮುಖ್ಯ . ತಾಯಿಯ ಸ್ಪರ್ಶ ಸಾಮಿಪ್ಯದಿಂದ ಮಗುವಿನ ನರಮಂಡಲ ವಿಕಸನ ಗೊಳ್ಳುತ್ತದೆ .  ತಾಯಿಯ ಸ್ಪರ್ಶ ಸಾಮಿಪ್ಯದಿಂದ ಮಗುವಿನ ಭಾವನಾತ್ಮಕ ಬೆಳವಣಿಗೆಗೆ  ಸಹಾಯವಾಗುತ್ತದೆ  . ತಂದೆ ತಾಯಿಯಿಂದ ದೂರವಿದ್ದು Day  Care  ಸೆಂಟರ್ ನಂಥ ಜಾಗದಲ್ಲಿ ಬೆಳೆಯುವ ಮಕ್ಕಳು ಅನೇಕ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂಬುದು ತಜ್ನ್ಯರ ಅಭಿಪ್ರಾಯ.  ಮುಂದುವರೆದ ನಗರಗಳಲ್ಲಿ ಅಷ್ಟೇ   ವೇಗವಾಗಿ ಚೈಲ್ಡ್  ಕೌನ್ಸಿಲಿಂಗ್ ಸೆಂಟರ್ ಗಳು ತಲೆ ಎತ್ತುತ್ತಿರುವುದೇ ಇದಕ್ಕೆ ಸಾಕ್ಷಿ ..

                ಅದೇ ವಾಸ್ತವತೆಯ ಅಡಿಯಲ್ಲಿ ಸಮಸ್ಯೆಯ ಇನ್ನೊಂದು ಮಗ್ಗುಲು ನೋಡುವದಾದರೆ ದಿನೇ ದಿನೇ ಏರುತ್ತಿರುವ ಜೀವನ  ನಿರ್ವಹಣೆಯ ಬೆಲೆ ,  'ಇಬ್ಬರು ದುಡಿದರೆನೆ ಬದುಕು '  ಎನ್ನುವಂಥಹ ಮಟ್ಟವನ್ನು ತಲುಪುತ್ತಿದೆ.  ಅದೇ ಮಗುವಿನ ಭವಿಷ್ಯದ ಭದ್ರತೆಗಾಗಿ,  ಬದುಕಿನಲ್ಲಿ ನೆಲೆ ಕಂಡುಕೊಳ್ಳುವಿಕೆಗಾಗಿ, ಉತ್ತಮ ಜೀವನ ನಿರ್ವಹಣೆಗಾಗಿ  ಉದ್ಯೋಗ  ಆಕೆಗೆ  ಅನಿವಾರ್ಯದ ಅಗತ್ಯವೇ ಆಗಿಬಿಟ್ಟಿದೆ.  ಓಡುತ್ತಿರುವ ಕಾಲದ ವೇಗಕ್ಕೆ ಹೊಂದಿಕೊಳ್ಳಬೇಕಿದೆ.
  

             ಇನ್ನೊಂದು ಮಗ್ಗುಲು:  ಆಕೆಯ ಬುದ್ದಿವಂತಿಕೆ, ಪ್ರತಿಭೆ, ಆಸಕ್ತಿ ಇಲ್ಲಿ ವಿಷಯವಾಗಿರುತ್ತದೆ . ಎಷ್ಟೋ ಕೋರಿಕೆಗಳು,  ಅದಿನ್ನೆಷ್ಟೋ ಆಸೆಗಳನ್ನು ಹೊತ್ತು,  ತನ್ನ ಗಮ್ಯದೆಡೆಗೆ  ದೃಷ್ಟಿ  ಇಟ್ಟು, ಶ್ರಮವಹಿಸಿ ಬೇಕೆಂದ ಗುರಿಯೆಡೆಗೆ ಆಗ ತಾನೇ ತಲುಪಿರುತ್ತಾಳೆ.  ಅಥವಾ  ತಲುಪುವ  ಹಂತದಲ್ಲಿರುತ್ತಾಳೆ.    ಕರ್ತವ್ಯ, ಜವಾಬ್ದಾರಿಯ ಮುಸುಕಿನೊಳಗೆ  ಆಕೆಯ ಕನಸನ್ನು ಚಿವುಟಬಹುದೇ?  ಆಕೆಯ ಅಪಾರ ಬುದ್ದಿ ಶಕ್ತಿ, ಪ್ರತಿಭೆ ಕೇವಲ ಒಗ್ಗರಣೆಯ ಚಿಟಪಟ ಸದ್ದಿನಲ್ಲಿ ಕಳೆದು ಹೋಗಬೇಕಿದೆಯೇ ?
 
             ಮಗುವಿನ ಬೆಳವಣಿಗೆಗೆ ಅಡ್ಡಿಯಾಗದಂತೆ,  ಸಂಸಾರಕ್ಕೆ ಸಾಥಿಯೂ  ಆಗುತ್ತಾ ...   ತನ್ನ ಪ್ರತಿಭೆ, ವ್ಯಕ್ತಿತ್ವದೊಂದಿಗೆ ಬೆಳೆಯುವ ಅನಿವಾರ್ಯತೆ ಇಂದಿನ ಮಹಿಳೆ ಎದುರಿಸಿತ್ತಿರುವ ಸವಾಲಾಗಿದೆ .. ಮತ್ತು ಮಹಿಳೆ  ಅದನ್ನು  ಸಮರ್ಥವಾಗಿ ನಿಭಾಯಿಸಿಕೊಂಡು  ಬರುತ್ತಿದ್ದಾಳೆ.  ಈ  ನಿಟ್ಟಿನಿನಲ್ಲಿ ಸಮಾಜ,   ಕುಟುಂಬ,  ಆಕೆಯ ಪತಿ   ಪ್ರತಿಯೊಬ್ಬರೂ ಆಕೆಗೆ ಬೆಂಬಲವಾಗಿ ನಿಲ್ಲಬೇಕಿದೆ  .


- ಚೈತ್ರ ಬಿ. ಜಿ. 


Sunday, September 16, 2012

ವಕ್ರತುಂಡ ಮಹಾಕಾಯ ....


                       
         
            ಅದೆಷ್ಟೇ ಹಬ್ಬಗಳಿದರೂ ಗಣಪತಿ ಹಬ್ಬಕ್ಕೆ ಏನೋ  ವಿಶೇಷತೆ ;  ಚಿಕ್ಕವವರಿದ್ದಾಗ ಹಬ್ಬಕ್ಕೆ 15 ದಿನದಿಂದಲೇ   ತಯಾರಿ  ನಡೆಸುತಿದ್ದೆವು .   ಅಪ್ಪ ಗಣಪತಿ ಹಬ್ಬಕ್ಕೆ ಹೊಸ ಬಟ್ಟೆ ತರುತ್ತಿದ್ದ  ವಾಡಿಕೆಯಿತ್ತು .  ಈ ಸಲದ ಹಬ್ಬಕ್ಕೆ ಯಾವ ಯಾವ ಪಟಾಕಿಗಳನ್ನು ತರಬೇಕೆಂದು ಅಪ್ಪನೊಂದಿಗೆ ಮುಂಚೆಯೇ ಚರ್ಚಿಸುತ್ತಿದ್ದೆ .  ಗಣಪತಿಯನ್ನು ಈ ಸಲ ಎಲ್ಲಿಂದ ತರಬೇಕು ಯಾರಿಂದ ಕೊಂಡುಕೊಳ್ಳಬೇಕೆಂದು ಮನೆಯಲ್ಲಿ ಚರ್ಚೆಯಾಗುತ್ತಿತ್ತು . ಗಣಪತಿ ಹಬ್ಬದಂದು ಅಂತ ವಿಶೇಷತೆ ಇಲ್ಲದಿದ್ದರೂ ನಮ್ಮ ಮನೆಯಲ್ಲಿ ಪಂಚಮಿಯಂದು  ವಿಶೇಷ ಸಂಬ್ರಮವಿರುತ್ತಿತ್ತು . ಪಂಚಮಿಯೊಂದಿಗೆ ಗಣಹೊಮ  ಸತ್ಯನಾರಾಯಣ ಪೂಜೆ ಗೆ  ಊರವರು ನೆಂಟರ ಜೊತೆಯಿರುತ್ತಿತ್ತು . ಪಂಚಮಿಯ ದಿನ ಪಟಾಕಿಯ ಹಂಚಿಕೆಯಾಗುತ್ತಿತು .., , ಮನೆಮಂದಿಗೆ, ಬಂದ ಮಕ್ಕಳಿಗೆ , ಅದಕ್ಕಾಗೆ ಕಾಯುತ್ತಿರುವ ಆಳುಗಳಿಗೆ ಹಂಚಬೇಕಾಗಿತ್ತು . ಪಟಾಕಿ ,ಜಾಗಟೆ  ಸದ್ದು ,ಆರತಿ ,ಒಂದಷ್ಟು ಬಳೆ ಶಬ್ದ , ಯಾರಿದ್ದೋ ಕಾಲ್ಗೆಜ್ಜೆ ಸದ್ದು , ಸೀರೆಯ ಸರಪರ ,  .., ಜೊತೆಗೆ ಸಾಮಾನ್ಯವಾಗಿ ಇರುತ್ತಿದ್ದ ಜಿಮುರು ಅಥವ ಜೊರು ಮಳೆ ....ಇವೆಲ್ಲ ಸೇರಿದರೆ ಅದು ಗಣಪತಿ ಹಬ್ಬವಾಗುತ್ತಿತು

           ಇದೆಲ್ಲ ನೆನಪಾಗಿದ್ದು  ಮೊನ್ನೆ ನಮ್ಮ ಮನೆಗೆ ಗಣಪತಿ ಹಬ್ಬಕ್ಕೆ ಚಂದ ಎತ್ತಲು ಬಂದ ಹುಡುಗನ್ನನ್ನು ನೋಡಿ , ಹಾಗೆ ಬಂದವರಲ್ಲಿ  ಈತ ಮೂರನೆಯವನು!  ಬೆಂಗಳೂರಿನಲ್ಲಿ ಗಣಪತಿ ಹಬ್ಬವೆಂದರೆ ರಸ್ತೆಗೊಂದು ಗಣಪತಿ!  ಬ್ಯಾಂಡು! ಡೋಲು!  ಟ್ರಾಫಿಕ್ ಜಾಮು!   ಪಡ್ಡೆಗಳ ಹುಚ್ಚುಚ್ಚು  ಕುಣಿತ !   ಹಳೆಜನ್ಮದ ವೈರಿ ಎನಿಸುವ ಮೈಕು!  ಪ್ರಾಣಹಿಂಸೆ ನೀಡುವಷ್ಟು ಕೆಟ್ಟದಾದ ಅರ್ಕೆಷ್ಟ್ರ!  ಪ್ಯಾರಗೆ ಆಗಬಿತ್ತೈತೆ  ..,  ಎನ್ನುವಂತ ಹಿಂದೂ ಮುಂದಿಲ್ಲದ ಹಾಡು !  ಅಲ್ಲ .. ಗಣಪತಿ ಹಬ್ಬಕ್ಕೂ .., ಆ ಹಾಡಿಗೂ ಏನು ಸಂಬಂದ  ? ಅರ್ಕೆಷ್ತ್ರದಾಣೆಗೂ ಅರ್ಥವಾಗದ ವಿಷಯ !!

         ಬೆಂಗಳೂರಿನಲ್ಲಿ ರಸ್ತೆಗೊಂದು ಗಲ್ಲಿಗೊಂದರಂತೆ ಗಣಪತಿ ಮೂರ್ತಿಯನ್ನು ಕೂರಿಸುತ್ತಾರೆ .  ಇಂತ ಗಣಪತಿ ಮೂರ್ತಿಯನ್ನು ತಯಾರಿಸಲು ಬಳಸುವ ಬಣ್ಣವು  ತುಂಬಾ  ಹಾನಿಕಾರಕ chimicals ನು ಒಳಗೊಂಡಿರುತ್ತವೆ . ಇಂತ  ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ . ಅದು  ತುಂಬಾ ಅಪಾಯಕಾರಿ . ಸರಕಾರ ಏನೇ ಹೇಳಿದ್ದರೂ  ಕೂಡ ಅದು ಕಾರ್ಯರೂಪಕ್ಕೆ ಬಂದಿದೆಷ್ಟು ಎಂಬುದು ಮಾತ್ರ ನಮಗೆಲ್ಲ ಗೊತ್ತಿರುವ ವಿಷಯ . ಈ ಸಲ ಗಣಪತಿ  ಹಬ್ಬಕ್ಕಾದರೂ ನೀರಿನಲ್ಲಿ ಗಣಪತಿ ವಿಸರ್ಜನೆಯನ್ನು ಸರಕಾರ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು.....,  ಒಂದು ನಗರ ಅಥವಾ ಒಂದು ಏರಿಯಕ್ಕೆ ಇಂತಿಷ್ಟೇ ಗಣಪತಿ ಎಂಬ ಪರಿಮಿತಿಯಿಡಬೇಕು....., ಅಷ್ಟೇ ಅಲ್ಲ ...  ಗಣಪತಿ ಹಬ್ಬದ ಆಚರಣೆಗೆ ಕೇವಲ 3 ದಿನವನ್ನು ಮಾತ್ರ ಸೀಮಿತಗೊಳಿಸಬೇಕು ....., ಹಮ್ಮ್ .., ಬೇಕುಗಳ ಪಟ್ಟಿ ಸ್ವಲ್ಪ ದೊಡ್ಡದಾಯೈತೆನೋ ......

                 ಹಬ್ಬಕ್ಕೆ ಊರಿಗೆ  ಹೊರಟವರಿಗೆ ಉಂಡೆ ಕಾಯಿಕಡಬು   ಕಾಯುತ್ತಿರಬಹುದು ,  ಇಲ್ಲೇ ಇರುವವರು  ಆರ್ಕೆಷ್ಟ್ರದೊಂದಿಗೆ  ಹಬ್ಬವನ್ನು ಎಂಜಾಯ್  ಮಾಡಬಹುದು ...!!   ಎಲ್ಲರಿಗೂ ಗಣಪತಿ ಹಬ್ಬದ ಶುಭಾಷಯಗಳು !!
                

            

      

Wednesday, September 12, 2012

ಅಡಿಕೆಗೆ ಸಿಕ್ಕ ಮಾನ




ಮಲೆನಾಡು , ಉತ್ತರ ಕನ್ನಡ , ದಕ್ಷಿಣ ಕನ್ನಡದ ಅಡಿಕೆ ಬೆಳೆಗಾರರ ಮುಖದ ಮೇಲೊಂದು
ಮುಗುಳುನಗು ತಂದ ವಿಷಯವೆಂದರೆ ಈ ಸಲದ ಬೆಳೆಗೆ ಬಂದ ಒಳ್ಳೆಯ ಧಾರಣೆ . ಈ ಸಲ ಅಡಿಕೆ
ಬೆಳೆಗಾರರು ಅಡಿಕೆ ಬೆಳೆಗಾಗಿ ಪಟ್ಟ ಬವಣೆ ಅವರಿಗಷ್ಟೇ ಗೊತ್ತು . ಕೂಲಿಕೆಲಸಗಾರರ
ಅಭಾವ ಆ ಮಟ್ಟಕ್ಕೆ ತಲುಪಿಯಾಗಿದೆ .


ಹಳ್ಳಿಗಳಲ್ಲಿರುವ ಕೂಲಿಕೆಲಸಗಾರರು ಹೋಟೆಲ್ ಮತ್ತು
ಇನ್ನಿತರ ಕೆಲಸ ಅರಸಿಕೊಂಡು ಬೆಂಗಳೂರು ಬಸ್ಸ ಹತ್ತಿಯಾಗಿದೆ ! ಉಳಿದಿರುವ ಕೆಲಸಗಾರರೂ
ತೋಟದ ಕೆಲಸ 'ತಾ ಒಲ್ಲೆ ' ಎಂದು ಪ್ಯಾಂಟು ಏರಿಸಿ ಹತ್ತಿರದ ಚಿಕ್ಕ ಪುಟ್ಟ
ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ .ಇವರು ತೋಟದ ಕೆಲಸದತ್ತ ಒಲವು ತೋರುವ ಯಾವುದೇ
ಲಕ್ಷಣಗಳು ಕಾಣುತ್ತಿಲ್ಲ . ದೊಡ್ಡ ಮೊತ್ತ ಕೊಟ್ಟೋ.., ಅಥವ ಬೇರೆ ಇನ್ನೆಲ್ಲಿಂದಲೋ
ಕೂಲಿಯಳುಗಳನ್ನು ತಂದು ಕೆಲಸ ಮಾಡಿಸುವುದು ತೋಟದ ಯಜಮಾನನಿಗೊಂದು ಸವಾಲಿನ ಕೆಲಸವೇ
! ಅದೂ ಕೂಡ ಅವರು ಹೇಳಿದ್ದೆ ರೇಟ್! ಬಂದಿದ್ದೆ ಟೈಮ್ ! ಮಾಡಿದಷ್ಟೇ ಕೆಲಸ!!..
ಅಪ್ಪಿತಪ್ಪಿ ' ಏನಪ್ಪಾ ಇದು ಯಾಕಪ್ಪ ಹೀಗೆ ಎಂದು ಕೇಳಿದಿರೋ ..., ಅಷ್ಟೇ ,ಅವನು rite !
ನಾಳೆಗೆ ಅದೂ ಇಲ್ಲ ! ಅಡಿಕೆ ಕೊಯ್ಯಲು ಜನರ ಅಭಾವ ! ಹಗ್ಗ ಹಿಡಿಯಲು ಅಭಾವ ! ಅಡಿಕೆ
ಹೆಕ್ಕುವರಿಲ್ಲ ! ಮನೆಗೆ ಸಾಗಿಸುವರಿಲ್ಲ ! ಅಡಿಕೆ ಸುಲಿಯುವರಿಲ್ಲ ! ಬೇಯಿಸಿ...
ಣಗಿಸಿ .. ಇಲ್ಲ.. ಇಲ್ಲ..ಇಲ್ಲ
ಈ ಸಮಸ್ಯಗಳಿಗೆ ಪ್ರಕ್ರತಿ ಮತ್ತು ಕಾಲವೇ ಉತ್ತರಿಸಬೇಕೆನೋ .., ,
ಆದರೆ ಈ ಸಲ ಅಡಿಕೆ ಬೆಳೆಗಾರನ ಶ್ರಮಕ್ಕೋ ಏನೋ ಎಂಬಂತೆ ಧಾರಣೆಯಲ್ಲಿ ಕೊಂಚ ಏರಿಕೆ
ಕಂಡು ಬರುತ್ತಿದೆ . ಆದ್ರೆ ಮದ್ಯಸ್ಥಿಕೆ , ಸಾಗಣೆ ಮುಂತಾದ ಯಾವುದೇ ಬಾದೆ ಅಡಿಕೆ
ಬೆಳೆಗಾರನಿಗೆ ತಾಕದಿರಲಿ . ಎಲ್ಲ ಸ್ಥಳೀಯ ಹಾಗೂ ಚಿಕ್ಕ ದೊಡ್ಡ ಪ್ರತಿಯೊಬ್ಬ
ಬೆಳೆಗಾರನಿಗೂ ನ್ಯಾಯುತವಾದ ಬೆಲೆ ಸಿಗುವಂತಾಗಲಿ
ಚೈತ್ರ B .G . 

(ಇಕನಸು.ಕಾ o . ನಲ್ಲಿ ಪ್ರಕಟ ) 

Thursday, September 6, 2012

ಕನಸು ಕಾಣುವ ಕಣ್ಣಿಗೆಕೋ ಕಣ್ಣೀರಿನ ಪೊರೆ........




                 
                          ಮೊಸರನ್ನ ಕಲೆಸಿದ ನನ್ನ ಕೈಗೆ ಅಂಟಿದ ನಿನ್ನ ಮಮತೆ ತುಂಬಿದ  ಮನಸ್ಸಿನ ನೆನಪು ..., ಜೊತೆಗೆ ತುಂಬಿ ಬಂದ ಕಣ್ಣೀರು .. ಮೊಸರನ್ನಕ್ಕೆ ಕಣ್ಣೀರು ಸೇರಿ ಸ್ವಲ್ಪ ಉಪ್ಪು ಹೆಚ್ಚಾಯಿತೇನೋ ..., ಹಾಗನೆಸಿ ಅರ್ದಕ್ಕೆ ಬಿಟ್ಟ ನನ್ನ ಊಟ..., ಕಿಟಕಿಯಾಚೆ ಕಣ್ಣು ಹೊರಳಿಸಿದರೆ ಬೀಳುತ್ತಿದ್ದುದು ಮಳೆಯ ಹನಿಗಳಾ..?  ಅಥವ ನನ್ನದೆಗೆ ನೆರವಾಗಿ ಬೀಳುತ್ತಿದ್ದ ನಿನ್ನ ನೆನಪುಗಳಾ ...? ಅನುಮಾನ ನನಗೆ ..!

                          ನನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕ ? ಅದು ಅಗತ್ಯತೆಯ ? ಹಂಚಿ ತಿಂದ ಪಾನಿಪುರಿ, ಪಾರ್ಕಿನಲ್ಲಿ ಕೂತ ಕಲ್ಲು ಬೆಂಚು, ರಸ್ತೆ ಬದಿಯ ಸುಟ್ಟ ಜೋಳದ  ಸಾಕ್ಷಿಯಾಗಿ ಮನಸ್ಸು ದಿಗಿಲಿಡುತ್ತಿದೆ. ಆ ಬಸ್ ಸ್ಟಾಪ್ ಗಳು , ಸಿಟಿ ಬಸ್ ಗಳು shoping complex .., ಒಹ್... ಯಾಕೋ ಎಲ್ಲದಕ್ಕೂ ನಿನ್ನ ನೆನಪಿನದ್ದೇ ಹೊದಿಕೆ .., ಗೆಳತಿ treet  ಕೊಟ್ಟ ಪಿಜ್ಜಾದಲ್ಲೂ ಅವತ್ತು ನೀನು ಮುನಿದ ನೆನಪು, ಸಿನಿಮ ಹಾಲ್ ನಲ್ಲಿ ಪೋಪ್ ಕಾರ್ನ್ ನೊಂದಿಗೆ ಬೆರೆತ ನಿನ್ನ ನಗುವಿನ ನೆನಪು, ನನ್ನ ಸೆಲ್ ಫೋನ್ ನನ್ನು ಗೋಡೆಗೆ ಅಪ್ಪಳಿಸಿ ಬಿಡುವಷ್ಟು ಕೋಪ ನನಗೆ, ooff !! ಯಾಕೋ ಸಂಬಂದದ ಬೇರು ಆಳಕ್ಕಿಲಿದಿದೆಯೇ? ಹೌದು ಅನ್ನುತ್ತಿದೆ ಮನಸ್ಸು !!

               ಇಬ್ಬರೂ ಸೇರಿ ಕಂಡ ಕನಸಿನ ಲೆಕ್ಕ ಸರಿಯಾಗಿ ಆಕಾಶದ ನಕ್ಷತ್ರಗಳಷ್ಟು, ರೆಪ್ಪೆ ಮಿಟುಕುವಷ್ಟೇ ಸಮಯಕ್ಕೊಂದು ನಗು ತುಂಬಿಕೊಳ್ಳುತ್ತುದ್ದುದು ಬರಿ ತುಟಿಯನ್ನಷ್ಟೇ ಅಲ್ಲ  .. ಹ್ರದಯವನ್ನೂ .., ತುಂಬಾ ಜಾಸ್ತಿ ಮಾತಾಡುವ ನಾನು, ಮುಗುಳ್ನಗುವಿನಲ್ಲೆ ಹೆಚ್ಚು ಮಾತಾಡುವ ನೀನು ಮತ್ತು ನೀನು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆಯೋ    ಇಲ್ಲವೋ  ಅನ್ನುವ ನನ್ನ ಅನುಮಾನಕ್ಕೆ ಹುಟ್ಟಿಕೊಳ್ಳುತ್ತಿದ್ದ ನನ್ನ ಪ್ರಶ್ನೆಗಳು ! ಎಲ್ಲದಕ್ಕೂ ಲೆಕ್ಕವಿಡುತ್ತಿದ್ದ ನಾನು, ಮತ್ತು ಬೇಕೆಂತಲೇ ಲೆಕ್ಕ ತಪ್ಪುತ್ತಿದ್ದ ನೀನು ಮತ್ತು ನಿನ್ನ ತುಂಟತನ ..

              ತುಂಬ  ಒಳ್ಳೆ ಹುಡುಗ ನೀನು; ಅನುಮಾನವಿಲ್ಲ,  ಸಭ್ಯ; ಮಾತಿಲ್ಲ ,  ವಿದ್ಯಾವಂತ  ; ಮೆಚ್ಚುಗೆಯೇ ,   ಬುದ್ದಿವಂತ ; ಒಪ್ಪಿಗೆಯೇ .., 
  ಎದ್ದು ಹೊರಕ್ಕೆ ಹೋಗೋಣವೆಂದು ಸ್ಕೂಟ ಕೀ ಗೆ ಕೈ ಹಾಕಿದರೆ ನೀನು ಕೊಟ್ಟ ಕೀ ಬಂಚ್ ನಗುತ್ತಿತ್ತು. ಬಿಸಾಕಿ ತಣ್ಣಗೆ ಕೂತು ಯೋಚಿಸಿದೆ, 5 ವಸಂತಗಳ  ನಮ್ಮ  ಸಂಬಂದವನ್ನು  ನಾನು  ಕೊನೆಗೊಳಿಸಿಕೊಳ್ಳುವಾಗ   ನಿನಗೆ  ಕೊಟ್ಟ  ಕಾರಣವಾದರೂ ಏನು?, "ನಮ್ಮ    ಮದುವೆಗೆ  ಅಪ್ಪ  ಅಮ್ಮ  ಒಪ್ಪುವುದಿಲ್ಲ  ಅವರನ್ನು  ಬಿಟ್ಟು  ನನಗೆ  ಬದುಕುವುದಕ್ಕೆ  ಆಗೋದಿಲ್ಲ! ", ಒಣ  ನಗೆಯೊಂದು  ನನ್ನ  ತುಟಿಯ  ಮೇಲೆ! , ನಾನು  ನಿನ್ನೊಂದಿಗೆ  ಹೇಳಿದ್ದು  ನಿಜವನ್ನ  ? ಕೊಂಚ  ಹಠ   ಹಿಡಿದ್ದಿದ್ದರೆ ಅಪ್ಪ  ಅಮ್ಮ  ಒಪ್ಪುತ್ತಿದ್ದರು   ಅದು  ಸಮಸ್ಯೆ  ಅಲ್ಲ, ಅವರು  ನನ್ನ   ಅಪ್ಪ  ಅಮ್ಮ;  ಅವರನ್ನು  ಒಪ್ಪಿಸುವುದು  ಹೇಗೆಂದು ನನಗೆ  ತುಂಬಾ  ಚೆನ್ನಾಗಿ  ತಿಳಿದ್ದಿತ್ತು,  ಹಠದ    ಮಗಳು  ನಾನು, ಚಿಕ್ಕಂದಿನಿದಲೂ  ನನಗೆ   ಬೇಕಾದನ್ನು   ಪಡೆಯುವುದು   ಹೇಗೆಂದು  ನನಗೆ  ಚೆನ್ನಾಗಿ  ತಿಳಿದಿತ್ತು . ಹಮ್ಮ್.... ನನ್ನ ನಿಟ್ಟುಸಿರಿನ ಗಾಳಿ ತುಂಬ ಬಿಸಿಯಾದಂತೆನಿಸಿತು.    
   
           ಕಣ್ಣು ಕೈಯಲ್ಲಿದ್ದ appointment ಲೆಟರ್ನತ್ತ  ಹೊರಳಿತು ..,ಮನಸ್ಸು 5 ವಸಂತಗಳ ಆಚೆಗೆ ...,   ಬೆಂಗಳೂರಿಗೆ ಆಗ ತಾನೆ ಬಂದ ನಾನು ಮೊದಲ ವರ್ಷದ engneering ಗೆ ಸೇರಿದ್ದೆ. campus selection, ಒಳ್ಳೆ ಕೆಲಸ .., ಒಳ್ಳೆ ಸಂಬಳ ., ೧ ವರ್ಷದ ನಂತರ  US ನಲ್ಲಿ MS ಮಾಡಲು ಅವಕಾಶ ಸಿಕ್ಕಿತ್ತು , ನನ್ನ ಮಹತ್ಹ್ವಕಾಕ್ಷೆ ಈಡೆರುವುದಿತ್ತು. ನಾನು ಚಿಕ್ಕಂದಿನಿಂದ ಕಂಡ ಕನಸು ನನಸಾಗುವುದಿತ್ತು, ಇಂಥ ಅವಕಾಶವನ್ನು ಕಳೆದುಕೊಳ್ಳಲು ಸುತರಾಂ ನನಗೆ ಇಷ್ಟವಿರಲ್ಲಿಲ್ಲ , ಮನಸ್ಸು ಆಕಾಶದ ಎತ್ತರವನ್ನು  ಲೆಕ್ಕಾಚಾರ ಹಾಕುತ್ತಿದೆ .., ಸಾಗರ ಸಾಗರಗಳ ಅಂತರವನ್ನು ಅಳೆಯಬೆಕೆನಿಸಿದೆ, ಪ್ರಪಂಚದ ವೈಶ್ಯಾಲ್ಯಕ್ಕೆ ನನ್ನನು ನಾನು ತೆರೆದುಕೊಳ್ಳಬೇಕಿದೆ ..., ಹಮ್ಮ್ ಅದರ ನಿಜವಾದ ಅರ್ಥ ನಿನಗೆ ಮೋಸ ಮಾಡಬೇಕಿದೆ ಅಂತಾನ? ನಾನೇನೆ ಅಂದುಕೊಂಡರೂ ನಿನಗೆ ಆಗಿದ್ದು ಮೊಸನೆ .... , ನನ್ನ ಮನಸ್ಸು ಸಮೀಕರಿಸಿಕೊಂಡಿತ್ತು..., ನಿನ್ನ ಸೀಮಿತ ವ್ರತ್ತಿ ಜಗತ್ತು  ನನ್ನ ವಿಶಾಲ ಜಗತ್ತಿಗೆ ಬೇಲಿಯಾಗಿತ್ತು. ನನ್ನ 2 ವರ್ಷ MS ಮತ್ತು ಅಲ್ಲಿ ಒಂದು ವರ್ಷದ ಕೆಲಸ ಬೇರೆಯದೇ ಜಗತ್ತಿಗೆ ಪರಿಚಯಿಸಿತ್ತು .., 3 ವರ್ಷಗಳ  ನಂತರವೂ  ನಿನ್ನ ಪ್ರೀತಿ , ನಿಷ್ಠೆ ಬಹುಷಃ ಹೀಗೆ ಇರುತ್ತಿತ್ತು , ಬದಲಾಗುತ್ತಿದುದು ನನ್ನ ಪ್ರಪಂಚ ಮಾತ್ರ ....

         ಕೆಟ್ಟ ವಿಷಾದ ನನ್ನಲಿ .., ನಮ್ಮ ಕೊನೆಯ ಬೇಟಿಯಲ್ಲಿ  ಕೊನೆಯ ಮಾತು " ನನಗಿಂತ ಒಳ್ಳೆಯ ಹುಡುಗಿ ಸಿಗುತ್ತಾಳೆ ಬಿಡು ", ಅದು ನನ್ನ ಬಾಯಿಂದ ಬಂದ ಮಾತು ," ನನ್ನ ಥರ carreer oriented ಹುಡುಗಿಯನ್ನು ಪ್ರೀತಿಸುವಂತ ತಪ್ಪನ್ನುಮಾತ್ರ ಯಾವತ್ತೂ  ಮಾಡಬೇಡ ", ಅದು ನಾನು ಎಂದೂ ಹೇಳಲಾಗದ ನನ್ನ ಮನಸಿನ ಮಾತು.


           ಕಣ್ಣೀರಿನೊಂದಿಗೆ ಬೆರೆತ ಅಕ್ಷರಗಳು.. ತುಂಬಿದ ಕಣ್ಣುಗಳಿಗೆ ಇನ್ನೂ ಅಸ್ಪಷ್ಟ .., ಲಗ್ಗೆಜೆ ಪ್ಯಾಕ್ ಆಗಿದೆ , ಪಕ್ಕದ್ಮನೆ ಅಂಕಲ್ ಕೊಟ್ಟ WM ನಿಂದ weight ಚೆಕ್ ಮಾಡಿದ್ದೂ ಆಯಿತು .., ಕೇವಲ 12 ತಾಸು ಬಾಕಿ ನಾನು ಹೊರಡುವುದಕ್ಕೆ .., ಈ ಲೆಟರ್ ಖಂಡಿತ ನಿನಗೆ ಕೊಡುವುದಕ್ಕಲ್ಲ, ನನ್ನ ಮನಸ್ಸಿನ ದುಗುಡ ದುಮ್ಮಾನವನ್ನು ಕಡಿಮೆಯಾಗಿಸಲು .., ವಿಮಾನದಲ್ಲಿ ಕುಳಿತ ನಾನು , ಈ ಲೆಟರ್ ನ್ನು  ಮತ್ತು ನಿನ್ನ ನೆನಪನ್ನು ಚೂರು ಚೂರು ಮಾಡಿ ಕಿಟಕಿಯಾಚೆಗೆ ಎಸೆದು   ...,  ನನ್ನ ಪ್ರಯಾಣವನ್ನು  ನಿನ್ನ ನೆನಪಿನ ಹಂಗಿಲ್ಲದೆ ಮುಂದುವರೆಸುತ್ತೇನೆ ...

   
          ಹೌದೂ ...., ವಿಮಾನಕ್ಕೆ ಕಿಟಕಿಗಲಿರುತ್ತವ  ? ಅಥವಾ ವಿಮಾನಕ್ಕೆ ಮನಸ್ಸಿಗೆ  ಕಿಟಕಿಗಳು ಇಲ್ಲದೆ
ಈ ಲೆಟರ್ ಮತ್ತು ನಿನ್ನ ನೆನಪನ್ನು ಹಾಗೆ  ಇಟ್ಟುಕೊಂಡು ಬಿಡುತ್ತೇನ ?